ಹತ್ತೇ ದಿನದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13 ಸ್ಥಾನ ಜಿಗಿದ ಗೌತಮ್ ಅದಾನಿ
ಅದಾನಿ ಗ್ರೂಪ್‌ನ ಷೇರುಗಳು ಬುಧವಾರವೂ ಏರಿಕೆ ಕಂಡಿದೆ. ಸತತ ಆರನೇ ದಿನವೂ ಅದಾನಿ ಕಂಪನಿಗಳ ಷೇರುಗಳ ಏರಿಕೆ ಕಂಡಿದ್ದರಿಂದ ಗ್ರೂಪ್‌ನ ಚೇರ್ಮನ್ ಗೌತಮ್ ಅದಾನಿ ಸಂಪತ್ತಿನಲ್ಲೂ ಏರಿಕೆಯಾಗಿದೆ. ಇದಕ್ಕೂ ಮುನ್ನ ಹಿಂಡೆನ್‌ಬರ್ಗ್ ವರದಿಯ ಪರಿಣಾಮದಿಂದಾಗಿ ಒಂದು ತಿಂಗಳು ಅದಾನಿ ಸಂಪತ್ತು ನೀರಿನಂತೆ ಹರಿದುಹೋಗಿತ್ತು.
ನವದೆಹಲಿ (ಮಾ.9): ಕೊನೆಗೂ ಅದಾನಿ ಕಂಪನಿಗಳ ಚೇರ್ಮನ್ ಗೌತಮ್ ಅದಾನಿ ನಿಟ್ಟುಸಿರು ಬಿಟ್ಟಿದ್ದಾರೆ. ಅದಕ್ಕೆ ಕಾರಣವೂ ಇದೆ. ಅಮೆರಿಕದ ಶಾರ್ಟ್ ಸೆಲ್ಲರ್ ತನ್ನ ಘಾತಕ ವರದಿಯಲ್ಲಿ ಅದಾನಿ ಕಂಪನಿಗಳ ಮೇಲೆ ಅವ್ಯವಹಾರ ಹಾಗೂ ಕೃತಕವಾಗಿ ಷೇರು ಬೆಲೆಗಳನ್ನು ಏರಿಸಿದ ಆರೋಪ ಮಾಡಿತ್ತು. ಇದರ ಬೆನ್ನಲ್ಲಿಯೇ ಷೇರು ಮಾರುಕಟ್ಟೆಯಲ್ಲಿರುವ ಅದಾನಿ ಕಂಪನಿಯ ಎಲ್ಲಾ ಷೇರುಗಳು ಕುಸಿತ ಕಂಡಿದ್ದವು. ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ ಅಗ್ರಸ್ಥಾನಕ್ಕೇರುವ ಸನಿಹದಲ್ಲಿದ್ದ ಹಾಗೂ ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯಲ್ಲಿ ವಿಶ್ವದ ಅಗ್ರ ಮೂರು ಶ್ರಿಮಂತರಲ್ಲಿ ಒಬ್ಬರಾಗಿದ್ದ ಗೌತಮ್ ಅದಾನಿ ನೋಡನೋಡುತ್ತಿದ್ದಂತೆ ಕುಸಿದು ಹೋಗಿದ್ದರು. ಜನವರಿ 24 ರಂದು ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಪ್ರಕಟಿಸಿದ್ದರೆ, ಅದಾಗಿ ಒಂದೇ ತಿಂಗಳಿಗೆ ಅದಾನಿ ಸಾಮ್ರಾಜ್ಯವೇ ಕುಸಿದುಹೋಗುವ ಹಂತ ತಲುಪಿತ್ತು. ಅದಾನಿ ಗ್ರೀನ್, ಅದಾನಿ ಪವರ್, ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸಸ್ ಸೇರಿದಂತೆ ಎಲ್ಲಾ ಕಂಪನಿಗಳ ಷೇರುಗಳ ಬೆಲೆಗಳು ಕೆಂಪು ಬಣ್ಣದಲ್ಲಿಯೇ ಕಾಣುತ್ತಿದ್ದವು. ಇದರ ಪರಿಣಾಮ ಅದಾನಿ ಗ್ರೂಪ್‌ನ ಚೇರ್ಮನ್ ಗೌತಮ್ ಅದಾನಿ ಮೇಲೂ ಆಗಿತ್ತು. ವಿಶ್ವದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿದ್ದ ಅದಾನಿ 30 ದಿನಗಳ ಅವಧಿಯಲ್ಲಿ 35ನೇ ಸ್ಥಾನಕ್ಕೆ ಇಳಿದುಹೋಗಿದ್ದರು. ಈ ನಡುವೆ ಅದಾನಿ ಗ್ರೂಪ್ ಹೂಡಿಕೆದಾರರ ವಿಶ್ವಾಸ ಗಳಿಸಲು ಜಗತ್ತಿನ ಪ್ರಮುಖ ನಗರಗಳಲ್ಲಿ ರೋಡ್‌ಶೋಗಳನ್ನು ನಡೆಸುತ್ತಿದ್ದು, ಇದರ ಪರಿಣಾಮ ಷೇರುಗಳ ಏರಿಕೆಯೊಂದಿಗೆ ಗೊತ್ತಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಅದಾನಿ ಕಂಪನಿಯ ಕೆಲ ಷೇರುಗಳು ಅಪ್ಪರ್ ಸರ್ಕ್ಯೂಟ್ ತಾಕುತ್ತಿವೆ. ಇನ್ನು ಒಟ್ಟಾರೆ ಮಾರುಕಟ್ಟೆ ಮೌಲ್ಯ 9 ಲಕ್ಷ ಕೋಟಿ ಕೂಡ ದಾಟಿದೆ. ಗೌತಮ್ ಅದಾನಿಗೂ ಕೂಡ ಇದರಿಂದ ಲಾಭವಾಗಿದೆ. ಕಳೆದ ಹತ್ತೇ ದಿನಗಳಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ (ಬ್ಲೂಮ್‌ಬರ್ಗ್ ಬಿಲಿಯನೇರರ್ ಇಂಡೆಕ್ಸ್) ಅದಾನಿ ಲಾಂಗ್ ಜಂಪ್ ಮಾಡಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ ಗೌತಮ್ ಅದಾನಿ 10 ದಿನಗಳಲ್ಲಿ 13 ಸ್ಥಾನ ಜಿಗಿತ ಕಂಡಿದ್ದು, 54 ಬಿಲಿಯನ್ ಯುಎಸ್ ಡಾಲರ್ ಮೌಲ್ಯದೊಂದಿಗೆ ಅದಾನಿ ಈಗ 35 ರಿಂದ 22ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಕಂಪನಿ ಕುರಿತಾಗಿ ಇತ್ತೀಚಿನ ಸಕಾರಾತ್ಮಕ ಸುದ್ದಿಗಳು ಷೇರುಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.
ಹಿಂಡೆನ್‌ಬರ್ಗ್ ರಿಪೋರ್ಟ್‌ನಿಂದ ಆದ ನಷ್ಟ ಸರಿದೂಗಿಸಲು ಅದಾನಿ ಗ್ರೂಪ್ ಸಖತ್ ಪ್ಲ್ಯಾನ್!
ಬುಧವಾರ ಒಂದೇ ದಿನ ಅದಾನಿಯ ಸಂಪತ್ತಿನ ಮೌಲ್ಯದಲ್ಲಿ 2 ಬಿಲಿಯನ್ ಯುಎಸ್ ಡಾಲರ್ ಏರಿಕೆಯಾಗಿದೆ. ನಿಮಗೆ ಗೊತ್ತಿರಲಿ ಈ ವರ್ಷವೊಂದರಲ್ಲೇ ಅವರ ಮೌಲ್ಯದಲ್ಲಿ 66.5 ಬಿಲಿಯನ್ ಯುಎಸ್ ಡಾಲರ್ ಇಳಿಕೆಯಾಗಿದೆ. ಬುಧವಾರ ಅವರ ಕಂಪನಿಯ ಎಲ್ಲಾ 10 ಷೇರುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಅದರಲ್ಲೂ ಐದು ಕಂಪನಿಯ ಷೇರುಗಳು ಅಪ್ಪರ್ ಸರ್ಕ್ಯೂಟ್ ಮುಟ್ಟಿವೆ. ಗುಂಪಿನ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಸುಮಾರು ಮೂರು ಪ್ರತಿಶತದಷ್ಟು ಅಪ್ಪರ್ ಸರ್ಕ್ಯೂಟ್ ಮುಟ್ಟಿವೆ. ಆದರೆ ಇತರ ಐದು ಕಂಪನಿಗಳು ಶೇಕಡಾ ಐದರಷ್ಟು ಅಪ್ಪರ್ ಸರ್ಕ್ಯೂಟ್ ಅನ್ನು ಮುಟ್ಟಿದವು. ಇವುಗಳಲ್ಲಿ ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್, ಅದಾನಿ ವಿಲ್ಮಾರ್, ಅದಾನಿ ಟ್ರಾನ್ಸ್‌ಮಿಷನ್ ಮತ್ತು ಅದಾನಿ ಟೋಟಲ್ ಗ್ಯಾಸ್ ಸೇರಿವೆ.
'1 ಬಿಲಿಯನ್ ಡಾಲರ್ ಸಾಲವೆಲ್ಲಾ ನಮಗೆ ಕಡ್ಲೇಬೀಜ ಇದ್ದಂತೆ..' ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ಹೇಳಿಕೆ!
ಅಗ್ರ 10ರಲ್ಲಿ ಇರುವ ಶ್ರೀಮಂತರು ಯಾರು: ಇದರ ನಡುವೆ ದೇಶದ ಅತ್ಯಮೂಲ್ಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಈ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಮೌಲ್ಯವು ಬುಧವಾರ $ 170 ಮಿಲಿಯನ್ ಹೆಚ್ಚಾಗಿದೆ ಮತ್ತು $ 83.6 ಬಿಲಿಯನ್ ತಲುಪಿದೆ. ಈ ವರ್ಷ ಅವರ ನಿವ್ವಳ ಮೌಲ್ಯವು $ 3.51 ಬಿಲಿಯನ್ ಕಡಿಮೆಯಾಗಿದೆ. ಈ ಪಟ್ಟಿಯಲ್ಲಿ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ 187 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಎಲಾನ್ ಮಸ್ಕ್ ಎರಡನೇ, ಜೆಫ್ ಬೆಜೋಸ್ ಮೂರನೇ, ಬಿಲ್ ಗೇಟ್ಸ್ ನಾಲ್ಕನೇ, ವಾರೆನ್ ಬಫೆಟ್ ಆರನೇ, ಸ್ಟೀವ್ ಬಾಲ್ಮರ್ ಏಳನೇ, ಲ್ಯಾರಿ ಪೇಜ್ ಎಂಟನೇ, ಕಾರ್ಲೋಸ್ ಸ್ಲಿಮ್ ಮತ್ತು ಸೆರ್ಗೆ ಬ್ರಿನ್ ಹತ್ತನೇ ಸ್ಥಾನದಲ್ಲಿದ್ದಾರೆ.