ಆಧಾರ್-ಪ್ಯಾನ್ ಲಿಂಕ್ ಆಗದ ತೆರಿಗೆದಾರರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ; ITR ಸಲ್ಲಿಕೆಗೆ 6,000ರೂ. ವೆಚ್ಚ!
ಆಧಾರ್ ಜೊತೆಗೆ ಲಿಂಕ್ ಆಗದ ಪ್ಯಾನ್ ಜುಲೈ 1ರಿಂದ ನಿಷ್ಕ್ರಿಯವಾಗಿದೆ. ಹೀಗಿರುವಾಗ ನೀವು ಐಟಿಆರ್ ಅನ್ನು ಅಂತಿಮ ಗಡುವಾದ ಜುಲೈ 31ರೊಳಗೆ ಸಲ್ಲಿಕೆ ಮಾಡಲು ಸಾಧ್ಯವಾಗದಿದ್ರೆ ನಿಮ್ಮ ಜೇಬಿನ ಮೇಲಿನ ಹೊರೆ ಹೆಚ್ಚಲಿದೆ. ವಿಳಂಬ ಐಟಿಆರ್ ಸಲ್ಲಿಕೆಗೆ ಹಾಗೂ ಪ್ಯಾನ್ -ಆಧಾರ್ ಲಿಂಕ್ ಮಾಡಲು ದಂಡ ಪಾವತಿಸೋದು ಅಗತ್ಯ. ಹೀಗಾಗಿ ಪ್ಯಾನ್ -ಆಧಾರ್ ಲಿಂಕ್ ಮಾಡದವರ ಜೇಬಿನ ಮೇಲೆ 6 ಸಾವಿರ ರೂ. ದಂಡ ಬೀಳುವ ಸಾಧ್ಯತೆಯಿದೆ.
ನವದೆಹಲಿ (ಜು.11): ಆಧಾರ್ ಸಂಖ್ಯೆಗೆ ಲಿಂಕ್ ಆಗದ ಪ್ಯಾನ್ ಜುಲೈ 1ರಿಂದ ನಿಷ್ಕ್ರಿಯವಾಗಿದೆ. ಹಣಕಾಸು ಸಂಬಂಧಿ ಕೆಲಸಗಳಿಗೆ ಪ್ಯಾನ್ ಅತ್ಯಗತ್ಯ. ಅದರಲ್ಲೂ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದ್ದು, ಪ್ಯಾನ್ ನಿಷ್ಕ್ರಿಯಗೊಂಡಿದ್ದರೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಿಲ್ಲ. ಐಟಿಆರ್ ಸಲ್ಲಿಕೆಯಾಗದಿದ್ರೆ ರೀಫಂಡ್ ಕೂಡ ಸಿಗೋದಿಲ್ಲ. ಇನ್ನು ನೀವು ಈಗಲೂ 1,000ರೂ. ದಂಡ ಕಟ್ಟಿ ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡಬಹುದು. ಆದರೆ, ನಿಷ್ಕ್ರಿಯವಾಗಿರುವ ಪ್ಯಾನ್ ಸಕ್ರಿಯಗೊಳ್ಳಲು 30 ದಿನಗಳಾದರೂ ಬೇಕು. ಅಲ್ಲಿಯ ತನಕ ನಿಮಗೆ ಪ್ಯಾನ್ ಬಳಸಲು ಸಾಧ್ಯವಾಗೋದಿಲ್ಲ. ಐಟಿಆರ್ ಸಲ್ಲಿಕೆಗೆ ಅಂತಿಮ ಗಡುವು ಜುಲೈ 31 ಆಗಿರುವ ಕಾರಣ ಅಷ್ಟರೊಳಗೆ ನಿಷ್ಕ್ರಿಯಗೊಂಡಿರುವ ಪ್ಯಾನ್ ಸಕ್ರಿಯಗೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಪ್ಯಾನ್ ನಿಷ್ಕ್ರಿಯಗೊಂಡವರಿಗೆ ಅಂತಿಮ ಗಡುವಿನೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಂತಿಮ ಗಡುವಾದ ಜುಲೈ 31ರ ಬಳಿಕ ಐಟಿಆರ್ ಸಲ್ಲಿಕೆ ಮಾಡಿದರೆ ಅದನ್ನು ವಿಳಂಬ ಐಟಿಆರ್ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಅದಕ್ಕೆ ದಂಡ ಕೂಡ ಕಟ್ಟಬೇಕು. ಹೀಗಾಗಿ ಆಧಾರ್-ಪ್ಯಾನ್ ಲಿಂಕ್ ಮಾಡದವರ ಜೇಬಿಗೆ ಒಟ್ಟು 6,000ರೂ. ಹೊರೆ ಬೀಳುವುದು ಗ್ಯಾರಂಟಿ.
6,000ರೂ. ದಂಡ ಹೇಗೆ?
ಸದ್ಯ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡಿದ್ದರೆ, ನೀವು ಅಂತಿಮ ಗಡುವಿನೊಳಗೆ ಅಂದ್ರೆ ಜುಲೈ 31ರೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ. ಹೀಗಾಗಿ ಜುಲೈ 31ರ ಬಳಿಕ ಐಟಿಆರ್ ಸಲ್ಲಿಕೆ ಮಾಡಿದ್ರೆ ಅದನ್ನು ವಿಳಂಬ ಐಟಿಆರ್ ಎಂದು ಪರಿಗಣಿಸಲಾಗುತ್ತದೆ. ವಿಳಂಬ ಐಟಿಆರ್ ಸಲ್ಲಿಕೆಗೆ 5,000ರೂ. ದಂಡ (ಒಟ್ಟು ಆದಾಯ 5ಲಕ್ಷ ರೂ. ಮೀರಿದ್ದರೆ) ಪಾವತಿಸಬೇಕು. ಇದರ ಜೊತೆಗೆ ಪ್ಯಾನ್- ಆಧಾರ್ ಲಿಂಕ್ ಮಾಡಲು 1,000ರೂ. ಪಾವತಿಸಬೇಕು. ಅಂದರೆ ಒಟ್ಟು 6,000ರೂ. ಪಾವತಿಸಬೇಕು.
ಐಟಿಆರ್ ಸಲ್ಲಿಕೆ ಮಾಡಲು ಪ್ಯಾನ್ ಕಾರ್ಡ್ ಇಲ್ಲವೆ? ಇ-ಪ್ಯಾನ್ ಡೌನ್ಲೋಡ್ ಮಾಡಲು ಈ ಸರಳ ವಿಧಾನ ಅನುಸರಿಸಿ
ಒಂದು ವೇಳೆ ನಿಮ್ಮ ಒಟ್ಟು ಆದಾಯ 5ಲಕ್ಷ ರೂ. ಮೀರದಿದ್ರೆ ಆಗ ವಿಳಂಬ ಐಟಿಆರ್ ಸಲ್ಲಿಕೆಗೆ 1,000ರೂ. ಪಾವತಿಸಬೇಕು. ಹಾಗೆಯೇ ಪ್ಯಾನ್ -ಆಧಾರ್ ಲಿಂಕ್ ಮಾಡಲು 1,000ರೂ. ಪಾವತಿಸಬೇಕು. ಅಂದರೆ ಒಟ್ಟು ನೀವು 2,000ರೂ. ಪಾವತಿಸಿದ್ರೆ ಸಾಕು.
ಆದಷ್ಟು ಬೇಗ ಪ್ಯಾನ್ -ಆಧಾರ್ ಲಿಂಕ್ ಮಾಡಿ
ನೀವು ಇನ್ನೂ ಪ್ಯಾನ್ -ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಆದಷ್ಟು ಬೇಗ ಈ ಕೆಲ್ಸ ಮಾಡಿ ಮುಗಿಸಿ. ಹಾಗೆಯೇ ಜುಲೈ 31ರೊಳಗೆ ಐಟಿಆರ್ ಫೈಲ್ ಮಾಡಲು ಪ್ರಯತ್ನಿಸಿ. ಜುಲೈ 31ರೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗದ ತೆರಿಗೆದಾರರಿಗೆ ವಿಳಂಬ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರ ತನಕ ಕಾಲಾವಕಾಶವಿದೆ. ಆದರೆ, ಅದಕ್ಕೆ ನೀವು ದಂಡ ಪಾವತಿಸಬೇಕು.
ಐಟಿಆರ್ ಸಲ್ಲಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ತೆರಿಗೆ ವಿನಾಯಿತಿ, ಕಡಿತ, ರಿಯಾಯಿತಿ ವ್ಯತ್ಯಾಸ ಅರಿಯೋದು ಅಗತ್ಯ
ವಿಳಂಬ ಐಟಿಆರ್ ಸಲ್ಲಿಕೆಯಿಂದ ಏನೆಲ್ಲ ಸಮಸ್ಯೆ?
ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff) ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇನ್ನು ತೆರಿಗೆದಾರರ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ಅಂತಿಮ ಗಡುವಿನೊಳಗೆ ಐಟಿಆರ್ ಫೈಲ್ ಮಾಡದ ತೆರಿಗೆದಾರರಿಗೆ ಮರುಪಾವತಿ ಮಾಡೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ತೆರಿಗೆದಾರ ಈ ತನಕ ಪಾವತಿ ಮಾಡಿದ ತೆರಿಗೆ ಮೊತ್ತ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ಮೊತ್ತಕ್ಕಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿ (Interest) ಕೂಡ ಕಟ್ಟಬೇಕಾಗುತ್ತದೆ.