ಐಟಿಆರ್ ಸಲ್ಲಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ತೆರಿಗೆ ವಿನಾಯಿತಿ, ಕಡಿತ, ರಿಯಾಯಿತಿ ವ್ಯತ್ಯಾಸ ಅರಿಯೋದು ಅಗತ್ಯ
2022-23ನೇ ಸಾಲಿನ (2023-24ನೇ ಮೌಲ್ಯಮಾಪನ ವರ್ಷದ) ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಐಟಿಆರ್ ಸಲ್ಲಿಕೆ ಮಾಡುವಾಗ ಹಳೆಯ ಅಥವಾ ಹೊಸ ತೆರಿಗೆ ವ್ಯವಸ್ಥೆ ಆಯ್ಕೆ ಮಾಡಲು ತೆರಿಗೆದಾರರಿಗೆ ಅವಕಾಶ ನೀಡಲಾಗಿದೆ. ಈ ಆಯ್ಕೆ ಮಾಡುವ ಮುನ್ನ ತೆರಿಗೆದಾರರು ತೆರಿಗೆ ಕಡಿತ, ವಿನಾಯಿತಿ ಹಾಗೂ ರಿಯಾಯಿತಿ ನಡುವಿನ ವ್ಯತ್ಯಾಸ ಅರಿಯೋದು ಅಗತ್ಯ.
Business Desk: 2023-24ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆ ಪ್ರಕ್ರಿಯೆಗಳು ಪ್ರಾರಂಭಗೊಂಡಿವೆ. ಆನ್ ಲೈನ್ ಹಾಗೂ ಆಪ್ ಲೈನ್ ನಲ್ಲಿ ಐಟಿಆರ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಇನ್ನು ತೆರಿಗೆದಾರರಿಗೆ ಎರಡು ಆದಾಯ ತೆರಿಗೆ ವ್ಯವಸ್ಥೆಗಳು ಲಭ್ಯವಿವೆ. ಒಂದು ಹೊಸ ಆದಾಯ ತೆರಿಗೆ ವ್ಯವಸ್ಥೆ ಹಾಗೂ ಇನ್ನೊಂದು ಹಳೆಯ ಆದಾಯ ತೆರಿಗೆ ವ್ಯವಸ್ಥೆ. ಹಳೆಯ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ವಿನಾಯ್ತಿಗಳು, ಕಡಿತಗಳು ಹಾಗೂ ರಿಯಾಯಿತಿಗಳು ಲಭ್ಯವಿವೆ. ಆದರೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಇಮಥ ಯಾವುದೇ ಕಡಿತದ ಪ್ರಯೋಜನಗಳು ಲಭ್ಯವಿಲ್ಲ. ಸದ್ಯ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡೋರು ಹಳೆಯ ಅಥವಾ ಹೊಸ ಆದಾಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವ ಮುನ್ನ ಕೆಲವೊಂದು ವಿಷಯಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಅದರಲ್ಲೂ ಬಹುತೇಕರಿಗೆ ತೆರಿಗೆ ವಿನಾಯ್ತಿ, ಕಡಿತಗಳು ಹಾಗೂ ರಿಯಾಯಿತಿಗೆ ಸಂಬಂಧಿಸಿ ಸಾಕಷ್ಟು ಗೊಂದಲಗಳಿವೆ. ತೆರಿಗೆ ಪರಿಹಾರಕ್ಕೆ ಸಮನಾಗಿ ವಿನಾಯ್ತಿಗಳು, ಕಡಿತಗಳು ಹಾಗೂ ರಿಯಾಯಿತಿ ಪದಗಳನ್ನು ಬಳಸಲಾಗುತ್ತದೆ. ಬಹುತೇಕರು ಈ ಪದಗಳನ್ನು ಒಂದಕ್ಕೊಂದು ಪರ್ಯಾಯವಾಗಿ ಬಳಸುತ್ತಾರೆ. ಆದರೆ, ಈ ಪ್ರತಿ ಪದಕ್ಕೂ ಅದರದ್ದೇ ಅರ್ಥವಿದ್ದು, ಇತರ ಪದಗಳಿಗಿಂತ ಭಿನ್ನವಾಗಿದೆ.
ತೆರಿಗೆ ವಿನಾಯಿತಿ
ಆದಾಯ ತೆರಿಗೆ ವಿನಾಯಿತಿ ಎಂದರೆ ನಿರ್ದಿಷ್ಟ ಮಿತಿಯ ಆದಾಯದ ತನಕ ಯಾವುದೇ ತೆರಿಗೆ ವಿಧಿಸೋದಿಲ್ಲ. ಪ್ರಸ್ತುತ ವಾರ್ಷಿಕ ಒಟ್ಟು 2.5 ಲಕ್ಷ ರೂ. ಆದಾಯದ ತನಕ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 2.5ಲಕ್ಷ ರೂ. ಆದಾಯ ಗಳಿಸಿದರೆ ಆತ ಅಥವಾ ಆಕೆ ಯಾವುದೇ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ಒಂದು ವೇಳೆ ವಾರ್ಷಿಕ ಆದಾಯ 3 ಲಕ್ಷ ರೂ. ಆಗಿದ್ದರೆ, ಆಗ 50,000ರೂ. ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಉಳಿದ 2.5 ಲಕ್ಷ ರೂ.ಗೆ ಯಾವುದೇ ತೆರಿಗೆ ಇಲ್ಲ.
ಐಟಿಆರ್ ಫೈಲ್ ಮಾಡಲು ಅಗತ್ಯವಾಗಿರುವ ಫಾರ್ಮ್-16 ಉದ್ಯೋಗಿಗಳಿಗೆ ಯಾವಾಗ ಸಿಗುತ್ತೆ? ಇದ್ಯಾಕೆ ಮುಖ್ಯ?
ಇನ್ನು ತೆರಿಗೆ ವಿನಾಯಿತಿಗಳನ್ನು ತೆರಿಗೆಗಳಿಂದ ಸಂಪೂರ್ಣ ವಿನಾಯಿತಿ ಎಂದು ಪರಿಗಣಿಸಬಹುದು. ಹಾಗೆಯೇ ಅವುಗಳನ್ನು ಆದಾಯದ ನಿರ್ದಿಷ್ಟ ಭಾಗಗಳಿಂದ ಕ್ಲೇಮ್ ಮಾಡಿಕೊಳ್ಳಬಹುದೇ ಹೊರತು ನಿವ್ವಳ ಒಟ್ಟು ಆದಾಯದಿಂದ ಅಲ್ಲ. ಆದಾಯ ತೆರಿಗೆ ಕಾಯ್ದೆ 1961 ಅಡಿಯಲ್ಲಿ ವಿವಿಧ ವಿನಾಯಿತಿಗಳನ್ನು ನೀಡಲಾಗಿದೆ. ವೇತನದಲ್ಲಿ ಮನೆ ಬಾಡಿಗೆ ಭತ್ಯೆ (ಎಚ್ ಆರ್ ಎ) ಹಾಗೂ ಬಂಡವಾಳ ಗಳಿಕೆ ಶೀರ್ಷಿಕೆಯಡಿಯಲ್ಲಿನ ಆದಾಯಕ್ಕೆ ವಿವಿಧ ವಿನಾಯಿತಿಗಳನ್ನು ನೀಡಲಾಗಿದೆ. ವೇತನ ಆದಾಯ ಲೆಕ್ಕಾಚಾರ ಹಾಕುವಾಗ ಮನೆ ಬಾಡಿಗೆ ಭತ್ಯೆ, ರಜೆ ಪ್ರವಾಸ ಭತ್ಯೆ, ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಮುಂತಾದ ವೆಚ್ಚಗಳು ವಿನಾಯಿತಿ ವರ್ಗದಲ್ಲಿ ಬರುತ್ತವೆ. ಇದೇ ರೀತಿಯ ವಿನಾಯಿತಿಗಳು ಇತರ ಆದಾಯದ ವರ್ಗಗಳಿಗೂ ಇರುತ್ತವೆ.
ತೆರಿಗೆ ಕಡಿತಗಳು
ಹೂಡಿಕೆ (ಸೆಕ್ಷನ್ 80C) ಅಥವಾ ವೆಚ್ಚಗಳ ಮೊತ್ತದ (ಸೆಕ್ಷನ್ 80D ಅಥವಾ 80E) ಆಧಾರದಲ್ಲಿ ತೆರಿಗೆದಾರರು ನಿರ್ದಿಷ್ಟ ತೆರಿಗೆ ಕಡಿತದ ಪ್ರಯೋಜನಗಳನ್ನು ಪಡೆಯಬಹುದು. ಆದರೆ, ಈ ಸೌಲಭ್ಯ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಐಟಿಆರ್ ಫೈಲ್ ಮಾಡೋರಿಗೆ ಮಾತ್ರ ಅನ್ವಯಿಸುತ್ತದೆ. ಇನ್ನು ಈ ಕಡಿತಗಳನ್ನು ಜೀವ ವಿಮಾ ಪ್ರೀಮಿಯಂ, ವೈದ್ಯಕೀಯ ವಿಮಾ ಪ್ರೀಮಿಯಂ, ಪಿಪಿಎಫ್ ಹಾಗೂ ಟ್ಯೂಷನ್ ಶುಲ್ಕ ಮುಂತಾದ ತೆರಿಗೆ ಉಳಿತಾಯ ಹೂಡಿಕೆಗಳ ಆಧಾರದಲ್ಲಿ ಮಾಡಲಾಗುತ್ತದೆ. ವಿನಾಯಿತಿ ಎಂದರೆ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸದಿರೋದು. ಅದೇ ಕಡಿತವೆಂದ್ರೆ ತೆರಿಗೆದಾರರ ಒಟ್ಟು ಆದಾಯದಲ್ಲಿ ತೆರಿಗೆ ವಿಧಿಸುವ ಮೊತ್ತದ ಇಳಿಕೆ.
ITR ಫೈಲ್ ಮಾಡಿದ ಬಳಿಕ ತೆರಿಗೆ ರೀಫಂಡ್ ಪಡೆಯಲು ಎಷ್ಟು ಸಮಯ ಬೇಕು? ಇಲ್ಲಿದೆ ಮಾಹಿತಿ
ತೆರಿಗೆ ರಿಯಾಯಿತಿಗಳು
ತೆರಿಗೆ ರಿಯಾಯಿತಿಯು ಕಡಿತ ಹಾಗೂ ವಿನಾಯಿತಿಯಿಂದ ಭಿನ್ನವಾಗಿದೆ. ರಿಯಾಯಿತಿ ಅಡಿಯಲ್ಲಿ ನಿರ್ದಿಷ್ಟ ಮಿತಿ ವಿಧಿಸಲಾಗುತ್ತದೆ. ಅಲ್ಲಿಯ ತನಕದ ಆದಾಯವು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್
87A ಅಡಿಯಲ್ಲಿ ತೆರಿಗೆ ಮುಕ್ತವಾಗಿರುತ್ತದೆ. ಒಂದು ವೇಳೆ ವಾರ್ಷಿಕ ಆದಾಯವು ಆ ಮಿತಿಯನ್ನು ಮೀರಿದರೆ, ಆಗ ಇಡೀ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇದನ್ನು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಅನುಸರಿಸಲಾಗುತ್ತಿದೆ. 2022-23ನೇ ಆರ್ಥಿಕ ಸಾಲಿನಲ್ಲಿ ಆದಾಯ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಪೂರ್ತಿ ಆದಾಯಕ್ಕೆ (ವಿನಾಯಿತಿ ಮಿತಿ ಹೊರತುಪಡಿಸಿ) ತೆರಿಗೆ ವಿಧಿಸಲಾಗುತ್ತಿತ್ತು. 2023-24ನೇ ಹಣಕಾಸು ಸಾಲಿನಲ್ಲಿ ಈ ರಿಯಾಯಿತಿ ಮಿತಿಯನ್ನು 7ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.