Insurance Trap: ವಿಮಾ ಕಂಪನಿಗಳು ಹೇಗೆಲ್ಲ ನಿಮ್ಮನ್ನು ಯಾಮಾರಿಸುತ್ತವೆ ಗೊತ್ತಾ? ಇಲ್ಲಿದೆ ಮಾಹಿತಿ
ತೆರಿಗೆ ಭಾರದಿಂದ ತಪ್ಪಿಸಿಕೊಳ್ಳಲು ಕೆಲವೊಮ್ಮೆ ತೆರಿಗೆದಾರರು ಯೋಚಿಸದೆ ಹೂಡಿಕೆ ಮಾಡುತ್ತಾರೆ. ಅದರಲ್ಲೂ ಮನಿ ಬ್ಯಾಕ್, ಟ್ರಿಪಲ್ ಬೆನಿಫಿಟ್ ಸೇರಿದಂತೆ ವಿಮಾ ಕಂಪನಿಗಳು ನೀಡುವ ವಿವಿಧ ಆಫರ್ ಗಳಿಗೆ ಮರುಳಾಗಿ ವಿಮೆಯಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ, ಇದು ಗ್ರಾಹಕರನ್ನು ತಮ್ಮ ಬಲೆಯಲ್ಲಿ ಬೀಳಿಸಿಕೊಳ್ಳಲು ವಿಮಾ ಕಂಪನಿಗಳು ಅನುಸರಿಸುವ ತಂತ್ರಗಳಾಗಿವೆ. ಇಂಥ ಪಾಲಿಸಿಗಳಿಂದ ಬಹುತೇಕ ಸಂದರ್ಭಗಳಲ್ಲಿ ಉತ್ತಮ ರಿಟರ್ನ್ ಸಿಗೋದಿಲ್ಲ.
Business Desk: ಭಾರತದಲ್ಲಿ ತೆರಿಗೆ ಪಾವತಿ ಸೀಸನ್ ತೆರಿಗೆದಾರರಿಗೆ ಒಂದು ರೀತಿಯಲ್ಲಿ ಒತ್ತಡ ಹಾಗೂ ಗೊಂದಲದ ಸಮಯ ಎಂದೇ ಹೇಳಬಹುದು. ಕೆಲವರಿಗೆ ಅವರು ಕ್ಲೇಮ್ ಮಾಡಬಹುದಾದ ಎಲ್ಲ ತೆರಿಗೆ ಕಡಿತ ಹಾಗೂ ವಿನಾಯ್ತಿಗಳ ಬಗ್ಗೆ ಅರಿವು ಇರೋದಿಲ್ಲ. ಇನ್ನು ಇದೇ ಸಮಯದಲ್ಲಿ ತೆರಿಗೆದಾರರು ಹೆಚ್ಚಾಗಿ ವಿಮಾ ಕಂಪನಿಗಳ ಮೋಸದ ಬಲೆಗೆ ಬೀಳುತ್ತಾರೆ. ತೆರಿಗೆ ಪ್ರಯೋಜನದ ಹೆಸರಿನಲ್ಲಿ ಕೆಲವು ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಉದ್ದೇಶವನ್ನು ವಿಮಾ ಸಂಸ್ಥೆಗಳು ಹೊಂದಿರುತ್ತವೆ. ಇಂಥ ಪಾಲಿಸಿಗಳು ತೆರಿಗೆ ಪ್ರಯೋಜನ ಒದಗಿಸಿದರು ಕೂಡ ಇತರ ಹೂಡಿಕೆ ವಿಧಾನಗಳಿಗಿಂತ ಹೆಚ್ಚು ದುಬಾರಿ. ಅಲ್ಲದೆ, ಹೂಡಿಕೆ ಮೇಲೆ ಸಮರ್ಪಕ ರಿಟರ್ನ್ಸ್ ಕೂಡ ನೀಡುವುದಿಲ್ಲ. ತೆರಿಗೆ ಸೀಸನ್ ನಲ್ಲಿ ಸಾಮಾನ್ಯವಾಗಿ ನಡೆಯುವ ವಿಮಾ ವಂಚನೆ ಜಾಲಗಳ ಬಗ್ಗೆ ನಾಗರಿಕರು ಅರಿವು ಹೊಂದಿರೋದು ಅಗತ್ಯ. ಖಚಿತ ರಿಟರ್ನ್, ಮನಿ ಬ್ಯಾಕ್ ಸೇರಿದಂತೆ ಗ್ರಾಹಕರನ್ನು ಸೆಳೆಯಲು ವಿಮಾ ಕಂಪನಿಗಳು ಅನೇಕ ಟ್ರಿಕ್ಸ್ ಅನುಸರಿಸುತ್ತವೆ. ಆದರೆ, ಇದಕ್ಕೆಲ್ಲ ಮರುಳಾಗಿ ಹೂಡಿಮೆ ಮಾಡುವ ಮುನ್ನ ಸರಿಯಾದ ಮಾಹಿತಿ ಹಾಗೂ ಹೂಡಿಕೆ ಲೆಕ್ಕಾಚಾರ ಮಾಡೋದು ಅಗತ್ಯ. ಹಾಗಾದ್ರೆ ಯಾವೆಲ್ಲ ರೀತಿಯಲ್ಲಿ ನಾವು ವಿಮಾ ಟ್ರ್ಯಾಪ್ ಗೆ ಒಳಗಾಗುತ್ತೇವೆ? ಇಲ್ಲಿದೆ ಮಾಹಿತಿ.
1.ಖಚಿತ ರಿಟರ್ನ್ ಟ್ರ್ಯಾಪ್
ತೆರಿಗೆ ಸೀಸನ್ ನಲ್ಲಿ ಜನರು ಸಾಮಾನ್ಯವಾಗಿ ವಿಮಾ ಕಂಪನಿಗಳು ನೀಡುವ ಗ್ಯಾರಂಟಿ ರಿಟರ್ನ್ ಆಫರ್ ಬಲೆಗೆ ಸುಲಭವಾಗಿ ಬೀಳುತ್ತಾರೆ. ಅನೇಕ ವಿಮಾ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಈ ತಂತ್ರವನ್ನು ಬಳಸುತ್ತವೆ. ಭರವಸೆ ನೀಡಿರುವ ರಿಟರ್ನ್ ಜೊತೆಗೆ ಸುರಕ್ಷಿತ ಹೂಡಿಕೆ ಬಯಸುವ ಗ್ರಾಹಕರು ಇಂಥ ಆಫರ್ ಗಳಿಗೆ ಸುಲಭವಾಗಿ ಮಣಿಯುತ್ತಾರೆ. ಕೆಲವು ಕಂಪನಿಗಳು ಹಳೆಯ ಸಾಂಪ್ರದಾಯಿಕ ಪಾಲಿಸಿಗಳನ್ನು ನಿಗದಿತ ರಿಟರ್ನ್ಸ್ ಭರವಸೆ ಮೂಲಕ ಮಾರಾಟ ಮಾಡಲು ಪ್ರಯತ್ನಿಸುತ್ತವೆ ಕೂಡ. ಇಂಥ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದ್ರೆ ರಿಟರ್ನ್ ಶೇ.4-ಶೇ.8ರ ನಡುವೆ ಇರುತ್ತದೆ. ವಿಮೆಗಳು ಆದಾಯ ಅಥವಾ ರಿಟರ್ನ್ ನೀಡುವ ಹೂಡಿಕೆಗಳಲ್ಲ, ಬದಲಿಗೆ ಸುರಕ್ಷತೆಯಷ್ಟೇ ನೀಡುತ್ತವೆ ಎಂಬುದನ್ನು ಮೊದಲು ಅರಿಯಬೇಕು.
ದುಡ್ಡು ಮಾಡೋದು ಹೇಗೆ? ಮಹಿಳೆಯರಿಗೆ ಇಲ್ಲಿವೆ ದುಡಿಯೋ ಟಿಪ್ಸ್
2.ಮನಿ ಬ್ಯಾಕ್
ಮನಿ ಬ್ಯಾಕ್ ಪಾಲಿಸಿಗಳ ಮುಖಾಂತರ ಕೂಡ ಗ್ರಾಹಕರನ್ನು ಟ್ರ್ಯಾಪ್ ಮಾಡಲಾಗುತ್ತದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ರೆ ದೊಡ್ಡ ಮಟ್ಟದಲ್ಲಿ ನಷ್ಟವಾಗುತ್ತದೆ. ತೆರಿಗೆ ಉಳಿತಾಯಕ್ಕೆ ಸರಳ ವಿಧಾನ ಹಾಗೂ ನಿರ್ದಿಷ್ಟ ಅವಧಿಗೆ ನಿಯಮಿತ ಆದಾಯ ನೀಡುತ್ತವೆ ಎಂಬ ಕಾರಣಕ್ಕೆ ಹೂಡಿಕೆ ಮಾಡಲಾಗುತ್ತದೆ. ಈ ಪಾಲಿಸಿಗಳ ಪ್ರೀಮಿಯಂ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಇನ್ನು ಮೆಚ್ಯುರಿಟಿ ಅವಧಿಗೂ ಮುನ್ನ ಈ ಪಾಲಿಸಿಯಿಂದ ನಿರ್ಗಮಿಸಲು ನಿಗದಿತ ಒಪ್ಪಿಗೆ ಶುಲ್ಕ ಪಾವತಿಸಬೇಕಾಗುತ್ತದೆ.
3.ಮೂರು ಪ್ರಯೋಜನ
ತೆರಿಗೆ ಸೀಸನ್ ನಲ್ಲಿ ಗ್ರಾಹಕರಿಗೆ ವಿಮಾ ಕಂಪನಿಗಳು ನೀಡುವ ಇನ್ನೊಂದು ವಾಗ್ದಾನ ಟ್ರಿಫಲ್ ಬೆನಿಫಿಟ್. ಅಂದ್ರೆ ಪಾಲಿಸಿ ಒಂದು ಪ್ರಯೋಜನ ಮೂರು. ಜೀವನಕ್ಕೆ ಕವರೇಜ್, ತೆರಿಗೆ ಪ್ರಯೋಜನಗಳು ಹಾಗೂ ಹೂಡಿಕೆಗಳು. ಈ ಮೂರು ಕೂಡ ಒಂದೇ ಪಾಲಿಸಿಯಿಂದ ಸಿಗುತ್ತದೆ ಎಂಬ ಭರವಸೆ ನೀಡಲಾಗುತ್ತದೆ. ಹೀಗಾಗಿ ಜನರು ತಮಗೆ ನಿಜವಾಗಿಯೂ ಪಾಲಿಸಿ ಬೇಕಾ ಅಥವಾ ಬೇಡ್ವಾ ಎಂಬುದನ್ನು ಲೆಕ್ಕ ಹಾಕದೆ ಪಾಲಿಸಿ ಖರೀದಿಗೆ ಮುಂದಾಗುತ್ತಾರೆ. ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಉಳಿತಾಯಕ್ಕೆ ಪಾಲಿಸಿ ಖರೀದಿಸುತ್ತಾರೆ. ನಿಮ್ಮ ಇಪಿಎಫ್ ಕೊಡುಗೆ ಹಾಗೂ ಮಕ್ಕಳ ಟ್ಯೂಷನ್ ಶುಲ್ಕ ಕೂಡ ತೆರಿಗೆ ಕಡಿತನಕ್ಕೆ ಅರ್ಹವಾಗಿದೆ. ಇವೆರಡೂ ನಿಮ್ಮ 1.5ಲಕ್ಷ ರೂ. ಮಿತಿಗೆ ಸಾಕಾಗಬಹುದು. ಹೀಗಾಗಿ ಲೆಕ್ಕ ಹಾಕದೆ ಹೂಡಿಕೆ ಮಾಡಬೇಡಿ.
SVBಯಲ್ಲಿ ಭಾರತದ ಸ್ಟಾರ್ಟಪ್‌ಗಳ 8000 ಕೋಟಿ ಹಣ: ನೆರವು ನೀಡಲು ಭಾರತದ ಬ್ಯಾಂಕ್‌ಗಳಿಗೆ ಸಚಿವ ಆರ್‌ಸಿ ಸಲಹೆ
4.ದೀರ್ಘಾವಧಿ ಕಾರ್ಪಸ್ ಟ್ರ್ಯಾಪ್
ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ಖಚಿತ ಎಂಡೋಮೆಂಟ್ ಪಾಲಿಸಿಗಳು ತೆರಿಗೆ ಅವಧಿಯಲ್ಲಿ ವಿಮಾ ಸಂಸ್ಥೆಗಳು ಪಾಲಿಸುವ ಇನ್ನೊಂದು ಪ್ರಮುಖ ತಂತ್ರ. ಅವರು ಸುರಕ್ಷಿತ ರಿಟರ್ನ್ಸ್ ನೀಡುವ ಖಚಿತತೆ ನೀಡಿದರೂ ಯುಎಲ್ ಐಪಿಎಸ್ ಹಾಗೂ ಪಾರ್ಟಿಸಿಪೇಟಿಂಗ್ ಪಾಲಿಸಿಗಳಿಗೆ ಹೋಲಿಸಿದ್ರೆ ಇವು ಕಡಿಮೆ ರಿಟರ್ನ್ಸ್ ಅಂದ್ರೆ ಸುಮಾರು ಸೇ.5ರಷ್ಟು ರಿಟರ್ನ್ಸ್ ಮಾತ್ರ ನೀಡುತ್ತವೆ.
5.ಲ್ಯಾಪ್ಸ್ ಪಾಲಿಸಿ ಟ್ರ್ಯಾಪ್
ತೆರಿಗೆ ಅವಧಿಯಲ್ಲಿ ವಿಮಾ ಕಂಪನಿಗಳು ಬಳಕೆ ಮಾಡುವ ಇನ್ನೊಂದು ತಂತ್ರ ಇದು. ಪಾಲಿಸಿ ಲ್ಯಾಪ್ಸ್ ಆಗಿರುವ ಪಾಲಿಸಿದಾರರಿಗೆ ಟೆಲಿ ಕಾಲರ್ ಮೂಲಕ ಆಗಾಗ ಕರೆ ಮಾಡಿ ಅವರ ಪಾಲಿಸಿಯಲ್ಲಿ ಬೋನಸ್ ಹಣವಿದೆ. ಹೀಗಾಗಿ ಶುಲ್ಕ ಪಾವತಿಸಿ ಹೊಸ ಪಾಲಿಸಿ ಖರೀದಿ ಬೋನಸ್ ಕ್ಲೇಮ್ ಮಾಡುವಂತೆ ತಿಳಿಸಲಾಗುತ್ತದೆ. ಬೋನಸ್ ಹಣಕ್ಕಾಗಿ ಹೊಸ ಪಾಲಿಸಿ ಮಾಡೋದು ಎಷ್ಟು ಸೂಕ್ತ ಎಂಬುದನ್ನು ನೀವೇ ಲೆಕ್ಕ ಹಾಕಿ ನೋಡಿ.