Watch: ಸರ್ಕಾರ ರೂಪಿಸುತ್ತಿರುವ ಸೆಮಿಕಂಡಕ್ಟರ್ ವ್ಯವಸ್ಥೆ ಬಗ್ಗೆ ಪತ್ರಕರ್ತರಿಗೆ ಪಾಠ ಮಾಡಿ ವಿವರಿಸಿದ ಸಚಿವ ಅಶ್ವಿನಿ ವೈಷ್ಣವ್!
ಕೇಂದ್ರ ಸಂಪುಟ ದೇಶದಲ್ಲಿ ಮೂರು ಸೆಮಿಕಂಡಕ್ಟರ್ ಪ್ಲ್ಯಾಂಟ್‌ಗೆ ಒಪ್ಪಿಗೆ ನೀಡಿದ್ದನ್ನು ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು. ಆದರೆ, ಸರ್ಕಾರ ರೂಪಿಸುತ್ತಿರುವ ಸೆಮಿಕಂಡಕ್ಟರ್ ವ್ಯವಸ್ಥೆ ಬಗ್ಗೆ ಪತ್ರಕರ್ತರಿಗೆ ಪಾಠ ಮಾಡಿ ವಿವರಿಸುತ್ತಿರುವ ಅವರ ವಿಡಿಯೋ ವೈರಲ್ ಆಗಿದೆ.
ನವದೆಹಲಿ (ಮಾ.1): ರಾಜಕಾರಣಿಗಳು ಮಂತ್ರಿಗಳಾದ ಬಳಿಕ ತಾವು ವಹಿಸಿಕೊಂಡಿರುವ ಇಲಾಖೆಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಬೇಕು. ಅಂಥ ಸಚಿವರು ನಮ್ಮ ನಡುವೆ ಇರಬೇಕು ಎಂದು ಭಾರತೀಯರು ಬಯಸಿದ್ದರು. ಅದು ಈಗ ನಿಜವಾಗಿದೆ. ಗುರುವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದೇಶದಲ್ಲಿ ಮೂರು ಸೆಮಿಕಂಡಕ್ಟರ್ ಪ್ಲ್ಯಾಂಟ್‌ಗಳಿಗೆ ಅನುಮೋದನೆ ನೀಡಲಾಗಿದೆ. ಇದನ್ನು ಕೇಂದ್ರ ರೈಲ್ವೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದರು. ಆದರೆ, ಸೆಮಿಕಂಡಕ್ಟರ್ ಅಂದರೆ ಏನು? ಕೇಂದ್ರ ಸರ್ಕಾರ ಈ ವಲಯದಲ್ಲಿ ರೂಪಿಸುತ್ತಿರುವ ವ್ಯವಸ್ಥೆ ಏನು ಎನ್ನುವುದರ ಬಗ್ಗೆ ಸ್ವತಃ ಅಶ್ವಿನಿ ವೈಷ್ಣವ್ ಮಾಧ್ಯಮದವರಿಗೆ ಪಾಠ ಮಾಡಿ ತಿಳಿಸಿರುವ ವಿಡಿಯೋ ವೈರಲ್ ಆಗಿದೆ. ಬಿಳಿಬೋರ್ಡ್‌ನಲ್ಲಿ ಮಾರ್ಕರ್ ಹಿಡಿದುಕೊಂಡು ದೇಶದಲ್ಲಿ ಸೆಮಿಕಂಡಕ್ಟರ್ ವ್ಯವಸ್ಥೆ ರೂಪಿಸಲು ಸರ್ಕಾರ ಯಾವ ನಿಟ್ಟಿನಲ್ಲಿ ಯಾವ ಹಂತದಲ್ಲಿ ಕೆಲಸ ಮಾಡುತ್ತಿದೆ ಎನ್ನುವುದನ್ನು ವಿವರವಾಗಿ ತಿಳಿಸಿದ್ದಾರೆ. 4 ನಿಮಿಷದ ಈ ವಿಡಿಯೋದಲ್ಲಿ, ಮಾಜಿ ಐಐಟಿ ವಿದ್ಯಾರ್ಥಿ ಕೂಡ ಆಗಿರುವ ಅಶ್ವಿನಿ ವೈಷ್ಣವ್, ಸೆಮಿಕಂಡಕ್ಟರ್‌ನಿಂದ ಆಗುವ ಲಾಭಗಳು, ಪ್ರಸ್ತುತ ವಿಶ್ವದಲ್ಲಿರುವ ಪ್ರಮುಖ ಸೆಮಿಕಂಡಕ್ಟರ್ ಉತ್ಪಾದಕ ಸಂಸ್ಥೆಗಳು, ಅವರೊಂದಿಗೆ ಭಾರತದ ವ್ಯವಸಹಾರದ ಬಗ್ಗೆ ವಿಸ್ತ್ರತವಾಗಿ ಮಾತನಾಡಿದ್ದಾರೆ.
ದೇಶದಲ್ಲಿ ಆರಂಭವಾಗಲಿರುವ ಮೂರು ಸೆಮಿಕಂಡಕ್ಟರ್ ಫ್ಯಾಬ್‌ಗಳ ಪೈಕಿ ಎರಡನ್ನು ಟಾಟಾ ಸಂಸ್ಥೆ ನಿರ್ಮಿಸಲಿದೆ. ಗುಜರಾತ್‌ನಲ್ಲಿ ಎರಡು ಪ್ಲ್ಯಾಂಟ್ ನಿರ್ಮಾಣವಾಗಲಿದ್ದರೆ, ಇನ್ನೊಂದು ಪ್ಲ್ಯಾಂಟ್ ಅಸ್ಸಾಂನಲ್ಲಿ ನಿರ್ಮಾಣವಾಗಲಿದೆ. ಮುಂದಿನ 100 ದಿನಗಳ ಒಳಗಾಗಿ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎನ್ನುವ ವಿವರವನ್ನೂ ಅಶ್ವಿನಿ ವೈಷ್ಣವ್ ನೀಡಿದ್ದಾರೆ.
ದೇಶದಲ್ಲಿ ಸೆಮಿಕಂಡಕ್ಟರ್ ವ್ಯವಸ್ಥೆಯ ನೀಲನಕ್ಷನೆಯನ್ನು ಸಂಪೂರ್ಣವಾಗಿ ವಿವರಿಸಿದ ಅಶ್ವಿನಿ ವೈಷ್ಣವ್, ಇದರಲ್ಲಿ ನಾಲ್ಕು ಪ್ರಮುಖ ವಿಭಾಗಗಳಿವೆ ಎಂದು ತಿಳಿಸಿದ್ದಾರೆ. ವಿನ್ಯಾಸ, ಫ್ಯಾಬ್ರಿಕೇಷನ್ ಅಥವಾ ಫ್ಯಾಬ್, ಎಟಿಎಂಪಿ (ಅಸೆಂಬ್ಲಿ-ಟೆಸ್ಟಿಂಗ್-ಮಾರ್ಕಿಂಗ್-ಪ್ಯಾಕೇಜಿಂಗ್) ಹಾಗೂ ಕೊನೆಯದಾಗಿ ಸರ್ಕ್ಯೂಟ್ ಅಥವಾ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಎಂದು ವಿವರಿಸಿದರು.
ಈ ವಿಭಾಗಗಗಳಿಗೆ ಬೆಂಬಲ ನೀಡುವ ಸಲುವಾಗಿ ಕೇಂದ್ರ ಸರ್ಕಾರ, ಟ್ಯಾಲೆಂಟ್ ಪೂಲ್‌ಅನ್ನು ರಚಿಸುತ್ತಿದೆ ಎನ್ನುವುದನ್ನೂ ಅವರಿ ತಿಳಿಸಿದ್ದಾರೆ. 'ನಾವು ಮಾಡುತ್ತಿರುವ ಅತಿದೊಡ್ಡ ವಿಚಾರವೆಂದರೆ, ಅದು ಆರ್&ಡಿ (ಸಂಶೋಧನೆ ಮತ್ತು ಉತ್ಪಾದನೆ)' ಎಂದಿದ್ದಾರೆ. ಇದನ್ನೂ ವಿವರವಾಗಿ ತಿಳಿಸಿದ ಅವರು, ಇಂದು ಈ ವಿಭಾಗದ ಅತ್ಯಂತ ದುಬಾರಿ ಟೂಲ್‌ಗಳ ಕ್ಯಾಡೆನ್ಸ್, ಸಿನಾಪ್ಸಿಸ್ ಮತ್ತು ಸಿಮೆನ್ಸ್ ನೀಡುತ್ತಿದೆ. ಎಲೆಕ್ಟ್ರಾನಿಕ್ ಡಿಸೈನ್ ಆಟೊಮೇಷನ್ ಅಥವಾ ಇಡಿಎ ಉಪಕರಣಗಳು ಎಂದು ಕರೆಯಲ್ಪಡುವ ಈ ಉಪಕರಣಗಳು ತುಂಬಾ ದುಬಾರಿಯಾಗಿದ್ದು, ಕೇವಲ ಒಂದು ಪರವಾನಗಿಗೆ 10-15 ಕೋಟಿ ರೂ.ವರೆಗೆ ವೆಚ್ಚವಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ. ಸರಕಾರ ಈ ಇಡಿಎ ಪರಿಕರಗಳನ್ನು ತೆಗೆದುಕೊಂಡು ದೇಶದ 104 ವಿಶ್ವವಿದ್ಯಾಲಯಗಳಿಗೆ ನೀಡಿದೆ ಎಂದಿದ್ದಾರೆ.
ಈ ಟೂಲ್‌ಗಳನ್ನು ಕೇವಲ ಐಐಟಿಗಳಿಗೆ ಮಾತ್ರವೇ ನೀಡಲಾಗಿಲ್ಲ, ಟೈರ್-2 ಹಾಗೂ ಟೈರ್-3 ವಿಶ್ವವಿದ್ಯಾಲಯಗಳಿಗೂ ಈ ಟೂಲ್‌ಗಳನ್ನು ನೀಡಿದ್ದೇವೆ.ಈ ವಿಶ್ವವಿದ್ಯಾನಿಲಯಗಳು ತಮ್ಮ ವಿದ್ಯಾರ್ಥಿಗಳನ್ನು ಈ ಲೈವ್ ಟೂಲ್‌ಗಳ ಮೂಲಕ ಅಭ್ಯಾಸ ನೀಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದ್ದಾರೆ. “ವಿದ್ಯಾರ್ಥಿಗಳು ಈಗ ಪ್ರಾಜೆಕ್ಟ್ ಅನ್ನು ತೆಗೆದುಕೊಳ್ಳಬಹುದು ಮತ್ತು ಹೊಸ ಮೊಬೈಲ್ ಚಿಪ್ ಅನ್ನು ವಿನ್ಯಾಸಗೊಳಿಸಬಹುದು ಮತ್ತು ಅದನ್ನು ತಯಾರಿಸಬಹುದು, ಇದು ಹೊಸ ಸ್ಟಾರ್ಟ್‌ಅಪ್‌ಗಳಿಗೂ ಕಾರಣವಾಗುತ್ತದೆ. ಅಲ್ಲಿಂದ ಹೊರಹೊಮ್ಮುವ ಪ್ರತಿಭೆಯನ್ನು ನಮ್ಮ ಒಟ್ಟಾರೆ 300,000 ಇಂಜಿನಿಯರ್‌ಗಳ ಟ್ಯಾಲೆಂಟ್ ಪೂಲ್‌ಗೆ ಸೇರಿಸಲಾಗುತ್ತದೆ, ಅದು ನಂತರ ವಿನ್ಯಾಸ, FAB ಮತ್ತು ATMP ಅಂಶಗಳಿಗೆ ಸಹಾಯ ಮಾಡುತ್ತದೆ' ಎಂದಿದ್ದಾರೆ.
ದೇಶದಲ್ಲಿ ಮೂರು ಸೆಮಿಕಂಡಕ್ಟರ್ ಪ್ಲ್ಯಾಂಟ್‌ಗೆ ಒಪ್ಪಿಗೆ ನೀಡಿದ ಕೇಂದ್ರ ಸಂಪುಟ!
ಅಡಿಪಾಯ ಗಟ್ಟಿಯಾಗಬೇಕಾದ ಸಮಗ್ರ ಕಾರ್ಯಕ್ರಮ ಇದಾಗಿದೆ ಎಂದು ಸಚಿವರು ಹೇಳಿದರು. ಸಂಪೂರ್ಣ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆ ಆದರೆ ಇದು ಬೃಹತ್ ಕೆಲಸ ಎಂದು ಸಚಿವರು ಹೇಳಿದರು. "ನಾವು ಎರಡು ವರ್ಷಗಳಲ್ಲಿ ಇದನ್ನು ಸಾಧಿಸಲು ಸಾಧ್ಯವಾಯಿತು, ಅನೇಕ ದೇಶಗಳು ಐದು ವರ್ಷಗಳಲ್ಲಿ ಇದನ್ನು ಮಾಡಲು ಸಾಧ್ಯವಾಗಲಿಲ್ಲ," ಎಂದಿದ್ದಾರೆ. ಅಪ್ಲೈಡ್ ಮೆಟೀರಿಯಲ್ಸ್ ಬಗ್ಗೆಯೂ ವೈಷ್ಣವ್ ಮಾತನಾಡಿದರು. “ಭಾರತದಲ್ಲಿ ಪ್ಲ್ಯಾಂಟ್‌ಅನ್ನು ಸ್ಥಾಪಿಸಲು ಪ್ರಾರಂಭಿಸಿದ್ದಾರೆ. ಅವರು ಭಾರತದಲ್ಲಿ ವಿನ್ಯಾಸ ಮಾಡುತ್ತಿದ್ದಾರೆ, ಭಾರತದಲ್ಲಿ ಉತ್ಪಾದನೆ ಮಾಡುತ್ತಿದ್ದಾರೆ, ”ಎಂದು ಅವರು ಹೇಳಿದರು.
ಶೀಘ್ರದಲ್ಲೇ ಡಿಜಿಟಲ್ ಲ್ಯಾಬ್, ಸೆಮಿಕಂಡಕ್ಟರ್ ಕೇಂದ್ರ, ಮೋದಿ ಸರ್ಕಾರದ ವಿಷನ್ ಬಿಚ್ಚಿಟ್ಟ ರಾಜೀವ್ ಚಂದ್ರಶೇಖರ್!