*ಆಗಸ್ಟ್ ತಿಂಗಳಲ್ಲಿ ಶೇ.7ರಷ್ಟಿದ್ದ ಚಿಲ್ಲರೆ ಹಣದುಬ್ಬರ*ಸತತ 9ನೇ ಬಾರಿ ಆರ್ ಬಿಐ ಸಹನ ಮಿತಿ ಮೀರುತ್ತಿರುವ ಚಿಲ್ಲರೆ ಹಣದುಬ್ಬರ*ಆರ್ ಬಿಐ ಕಠಿಣ ಕ್ರಮಗಳ ಹೊರತಾಗಿಯೂ ಇಳಿಕೆಯಾಗದ ಹಣದುಬ್ಬರ
ನವದೆಹಲಿ (ಅ.13):ಭಾರತದ ಚಿಲ್ಲರೆ ಹಣದುಬ್ಬರ ಸತತ ಎರಡನೇ ತಿಂಗಳು ಕೂಡ ಏರಿಕೆ ಹಾದಿಯಲ್ಲಿದ್ದು, ಸೆಪ್ಟೆಂಬರ್ ನಲ್ಲಿ ಶೇ.7.41ಕ್ಕೆ ಹೆಚ್ಚಳವಾಗಿದೆ. ಆಗಸ್ಟ್ ತಿಂಗಳಲ್ಲಿ ಇದು ಶೇ.7ರಷ್ಟಿತ್ತು. ಮುಂದಿನ ದಿನಗಳಲ್ಲಿ ಹಣದುಬ್ಬರ 8ರ ಗಡಿ ಮುಟ್ಟಲಿದೆಯೇ ಎಂಬ ಆತಂಕ ಕಾಡಲು ಪ್ರಾರಂಭಿಸಿದೆ. ಆಹಾರ ಪದಾರ್ಥಗಳ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇನ್ನು ಕೈಗಾರಿಕ ಉತ್ಪಾದನೆ ಸೂಚ್ಯಂಕ (ಐಐಪಿ) ಆಗಸ್ಟ್ ನಲ್ಲಿ ಶೇ. 0.8 ಕ್ಕೆ ಇಳಿಕೆಯಾಗಿದೆ. ಜುಲೈನಲ್ಲಿ ಇದು ಶೇ. 2.4ರಷ್ಟು ಪ್ರಗತಿ ದಾಖಲಿಸಿತ್ತು. ಸೆಪ್ಟೆಂಬರ್ ನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರ ಶೇ.7.56ಕ್ಕೆ ಏರಿಕೆಯಾಗಿದೆ. ಇನ್ನು ನಗರ ಪ್ರದೇಶದಲ್ಲಿ ಶೇ.7.27ಕ್ಕೆ ಹೆಚ್ಚಳವಾಗಿದೆ. 2021ರ ಸೆಪ್ಟೆಂಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.4.35ರಷ್ಟಿತ್ತು. ಆಹಾರ ಹಣದುಬ್ಬರ ಆಗಸ್ಟ್ ನಲ್ಲಿ ಶೇ.7.62ರಷ್ಟಿದ್ದು, ಸೆಪ್ಟೆಂಬರ್ ನಲ್ಲಿ ಶೇ.8.60ಕ್ಕೆ ಏರಿಕೆಯಾಗಿದೆ. ಗ್ರಾಹಕರ ಬೆಲೆ ಸೂಚ್ಯಂಕ ಅಥವಾ ಸಿಪಿಐ ಹಣದುಬ್ಬರ ಆರ್ ಬಿಐ ನಿಗದಿಪಡಿಸಿರುವ ಗರಿಷ್ಠ ಸಹನ ಮಟ್ಟ ಶೇ.6ರನ್ನು ಮೀರುತ್ತಿರೋದು ಇದು ಸತತ ಒಂಭತ್ತನೇ ಬಾರಿಯಾಗಿದೆ.
ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ. 7.04ರಷ್ಟಿದ್ದರೆ, ಜೂನ್ ನಲ್ಲಿ ಶೇ.7.01ಕ್ಕೆ ಇಳಿಕೆಯಾಗಿತ್ತು. ಜುಲೈನಲ್ಲಿ ಕೂಡ ಇಳಿಕೆಯಾಗಿ ಶೇ.6.71ರಷ್ಟಿತ್ತು. ಆದರೆ, ಆಗಸ್ಟ್ ನಲ್ಲಿ ಶೇ.7ಕ್ಕೆ ಏರಿಕೆ ಕಂಡಿತ್ತು. ಆಹಾರ ಪದಾರ್ಥಗಳ ಬೆಲೆಯೇರಿಕೆ ತಡೆಯಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಸೆಪ್ಟೆಂಬರ್ ನಲ್ಲಿ ಧಾನ್ಯಗಳು ಹಾಗೂ ತರಕಾರಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿತ್ತು. ಇನ್ನು ಈ ಬಾರಿ ಮಳೆ ಹೆಚ್ಚಳ ಕೂಡ ಧಾನ್ಯಗಳು ಹಾಗೂ ತರಕಾರಿಗಳ ಬೆಲೆಯೇರಿಕೆಗೆ ಕಾರಣವಾಗಿವೆ.
Railway ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ದೀಪಾವಳಿ ಗಿಫ್ಟ್: 78 ದಿನಗಳ ಬೋನಸ್ ಭಾಗ್ಯ
ಇನ್ನು ಈ ಬಾರಿ ಕೈಗಾರಿಕಾ ಉತ್ಪಾದನೆ ಭಾರೀ ಇಳಿಕೆ ದಾಖಲಿಸಿದೆ. ಜುಲೈನಲ್ಲಿ ಶೇ. 2.4ರಷ್ಟಿದ್ದ ಕೈಗಾರಿಕಾ ಉತ್ಪಾದನೆ ಆಗಸ್ಟ್ ನಲ್ಲಿ ಶೇ. 0.8 ಕ್ಕೆ ಇಳಿಕೆಯಾಗಿದೆ. 2021ರ ಆಗಸ್ಟ್ ನಲ್ಲಿ ಐಐಪಿ ಶೇ.13ರಷ್ಟಿತ್ತು. ಇನ್ನು ಉತ್ಪಾದನ ವಲಯದ ಉತ್ಪಾದನೆ ಕೂಡ 2022ರ ಆಗಸ್ಟ್ ನಲ್ಲಿ ಶೇ.0.7ಕ್ಕೆ ಸಂಕೋಚಿತಗೊಂಡಿದೆ. ಗಣಿಗಾರಿಕೆ ಉತ್ಪಾದನೆ ಕೂಡ ಶೇ.3.9 ಕ್ಕೆ ಸಂಕೋಚಿತಗೊಂಡಿದೆ. ವಿದ್ಯುತ್ ಉತ್ಪಾದನೆ ಪ್ರಮಾಣ ಆಗಸ್ಟ್ ನಲ್ಲಿ ಶೇ.1.4 ಕ್ಕೆ ಏರಿಕೆಯಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೂಡ ಆರ್ಥಿಕ ವರ್ಷ 2023 ಕ್ಕೆ ಚಿಲ್ಲರೆ ಹಣದುಬ್ಬರ ಅಂದಾಜನ್ನು ಶೇ. 6.7ಕ್ಕೆ ಹಾಗೂ ನೈಜ ಜಿಡಿಪಿ ಬೆಳವಣಿಗೆಯನ್ನು ಶೇ.7ಕ್ಕೆ ನಿಗದಿಪಡಿಸಿದೆ. ಈ ಹಿಂದಿನ ಎಂಪಿಸಿ ಸಭೆಯಲ್ಲಿ ನೈಜ GDP ಬೆಳವಣಿಗೆಯನ್ನು 7.2 ರಷ್ಟು ಅಂದಾಜು ಮಾಡಲಾಗಿತ್ತು.
ಎಫ್ ಡಿ ಮೇಲೆ ಅಧಿಕ ಬಡ್ಡಿ ನೀಡುವ ಬ್ಯಾಂಕ್ ಗಳು ಇವೇ ನೋಡಿ!
ಆರ್ ಬಿಐ ಚಿಲ್ಲರೆ ಹಣದುಬ್ಬರ ಸಹನಾ ಮಿತಿಯನ್ನು ಶೇ.4ಕ್ಕೆ ನಿಗದಿಪಡಿಸಿದ್ದು, ಉಭಯ ಕಡೆ ಶೇ.2ರಷ್ಟು ಮಾರ್ಜಿನ್ (Margin) ನೀಡಿದೆ. ಹೀಗಾಗಿ ಹಣದುಬ್ಬರದ ಗರಿಷ್ಠ ಮಿತಿ ಶೇ.6. ಆದ್ರೆ ಸತತ 9 ತಿಂಗಳಿಂದ ಚಿಲ್ಲರೆ ಹಣದುಬ್ಬರ ಈ ಮಿತಿಯನ್ನು ಮೀರಿದೆ. ಹೀಗಾಗಿ ಸೆಪ್ಟೆಂಬರ್ ನಲ್ಲಿ ಕೂಡ ಆರ್ ಬಿಐ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ. ಈ ಹಿನ್ನೆಲೆ ಸದ್ಯದ ರೆಪೋ ದರವು ಶೇಕಡಾ 5.40 ಕ್ಕೆ ಏರಿಕೆಯಾಗಿದೆ. 2019 ರಲ್ಲಿ ಅಂದರೆ ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ಇದ್ದ ರೆಪೋ ದರದ ಮಟ್ಟಕ್ಕೆ ಹೆಚ್ಚಳವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ ಈ ವರ್ಷದ ಪ್ರಾರಂಭದಿಂದ ಈ ತನಕ ಮೂರು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ.
