ರೈಲ್ವೆ ಸಿಬ್ಬಂದಿಗೆ 78 ದಿನದ ಬೋನಸ್ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಪ್ರತಿ ಸಿಬ್ಬಂದಿಗೆ ಸರಾಸರಿ 18 ಸಾವಿರ ರೂ. ಬೋನಸ್ ನೀಡಲಿದ್ದು, ಇದರಿಂದ 11 ಲಕ್ಷ ಉದ್ಯೋಗಿಗಳಿಗೆ ಲಾಭವಾಗಲಿದೆ.
ನವದೆಹಲಿ: ರೈಲ್ವೆ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಸಂತಸದ ಸುದ್ದಿ ನೀಡಿದೆ. ಪ್ರಸಕ್ತ ಸಾಲಿನಲ್ಲಿ 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ ಆಧರಿತ ಬೋನಸ್ ನೀಡಲು ನಿರ್ಧರಿಸಿದೆ. ಪ್ರತಿ ಉದ್ಯೋಗಿಗೆ ಸರಾಸರಿ 18 ಸಾವಿರ ರೂ. ಬೋನಸ್ ಲಭಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಇದರಿಂದ ಇಲಾಖೆಯಲ್ಲಿನ 11.27 ಲಕ್ಷ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ ಲಾಭವಾಗಲಿದೆ. ಇಷ್ಟು ಉದ್ಯೋಗಿಗಳಿಗೆ ಬೋನಸ್ ನೀಡಲು 1832 ಕೋಟಿ ರೂ. ವೆಚ್ಚವಾಗಲಿದೆ.
ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷ ಟ್ರ್ಯಾಕ್ ನಿರ್ವಹಣೆ ಮಾಡುವವರು, ಚಾಲಕರು, ಗಾರ್ಡ್, ಪರಿವೀಕ್ಷಕರು, ತಂತ್ರಜ್ಞರು, ಕಂಟ್ರೋಲರ್, ಪಾಯಿಂಟ್ಸ್‌ಮೆನ್, ಸಚಿವರ ಸಿಬ್ಬಂದಿ ಮತ್ತು ಇತರೆ ಸಿ ಗ್ರೂಪ್ ಸಿಬ್ಬಂದಿಗೆ ಬೋನಸ್ ನೀಡಲಾಗುತ್ತದೆ.
ಇದನ್ನು ಓದಿ: ದಸರಾ ಹಬ್ಬದ ಅಂಗವಾಗಿ ಕಾರ್ಮಿಕರಿಗೆ ಬೋನಸ್
2021-2022ರ ಹಣಕಾಸು ವರ್ಷಕ್ಕೆ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ-ಸಂಯೋಜಿತ ಬೋನಸ್ ಪಾವತಿಗೆ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ, ಗೆಜೆಟೆಡ್ ಅಲ್ಲದ ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಉತ್ಪಾದಕತೆ-ಸಂಬಂಧಿತ ಬೋನಸ್ (ಪಿಎಲ್‌ಬಿ) ಅನ್ನು ಪಾವತಿಸಲಾಗುವುದು ಎಂದು ಬುಧವಾರ ನಡೆದ ಸಚಿವ ಸಂಪುಟ ಸಭೆ ತಿಳಿಸಿದೆ.
ಇನ್ನು, ಉತ್ಪಾದಕತೆ-ಸಂಬಂಧಿತ ಬೋನಸ್ ಪಾವತಿಯ ಆರ್ಥಿಕ ಪರಿಣಾಮವು ₹ 1,832.09 ಕೋಟಿ ಎಂದು ಅಂದಾಜಿಸಲಾಗಿದ್ದು, ಆದರೆ, ಈ ವೇತನ ಲೆಕ್ಕಾಚಾರದ ಮಿತಿ ತಿಂಗಳಿಗೆ 7 ಸಾವಿರ ರೂ. ಎಂದು ತಿಳಿದುಬಂದಿದೆ. ಈ ಹಿನ್ನೆಲೆ, ಅರ್ಹ ರೈಲ್ವೆ ಉದ್ಯೋಗಿಗೆ 78 ದಿನಗಳವರೆಗೆ ದೊರೆಯುವ ಗರಿಷ್ಠ ಮೊತ್ತ 17,951 ರೂ. ಆಗಿದೆ. ಪ್ರಯಾಣಿಕರು ಮತ್ತು ಸರಕು ಸೇವೆಗಳ ಕಾರ್ಯಕ್ಷಮತೆಯಲ್ಲಿ ರೈಲ್ವೆ ನೌಕರರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ರೈಲ್ವೆ ಸಚಿವಾಲಯ ಈ ಹಿಂದೆ ಹೇಳಿತ್ತು, ಇದು ಆರ್ಥಿಕತೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ಹುಬ್ಬಳ್ಳಿ: ರೈಲ್ವೆ ನೌಕರರಿಗೆ ಬಂಪರ್ ಕೊಡುಗೆ..!
ವಾಸ್ತವವಾಗಿ, ಲಾಕ್‌ಡೌನ್ ಅವಧಿಯಲ್ಲಿಯೂ ಸಹ ರೈಲ್ವೇ ನೌಕರರು ಆಹಾರ, ರಸಗೊಬ್ಬರ, ಕಲ್ಲಿದ್ದಲು ಮತ್ತು ಇತರ ವಸ್ತುಗಳಂತಹ ಅಗತ್ಯ ವಸ್ತುಗಳ ಅಡೆತಡೆಯಿಲ್ಲದೆ ಸಾಗುವಂತೆ ಮಾಡಿದರು. ಈ ಮೂಲಕ ಲಾಕ್‌ಡೌನ್ ಅವಧಿಯಲ್ಲೂ ಸರಕುಗಳ ಕೊರತೆಯಿಲ್ಲದಂತೆ ರೈಲ್ವೆ ಇಲಾಖೆ ಖಚಿತಪಡಿಸಿತ್ತು.
ಇದನ್ನೂ ಓದಿ: ಉದ್ಯೋಗಿಗಳಿಗೆ 1.1 ಲಕ್ಷ ಕೊರೋನಾ ಬೋನಸ್ ಕೊಟ್ಟ ಮೈಕ್ರೋಸಾಫ್ಟ್
