ಭಾರತೀಯ ರೈಲ್ವೇಸ್‌ನ ಪ್ರಯಾಣಿಕ ಆದಾಯ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ಕಳೆದ ವರ್ಷದಲ್ಲಿ ಇದು ಶೇ. 61ರಷ್ಟು ಏರಿಕೆ ಕಂಡಿದ್ದು 63, 300 ಕೋಟಿ ರೂಪಾಯಿ ತಲುಪಿದೆ ಎಂದು ರೈಲ್ವೇಸ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನವದೆಹಲಿ (ಏ.18): ದೇಶದ ಜನರ ಜೀವನಾಡಿ ಎನಿಸಿಕೊಂಡಿರುವ ಭಾರತೀಯ ರೈಲ್ವೇಸ್‌ ಕಳೆದ ವರ್ಷದ ಅಂದರೆ, 2022-23ರ ಹಣಕಾಸು ವರ್ಷದ ಖರ್ಚು-ವೆಚ್ಚಗಳನ್ನು ಪ್ರಕಟಿಸಿದೆ. ಒಂದೇ ವರ್ಷದಲ್ಲಿ ಭಾರತೀಯ ರೈಲ್ವೇಸ್‌ 2.40 ಲಕ್ಷ ಕೋಟಿ ಆದಾಯ ಗಳಿಸಿದೆ ಎಂದು ರೈಲ್ವೇ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದು 2021-22ರ ಹಣಕಾಸು ವರ್ಷಕ್ಕೆ ಹೋಲಿಸಿದರೆ 49 ಸಾವಿರ ಕೋಟಿ ರೂಪಾಯಿ ಅಧಿಕ ಎಂದು ಹೇಳಲಾಗಿದೆ. 2022-23 ರಲ್ಲಿ, ಸರಕು ಸಾಗಣೆ ಆದಾಯವು ₹ 1.62 ಲಕ್ಷ ಕೋಟಿಗೆ ಏರಿದೆ. ಇದು ಹಿಂದಿನ ವರ್ಷಕ್ಕಿಂತ ಸುಮಾರು 15 ಶೇಕಡಾ ಪ್ರಗತಿ ಕಂಡಿದೆ ಎಂದು ತಿಳಿಸಲಾಗಿದೆ. ಭಾರತೀಯ ರೈಲ್ವೇಸ್‌ನ ಪ್ರಯಾಣಿಕ ಆದಾಯ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ಕಳೆದ ವರ್ಷದಲ್ಲಿ ಇದು ಶೇ. 61ರಷ್ಟು ಏರಿಕೆ ಕಂಡಿದ್ದು 63, 300 ಕೋಟಿ ರೂಪಾಯಿ ತಲುಪಿದೆ. "ಮೂರು ವರ್ಷಗಳ ನಂತರ, ಭಾರತೀಯ ರೈಲ್ವೇಯು ಪಿಂಚಣಿ ವೆಚ್ಚಗಳನ್ನು ಸಂಪೂರ್ಣವಾಗಿ ಪೂರೈಸಲು ಸಮರ್ಥವಾಗಿದೆ. ಆದಾಯದಲ್ಲಿ ಗಮನಾರ್ಹ ಹೆಚ್ಚಳ ಹಾಗೂ ಬಿಗಿಯಾದ ವೆಚ್ಚ ನಿರ್ವಗಣೆಯ ಕಾರಣದಿಂದಾಗಿ ಶೇಕಡಾ 98.14 ಕಾರ್ಯಾಚರಣೆಯ ಅನುಪಾತವನ್ನು ಸಾಧಿಸಲು ಸಹಾಯ ಮಾಡಿದೆ. ಎಲ್ಲಾ ಆದಾಯ ವೆಚ್ಚಗಳನ್ನು ಪೂರೈಸಿದ ನಂತರ, ರೈಲ್ವೆಯು 3,200 ಕೋಟಿ ರೂಪಾಯಿಯನ್ನು ಅದರ ಆಂತರಿಕ ಸಂಪನ್ಮೂಲಗಳಿಂದ ಬಂಡವಾಳ ಹೂಡಿಕೆಗಾಗಿ ಉಳಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೈಲ್ವೇಸ್‌ ಇಷ್ಟು ವರ್ಷಗಳ ಕಾಲ ತನ್ನ ಪಿಂಚಣಿ ಹೊರೆಯ ಒಂದು ಸ್ವಲ್ಪ ಭಾಗವನ್ನು ಭರಿಸುವಂತೆ ಹಣಕಾಸು ಸಚಿವಾಲಯವನ್ನು ಸಂಪರ್ಕಿಸುತ್ತಿತ್ತು. ಆದರೆ, ಈ ಒಂದು ವರ್ಷದ ಆದಾಯ ರೈಲ್ವೇಸ್‌ ಪಾಲಿಗೆ ಹೆಮ್ಮೆ ನೀಡುವಂಥದ್ದಾಗಿದೆ. ಪ್ರಯಾಣಿಕ ಆದಾಯದ ದೃಷ್ಟಿಯಿಂದ, 2021-22ರಲ್ಲಿ 39,214 ಕೋಟಿ ರೂಪಾಯಿಗೆ ಹೋಲಿಸಿದರೆ 2022-23ರಲ್ಲಿ ರೈಲ್ವೆ 63,300 ಕೋಟಿ ಗಳಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

2021-22ರಲ್ಲಿ 4,899 ಕೋಟಿ ರೂಪಾಯಿಗೆ ಹೋಲಿಸಿದರೆ 2022-23ರಲ್ಲಿ ಇತರ ಕೋಚಿಂಗ್ ಆದಾಯವಾಗಿ ರೈಲ್ವೆ 5,951 ಕೋಟಿ ರೂಪಾಯಿ ಗಳಿಸಿದೆ. 2021-22ರಲ್ಲಿ 6,067 ಕೋಟಿ ರೂಪಾಯಿಗೆ ಹೋಲಿಸಿದರೆ 2022-23ರ ಆರ್ಥಿಕ ವರ್ಷದಲ್ಲಿ ಸುಂಡ್ರೀಸ್ ಆದಾಯ (ರೈಲ್ವೇಸ್‌ ಹೊರತಾದ ಕಂಪನಿಗಳು) 8,440 ಕೋಟಿ ರೂಪಾಯಿ ಆಗಿದೆ.

ಪ್ರಯಾಣಿಕರಿಗೆ ಗುಡ್‌ನ್ಯೂಸ್‌, ರೈಲ್ವೆ AC ಎಕಾನಮಿ ಟಿಕೆಟ್‌ ದರ ಇಳಿಕೆ

2022-23 ರಲ್ಲಿ, ಒಟ್ಟು ಆದಾಯವು 2,39,803 ಕೋಟಿ ರೂಪಾಯಿ ಆಗಿದ್ದರೆ, 2021-22 ರಲ್ಲಿ 1,91,278 ಕೋಟಿ ರೂಪಾಯಿ ಆಗಿತ್ತು. ಅಲ್ಲದೆ, 2021-22ರಲ್ಲಿ ₹ 1,91,206 ಕೋಟಿಗೆ ಹೋಲಿಸಿದರೆ ಒಟ್ಟು ಸಂಚಾರ ಆದಾಯವು ₹ 2,39,750 ಕೋಟಿಗಳಷ್ಟಿದೆ. ಹಿಂದಿನ ವರ್ಷದ ₹ 1,91,367 ಕೋಟಿಗೆ ಹೋಲಿಸಿದರೆ 2022-23ರಲ್ಲಿ ಒಟ್ಟು ರೈಲ್ವೆ ಆದಾಯ ₹ 2,39,892 ಕೋಟಿ ಆಗಿದೆ. ಹೇಳಿಕೆಯ ಪ್ರಕಾರ, 2021-22ರಲ್ಲಿ ₹ 2,06,391 ಕೋಟಿಗೆ ಹೋಲಿಸಿದರೆ 2022-23ರಲ್ಲಿ ಒಟ್ಟು ರೈಲ್ವೆ ವೆಚ್ಚ ₹ 2,37,375 ಕೋಟಿ ಆಗಿತ್ತು. 2022-23 ರಲ್ಲಿ ಕಾರ್ಯಾಚರಣೆಯ ಅನುಪಾತವು ಶೇಕಡಾ 98.14 ಆಗಿದೆ. 

Railway Budget 2023: ರೈಲ್ವೇಸ್‌ಗೆ ಈವರೆಗಿನ ದಾಖಲೆಯ ಹಣ ಮೀಸಲಿಟ್ಟ ಕೇಂದ್ರ!

ಬಂಡವಾಳ ವೆಚ್ಚಕ್ಕೆ ಸಂಬಂಧಿಸಿದಂತೆ, 2021-22ರಲ್ಲಿ ₹ 81,664 ಕೋಟಿಗೆ ಹೋಲಿಸಿದರೆ 2022-23ರ ಅವಧಿಯಲ್ಲಿ ₹ 1,09,004 ಕೋಟಿ ಹೂಡಿಕೆ ಮಾಡಲಾಗಿತ್ತು. ರೈಲ್ವೆ ಸುರಕ್ಷತಾ ನಿಧಿಯಡಿ, 2021-22ರಲ್ಲಿ ₹ 11,105 ಕೋಟಿಗೆ ಹೋಲಿಸಿದರೆ 2022-23ರಲ್ಲಿ ₹ 30,001 ಕೋಟಿ ಖರ್ಚು ಮಾಡಲಾಗಿದೆ.