ಭಾರತೀಯ ಷೇರು ಮಾರುಕಟ್ಟೆ ಈಗ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತೀದೊಡ್ಡ ಷೇರುಮಾರುಕಟ್ಟೆ. ಹಾಂಕಾಂಗ್ ಅನ್ನು ಹಿಂದಿಕ್ಕುವ ಮೂಲಕ ಭಾರತ ಈ ಸಾಧನೆ ಮಾಡಿದೆ. 

ನವದೆಹಲಿ (ಜ.23): ಭಾರತದ ಷೇರು ಮಾರುಕಟ್ಟೆ ಈಗ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತೀದೊಡ್ಡ ಷೇರು ಮಾರುಕಟ್ಟೆಯಾಗಿ ಗುರುತಿಸಲ್ಪಟ್ಟಿದೆ. ಹಾಂಕಾಂಗ್ ಅನ್ನು ಹಿಂದಿಕ್ಕುವ ಮೂಲಕ ಭಾರತ ಈ ಸಾಧನೆ ಮಾಡಿದೆ. ಬ್ಲೂಮ್ ಬರ್ಗ್ ಮೀಡಿಯಾದ ವರದಿ ಪ್ರಕಾರ ಭಾರತದ ಷೇರು ಮಾರುಕಟ್ಟೆಗಳಲ್ಲಿ ಪಟ್ಟಿ ಮಾಡಲಾಗಿರುವ ಷೇರುಗಳ ಒಟ್ಟು ಮೌಲ್ಯ ಸೋಮವಾರದ ಅಂತ್ಯದ ವೇಳೆಗೆ 4.33 ಟ್ರಿಲಿಯನ್ ಡಾಲರ್ ಮುಟ್ಟಿದೆ. ಇನ್ನು ಹಾಂಕಾಂಗ್ ಷೇರು ಮಾರುಕಟ್ಟೆಯ ಮೌಲ್ಯ ಈ ಅವಧಿಯಲ್ಲಿ 4.29 ಟ್ರಿಲಿಯನ್ ಡಾಲರ್ ತಲುಪಿತ್ತು. ಈ ಬೆಳವಣಿಗೆ ಭಾರತದ ಆರ್ಥಿಕ ಪ್ರಭಾವ ಹೆಚ್ಚುತ್ತಿರುವ ಜೊತೆಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ತನ್ನ ಪ್ರಾಬಲ್ಯ ವೃದ್ಧಿಸಿಕೊಳ್ಳುತ್ತಿರೋದಕ್ಕೆ ಸಾಕ್ಷಿಯಾಗಿದೆ. ಭಾರತದ ಷೇರು ಮಾರುಕಟ್ಟೆಯ ಈ ಬೆಳವಣಿಗೆ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ ಕೂಡ.

ಭಾರತದ ಷೇರುಪೇಟೆ ಬಂಡವಾಳೀಕರಣ 2023ರ ಡಿಸೆಂಬರ್ 5ರಂದು 4 ಟ್ರಿಲಿಯನ್ ಡಾಲರ್ ಮೀರಿತ್ತು. ಇದರಲ್ಲಿ ಅರ್ಧದಷ್ಟು ಪ್ರಗತಿ ಕಳೆದ ನಾಲ್ಕು ವರ್ಷಗಳಲ್ಲಿ ಆಗಿರೋದು ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿದೆ. 

ಭಾರತದ ಷೇರುಪೇಟೆ ಬಲವರ್ಧನೆಗೆ ಕಾರಣವೇನು?
ಭಾರತದಲ್ಲಿನ ರಾಜಕೀಯ ಸ್ಥಿರತೆ ಹಾಗೂ ಬೇಡಿಕೆ ಉತ್ತೇಜಿತ ಆರ್ಥಿಕತೆ ಷೇರುಪೇಟೆ ಬಲವರ್ಧನೆಗೆ ಕಾರಣವಾಗಿರುವ ಅಂಶಗಳಲ್ಲಿ ಒಂದಾಗಿವೆ. ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಹೂಡಿಕೆದಾರರ ಪ್ರಮಾಣ ಹಾಗೂ ಕಾರ್ಪೋರೇಟ್ ಗಳಿಕೆಯಲ್ಲಿನ ಹೆಚ್ಚಳ ಭಾರತದಲ್ಲಿ ಷೇರುಗಳ ಮೌಲ್ಯ ವರ್ಧನೆಗೆ ಕಾರಣವಾಗಿದೆ. ಚೀನಾಕ್ಕೆ ಪರ್ಯಾಯ ಮಾರುಕಟ್ಟೆಯಾಗಿ ಭಾರತ ಬೆಳೆಯುತ್ತಿದೆ. ಸ್ಥಿರವಾದ ರಾಜಕೀಯ ವಾತಾವರಣ ಹಾಗೂ ಬೇಡಿಕೆ ಉತ್ತೇಜಿತ ಆರ್ಥಿಕತೆ ಜಾಗತಿಕ ಬಂಡವಾಳವನ್ನು ಭಾರತದತ್ತ ಸೆಳೆಯುತ್ತಿದೆ. ಭಾರತದ ಆರ್ಥಿಕತೆ ಜಗತ್ತಿನಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರೋದು ಕೂಡ ಹೂಡಿಕೆದಾರರು ಭಾರತದತ್ತ ಆಕರ್ಷಿತರಾಗಲು ಕಾರಣ. ಮುಂಬೈಯ ಎಕ್ಸಿಸ್ ಮ್ಯೂಚುವಲ್ ಫಂಡ್ ಸಿಐಒ ಆಶಿಷ್ ಗುಪ್ತ ಅವರ ಪ್ರಕಾರ ಬೆಳವಣಿಗೆ ದರವನ್ನು ಇನ್ನಷ್ಟು ಮುಂದೆ ಕೊಂಡೊಯ್ಯಲು ಅಗತ್ಯವಾದ ಎಲ್ಲ ಸೂಕ್ತ ಸಾಮಗ್ರಿಗಳನ್ನು ಭಾರತ ಹೊಂದಿದೆ. 

13 ಸಾವಿರ ಕೋಟಿ ಹೂಡಿಕೆ ಹಿಂತೆಗೆದುಕೊಂಡ ವಿದೇಶಿ ಹೂಡಿಕೆದಾರರು: ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆ ಹೆಜ್ಜೆ; ಕಾರಣ ಹೀಗಿದೆ..

ಕುಂದುತ್ತಿರುವ ಚೀನಾದ ಪ್ರಭಾವ
ಮೇಲ್ಮುಖ ಚಲನೆಯಲ್ಲಿರುವ ಭಾರತದ ಷೇರು ಮಾರುಕಟ್ಟೆಗೆ ವಿರುದ್ಧ ದಿಕ್ಕಿನಲ್ಲಿ ಹಾಂಗ್ ಕಾಂಗ್ ಇದೆ. ಅದು ಸಾಕಷ್ಟು ಹಿಂಜರಿತಗಳನ್ನು ಅನುಭವಿಸಿದೆ. ಬೀಜಿಂಗ್ ನಲ್ಲಿನ ಕೋವಿಡ್ -19 ವಿರೋಧಿ ನಿರ್ಬಂಧಗಳು, ಕಂಪನಿಗಳ ಮೇಲಿನ ನಿಯಂತ್ರಕ ದಮನಕಾರಿ ಕ್ರಮಗಳು, ಆಸ್ತಿ- ವಲಯ ಬಿಕ್ಕಟ್ಟು, ಪಶ್ಚಿಮ ದೇಶಗಳ ಜೊತೆಗಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚೀನಾದ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಹೀಗಾಗಿ ಜಾಗತಿಕ ಬೆಳವಣಿಗೆ ಇಂಜಿನ್ ತಾನು ಎಂಬ ಚೀನಾದ ಮನವಿ ಈಗ ಮಾನ್ಯತೆ ಕಳೆದುಕೊಳ್ಳುತ್ತಿದೆ.

13 ಸಾವಿರ ಹೂಡಿಕೆ ಹಿಂತೆಗೆದುಕೊಂಡ ವಿದೇಶಿ ಹೂಡಿಕೆದಾರರು
ವಿದೇಶಿ ಹೂಡಿಕೆದಾರರು ಈ ತಿಂಗಳು ಎಚ್ಚರಿಕೆಯ ವಿಧಾನ ಅನುಸರಿಸಿದ್ದು, ಭಾರತೀಯ ಷೇರುಗಳ ಹೆಚ್ಚಿನ ಮೌಲ್ಯಮಾಪನ ಮತ್ತು ಯುಎಸ್ ಬಾಂಡ್ ಇಳುವರಿಗಳ ಕಾರಣದಿಂದ ಮೊದಲ ಮೂರು ವಾರಗಳಲ್ಲಿ 13,000 ಕೋಟಿ ರೂಪಾಯಿ ಮೌಲ್ಯದ ದೇಶೀಯ ಷೇರುಗಳನ್ನು ಹಿಂತೆಗೆದುಕೊಂಡಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ವಿದೇಶಿ ಹೂಡಿಕೆದಾರರು ಡೆಬ್ಟ್‌ ಮಾರುಕಟ್ಟೆಯಲ್ಲಿ 15,647 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಡೇಟಾ ಪ್ರಕಾರ, ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಈ ತಿಂಗಳು (ಜನವರಿ 19 ರವರೆಗೆ) ಭಾರತೀಯ ಷೇರುಗಳಲ್ಲಿ 13,047 ಕೋಟಿ ರೂ. ಹೂಡಿಕೆಯಾಗಿದೆ. 

ಒಂದೇ ದಿನ 1.1 ಲಕ್ಷ ಕೋಟಿ ರೂಪಾಯಿ ಮೌಲ್ಯ ಕಳೆದುಕೊಂಡ ಎಚ್‌ಡಿಎಫ್‌ಸಿ ಬ್ಯಾಂಕ್‌!

ಇನ್ನೊಂದೆಡೆ, ಜನವರಿ 17 - 19 ರ ಅವಧಿಯಲ್ಲಿ ಈಕ್ವಿಟಿಗಳಿಂದ 24,000 ಕೋಟಿ ರೂ. ಅನ್ನು ವಿದೇಶಿ ಹೂಡಿಕೆದಾರರು ಹಿಂಪಡೆದಿದ್ದಾರೆ. ಇದಕ್ಕೂ ಮೊದಲು, ಎಫ್‌ಪಿಐಗಳು ಡಿಸೆಂಬರ್‌ನಲ್ಲಿ 66,134 ಕೋಟಿ ರೂ. ಹೂಡಿಕೆ ಮಾಡಿದ್ದರು ಎಂದೂ ತಿಳಿದುಬಂದಿದೆ.