ನವದೆಹಲಿ[ಜೂ.19]: ಹೆದ್ದಾರಿ ಇಕ್ಕೆಲಗಳಲ್ಲಿ ಮದ್ಯ ಮಾರಾಟ ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಎಲ್ಲಾ ಮದ್ಯದಂಗಡಿಗಳು ಹೆದ್ದಾರಿಗಳಿಂದ 500 ಮೀಟರ್ ದೂರಕ್ಕೋಡಿದ್ದವು. ಇದರಿಂದ ಮದ್ಯ ಮಾರಾಟ ಹಾಗೂ ಸೇವಿಸುವವರ ಸಂಖ್ಯೆ ಇಳಿಮುಖವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೀಗ ಬಹಿರಂಗವಾದ ಅಂಕಿ ಅಂಶಗಳಲ್ಲಿ ಇದು ಉಲ್ಟಾ ಪರಿಣಾಮ ಬೀರಿರುವುದು ಸಾಬೀತಾಗಿದೆ.

ಬಾರ್‌ ಲೈಸೆನ್ಸ್‌ ನಿರಾಕರಿಸೋಕೂ ಜಾತಿ ನೋಡ್ತಾರೆ!

ಹೌದು ಈ ಕುರಿತಾಗಿ ಎಕಾನಾಮಿಕ್ ಟೈಮ್ಸ್ ವರದಿಯೊಂದನ್ನು ಪ್ರಕಟಿಸಿದ್ದು, ಇದರ ಅನ್ವಯ 2018ರಲ್ಲಿ ಜಗತ್ತಿನಲ್ಲಿ ಮಾರಾಟವಾದ ಐದು ವಿಸ್ಕಿ ಕೇಸ್ ಪೈಕಿ, ಭಾರತದಲ್ಲಿ ತಯಾರಾದ ಮೂರು ವಿಸ್ಕಿ ಮಾರಾಟವಾಗಿದೆ. ಅಂದರೆ, ಭಾರತವು ಅತ್ಯಂತ ವೇಗವಾಗಿ ವಿಸ್ಕಿ ಬಳಸುತ್ತಿರುವ ರಾಷ್ಟ್ರವಾಗಿ ಮಾರ್ಪಾಡಾಗುತ್ತಿದೆ. ಇನ್ನು ಹೆದ್ದಾರಿಯಿಂದ 500 ಮೀ ದೂರದವರೆಗೆ ಯಾವುದೇ ಮದ್ಯದಂಗಡಿ ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ ಬಳಿಕ ಮದ್ಯ ಮಾರಾಟ ಶೇ.11ರಷ್ಟು ಹೆಚ್ಚಾಗಿರುವುದು ಮತ್ತಷ್ಟು ಆತಂಕಕಾರಿ ವಿಚಾರವಾಗಿದೆ. ಒಟ್ಟಾರೆಯಾಗಿ 2014ರಿಂದ 2018ರವರೆಗೆ ಭಾರತದಲ್ಲಿ ವಿಸ್ಕಿ ಮಾರಾಟ ಶೇ.50ರಷ್ಟು ಹೆಚ್ಚಳವಾಗಿದೆ.

ಇಂಟರ್ ನ್ಯಾಷನಲ್ ವೈನ್ ಆ್ಯಂಡ್ ಸ್ಪಿರಿಟ್ ರಿಸರ್ಚ್ ಅಂಕಿ ಅಂಶಗಳ ಪ್ರಕಾರ ಇಂಡಿಯನ್ ವಿಸ್ಕಿ 2014ರಲ್ಲಿ 115 ದಶಲಕ್ಷ (ಒಂದು ಕೇಸ್ ಅಂದರೆ 9 ಲೀಟರ್) ಮಾರಾಟವಾಗಿದ್ದು, 2018ರಲ್ಲಿ ಇದು 176 ದಶ ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ಇತ್ತ ವಿಸ್ಕಿ ಮಾರಾಟವೂ ಗಣನೀಯವಾಗಿ ಹೆಚ್ಚಿದ್ದು, ಅದರಲ್ಲೂ 2018ರಲ್ಲಿ ಪ್ರಮುಖ ವಿಸ್ಕಿ ಬ್ರಾಂಡ್ ಗಳಾದ ಇಂಪೀರಿಯಲ್ ಬ್ಲೂ ಶೇ.19ರಷ್ಟು, ರಾಯಲ್ ಸ್ಟ್ಯಾಗ್ ಶೇ.16ರಷ್ಟು ಹಾಗೂ  ಮೆಕ್ಡೊವೆಲ್ ನಂಬರ್ 1 ಶೇ.10ರಷ್ಟು ಮಾರಾಟವಾಗುವ ಮೂಲಕ ಅಗ್ರ ಸ್ಥಾನದಲ್ಲಿವೆ.

ಮದ್ಯ ಮಾರಾಟದಲ್ಲಿ ದಾಖಲೆ ಪುಡಿ ಪುಡಿ ಮಾಡಿದ ಮಂಡ್ಯ!

ಈ ನಾಲ್ಕು ವರ್ಷಗಳಲ್ಲಿ ದುಬಾರಿ ಮದ್ಯ ಪಾನೀಯಗಳಾದ ಸ್ಕಾಚ್ ವಿಸ್ಕಿ ಹಾಗೂ ಅಮೆರಿಕನ್ ವಿಸ್ಕಿ ಮಾರಾಟ ಪ್ರಮಾಣದಲ್ಲಿ ಹೆಚ್ಚು ಏರಿಕೆಯಾಗಿಲ್ಲ, ವಾರ್ಷಿಕ ಸರಾಸರಿ ಕೇವಲ ಶೇ.1ರಷ್ಟು ಹೆಚ್ಚಳವಾಗಿವೆ. ಆದರೆ ಕಡಿಮೆ ದರದ ವಿಸ್ಕಿ ಮಾರಾಟದಲ್ಲಿ ಮಾತ್ರ ಭಾರಿ ಏರಿಕೆಯಾಗಿದೆ. ಆಫೀಸರ್ಸ್ ಚಾಯ್ಸ್ ತಯಾರಿಸುವ ಅಲೈಯ್ಡ್ ಬ್ಲೆಂಡರ್ಸ್ ಕಂಪನಿಯ ಮುಖ್ಯಸ್ಥ ದೀಪಕ್ ರಾಯ್ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, 'ಭಾರತೀಯರು ತ್ವರಿತವಾಗಿ ಮತ್ತೇರಿಸುವ ಮದ್ಯಪಾನ ಬಯಸುತ್ತಾರೆ' ಎಂದಿದ್ದಾರೆ. ಇನ್ನು ಸ್ಕಾಚ್ ವಿಸ್ಕಿ ಮತ್ತು ಅಮೆರಿಕನ್ ವಿಸ್ಕಿ, ಬಿಯರ್ ಮತ್ತಿತರ ಮದ್ಯಪಾನಿಯಗಳಿಗೆ ಹೋಲಿಸಿದರೆ ವಿಸ್ಕಿ ಸುಲಭ ದರದಲ್ಲಿ ಸಿಗುತ್ತದೆ.

ಅದೇನಿದ್ದರೂ ಸುಪ್ರೀಂ ಕೋರ್ಟ್ ಮದ್ಯ ನಿಷೇಧಕ್ಕೆ ಸಂಬಂಧಿಸಿದಂತೆ ಮಹತ್ತರ ತೀರ್ಪು ನೀಡಿದ ಬಳಿಕವೂ, ಭಾರತದಲ್ಲಿ ವಿಸ್ಕಿ ಮಾರಾಟ ಗಣನೀಯವಾಗಿ ಏರಿಕೆಯಾಗುತ್ತಿರುವುದು ಆಘಾತಕಾರಿ ವಿಚಾರವೇ ಸರಿ.