ವೆಂಕಟೇಶ್‌ ಕಲಿಪಿ, ಕನ್ನಡಪ್ರಭ

ಬೆಂಗಳೂರು[ಜೂ.14]: ವಸತಿ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಲೈಸೆನ್ಸ್‌ (ಪರವಾನಗಿ) ನಿರಾಕರಿಸುವುದರಲ್ಲೂ ಜಾತಿ ತಾರತಮ್ಯ ಏಕೆ?

- ಇಂಥದ್ದೊಂದು ಪ್ರಶ್ನೆಯನ್ನು ವ್ಯಕ್ತಿಯೊಬ್ಬರು ಹೈಕೋರ್ಟ್‌ನ ಮುಂದಿಟ್ಟಿದ್ದಾರೆ. ಅಲ್ಲದೆ, ಜಾತಿ ಆಧಾರದ ಮೇಲೆ ವಸತಿ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಲೈಸೆನ್ಸ್‌ ನಿರಾಕರಿಸುವ ಕರ್ನಾಟಕ ಅಬಕಾರಿ ಕಾಯ್ದೆ-1967ರ ಸೆಕ್ಷನ್‌ 5(1) ಅನ್ನು ಅಸಂವಿಧಾನಿಕ ಎಂಬುದಾಗಿ ಘೋಷಿಸುವಂತೆಯೂ ಮನವಿ ಮಾಡಿದ್ದಾರೆ.

ಪರಿಶಿಷ್ಟಜಾತಿಗಳ ಹಾಗೂ ಪರಿಶಿಷ್ಟಪಂಗಡಗಳಿಗೆ ಸೇರಿದ ಜನ ಹೆಚ್ಚಿನ ಪ್ರಮಾಣದಲ್ಲಿ ವಾಸಿಸುತ್ತಿರುವ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಲೈಸೆನ್ಸ್‌ ನೀಡಬಾರದು ಎಂದು ಕರ್ನಾಟಕ ಅಬಕಾರಿ ಕಾಯ್ದೆ-1967ರ ಸೆಕ್ಷನ್‌ 5(1) ಪ್ರತಿಪಾದಿಸುತ್ತದೆ. ಈ ನಿಯಮ ಜಾತಿ ಹಾಗೂ ಧರ್ಮಗಳ ನಡುವೆ ತಾರತಮ್ಯ ಮಾಡುತ್ತದೆ ಮತ್ತು ಸಂವಿಧಾನದ ಪರಿಚ್ಛೇದ 14 ಮತ್ತು 21 ಅನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿ ಮೈಸೂರಿನ ಲಕ್ಷ್ಮೇಕಾಂತ್‌ ನಗರದ ನಿವಾಸಿ ಎಚ್‌.ಎಸ್‌.ಜಯಪ್ಪ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಎಸ್‌.ಸುಜಾತಾ ಅವರ ನ್ಯಾಯಪೀಠ ಈ ಅರ್ಜಿಗೆ ಉತ್ತರಿಸುವಂತೆ ರಾಜ್ಯ ಕಾನೂನು ಮತ್ತು ನ್ಯಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಮೈಸೂರು ಜಿಲ್ಲಾ ಅಬಕಾರಿ ಉಪ ಆಯುಕ್ತರು, ಅಬಕಾರಿ ಅಧೀಕ್ಷಕರು ಮತ್ತು ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿದೆ. ವಸತಿ ಪ್ರದೇಶವಾದ ಲಕ್ಷ್ಮೇಕಾಂತ್‌ ನಗರದಲ್ಲಿ ಬಾರ್‌ ಲೈಸೆನ್ಸ್‌ ಪಡೆದಿರುವ ಹರಿ ಎಂಟರ್‌ಪ್ರೈಸಸ್‌ಗೂ ತುರ್ತು ನೋಟಿಸ್‌ ನೀಡಿದೆ.

ಪ್ರಕರಣವೇನು?

ವಸತಿ ಪ್ರದೇಶವಾದ ಲಕ್ಷ್ಮೇಕಾಂತ್‌ ನಗರದ ಚಿತ್ರಾ ರೆಸಿಡೆನ್ಸಿ ಕಾಂಪ್ಲೆಕ್ಸ್‌ನಲ್ಲಿ ಮದ್ಯದಂಗಡಿ ತೆರೆಯಲು ಹರಿ ಎಂಟರ್‌ಪ್ರೈಸಸ್‌ಗೆ ಅಬಕಾರಿ ಇಲಾಖೆ ಸಿಎಲ್‌-7 ಲೈಸೆನ್ಸ್‌ ನೀಡಿರುವ ಕ್ರಮದ ವಿರುದ್ಧ ಜಯಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಲಕ್ಷ್ಮೇಕಾಂತ್‌ ನಗರ ವಸತಿ ಪ್ರದೇಶ. ಐದು ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಅದರಲ್ಲಿ ಎರಡು ಸಾವಿರ ಮಂದಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಿಗೆ ಸೇರಿದ್ದಾರೆ. ಈ ಮದ್ಯದಂಗಡಿ ಎದುರೇ ಪಾರ್ಕ್ ಇದೆ. ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿ ನಿತ್ಯ ನೂರಾರು ಜನ ಪಾರ್ಕ್ಗೆ ಭೇಟಿ ನೀಡುತ್ತಾರೆ. ಎದುರಿನ ಬಾರ್‌ನಲ್ಲಿ ಮದ್ಯ ಸೇವಿಸುವ ಜನರು ಪಾರ್ಕ್ನಲ್ಲಿ ಬಂದು ಕೂರುತ್ತಾರೆ ಹಾಗೂ ನಿದ್ದೆ ಮಾಡುತ್ತಾರೆ. ಜೊತೆಗೆ ಪಾರ್ಕ್ನಲ್ಲಿ ಉಪದ್ರವ ಸೃಷ್ಟಿಸುತ್ತಿದ್ದಾರೆ. ಇದರಿಂದ ಪಾರ್ಕ್ನಲ್ಲಿ ಓಡಾಡಲು, ಪಾರ್ಕ್ನ ಪರಿಸರ ಆನಂದಿಸಲು ಸ್ಥಳೀಯರಿಗೆ ಕಷ್ಟವಾಗುತ್ತಿದೆ. ಮದ್ಯದಂಗಡಿಯ 150 ಮೀಟರ್‌ ಒಳಗೆ ಪ್ರಿಯದರ್ಶಿನಿ ಶಾಲೆಯಿದೆ. ಆದ್ದರಿಂದ ಹರಿ ಎಂಟರ್‌ಪ್ರೈಸಸ್‌ಗೆ ನೀಡಿರುವ ಸಿಎಲ್‌-7 ಲೈಸೆನ್ಸ್‌ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಅರ್ಜಿದಾರರ ಪರ ಎಚ್‌.ಸುನೀಲ್‌ ಕುಮಾರ್‌ ವಾದಿಸಿ, ಹರಿ ಎಂಟರ್‌ಪ್ರೈಸಸ್‌ಗೆ ಸಿಎಲ್‌-7 ಲೈಸೆನ್ಸ್‌ ನೀಡಿರುವುದು ಕರ್ನಾಟಕ ಅಬಕಾರಿ ಕಾಯ್ದೆ-1967ರ ಸೆಕ್ಷನ್‌ 5(1)ರ ಸ್ಪಷ್ಟಉಲ್ಲಂಘನೆ. ಯಾವುದೇ ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ಥಳೀಯ ಪ್ರಾಧಿಕಾರಗಳ ಕಚೇರಿಯ 100 ಮೀಟರ್‌, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಿಂದ 220 ಮೀಟರ್‌ ಅಂತರದ ಪ್ರದೇಶದಲ್ಲಿ ಮತ್ತು ಪರಿಶಿಷ್ಟಜಾತಿಗಳ ಹಾಗೂ ಪರಿಶಿಷ್ಟಪಂಗಡಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ವಸತಿ ಪ್ರದೇಶದಲ್ಲಿ ಸಿಎಲ್‌-7 ಲೈಸೆನ್ಸ್‌ ನೀಡುವಂತಿಲ್ಲ ಎಂದು ಸೆಕ್ಷನ್‌ 5(1)ಹೇಳುತ್ತದೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಆರೋಗ್ಯಕ್ಕೆ ಹಾನಿಕರವಾದ ಮದ್ಯವನ್ನು ವಸತಿ ಪ್ರದೇಶದಲ್ಲಿ ಲಭ್ಯವಾಗದಂತೆ ಮಾಡುವುದೇ ಸೆಕ್ಷನ್‌ 5(1)ರ ಮೂಲ ಆಶಯ ಹಾಗೂ ಉದ್ದೇಶ. ಅದರಂತೆ ವಸತಿ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಲೈಸೆನ್ಸ್‌ ನೀಡದಿರುವುದು ಸರಿ. ಆದರೆ, ಕರ್ನಾಟಕದ ವಿವಿಧ ಪ್ರದೇಶದಲ್ಲಿ ಎಲ್ಲಾ ಜಾತಿ ಹಾಗೂ ಧರ್ಮಗಳ ಜನರು ವಾಸಿಸುತ್ತಿರುವ 21ನೇ ಶತಮಾನದಲ್ಲಿಯೂ ಮದ್ಯ ಮಾರಾಟಕ್ಕೆ ಲೈಸೆನ್ಸ್‌ ನಿರಾಕರಿಸುವ ನಿಯಮವನ್ನು ಒಂದು ಜಾತಿಗೆ ಸೀಮಿತಗೊಳಿಸಿರುವುದು ಸರಿಯಲ್ಲ.

ಮದ್ಯ ಮಾರಾಟದ ಲೈಸೆನ್ಸ್‌ ವಿತರಣೆಯಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವುದನ್ನು ಸುಶಿಕ್ಷಿತ ನಾಗರಿಕ ಸಮಾಜ ಒಪ್ಪುವುದಿಲ್ಲ. ಈ ನಿಯಮವನ್ನು ಕಾಲಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಬೇಕಿದೆ. ಸೆಕ್ಷನ್‌ 5(1) ಅಡಿಯಲ್ಲಿ ಪರಿಶಿಷ್ಟಜಾತಿಗಳು ಮತ್ತು ಪರಿಶಿಷ್ಟಪಂಗಡಗಳ ಜನ ಎಂಬ ಪದ ಬಳಸಿರುವುದು ಸಂವಿಧಾನದ ಪರಿಚ್ಛೇದ 14 (ಸಮಾನತೆ) ಮತ್ತು 21ರ (ಜೀವಿಸುವ ಹಕ್ಕು ಹಾಗೂ ಸ್ವಾತಂತ್ರ್ಯ) ಉಲ್ಲಂಘನೆಯಾಗಿದೆ. ಆದ್ದರಿಂದ ಸೆಕ್ಷನ್‌ 5(1) ಅನ್ನು ಅಸಂವಿಧಾನಿಕ ಎಂಬುದಾಗಿ ಘೋಷಿಸುವಂತೆ ಕೋರಿದರು.