ವಾಷಿಂಗ್ಟನ್(ಜ.08): ಅತ್ತ ಇರಾನ್‌ನೊಂದಿಗೆ ಯುದ್ಧದ  ಹೊಸ್ತಿಲಲ್ಲಿ ಬಂದು ನಿಂತಿರುವ ಅಮೆರಿಕ, ಇತ್ತ ಭಾರತದೊಂದಿಗಿನ ವ್ಯಾಪಾರ ಸಂಬಂಧ ವೃದ್ಧಿಗೆ ಒತ್ತು ನೀಡಿದೆ.

ಭಾರತದೊಂದಿಗಿನ ತನ್ನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ವೃದ್ಧಿಸಲು ಅಮೆರಿಕ ಚಿಂತನೆ ನಡೆಸಿದ್ದು, ಒಟ್ಟಾಗಿ ಎರಡೂ ದೇಶಗಳ  ಕಾರ್ಪೋರೇಟ್ ಕ್ಷೇತ್ರವನ್ನು ಸದೃಢಗೊಳಿಸುವತ್ತ ಹೆಜ್ಜೆ ಹಾಕಿದೆ.

ಇದಕ್ಕೆ ಪೂರಕ ಎಂಬಂತೆ ಅಮೆರಿಕಕ್ಕೆ ಭಾರತದ ರಾಯಭಾರಿ ಹರ್ಷವರ್ಧನ ಶ್ರಿಂಗ್ಲಾ ಅವರ ವಿದಾಯ ಕೂಟ ಸಮಾರಂಭದಲ್ಲಿ, ವ್ಯಾಪಾರ ಸಂಬಂಧ ವೃದ್ಧಿಗೆ ಎರಡೂ ದೇಶಗಳು ಧ್ವನಿಗೂಡಿಸಿವೆ.

ಭಾರತದೊಂದಿಗೆ ವ್ಯಾಪಾರ: ಟ್ರಂಪ್ ಏಕಾಏಕಿ ಹೊಸ ಅವತಾರ!

ಅಮೆರಿಕ-ಭಾರತ ಕಾರ್ಯನೀತಿ ಹಾಗೂ ಪಾಲುದಾರಿಕೆ ವೇದಿಕೆ(USISPF) ವತಿಯಿಂದ,  ನಿರ್ಗಮಿತ ರಾಯಭಾರಿ ಹರ್ಷವರ್ಧನ ಶ್ರಿಂಗ್ಲಾ ಅವರಿಗಾಗಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. 

ಈ ವೇಳೆ ಮಾತನಾಡಿದ ಶ್ರಿಂಗ್ಲಾ, ಕಾರ್ಪೋರೇಟ್ ಕ್ಷೇತ್ರವನ್ನು ಬಲಪಡಿಸಲು ಅಮೆರಿಕ-ಭಾರತ ಒಟ್ಟಾಗಿ ಕಾರ್ಯನಿರ್ವಹಿಸುವ ಸಮಯ ಬಂದಿದೆ ಎಂದು ಹೇಳಿದರು.

ಟ್ರಂಪ್ ಮುಂದೆ ಮೋದಿ 'JAI': ಮಿಲಾಯಿಸೇ ಬಿಟ್ಟರು ಕೈ!

ಭಾರತದ ಕಂಪನಿಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಆದ್ಯತೆಯ ಪ್ರವೇಶ ಹಾಗೂ ಅಮೆರಿಕದ ಕಂಪನಿಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಆದ್ಯತೆಯ ಪ್ರವೇಶ ಇದು ಎರಡೂ ದೇಶಗಳ ಮುಂದಿರುವ ಪ್ರಮುಖ ಗುರಿ ಎಂದು ಶ್ರಿಂಗ್ಲಾ ಅಭಿಪ್ರಾಯಪಟ್ಟರು.

ಈಗಾಗಲೇ ಹಲವು ಸುತ್ತಿನ ಮಾತುಕತೆಗಳ ಫಲವಾಗಿ ಎರಡೂ ದೇಶಗಳ ವ್ಯಾಪಾರ ಸಂಬಂಧದಲ್ಲಿ ಮಹತ್ತರವಾದ ಗುರಿಗಳನ್ನು ಸಾಧಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ವೃದ್ಧಿಸುವ ವಿಶ್ವಾಸವಿದೆ ಎಂದು ಶ್ರಿಂಗ್ಲಾ ಈ ವೇಳೆ ಭರವಸೆ ವ್ಯಕ್ತಪಡಿಸಿದರು.