ಒಸಾಕಾ(ಜೂ.28): ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಪ್ರಮುಖವಾಗಿ ಪರಸ್ಪರರ ವಸ್ತುಗಳ ಮೇಲೆ ಎರಡೂ ದೇಶಗಳೂ ಆಮದು ಸುಂಕ ಹೆಚ್ಚಿಸಿರುವ ಕ್ರಮದ ಕುರಿತು ಇಬ್ಬರೂ ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ. ಪರಸ್ಪರ ಆತ್ಮೀಯವಾಗಿ ಭೇಟಿಯಾದ ನಾಯಕರು, ಎರಡೂ ದೇಶಗಳ ನಡುವಿನ ವಾಣಿಜ್ಯ ಸಮಸ್ಯೆಗಳು ಶೀಘ್ರವೇ ಬಗೆಹರಿಯುವ ಆಶಾವಾದ ವ್ಯಕ್ತಪಡಿಸಿದರು.

ಈ ಮೊದಲು ಭಾರತದ ವಿರುದ್ಧ ಧ್ವನಿ ಏರಿಸಿ ಮಾತನಾಡಿದ್ದ ಟ್ರಂಪ್, ಮೋದಿ ಭೇಟಿಯ ವೇಳೆ ಮೃದುವಾಗಿದ್ದು ವಿಶೇಷವಾಗಿತ್ತು. ಕೇವಲ ಸುಂಕ ಪ್ರಮಾಣ ಇಳಿಸುವಂತೆ ಒತ್ತಾಯಿಸುತ್ತಿದ್ದ ಟ್ರಂಪ್, ಇದೀಗ ಭಾರತದೊಂದಿಗೆ ಅತ್ಯಂತ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ಉತ್ಸುಕರಾಗಿರುವುದಾಗಿ ಹೇಳಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ ಪ್ರಧಾನಿ ಮೋದಿ, ವಿಶ್ವ ವೇದಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಮೂರು ಪ್ರಮುಖ ರಾಷ್ಟ್ರಗಳು ಒಟ್ಟಾಗಿ ಹೆಜ್ಜೆ ಹಾಕಬೇಕಿದೆ ಎಂದು ಹೇಳಿದರು.

JAI ಪ್ರಸ್ತಾವ ಮುಂದಿಟ್ಟಿರುವ ಪ್ರಧಾನಿ ಮೋದಿ, J-ಜಪಾನ್, A-ಅಮೆರಿಕ, I-ಇಂಡಿಯಾ, ಈ ಮೂರು ರಾಷ್ಟ್ರಗಳು ವಾಣಿಜ್ಯ, ರಕ್ಷಣಾ ಕ್ಷೇತ್ರ ಸೇರಿದಂತೆ ಹಲವು ರಂಗಗಳಲ್ಲಿ ಒಟ್ಟಾಗಿ ಹೆಜ್ಜೆ ಹಾಕಬೇಕಿದೆ ಎಂದು ಹೇಳಿದರು.

ಮೋದಿ ಅವರ JAI ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ಸ್ವಾಗತಿಸಿದ್ದಾರೆ. ಅಲ್ಲದೇ ಮೂರು ರಾಷ್ಟ್ರಗಳೂ ಒಟ್ಟಾಗಿ ಹೆಜ್ಜೆ ಇರಿಸುವ ಮೋದಿ ಒತ್ತಾಸೆಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ.