Q2 GDP Data: ಜಾಗತಿಕ ಸವಾಲುಗಳ ನಡುವೆ ರಿಲೀಫ್ ನೀಡಿದ ಭಾರತದ ಆರ್ಥಿಕತೆ, ಶೇ.6.3ಗೆ ಏರಿಕೆ!
ಒಂದೆಡೆ ವಿಶ್ವದ ಬಹುತೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಆರ್ಥಿಕತೆ ಸಮಸ್ಯೆಯಲ್ಲಿದೆ. ಬ್ರಿಟನ್ ದೇಶದ ಆರ್ಥಿಕತೆಯಂತೂ ಹಿಂಜರಿತದ ಕೊನೆಯ ಹೆಜ್ಜೆಯಲ್ಲಿದೆ. ಆದರೆ, ಈ ಅವಧಿಯಲ್ಲಿ ಭಾರತದ ಆರ್ಥಿಕತೆ ಮಾತ್ರ ಏರಿಕೆ ಕಾಣುತ್ತಿದೆ. ಜಿಡಿಪಿ ಅಂಕಿ-ಅಂಶದ ಪ್ರಕಾರ, ಭಾರತದ ಆರ್ಥಿಕತೆ ತನ್ನ ಎದುರಿಗಿರುವ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆ.
ನವದೆಹಲಿ (ನ.30): ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಏರುತ್ತಿರುವ ಹಣದುಬ್ಬರದ ಭಯದ ನಡುವೆ ಭಾರತೀಯ ಆರ್ಥಿಕತೆಯು ತನ್ನ ವೇಗವನ್ನು ಕಾಯ್ದುಕೊಂಡಿದೆ. ಬುಧವಾರ ಬಂದಿರುವ ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿ ಅಂಕಿಅಂಶಗಳು ಇದನ್ನು ಸಾಬೀತು ಮಾಡಿದೆ. ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ 2022 ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 6.3 ರ ದರದಲ್ಲಿ ಬೆಳೆದಿದೆ. ಅಂದರೆ, ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.6.3ರಷ್ಟಿತ್ತು. ಈ ಅಂಕಿಅಂಶಗಳು ಆರ್‌ಬಿಐ ಅಂದಾಜಿನ ಪ್ರಕಾರದಲ್ಲಿಯೇ ಇದೆ. ಆದರೆ, ಕೆಲವು ಏಜೆನ್ಸಿಗಳು ಇದಕ್ಕಿಂತ ಉತ್ತಮ ಅಂಕಿಅಂಶವನ್ನು ನಿರೀಕ್ಷೆ ಮಾಡಿದ್ದವು. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದರೆ ಜೂನ್-2022 ರಲ್ಲಿ, ಜಿಡಿಪಿ ಅಂಕಿ ಅಂಶವು ಶೇ.13.5 ಆಗಿತ್ತು. ಇದೇ ಸಮಯದಲ್ಲಿ ಕಳೆದ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಜಿಡಿಪಿಯ ಬೆಳವಣಿಗೆಯು ಶೇಕಡಾ 8.4 ರಷ್ಟಿತ್ತು. ಸೆಪ್ಟೆಂಬರ್ ತ್ರೈಮಾಸಿಕದ ಅಂಕಿಅಂಶಗಳು ಭಾರತದ ಆರ್ಥಿಕತೆಗೆ ಭವಿಷ್ಯದ ದಿನಗಳು ಇನ್ನಷ್ಟು ಉತ್ತಮವಾಗಿದೆ ಎನ್ನುವ ಸೂಚನೆ ನೀಡಿದೆ. ಜಗತ್ತಿನ ಸವಾಲುಗಳ ಮಧ್ಯೆ ಅಭಿವೃದ್ಧಿ ಹೊಂದಿರುವ ದೇಶಗಳು ಆರ್ಥಿಕತೆಯ ಕುಸಿತವನ್ನು ಕಾಪಾಡಲು ಹೆಣಗಾಡುತ್ತಿರುವ ವೇಳೆ ಭಾರತದ ಅಂಕಿ-ಅಂಶಗಳು ಪ್ರಕಟವಾಗಿದೆ.
ಬ್ರಿಟನ್ ಈಗಾಗಲೇ ಆರ್ಥಿಕ ಹಿಂಜರಿತದ ಸ್ಥಿತಿಗೆ ತಲುಪುವುದಾಗಿ ಘೋಷಣೆ ಮಾಡಿದೆ. ಇನ್ನೊಂದೆಡೆ ಚೀನಾ ಈವರೆಗೂ ತನ್ನ ಜಿಡಿಪಿ ಅಂಕಿ ಅಂಶಗಳನ್ನು ಪ್ರಕಟ ಮಾಡಿಲ್ಲ. ಈ ಬಾರಿಯ ಅಂಕಿ ಅಂಶ ನೆಗೆಟಿವ್ ಆಗಿರುವ ಕಾರಣಕ್ಕೆ ಚೀನಾ ಜಿಡಿಪಿ ಮಾಹಿತಿ ಪ್ರಕಟ ಮಾಡಿಲ್ಲ ಎನ್ನಲಾಗುತ್ತದೆ. ಇನ್ನು ಅಮೆರಿಕದ ಜನ ಕೂಡ ಹಣದುಬ್ಬರದ ಪರಿಣಾಮ ಎದುರಿಸುತ್ತಿದ್ದಾರೆ. ಆದರೆ, ಭಾರತದ ಅಂಕಿ-ಅಂಶಗಳು ಅರ್ಥಿಕತೆ ಸ್ಥಿರವಾಗಿದೆ ಎನ್ನುವ ಲಕ್ಷಣ ಸೂಚಿಸಿದೆ. ಇದು ಆರ್‌ಬಿಐ ಅಂದಾಜಿನ ಪ್ರಕಾರವೇ ಜಿಡಿಪಿ ಅಂಕಿ-ಅಂಶ ಬಂದಿದೆ.
- - ಈ ಬಾರಿಯ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಆರ್‌ಬಿಐ ಶೇ. 6.1 ರಿಂದ 6.3ರವರೆಗಿನ ಜಿಡಿಪಿ ದರವನ್ನು ನಿರೀಕ್ಷೆ ಮಾಡಿತ್ತು.
- - ರೇಟಿಂಗ್ ಏಜೆನ್ಸಿ ಐಸಿಆರ್‌ಎ 2ನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ. 6.5 ಆಗಿರಬಹುದು ಎಂದು ಅಂದಾಜು ಮಾಡಿತ್ತು.
- - ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಿಡಿಪಿ ಬೆಳವಣಿಗೆ ದರ ಶೇ. 5.8 ಇರಬಹುದು ಎಂದು ಅಂದಾಜಿಸಿತ್ತು. ಒಟ್ಟಾರೆ ಹಾಲಿ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.8ರಷ್ಟು ಇರಲಿದೆ ಎಂದು ಅಂದಾಜು ಮಾಡಿದೆ.
- - ಎಸ್ ಆಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಭಾರತದ 2023ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು 30 ಬಿಪಿಎಸ್ ನಿಂದ 7 ಪ್ರತಿಶತಕ್ಕೆ ಇಳಿಸಿದೆ.
2023ನೇ ಆರ್ಥಿಕ ವರ್ಷಕ್ಕೆ ಜಿಡಿಪಿ ಅಂದಾಜು ಶೇ.7.2ರಿಂದ ಶೇ.7ಕ್ಕೆ ಇಳಿಸಿದ ಆರ್ ಬಿಐ
ಇನ್ನೂ ಇದೆ ಜಾಗತಿಕ ಸವಾಲು: ಜಾಗತಿಕ ಆರ್ಥಿಕತೆಯು ಈ ಸಮಯದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಆರ್ಥಿಕ ಹಿಂಜರಿತ ಮತ್ತು ಹಣದುಬ್ಬರದ ಸಮಸ್ಯೆ ಮುಂದುವರಿದಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ವಿಶ್ವದ ಆರ್ಥಿಕತೆ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಇದರಿಂದಾಗಿ ಪೂರೈಕೆ ಸರಪಳಿಯಲ್ಲಿ ಹಲವು ಸಮಸ್ಯೆಗಳಾಗಿದೆ.
ಹಣದುಬ್ಬರ ತಗ್ಗಿದ್ರೂ ಸಾಲಗಾರರಿಗೆ ತಪ್ಪಿಲ್ಲ ಟೆನ್ಷನ್; ರೆಪೋ ದರ 35 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ನಿರೀಕ್ಷೆ
ಬಹುತೇಕ ದೇಶಗಳಲ್ಲಿ ಹಣದುಬ್ಬರ ಏರಿಕೆಯಲ್ಲಿದೆ. ಅಮೆರಿಕದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ನಿರಂತರವಾಗಿ ಬಡ್ಡಿದರ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಹಣದುಬ್ಬರದ ವಿಚಾರದಲ್ಲಿ ಭಾರತ ಸ್ವಲ್ಪ ಮಟ್ಟಿಗಿನ ರಿಲೀಫ್ ಪಡೆದಿದೆ. ಚಿಲ್ಲರೆ ಹಣದುಬ್ಬರವು ಕಳೆದ 3 ತಿಂಗಳಲ್ಲೇ ಕನಿಷ್ಠ ಮಟ್ಟವಾದ ಶೇ.6.7ಕ್ಕೆ ಇಳಿದಿದೆ. ಕಳೆದ ತಿಂಗಳು ಸಗಟು ಹಣದುಬ್ಬರವು 19 ತಿಂಗಳ ಕನಿಷ್ಠ ಶೇ.8.39ಕ್ಕೆ ಇಳಿದಿತ್ತು.