Asianet Suvarna News Asianet Suvarna News

ಹಣದುಬ್ಬರ ತಗ್ಗಿದ್ರೂ ಸಾಲಗಾರರಿಗೆ ತಪ್ಪಿಲ್ಲ ಟೆನ್ಷನ್; ರೆಪೋ ದರ 35 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ನಿರೀಕ್ಷೆ

ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದ್ದು, ಜನಸಾಮಾನ್ಯರಿಗೆ ತುಸು ನಿರಾಳತೆ ಸಿಕ್ಕಿದೆ. ಆದರೆ, ಸಾಲಗಾರರಿಗೆ ಮಾತ್ರ ಇನ್ನೂ ಚಿಂತೆ ತಪ್ಪಿಲ್ಲ. ಏಕೆಂದ್ರೆ ಇಳಿಕೆಯಾಗಿದ್ರೂ ಚಿಲ್ಲರೆ ಹಣದುಬ್ಬರ ಆರ್ ಬಿಐ ಸಹನ ಮಟ್ಟಕ್ಕಿಂತ ಹೆಚ್ಚಿರುವ ಕಾರಣ ಆರ್ ಬಿಐ ಮುಂದಿನ ತಿಂಗಳು ರೆಪೋ ದರವನ್ನು ಮತ್ತೊಮ್ಮೆ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. 

Inflation Declines But RBI Will Still Go For Another Repo Rate Hike By Up To 35 bps Know Why
Author
First Published Nov 16, 2022, 4:26 PM IST

Business Desk:ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಶೇ.6.77ಕ್ಕೆ ಇಳಿಕೆಯಾಗಿದ್ರೂ ಕೂಡ ಆರ್ ಬಿಐ ನಿಗದಿಪಡಿಸಿರುವ ಸಹನ ಮಟ್ಟ ಶೇ.4ಕ್ಕಿಂತ ಹೆಚ್ಚಿದೆ. ಹೀಗಾಗಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದ್ದರೂ ಮುಂದಿನ ತಿಂಗಳು ನಡೆಯಲಿರುವ ಆರ್ ಬಿಐ ಹಣಕಾಸು ಸಮಿತಿ ಸಭೆಯಲ್ಲಿ ರೆಪೋ ದರ ಏರಿಕೆ ಮಾಡುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಾರಿ ರೆಪೋ ದರ ಈ ಹಿಂದಿನಂತೆ 50 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆಯಾಗುವ ಸಾಧ್ಯತೆಯಿಲ್ಲ. ಬದಲಿಗೆ 25-35 ಪಾಯಿಂಟ್ಸ್ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಈ ಹಿಂದಿನ ಮೂರು ಎಂಪಿಸಿ ಸಭೆಗಳಲ್ಲಿ ಆರ್ ಬಿಐ ರೆಪೋ ದರವನ್ನು ಪ್ರತಿ ಬಾರಿ 50 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಮೇನಲ್ಲಿ ನಡೆದ ಮಧ್ಯಂತರ ಸಭೆಯಲ್ಲಿ ಮಾತ್ರ 40 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಲಾಗಿತ್ತು. ಈ ವರ್ಷ ಮೇನಿಂದ ಇಲ್ಲಿಯ ತನಕ ಸತತ ನಾಲ್ಕು ಬಾರಿ ಒಂದರ ಹಿಂದೆ ಒಂದರಂತೆ ಆರ್ ಬಿಐ  ರೆಪೋ ದರವನ್ನು ಒಟ್ಟು 190 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಆರ್ ಬಿಐ ಎಂಪಿಸಿ ಮುಂದಿನ ಸಭೆ ಡಿಸೆಂಬರ್ 5-7ರ ತನಕ ನಿಗದಿಯಾಗಿದೆ. ರೆಪೊ ದರ ಹೆಚ್ಚಳದ ಬಗ್ಗೆ ಸಭೆಯ ಕೊನೆಯ ದಿನವಾದ ಡಿ.7ರಂದು ಮಾಹಿತಿ ನೀಡಲಾಗುತ್ತದೆ.

ರೆಪೋ ದರ ಹೆಚ್ಚಳವಾದ್ರೆ ಏನಾಗುತ್ತೆ?
ರೆಪೋ ದರ ಅನ್ನೋದು ಆರ್ ಬಿಐ  ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ರೆಪೋ ದರ ಹೆಚ್ಚಳವಾದ ತಕ್ಷಣ ಬ್ಯಾಂಕುಗಳು ಗೃಹ, ವಾಹನ, ವೈಯಕ್ತಿಕ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡುತ್ತವೆ. ಈ ಹಿಂದೆ ನಾಲ್ಕು ಬಾರಿ ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿದಾಗ ಎಲ್ಲ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ಹೆಚ್ಚಿಸಿವೆ. ಬಡ್ಡಿದರ ಹೆಚ್ಚಳದಿಂದ ಗೃಹ ಸಾಲದಂತಹ ದೀರ್ಘಾವಧಿ ಸಾಲ ಹೊಂದಿರೋರಿಗೆ ಇಎಂಐ ಮೊತ್ತ ಹೆಚ್ಚಳವಾಗುತ್ತದೆ. ಇದು ಗ್ರಾಹಕರ ತಿಂಗಳ ವೆಚ್ಚದ ಹೊರೆಯನ್ನು ಹೆಚ್ಚಿಸುತ್ತದೆ ಎಂದೇ ಹೇಳಬಹುದು. ಕೋವಿಡ್  ಸಂಕ್ರಾಮಿಕದ ಸಂದರ್ಭದಲ್ಲಿ ಬಡ್ಡಿದರ ಕಡಿಮೆಯಿದ್ದ ಕಾರಣ ಸಾಲ ಪಡೆದವರು ತುಸು ನಿರಾಳವಾಗಿದ್ದರು. ಆದರೆ, ಈ ವರ್ಷ ಒಂದರ ಹಿಂದೆ ಮತ್ತೊಂದರಂತೆ ರೆಪೋದರ ಹೆಚ್ಚಳದ ಪರಿಣಾಮ ಸಾಲಗಳ ಬಡ್ಡಿದರದಲ್ಲಿ ಭಾರೀ ಹೆಚ್ಚಳವಾಗಿದೆ. ಕೆಲವು ಬ್ಯಾಂಕುಗಳಲ್ಲಿ ಗೃಹಸಾಲ 9ರ ಗಡಿ ದಾಟಿದೆ. ಈಗ ಇನ್ನೊಮ್ಮೆ ರೆಪೋ ದರ ಹೆಚ್ಚಳವಾದ್ರೆ ಸಾಲಗಾರರ ಮೇಲಿನ ಹೊರೆ ಮತ್ತಷ್ಟು ಹೆಚ್ಚಳವಾಗಲಿದೆ.

ಸೌಂದರ್ಯವರ್ಧಕ ಕ್ಷೇತ್ರಕ್ಕೆ ಟಾಟಾ ಗ್ರೂಪ್ ಎಂಟ್ರಿ; ಶೀಘ್ರದಲ್ಲಿ ಬರಲಿವೆಯಾ ಟಾಟಾ ಬ್ಯೂಟಿ ಟೆಕ್ ಮಳಿಗೆಗಳು?

ತಜ್ಞರು ಏನಂತಾರೆ?
'ದೇಶೀಯ ಹಣದುಬ್ಬರ ಪಥದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಅಮೆರಿಕದಲ್ಲಿ ಕೂಡ ಹಣದುಬ್ಬರದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಯಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಕೂಡ ಹಣದುಬ್ಬರ ತಗ್ಗುವ ನಿರೀಕ್ಷೆಯಿದೆ. ಡಿಸೆಂಬರ್ ಎಂಪಿಸಿ ಸಭೆಯಲ್ಲಿ ಆರ್ ಬಿಐ ರೆಪೋ ದರವನ್ನು 35 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿ ಶೇ.6.25ಕ್ಕೆ ಏರಿಕೆ ಮಾಡುವ ನಿರೀಕ್ಷೆಯಿದೆ. ಇದಾದ ಬಳಿಕ ಆರ್ ಬಿಐ ರೆಪೋ ದರ ಏರಿಕೆಗೆ ವಿರಾಮ ನೀಡಿ ಈ ಹಿಂದಿನ ದರ ಹೆಚ್ಚಳಗಳು, ಬಿಗಿಯಾದ ನೀತಿಗಳು ಹಾಗೂ ಜಾಗತಿಕ ಬೆಳವಣಿಗೆಗಳ ಪರಿಣಾಮವನ್ನು ವೀಕ್ಷಿಸುವ ಸಾಧ್ಯತೆಯಿದೆ' ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಹಿರಿಯ ಆರ್ಥಿಕ ತಜ್ಞ ಸುವೋದೀಪ್ ರಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ. 

ಈ ಎರಡು ರಾಷ್ಟ್ರಗಳಲ್ಲಿದ್ದಾರೆ ಜಗತ್ತಿನ ಅತೀ ಹೆಚ್ಚು ಸಿರಿವಂತರು!

'ಅಕ್ಟೋಬರ್ ನಲ್ಲಿ ಸಿಪಿಐ ಹಣದುಬ್ಬರ ತಗ್ಗಿರೋದ್ರಿಂದ ಹಾಗೂ ನವೆಂಬರ್ ನಲ್ಲಿ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿರುವ ಕಾರಣ ರೆಪೋ ದರ 50 ಬಿಪಿಎಸ್ ಬದಲು 35 ಬಿಪಿಎಸ್ ಏರಿಕೆಯಾಗುವ ಸಾಧ್ಯತೆಯಿದೆ' ಎಂದು ಐಸಿಆರ್ ಎ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಅಭಿಪ್ರಾಯಪಟ್ಟಿದ್ದಾರೆ. 

Follow Us:
Download App:
  • android
  • ios