Asianet Suvarna News Asianet Suvarna News

2023ನೇ ಆರ್ಥಿಕ ವರ್ಷಕ್ಕೆ ಜಿಡಿಪಿ ಅಂದಾಜು ಶೇ.7.2ರಿಂದ ಶೇ.7ಕ್ಕೆ ಇಳಿಸಿದ ಆರ್ ಬಿಐ

*ಹಣದುಬ್ಬರವನ್ನು ಶೇ.6.7ಕ್ಕೆ ನಿಗದಿಪಡಿಸಿದ ಆರ್ ಬಿಐ
*ಈ ಹಿಂದೆ 2023ನೇ ಆರ್ಥಿಕ ವರ್ಷಕ್ಕೆ ಜಿಡಿಪಿಯನ್ನು ಶೇ.7.2ಕ್ಕೆ ನಿಗದಿಪಡಿಸಿದ್ದ ಆರ್ ಬಿಐ
*ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಹೆಚ್ಚಳ
*ಜುಲೈಗೆ ಹೋಲಿಸಿದರೆ ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ 
 

RBI Retains Inflation Projection For FY23 At 6.7percent GDP Forecast revised from 7.2percent to 7percent
Author
First Published Sep 30, 2022, 3:58 PM IST

ನವದೆಹಲಿ (ಸೆ.30): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೂಡ ಆರ್ಥಿಕ ವರ್ಷ 2023 ಕ್ಕೆ ಚಿಲ್ಲರೆ ಹಣದುಬ್ಬರ ಅಂದಾಜನ್ನು ಶೇ. 6.7ಕ್ಕೆ ಹಾಗೂ ನೈಜ ಜಿಡಿಪಿ ಬೆಳವಣಿಗೆಯನ್ನು ಶೇ.7ಕ್ಕೆ ನಿಗದಿಪಡಿಸಿದೆ. ಈ ಹಿಂದಿನ ಎಂಪಿಸಿ ಸಭೆಯಲ್ಲಿ ನೈಜ GDP ಬೆಳವಣಿಗೆಯನ್ನು 7.2 ರಷ್ಟು ಅಂದಾಜು ಮಾಡಲಾಗಿತ್ತು. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಆಗಸ್ಟ್ ನಲ್ಲಿ ಏರಿಕೆ ಕಂಡಿತ್ತು. ಜುಲೈನಲ್ಲಿ ಶೇ.6.71ರಷ್ಟಿದ್ದ ಚಿಲ್ಲರೆ ಹಣದುಬ್ಬರ ಆಗಸ್ಟ್ ನಲ್ಲಿ ಶೇ.7ಕ್ಕೆ ಹೆಚ್ಚಳವಾಗಿತ್ತು. ಈ ಮೂಲಕ ಸಿಪಿಐ ಹಣದುಬ್ಬರ ಆರ್ ಬಿಐ ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟ ಶೇ.6ರನ್ನು ಮೀರುತ್ತಿರೋದು ಇದು ಸತತ  ಎಂಟನೇ ಬಾರಿಯಾಗಿದೆ. ಆಗಸ್ಟ್ ನಲ್ಲಿ ಆಹಾರ ಹಣದುಬ್ಬರ ಕೂಡ ಏರಿಕೆಯಾಗಿದ್ದು, ಶೇ.7.62 ತಲುಪಿದೆ. ಜುಲೈನಲ್ಲಿ ಆಹಾರ ಹಣದುಬ್ಬರ ಶೇ.6.75ರಷ್ಟಿತ್ತು. ಜುಲೈಗೆ ಹೋಲಿಸಿದರೆ ಆಗಸ್ಟ್ ನಲ್ಲಿ ಧಾನ್ಯಗಳು, ಬೇಳೆಕಾಳುಗಳು, ತರಕಾರಿಗಳು, ಹಾಲು, ಧಾನ್ಯಗಳು ಹಾಗೂ ಇತರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ಮೇ ತಿಂಗಳ ಬಳಿಕ ಆರ್‌ಬಿಐ ರೆಪೋ ದರವನ್ನು ಶೇ.1.40 ರಷ್ಟು ಹೆಚ್ಚಳ ಮಾಡಿದೆ. ಶೇ.4 ರಷ್ಟಿದ್ದ ರೆಪೋ ದರವನ್ನುಆರ್‌ಬಿಐ ಶೇ.5.4ಕ್ಕೆ ಹೆಚ್ಚಳ ಮಾಡಿತ್ತು.

ಅಂದಾಜು ಜಿಡಿಪಿ ಇಳಿಕೆ ಮಾಡಿದ ಆರ್ ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ 2022-23 ನೇ ಆರ್ಥಿಕ ಸಾಲಿನ ಭಾರತದ ಅಂದಾಜು ಜಿಡಿಪಿಯನ್ನು ಈ ಹಿಂದಿನ ಶೇ.7.2 ರಿಂದ ಶೇ.7ಕ್ಕೆ ಇಳಿಕೆ ಮಾಡಿದೆ. 2022  ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.13.5ರಷ್ಟು ಬೆಳವಣಿಗೆ ಕಂಡಿತ್ತು. ದ್ವಿಮಾಸಿಕ ಹಣಕಾಸು ನೀತಿ ಹೇಳಿಕೆ ಪ್ರಕಟಿಸುವ ಸಂದರ್ಭದಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, 'ಭೌಗೋಳಿಕ ರಾಜಕೀಯ ಒತ್ತಡಗಳು, ಬಿಗಿಯಾದ ಜಾಗತಿಕ ಆರ್ಥಿಕ ನೀತಿಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಒಟ್ಟು ಬೇಡಿಕೆ ಇಳಿಕೆಯಿಂದ ಬೆಳವಣಿಗೆ ಕೆಳಮುಖ ಸಾಗುವ ಅಪಾಯವಿದೆ. ಹೀಗಾಗಿ ಈ ಎಲ್ಲ ಅಂಶಗಳನ್ನು ಪರಿಗಣಿಸಿ 2022-23 ನೇ ಆರ್ಥಿಕ ಸಾಲಿನ ನೈಜ ಜಿಡಿಪಿ ಬೆಳವಣಿಗೆಯನ್ನು ಶೇ.7ಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಎರಡನೆ ತ್ರೈಮಾಸಿಕಕ್ಕೆ ಶೇ.6.3, ಮೂರನೇ ತ್ರೈಮಾಸಿಕಕ್ಕೆ ಶೇ.4.6, ನಾಲ್ಕನೇ ತ್ರೈಮಾಸಿಕಕ್ಕೆ ಶೇ.4.6 ಕ್ಕೆ ನಿಗದಿಪಡಿಸಲಾಗಿದೆ. ಇನ್ನು 2023-24ನೇ ಸಾಲಿನ ಮೊದಲ ತ್ರೈಮಾಸಿಕಕ್ಕೆ ಬೆಳವಣಿಗೆ ದರವನ್ನು ಶೇ.7.2ಕ್ಕೆ ಅಂದಾಜಿಸಲಾಗಿದೆ.

ಡಿಮ್ಯಾಟ್ ಖಾತೆ, ಡೆಬಿಟ್, ಕ್ರೆಡಿಟ್ ಕಾರ್ಡ್ ಹೊಂದಿರೋರು ಗಮನಿಸಿ, ಅ.1ರಿಂದ ಈ 6 ನಿಯಮಗಳಲ್ಲಿ ಬದಲಾವಣೆ

ಇನ್ನು ರೇಟಿಂಗ್ ಏಜೆನ್ಸಿಗಳು ಹಾಗೂ ಇತರ ಸಂಸ್ಥೆಗಳು ಕೂಡ 2023ನೇ ಹಣಕಾಸು ಸಾಲಿನ ಜಿಡಿಪಿ ಅಂದಾಜನ್ನು ಇತ್ತೀಚೆಗೆ ಕಡಿತಗೊಳಿಸಿವೆ. ಎಡಿಪಿ (ADB)ಜಿಡಿಪಿ ಅಂದಾಜನ್ನು ಪರಿಷ್ಕರಿಸಿದ್ದು, ಶೇ.7.2ರಿಂದ ಶೇ. 7ಕ್ಕೆ ಇಳಿಕೆ ಮಾಡಿದೆ. ಮೂಡೀಸ್ (Moody’s) ತನ್ನ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ.8.8 ರಿಂದ ಶೇ.7.7ಕ್ಕೆ ಇಳಿಕೆ ಮಾಡಿದೆ. ಇಂಡಿಯಾ ರೇಟಿಂಗ್ ಕೂಡ ಜಿಡಿಪಿ ನಿರೀಕ್ಷೆಯನ್ನು ಶೇ.7ರಿಂದ ಶೇ.6.9ಕ್ಕೆ ತಗ್ಗಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಭಾರತದ ಜಿಡಿಪಿ ಅಂದಾಜನ್ನು ಈ ಹಿಂದಿನ ಶೇ.7.5 ರಿಂದ ಶೇ.6.8 ಕ್ಕೆ ಇಳಿಕೆ ಮಾಡಿದೆ. 

ಲ್ಯಾಪ್‌ಟಾಪ್‌ಗೆ ಡಿಟರ್ಜೆಂಟ್‌: ತಪ್ಪಿಗೆ ಪರಿಹಾರ ಕೊಡುತ್ತೇನೆಂದ Flipkart

ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಹಣದುಬ್ಬರ ತೀವ್ರ ಏರಿಕೆ ಕಾಣುತ್ತಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಕೂಡ ಇತ್ತೀಚೆಗೆ ಬಡ್ಡಿದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಹಣದುಬ್ಬರಕ್ಕೆ ಕಡಿವಾಣ ಹಾಕಲು ರೆಪೋ ದರ ಏರಿಕೆ ಮಾಡೋದು ಸದ್ಯಕ್ಕೆ ಆರ್ ಬಿಐಗೆ ಕೂಡ ಅನಿವಾರ್ಯವಾಗಿದೆ.
 

Follow Us:
Download App:
  • android
  • ios