ದೇಶ ಆರ್ಥಿಕ ಹಿಂಜರಿಕೆಯಲ್ಲಿದೆ. ಜಿಡಿಪಿ ಬೆಳವಣಿಗೆಯ ದರ ನಿರೀಕ್ಷಿತ ಶೇ.7ರಿಂದ ಶೇ.5ಕ್ಕೆ ಕುಸಿದಿದೆ. ಆದರೂ ಭಾರತವೀಗ ಫ್ರಾನ್ಸ್‌ ಹಾಗೂ ಜಪಾನನ್ನು ಹಿಂದಿಕ್ಕಿ ಜಗತ್ತಿನ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಇದು ಸಾಧ್ಯವಾಗಿದ್ದು ಹೇಗೆ? ಜಿಡಿಪಿಯ ಗಾತ್ರದಲ್ಲಾಗುವ ಬೆಳವಣಿಗೆಗೂ ಜಿಡಿಪಿಯ ಬೆಳವಣಿಗೆ ದರಕ್ಕೂ ಏನು ವ್ಯತ್ಯಾಸ? 4ನೇ ಸ್ಥಾನದಲ್ಲಿರುವ ಜರ್ಮನಿ ಹಾಗೂ 3ನೇ ಸ್ಥಾನದಲ್ಲಿರುವ ಜಪಾನನ್ನು ಭಾರತ ಮೀರಿಸಲು ಸಾಧ್ಯವಿಲ್ಲವೇ? ಕೆಲ ಕುತೂಹಲಕಾರಿ ವಿವರ ಇಲ್ಲಿದೆ.

205 ಲಕ್ಷ ಕೋಟಿ ಆರ್ಥಿಕತೆಯಾಗಿದ್ದು ಹೀಗೆ

2018ರ ಕೊನೆಯವರೆಗೆ ಭಾರತವು ಜಗತ್ತಿನ 7ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಫ್ರಾನ್ಸ್‌ 6ನೇ ಸ್ಥಾನದಲ್ಲಿ ಮತ್ತು ಬ್ರಿಟನ್‌ 5ನೇ ಸ್ಥಾನದಲ್ಲಿದ್ದವು. 2019ರಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 2.94 ಲಕ್ಷ ಕೋಟಿ ಡಾಲರ್‌ (ಸುಮಾರು 205 ಲಕ್ಷ ಕೋಟಿ ರು.)ಗೆ ಏರಿಕೆಯಾಗಿ ಜಗತ್ತಿನಲ್ಲೇ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಭಾರತ ಚೆನ್ನಾಗಿ ನೋಡಿಕೊಂಡಿಲ್ಲ: ಬರುವುದಕ್ಕೂ ಮೊದಲೇ ಇದೇನು ಹೇಳಿಬಿಟ್ರಿ ಟ್ರಂಪ್?

ಈ ಬೆಳವಣಿಗೆಯಲ್ಲಿ ಏಕಕಾಲಕ್ಕೆ ಭಾರತವು ಫ್ರಾನ್ಸ್‌ ಹಾಗೂ ಬ್ರಿಟನ್‌ ಎರಡೂ ದೇಶಗಳನ್ನು ಹಿಂದಿಕ್ಕಿದೆ ಎಂದು ಅಮೆರಿಕದ ಚಿಂತಕರ ಚಾವಡಿ ಎನಿಸಿರುವ ವಲ್ಡ್‌ರ್‍ ಪಾಪ್ಯುಲೇಶನ್‌ ರಿವ್ಯೂ ಎಂಬ ವೇದಿಕೆಯ ವರದಿ ತಿಳಿಸಿದೆ. ಐಎಂಎಫ್‌, ವಿಶ್ವಬ್ಯಾಂಕ್‌, ಮೂಡಿ, ಫಿಚ್‌ನಂತಹ ಸಂಸ್ಥೆಗಳ ವರದಿಗಳು ಇದನ್ನು ಇನ್ನಷ್ಟೇ ಖಚಿತಪಡಿಸಬೇಕಿದೆ.

ಜಿಡಿಪಿ ಬೆಳವಣಿಗೆ ಕುಸಿದರೂ ಆರ್ಥಿಕತೆ ಬೆಳೆದಿದ್ದು ಹೇಗೆ?

2019-20 ಹಾಗೂ 2020-21ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ದರ ಶೇ.7ರಷ್ಟಿರಬಹುದು ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ, 2019ರ ಮಧ್ಯಭಾಗದಲ್ಲಿ ಶುರುವಾದ ಆರ್ಥಿಕ ಹಿಂಜರಿಕೆಯಿಂದಾಗಿ ಈ ವರ್ಷದ ಜಿಡಿಪಿ ಬೆಳವಣಿಗೆಯ ದರ ಶೇ.5ರಷ್ಟಾಗಬಹುದು ಎಂದು ಬಹುತೇಕ ಎಲ್ಲ ಪ್ರಮುಖ ರೇಟಿಂಗ್‌ ಏಜೆನ್ಸಿಗಳೂ ಹೇಳುತ್ತಿವೆ. ಆದರೂ ಭಾರತದ ಆರ್ಥಿಕತೆಯು ಫ್ರಾನ್ಸ್‌ ಹಾಗೂ ಬ್ರಿಟನ್ನನ್ನು ಹಿಂದಿಕ್ಕುವಷ್ಟುಬೆಳೆದಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ:

- ಶೇ.5 ಕ್ಕೆ ಕುಸಿದರೂ ಸದ್ಯ ಭಾರತದ ಜಿಡಿಪಿ ಬೆಳವಣಿಗೆ ದರ ಜಗತ್ತಿನ ಅತ್ಯುತ್ತಮ ಜಿಡಿಪಿ ಬೆಳವಣಿಗೆಯ ದರಗಳಲ್ಲೊಂದು. ಅಮೆರಿಕದ ಜಿಡಿಪಿ ಬೆಳವಣಿಗೆ ದರ ಶೇ.2, ಫ್ರಾನ್ಸ್‌ ಶೇ.1.2, ಜಪಾನ್‌ ಶೇ.3.9 ಮಾತ್ರ ಇವೆ. ಚೀನಾದ ಜಿಡಿಪಿ ಅಭಿವೃದ್ಧಿ ದರ ಮಾತ್ರ ಸುಮಾರು ಭಾರತದಷ್ಟೇ (ಶೇ.5.2) ಇದೆ. ಹೀಗಾಗಿ ಭಾರತವು ಈಗಾಗಲೇ ಅಭಿವೃದ್ಧಿ ಹೊಂದಿದ ಜಪಾನ್‌, ಬ್ರಿಟನ್‌ ಮುಂತಾದ ದೇಶಗಳನ್ನು ಹಿಂದಿಕ್ಕಿ ಬೆಳವಣಿಗೆ ಹೊಂದುತ್ತಿದೆ.

- ಯಾವುದೇ ದೇಶದ ಜಿಡಿಪಿ ಬೆಳವಣಿಗೆಯ ದರ ಕಡಿಮೆಯಾಗಿದೆ ಅಂದರೆ ಜಿಡಿಪಿಯ ಗಾತ್ರ ಕಡಿಮೆಯಾಗಿದೆ ಎಂದರ್ಥವಲ್ಲ. ಜಿಡಿಪಿಯ ಗಾತ್ರ ಬೆಳೆಯುತ್ತಿದೆ, ಆದರೆ ಕಡಿಮೆ ವೇಗದಲ್ಲಿ ಬೆಳೆಯುತ್ತಿದೆ ಎಂದರ್ಥ. ಭಾರತದ ಜಿಡಿಪಿ ಬೆಳವಣಿಗೆ ದರ ಶೇ.7ರಷ್ಟಿದ್ದುದು ಶೇ.5ಕ್ಕೆ ಕುಸಿದಿದ್ದರೂ ಭಾರತದ ಆರ್ಥಿಕತೆ (ಅರ್ಥಾತ್‌ ಜಿಡಿಪಿ) 2018ರಲ್ಲಿ 194 ಲಕ್ಷ ಕೋಟಿ ರು. ಇದ್ದುದು 2019ರಲ್ಲಿ 205 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ.

ಫ್ರಾನ್ಸ್, ಇಂಗ್ಲೆಂಡ್ ಹಿಂದಿಕ್ಕಿದ ಭಾರತ: ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶ!

- ವಲ್ಡ್‌ರ್‍ ಪಾಪ್ಯುಲೇಶನ್‌ ರಿವ್ಯೂ ಭಾರತದ ಆರ್ಥಿಕತೆ 5ನೇ ಸ್ಥಾನಕ್ಕೇರಿದೆ ಎಂದು ನಿರ್ಧರಿಸುವುದಕ್ಕೆ ಜನರ ಒಟ್ಟಾರೆ ಖರೀದಿ ಸಾಮರ್ಥ್ಯ ಎಷ್ಟಿದೆ ಎಂಬ ಮಾನದಂಡವನ್ನೂ ಪರಿಗಣಿಸಿದೆ. ಜನರ ಖರೀದಿ ಸಾಮರ್ಥ್ಯದ ಮೇಲೆ, ಅಂದರೆ ಭಾರತೀಯರ ಕೈಲಿರುವ ಖರ್ಚು ಮಾಡಬಹುದಾದ ಒಟ್ಟು ಸಂಪತ್ತಿನ ಮೇಲೆ ಅಳೆದರೆ ಭಾರತದ ಜಿಡಿಪಿ (ಅರ್ಥಾತ್‌ ಪಿಪಿಪಿ) 756 ಲಕ್ಷ ಕೋಟಿ ರು. ಆಗುತ್ತದೆ.

ಈ ವಿಷಯದಲ್ಲಿ ಸದ್ಯ ಜಗತ್ತಿನ 4 ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನದಲ್ಲಿರುವ ಜರ್ಮನಿಯನ್ನೂ ಭಾರತ ಮೀರಿಸಿದೆ. ಆದರೂ ಫ್ರಾನ್ಸ್‌, ಜಪಾನ್‌, ಜರ್ಮನ್ನರಿಗಿಂತ ಭಾರತೀಯರ ತಲಾದಾಯ ಏಕೆ ಕಡಿಮೆಯಿದೆ ಅಂದರೆ, ಭಾರತದಲ್ಲಿ ಜನಸಂಖ್ಯೆ ಬಹಳ ಹೆಚ್ಚು.

ಇದರಲ್ಲಿ ಮೋದಿ ಸರ್ಕಾರದ ಪಾತ್ರವೇನು?

ಭಾರತದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಏರಿಸುವ ಗುರಿಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಾಕಿಕೊಂಡಿದೆ. ಇದೀಗ ದೇಶವು ಫ್ರಾನ್ಸ್‌ ಹಾಗೂ ಬ್ರಿಟನ್ನನ್ನು ಆರ್ಥಿಕತೆಯಲ್ಲಿ ಮೀರಿಸಿರುವುದರಲ್ಲೂ ಮೋದಿ ಸರ್ಕಾರದ ಪಾತ್ರ ದೊಡ್ಡದಿದೆ. 2014ರ ನಂತರ ಭಾರತದ ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಗೆ ಹೆಚ್ಚು ಮುಕ್ತವಾಗಿದೆ. ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶಗಳು ಹೆಚ್ಚಾಗಿವೆ.

ಹುಬ್ಬಳ್ಳಿಯಲ್ಲಿ ಬೃಹತ್‌ ಹೂಡಿಕೆದಾರರ ಸಮಾವೇಶ, 10000 ಕೋಟಿ ಬಂಡವಾಳ ನಿರೀಕ್ಷೆ!

ಉದ್ಯಮ ನಡೆಸಲು ಪ್ರಶಸ್ತವಾಗಿರುವ ದೇಶಗಳ ಪೈಕಿ ಭಾರತದ ರಾರ‍ಯಂಕಿಂಗ್‌ 77ಕ್ಕೆ ಏರಿಕೆಯಾಗಿದೆ. ಜಿಎಸ್‌ಟಿ ಜಾರಿಗೆ ಬಂದ ಮೇಲೆ ತೆರಿಗೆ ಸೋರಿಕೆ ಕಡಿಮೆಯಾಗಿ ಬೊಕ್ಕಸಕ್ಕೆ ಹಣ ಹರಿದುಬರುತ್ತಿದೆ. ಮೇಕ್‌ ಇನ್‌ ಇಂಡಿಯಾದಡಿ ನಿರೀಕ್ಷೆ ಮಾಡಿದ್ದಷ್ಟುಪ್ರಗತಿ ಆಗಿರದಿದ್ದರೂ ದೇಶದಲ್ಲಿ ಉತ್ಪಾದನೆ ಹೆಚ್ಚಿದೆ. ಸರ್ಕಾರ ನೀಡುವ ನೆರವು ನೇರವಾಗಿ ಜನರ ಕೈಗೆ ಸೇರುತ್ತಿರುವುದರಿಂದ ಜನರ ಜೀವನಮಟ್ಟಸುಧಾರಿಸುತ್ತಿದೆ. ದೇಶದ ಸಾರಿಗೆ, ಇಂಧನ ಹಾಗೂ ಮೂಲಸೌಕರ್ಯ ಕ್ಷೇತ್ರಗಳು ಗಣನೀಯವಾಗಿ ಸುಧಾರಿಸಿವೆ.

ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಷೇರನ್ನು ಖಾಸಗಿಗೆ ಮಾರುತ್ತಿರುವುದರಿಂದ ಆ ಕಂಪನಿಗಳು ಬೆಳವಣಿಗೆ ಹೊಂದುತ್ತಿವೆ ಮತ್ತು ದೇಶದ ಬೊಕ್ಕಸಕ್ಕೆ ಹಣ ಬರುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಮೇಲಿದ್ದ ಸುಸ್ತಿ ಸಾಲದ ಹೊರೆ ಕಡಿಮೆಯಾಗುತ್ತಿದೆ. ಇವೆಲ್ಲ ಉಪಕ್ರಮಗಳು ದೇಶದ ಆರ್ಥಿಕತೆಯನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುತ್ತಿವೆ.

ಈಗ ಟಾಪ್‌ 5 ಆರ್ಥಿಕತೆಗಳು

1. ಅಮೆರಿಕ - 22.20 ಲಕ್ಷ ಕೋಟಿ ಡಾಲರ್‌ (.1598 ಲಕ್ಷ ಕೋಟಿ)

ಅಮೆರಿಕವು ಸುಮಾರು 150 ವರ್ಷದಿಂದ ಜಗತ್ತಿನ ಅತಿದೊಡ್ಡ ಆರ್ಥಿಕತೆ ಎಂಬ ಕಿರೀಟ ಹೊತ್ತಿದೆ. ಜಗತ್ತಿನಲ್ಲೇ ಅತಿಹೆಚ್ಚು ನೈಸರ್ಗಿಕ ಸಂಪನ್ಮೂಲಗಳು ಅಮೆರಿಕದಲ್ಲಿವೆ.

2. ಚೀನಾ - 15.47 ಲಕ್ಷ ಕೋಟಿ ಡಾಲರ್‌ (.1114 ಲಕ್ಷ ಕೋಟಿ)

ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ, ಜಗತ್ತಿನ ನಂ.1 ಆರ್ಥಿಕತೆಯಾಗಲು ಅಮೆರಿಕಕ್ಕೆ ಸ್ಪರ್ಧೆಯೊಡ್ಡುತ್ತಿದೆ. 2050ರ ವೇಳೆಗೆ ಚೀನಾ ನಂ.1 ಆಗಲಿದೆ.

3. ಜಪಾನ್‌ - 5.50 ಲಕ್ಷ ಕೋಟಿ ಡಾಲರ್‌ (.396 ಲಕ್ಷ ಕೋಟಿ)

ಜಪಾನ್‌ ಪುಟ್ಟದೇಶವಾಗಿದ್ದರೂ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯಲು ಕಾರಣ ಎಲೆಕ್ಟ್ರಾನಿಕ್ಸ್‌ ಉಪಕರಣ ಉದ್ದಿಮೆಗಳು. 2008ರ ಆರ್ಥಿಕ ಹಿಂಜರಿಕೆಯ ನಂತರ ನಂತರ ಜಪಾನ್‌ನ ಬೆಳವಣಿಗೆ ಕುಂಠಿತವಾಗುತ್ತಿದೆ.

4. ಜರ್ಮನಿ - 4.16 ಲಕ್ಷ ಕೋಟಿ ಡಾಲರ್‌ (.299 ಲಕ್ಷ ಕೋಟಿ)

ಕೈಗಾರಿಕಾ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದ್ದ ಜರ್ಮನಿ ಇದೀಗ 4ನೇ ಕೈಗಾರಿಕಾ ಕ್ರಾಂತಿಯ ಹೊಸ್ತಿಲಿನಲ್ಲಿದೆ. ಕೈಗಾರಿಕೆಗಳಿಂದಲೇ ಜರ್ಮನಿ 4ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಜಗತ್ತಿನ ಪ್ರಮುಖ ಕಾರು, ಯಂತ್ರೋಪಕರಣ ಉದ್ದಿಮೆಗಳನ್ನು ಹೊಂದಿದೆ.

5. ಭಾರತ - 2.94 ಲಕ್ಷ ಕೋಟಿ ಡಾಲರ್‌ (.205 ಲಕ್ಷ ಕೋಟಿ)

ಫ್ರಾನ್ಸ್‌ ಹಾಗೂ ಬ್ರಿಟನ್ನನ್ನು ಹಿಂದಿಕ್ಕಿ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವನ್ನು 2024ರ ವೇಳೆಗೆ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯನ್ನಾಗಿ ಮಾಡಲು ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ಸದ್ಯ ಭಾರತವು ಜಗತ್ತಿನ 5ನೇ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯೂ ಹೌದು.

ಅತಿ ವೇಗವಾಗಿ ಬೆಳೆಯುತ್ತಿರುವ ಟಾಪ 5 ಆರ್ಥಿಕತೆಗಳು

1. ಗಯಾನಾ - ಶೇ.16.3

2. ಇಥಿಯೋಪಿಯಾ - ಶೇ.10.3

3. ರ್ವಾಂಡಾ - ಶೇ.7.5

4. ಬಾಂಗ್ಲಾದೇಶ - ಶೇ.6.5

5. ಭಾರತ - ಶೇ.5

ಇನ್ನಾರು ವರ್ಷದಲ್ಲಿ ಭಾರತ 4 ನೇ ಅತಿದೊಡ್ಡ ಆರ್ಥಿಕತೆ

ಮುಂದಿನ 15 ವರ್ಷಗಳ ಕಾಲ ಜಪಾನ್‌, ಜರ್ಮನಿ ಹಾಗೂ ಭಾರತ ದೇಶಗಳು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಲು ಸೆಣಸಾಡಲಿವೆ. ಹೇಗಿದ್ದರೂ ಇನ್ನು 2-3 ದಶಕಗಳ ಕಾಲ ಮೊದಲ ಸ್ಥಾನದಲ್ಲಿ ಅಮೆರಿಕ ಹಾಗೂ ಎರಡನೇ ಸ್ಥಾನದಲ್ಲಿ ಚೀನಾ ಇರಲಿವೆ.

2024 ಕ್ಕೆ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯಾಗುವ ಭಾರತದ ಕನಸು ಪೂರ್ಣ ಪ್ರಮಾಣದಲ್ಲಿ ಈಡೇರದಿದ್ದರೂ ಅದರ ಮುಂದಿನ ಎರಡು ವರ್ಷಗಳಲ್ಲಿ ಈಡೇರಲಿದೆ ಎಂದು ಬ್ರಿಟನ್‌ ಮೂಲದ ಸೆಂಟರ್‌ ಫಾರ್‌ ಎಕನಾಮಿಕ್ಸ್‌ ಆ್ಯಂಡ್‌ ಬಿಸಿನೆಸ್‌ ರೀಸಚ್‌ರ್‍ ಸಂಸ್ಥೆ ಹೇಳಿದೆ. ಆಗ ಭಾರತವು ಜರ್ಮನಿಯನ್ನು ಹಿಂದಿಕ್ಕಿ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.

ಆದರೀಗ ಆರ್ಥಿಕತೆಯ ಮೇಲೆ ಕವಿದಿದೆ ಕಾರ್ಮೋಡ!

ಭಾರತವು ಫ್ರಾನ್ಸ್‌ ಹಾಗೂ ಬ್ರಿಟನ್ನನ್ನು ಹಿಂದಿಕ್ಕಿದೆ ಎಂಬ ವರದಿ ತಯಾರಾಗಿರುವುದು 2019ರ ದ್ವಿತೀಯಾರ್ಧಕ್ಕಿಂತ ಹಿಂದಿನ ಅಂಕಿಅಂಶಗಳ ಆಧಾರದ ಮೇಲೆ. ಆದರೆ, 2019ರ ಅಂತ್ಯದಲ್ಲಿ ಹಾಗೂ ಈ ವರ್ಷ ಭಾರತದ ಆರ್ಥಿಕತೆಯಲ್ಲಿ ತೀವ್ರ ಹಿಂಜರಿಕೆ ಉಂಟಾಗಿದೆ. ಹೀಗಾಗಿ 2024ಕ್ಕೆ ದೇಶವನ್ನು 5 ಲಕ್ಷ ಕೋಟಿ ರು. ಆರ್ಥಿಕತೆ ಮಾಡಲು ಸಾಧ್ಯವೇ ಇಲ್ಲ ಎಂದು ಆರ್‌ಬಿಐನ ಮಾಜಿ ಗರ್ವನರ್‌ ಸಿ.ರಂಗರಾಜನ್‌ರಂತಹ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

2019 ರ ಅಂಕಿಅಂಶಗಳನ್ನು ಸಂಪೂರ್ಣವಾಗಿ ಕ್ರೋಢೀಕರಿಸಿದ ಮೇಲೆ ಭಾರತದ ಆರ್ಥಿಕತೆಯ ನಿಜವಾದ ಚಿತ್ರಣ ಸಿಗಲಿದೆ. ಆ ಕೆಲಸ ಇನ್ನೂ ಆಗಿಲ್ಲ. ಜೊತೆಗೆ, ನಿಧಾನಗತಿಯ ಅಭಿವೃದ್ಧಿ, ಬಂಡವಾಳ ಹೂಡಿಕೆಯಲ್ಲಿ ಇಳಿಕೆ, ಉತ್ಪಾದನೆ ಕುಸಿತ, ನಿರುದ್ಯೋಗದ ಪ್ರಮಾಣ ಹೆಚ್ಚಳ, ಆಟೋಮೊಬೈಲ್‌ ಹಾಗೂ ರಿಯಲ್‌ ಎಸ್ಟೇಟ್‌ನಂತಹ ಪ್ರಮುಖ ಕ್ಷೇತ್ರಗಳು ನೆಲಕಚ್ಚುತ್ತಿರುವುದು ದೇಶಕ್ಕೆ ಸವಾಲಾಗಿ ಪರಿಣಮಿಸಲಿದೆ.

ಮೇಲಾಗಿ, ಜಾಗತಿಕ ಮಾರುಕಟ್ಟೆಯ ಮೇಲೆ ಅಮೆರಿಕ ಹಾಗೂ ಚೀನಾ ತಮ್ಮ ಹಿಡಿತವನ್ನು ಇನ್ನಷ್ಟುಬಿಗಿಗೊಳಿಸುತ್ತಿವೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಆಟಗಾರನಾಗುವ ಭಾರತದ ಕನಸು ಸುಲಭಕ್ಕೆ ಈಡೇರುವ ಲಕ್ಷಣಗಳಿಲ್ಲ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಭಾರತ ನಂ.1 ಆಗೋದು ಯಾವಾಗ?

ಆರ್ಥಿಕ ತಜ್ಞರ ಪ್ರಕಾರ ಇದನ್ನು ಸದ್ಯಕ್ಕೆ ಊಹಿಸಲೂ ಸಾಧ್ಯವಿಲ್ಲ. 2050ರ ವೇಳೆಗೆ ಅಮೆರಿಕವನ್ನು ಮೀರಿಸಿ ಚೀನಾ ನಂ.1 ಆರ್ಥಿಕತೆ ಆಗಲಿದೆ. ಭಾರತವೇನಿದ್ದರೂ ಅದರ ನಂತರ ಪ್ರಯತ್ನಿಸಬೇಕಷ್ಟೆ!

ಫೆಬ್ರವರಿ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ