ಫ್ರಾನ್ಸ್, ಇಂಗ್ಲೆಂಡ್ ಹಿಂದಿಕ್ಕಿದ ಭಾರತ: ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶ!
ಫ್ರಾನ್ಸ್, ಇಂಗ್ಲೆಂಡ್ ಹಿಂದಿಕ್ಕಿದ ಭಾರತ| ಭಾರತವೀಗ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯ ದೇಶ| ವರ್ಲ್ಡ್ ಪಾಪುಲೇಷನ್ ರಿವ್ಯೂ ವರದಿಯಲ್ಲಿ ಉಲ್ಲೇಖ
ನವದೆಹಲಿ[ಫೆ.18]: ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಗಳ ಪೈಕಿ ಒಂದಾದ ಭಾರತ, ವಿಶ್ವದಲ್ಲೇ 5ನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಅಮೆರಿಕದ ಚಿಂತಕರ ಚಾವಡಿಯ ವರದಿಯೊಂದು ಹೇಳಿದೆ.
205 ಲಕ್ಷ ಕೋಟಿ ರು. (2.94 ಲಕ್ಷ ಕೋಟಿ ಡಾಲರ್) ಆರ್ಥಿಕತೆಯೊಂದಿಗೆ 2019ರಲ್ಲೇ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಈ ಹಾದಿಯಲ್ಲಿ ಅದು ಬ್ರಿಟನ್ (2.83 ಲಕ್ಷ ಕೋಟಿ ಡಾಲರ್) ಮತ್ತು ಫ್ರಾನ್ಸ್ (2.71 ಲಕ್ಷ ಕೋಟಿ ಡಾಲರ್) ಆರ್ಥಿಕತೆಯನ್ನು ಹಿಂದಿಕ್ಕಿದೆ ಎಂದು ಅಮೆರಿಕ ಮೂಲದ ವಲ್ಡ್‌ರ್ ಪಾಪ್ಯುಲೇಷನ್ ರಿವ್ಯೂ ತನ್ನ ವರದಿಯಲ್ಲಿ ತಿಳಿಸಿದೆ. ಭಾರತ ತನ್ನ ಹಿಂದಿನ ನಿರಂಕುಶಾಧಿಕಾರಿ ನೀತಿಗಳ ಬದಲಾಗಿ ಮುಕ್ತ ಮಾರುಕಟ್ಟೆಆಧರಿತ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಇದೆ ವೇಳೆ ಖರೀದಿ ಸಾಮರ್ಥ್ಯ ಆಧಾರದಲ್ಲಿ ಭಾರತ 10.51 ಲಕ್ಷ ಕೋಟಿ ಡಾಲರ್‌ನೊಂದಿಗೆ ಜಪಾನ್ ಮತ್ತು ಜರ್ಮನಿಯನ್ನೂ ಹಿಂದಿಕ್ಕಿದೆ. ಭಾರತದ ಆರ್ಥಿಕತೆಯಲ್ಲಿ ಶೇ.60ರಷ್ಟುಪಾಲು ಸೇವಾ ವಲಯದ್ದೇ ಆಗಿದ್ದು, ಒಟ್ಟು ಉದ್ಯೋಗ ಸೃಷ್ಟಿಯಲ್ಲಿ ಶೇ.28ರಷ್ಟುಪಾಲು ಹೊಂದಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ 1990ರ ದಶಕದಲ್ಲಿ ಆರಂಭವಾದ ಆರ್ಥಿಕ ಉದಾರೀಕರಣದಿಂದಾಗಿ ವಿದೇಶ ವ್ಯಾಪಾರ ಮತ್ತು ಹೂಡಿಕೆ ಮೇಲಿನ ತಗ್ಗಿದ ನಿಯಂತ್ರಣ ಕ್ರಮಗಳು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ ಕ್ರಮಗಳಿಂದಾಗಿ ಆರ್ಥಿಕ ಬೆಳವಣಿಗೆ ಗಮನಾರ್ಹವಾಗಿ ಹೆಚ್ಚಾಗಿದೆ.
ಭಾರತದ ಆರ್ಥಿಕತೆಯಲ್ಲಿ ಶೇ 60ರಷ್ಟು ಸೇವಾ ವಲಯವು ಪಾಲು ಹೊಂದಿದ್ದು, ಇದು ಅತ್ಯಂತ ತ್ವರಿತ ರೀತಿಯಲ್ಲಿ ಪ್ರಗತಿ ದಾಖಲಿಸುತ್ತಿದೆ. ಉತ್ಪಾದನೆ ಮತ್ತು ಕೃಷಿ ವಲಯಗಳು ಆರ್ಥಿಕತೆಯ ಪ್ರಮುಖ ಭಾಗಗಳಾಗಿವೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.