ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿದ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್, ಈ ಒಪ್ಪಂದವು ಭಾರತ ಮತ್ತು ಫ್ರಾನ್ಸ್ ನಡುವಿನ ಸೌಹಾರ್ದ ಸಂಬಂಧದಲ್ಲಿ ಒಂದು ಮೈಲಿಗಲ್ಲು ಎಂದು ಹೇಳಿದ್ದಾರೆ.

ಹೊಸದಿಲ್ಲಿ (ಫೆಬ್ರವರಿ 14, 2023): ಏರ್‌ ಇಂಡಿಯಾ ಸ್ವಾಧೀನ ಪಡಿಸಿಕೊಂಡಿರುವ ಟಾಟಾ ಸಮೂಹವು ಏರ್‌ಬಸ್‌ನಿಂದ 250 ವಿಮಾನಗಳನ್ನು ಖರೀದಿಸಲಿದ್ದು, ಇದು ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದವಾಗಿದೆ. ಈ ಮೆಗಾ ಡೀಲ್‌ನಲ್ಲಿ 40 A350 ವೈಡ್-ಬಾಡಿ ದೀರ್ಘ-ಶ್ರೇಣಿಯ ವಿಮಾನಗಳು ಮತ್ತು 210 ನ್ಯಾರೋ-ಬಾಡಿ (ಕಿರಿದಾದ ದೇಹದ) ವಿಮಾನಗಳನ್ನು ಖರೀದಿಸಲು ಟಾಟಾ ಸಮೂಹ ಒಡೆತನದ ಏರ್‌ ಇಂಡಿಯಾ ಮುಂದಾಗಿದೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ರತನ್‌ ಟಾಟಾ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಇತರ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಒಪ್ಪಂದ ಕುದುರಿಸಲಾಗಿದೆ. ಇನ್ನು, ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದ ಏರ್‌ಬಸ್ ಮುಖ್ಯ ಕಾರ್ಯನಿರ್ವಾಹಕ ಗುಯಿಲೌಮ್ ಫೌರಿ ಅವರು "ಏರ್ ಇಂಡಿಯಾದ ಪುನರುಜ್ಜೀವನಕ್ಕೆ ಸಹಾಯ ಮಾಡಲು ಏರ್‌ಬಸ್‌ಗೆ ಇದು ಐತಿಹಾಸಿಕ ಕ್ಷಣವಾಗಿದೆ" ಎಂದು ಹೇಳಿದರು.

ಇದನ್ನು ಓದಿ: ಒಂದೇ ಸಲ 500 ವಿಮಾನ ಖರೀದಿಗೆ Air India ರೆಡಿ..! ಇದು ಜಗತ್ತಿನ ಅತಿದೊಡ್ಡ ವಿಮಾನ ಖರೀದಿ ಡೀಲ್

ಇನ್ನು, ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿದ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್, "ಈ ಒಪ್ಪಂದವು ಭಾರತ ಮತ್ತು ಫ್ರಾನ್ಸ್ ನಡುವಿನ ಸೌಹಾರ್ದ ಸಂಬಂಧದಲ್ಲಿ ಒಂದು ಮೈಲಿಗಲ್ಲು" ಎಂದು ಹೇಳಿದ್ದಾರೆ. ಈ ವೇಳೆ ಪ್ರಧಾನಿ ಮೋದಿ, ರತನ್‌ ಟಾಟಾ ಜತೆಗೆ ಕೇಂದ್ರ ಸಚಿವರಾದ ಪಿಯೂಶ್‌ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಟಾಟಾ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಸಹ ಭಾಗವಹಿಸಿದ್ದರು.

ಅಲ್ಲದೆ, ಒಪ್ಪಂದದ ಬಳಿಕ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ವಾಯುಯಾನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ದೇಶವಾಗಲಿದೆ ಎಂದು ಹೇಳಿದರು. ಅಲ್ಲದೆ, ಮುಂದಿನ 15 ವರ್ಷಗಳಲ್ಲಿ ಭಾರತಕ್ಕೆ 2,500 ವಿಮಾನಗಳು ಬೇಕಾಗುತ್ತವೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಇತಿಹಾಸದ ಅತಿದೊಡ್ಡ ವಿಮಾನ ಒಪ್ಪಂದಕ್ಕೆ ಸಜ್ಜಾಗುತ್ತಿರುವ ಏರ್‌ಇಂಡಿಯಾ!

470 ವಿಮಾನಗಳ ಖರೀದಿಗೆ ಮುಂದಾಗಿರುವ ಏರ್‌ ಇಂಡಿಯಾದ ಬೃಹತ್‌ ಪ್ಲ್ಯಾನ್‌ನ ಈ ಭಾಗದಲ್ಲಿ, 250 ವಿಮಾನಗಳ ಏರ್‌ಬಸ್‌ನೊಂದಿಗಿನ ಒಪ್ಪಂದವು ಸಹ ಒಂದು. ಇದು ಬೋಯಿಂಗ್‌ನಿಂದ 220 ವಿಮಾನಗಳ ಆರ್ಡರ್ ಅನ್ನು ಸಹ ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 

A350 ಕುಟುಂಬವು ಎರಡು ಆವೃತ್ತಿಗಳನ್ನು ಹೊಂದಿದ್ದು, ಈ ಪೈಕಿ A350-900, ಮತ್ತು ಉದ್ದವಾದ ವಿಮಾನ A350-1000 ಎಂದು ತಿಳಿದುಬಂದಿದೆ. ಇನ್ನು, A350s ಯಾವುದೇ ಸೆಕ್ಟರ್‌ನಲ್ಲಿ ಕಡಿಮೆ-ಪ್ರಯಾಣದಿಂದ ಹಿಡಿದು 17,000 ಕಿ.ಮೀ.ವರೆಗಿನ ಅತಿ ದೀರ್ಘ ಪ್ರಯಾಣ ಮಾರ್ಗಗಳಲ್ಲಿ ಸಹ ಪರಿಣಾಮಕಾರಿಯಾಗಿ ಹಾರುತ್ತದೆ. ಅಲ್ಲದೆ, ವಿಶಿಷ್ಟವಾದ 3-ವರ್ಗದ ಸಂರಚನೆಗಳಲ್ಲಿ 300 ರಿಂದ 410 ಪ್ರಯಾಣಿಕರನ್ನು ಮತ್ತು ಏಕ-ವರ್ಗದ ವಿನ್ಯಾಸದಲ್ಲಿ 480 ಪ್ರಯಾಣಿಕರನ್ನು ಹೊತ್ತೊಯ್ಯಬಹುದು ಎಂದು ಏರ್‌ಬಸ್ ಹೇಳಿದೆ. 

ಇದನ್ನೂ ಓದಿ: ಬೆಂಗಳೂರು to ಸ್ಯಾನ್‌ ಫ್ರಾನ್ಸಿಸ್ಕೋ, ಸಿಲಿಕಾನ್ ವ್ಯಾಲಿ ನಡುವೆ ಏರ್ ಇಂಡಿಯಾ ವಿಮಾನ ಸೇವೆ ಪುನರ್ ಆರಂಭ!

ಏರ್‌ಬಸ್‌ನ ಕಿರಿದಾದ ದೇಹದ ಅಥವಾ ನ್ಯಾರೋ ಬಾಡಿ ವಿಮಾನಗಳಲ್ಲಿ A320 ಮತ್ತು A220 ಕುಟುಂಬದ ವಿಮಾನಗಳು ಸೇರಿವೆ. ಭಾರತದಲ್ಲಿ ಅನೇಕ ವಿಮಾನಯಾನ ಸಂಸ್ಥೆಗಳು ಈಗಾಗಲೇ A320 ಕುಟುಂಬವದ ವಿಮಾನಗಳನ್ನು ಹಾರಿಸುತ್ತಿವೆ ಎಂದು ತಿಳಿದುಬಂದಿದೆ. 

ಬೃಹತ್‌ ಖರೀದಿ ಏಕೆ..?
ಕೋವಿಡ್‌ ನಂತರ ಜಾಗತಿಕ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದೆ. ಪ್ರವಾಸೋದ್ಯಮ ಚೇತರಿಸಿಕೊಂಡಿರುವ ಕಾರಣ ವಿಮಾನಯಾನ ಉದ್ಯಮ ಕೂಡಾ ಭಾರಿ ಪ್ರಗತಿಯ ನಿರೀಕ್ಷೆಯಲ್ಲಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ದೇಶ ಮತ್ತು ವಿದೇಶಿ ಯಾತ್ರಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿರುವ ಕಾರಣ ಇದರ ಲಾಭವನ್ನು ಪಡೆಯುವ ಉದ್ದೇಶದಿಂದ ಏರ್‌ ಇಂಡಿಯಾ ಹೊಸ ವಿಮಾನಗಳ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಟಾಟಾ ಗ್ರೂಪ್ಸ್ ಒಡೆತನದ ಏರ್ ಇಂಡಿಯಾಗೆ ಅಮೆರಿಕದಿಂದ 987 ಕೋಟಿ ರೂ ದಂಡ!