ಒಂದೇ ಸಲ 500 ವಿಮಾನ ಖರೀದಿಗೆ Air India ರೆಡಿ..! ಇದು ಜಗತ್ತಿನ ಅತಿದೊಡ್ಡ ವಿಮಾನ ಖರೀದಿ ಡೀಲ್
ಒಂದೇ ಸಲ 500 ವಿಮಾನ ಖರೀದಿಗೆ ಏರ್ ಇಂಡಿಯಾ ಸಿದ್ಧ ಎನ್ನಲಾಗುತ್ತಿದ್ದು, ಬೋಯಿಂಗ್, ಏರ್‌ಬಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಇದು ಸಾಧ್ಯವಾದಲ್ಲಿ, ಜಗತ್ತಿನ ಅತಿದೊಡ್ಡ ವಿಮಾನ ಖರೀದಿ ಡೀಲ್ ಸಹ ಆಗಲಿದೆ.
ನವದೆಹಲಿ: ಸರ್ಕಾರದಿಂದ (Government) ಏರ್ ಇಂಡಿಯಾ (Air India) ಖರೀದಿಸಿದ ಬಳಿಕ ದೇಶದ ವಿಮಾನಯಾನ ವಲಯದಲ್ಲಿ ಹೊಸ ಕ್ರಾಂತಿಗೆ ಮುಂದಾಗಿರುವ ಖಾಸಗಿ ವಲಯದ ಟಾಟಾ ಗ್ರೂಪ್ (Tata Group), ಒಂದೇ ಸಲ 500 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ದಶಕಗಳ ಹಿಂದೆ ‘ಅಮೆರಿಕನ್ ಏರ್‌ಲೈನ್ಸ್’ ಬೋಯಿಂಗ್ (Boeing) ಜೊತೆ 460 ವಿಮಾನಗಳ ಪೂರೈಕೆಗೆ ಒಪ್ಪಂದ ಮಾಡಿಕೊಂಡಿದ್ದೇ ಇದುವರೆಗಿನ ಗರಿಷ್ಠವಾಗಿತ್ತು. ಹೀಗಾಗಿ ಒಂದು ವೇಳೆ ಏರ್ ಇಂಡಿಯಾ 500 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದೇ ಆದಲ್ಲಿ ಅದು ಐತಿಹಾಸಿಕ ಮತ್ತು ಸಾರ್ವಕಾಲಿಕ ದಾಖಲೆಯಾಗಿದೆ. ಜೊತೆಗೆ ಇದು ಲಕ್ಷಾಂತರ ಕೋಟಿ ಮೌಲ್ಯದ ಒಪ್ಪಂದವೂ ಆಗಲಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ತನ್ನ ಪಾಲುದಾರಿಕೆ ಹೊಂದಿದ್ದ ವಿಸ್ತಾರಾ ಏರ್‌ಲೈನ್ಸ್ (Vistara Airlines) ಅನ್ನು ಏರ್ ಇಂಡಿಯಾದಲ್ಲಿ ವಿಲೀನ ಮಾಡಲು ನಿರ್ಧರಿಸಲಾಗಿತ್ತು. ಅದರ ಜೊತೆಗೆ ಟಾಟಾ ಪಾಲುದಾರಿಕೆ ಹೊಂದಿರುವ ಏರ್ ಏಷ್ಯಾವನ್ನೂ (Air Asia) ಏರ್ ಇಂಡಿಯಾದಲ್ಲಿ ವಿಲೀನ ಮಾಡುವ ಪ್ರಸ್ತಾಪ ಇದೆ. ಈ ಎಲ್ಲಾ ಒಪ್ಪಂದಗಳು ಜಾರಿಯಾದಲ್ಲಿ ಏರ್ ಇಂಡಿಯಾ 220ಕ್ಕೂ ಹೆಚ್ಚು ವಿಮಾನಗಳನ್ನು ತನ್ನ ತೆಕ್ಕೆಯಲ್ಲಿ ಹೊಂದಲಿದೆ. ಇದರ ಜೊತೆಗೆ ಹೊಸದಾಗಿ ಅಮೆರಿಕದ ಬೋಯಿಂಗ್ ಮತ್ತು ಫ್ರಾನ್ಸ್‌ನ ಏರ್‌ಬಸ್ (Airbus) ಕಂಪನಿಯಿಂದ 500 ವಿಮಾನಗಳ ಖರೀದಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಏರ್ ಇಂಡಿಯಾ ಅಥವಾ ವಿಮಾನಯಾನ ಕಂಪನಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನು ಓದಿ: ಬೆಂಗಳೂರು to ಸ್ಯಾನ್ ಫ್ರಾನ್ಸಿಸ್ಕೋ, ಸಿಲಿಕಾನ್ ವ್ಯಾಲಿ ನಡುವೆ ಏರ್ ಇಂಡಿಯಾ ವಿಮಾನ ಸೇವೆ ಪುನರ್ ಆರಂಭ!
ಬೃಹತ್ ಖರೀದಿ ಏಕೆ?:
ಕೋವಿಡ್ ನಂತರ ಜಾಗತಿಕ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದೆ. ಪ್ರವಾಸೋದ್ಯಮ ಚೇತರಿಸಿಕೊಂಡಿರುವ ಕಾರಣ ವಿಮಾನಯಾನ ಉದ್ಯಮ ಕೂಡಾ ಭಾರಿ ಪ್ರಗತಿಯ ನಿರೀಕ್ಷೆಯಲ್ಲಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ದೇಶ ಮತ್ತು ವಿದೇಶಿ ಯಾತ್ರಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿರುವ ಕಾರಣ ಇದರ ಲಾಭವನ್ನು ಪಡೆಯುವ ಉದ್ದೇಶದಿಂದ ಏರ್ ಇಂಡಿಯಾ ಹೊಸ ವಿಮಾನಗಳ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ.
ಯಾವ ವಿಮಾನ ಖರೀದಿ?:
ಬೋಯಿಂಗ್ ಕಂಪನಿಯಿಂದ 400 ನ್ಯಾರೋಬಾಡಿ (ಚಿಕ್ಕಗಾತ್ರದ) ಮತ್ತು 100 ವೈಡ್‌ಬಾಡಿ (ಸ್ವಲ್ಪ ಹೆಚ್ಚು ಅಗಲ) ವಿಮಾನಗಳ ಖರೀದಿಗೆ ಏರ್‌ಇಂಡಿಯಾ ನಿರ್ಧರಿಸಿದೆ. ಒಮ್ಮೆಗೆ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿದರೆ ಹೆಚ್ಚಿನ ರಿಯಾಯಿತಿಯೂ ಸಿಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಟಾಟಾ ಗ್ರೂಪ್ಸ್ ಒಡೆತನದ ಏರ್ ಇಂಡಿಯಾಗೆ ಅಮೆರಿಕದಿಂದ 987 ಕೋಟಿ ರೂ ದಂಡ!
ಪೂರೈಕೆ ಸಾಧ್ಯವೇ?:
ಯಾವುದೇ ಕಂಪನಿ ಒಮ್ಮೆಗೆ ಇಷ್ಟು ವಿಮಾನ ಪೂರೈಸುವುದು ಅಸಾಧ್ಯ. ಆದರೆ ಇತ್ತೀಚೆಗೆ ಅಮೆರಿಕದ ಬೋಯಿಂಗ್ ಕಂಪನಿ 50 ಬಿ737 ಮ್ಯಾಕ್ಸ್ ವಿಮಾನಗಳನ್ನು ಚೀನಾ ಏರ್‌ಲೈನ್ಸ್‌ಗಾಗಿ ತಯಾರಿಸಿತ್ತು. ಆದರೆ ಚೀನಾದ ಸರ್ಕಾರ ಮ್ಯಾಕ್ಸ್ ವಿಮಾನಗಳ ಖರೀದಿಗೆ ಕೊನೆಯ ಹಂತದಲ್ಲಿ ನಿರಾಕರಿಸಿತು. ಇದರ ಲಾಭ ಟಾಟಾ ಕಂಪನಿಗೆ ಆಗುತ್ತಿದೆ ಎನ್ನಲಾಗಿದೆ.
ಟಾಟಾ ಸಾಹಸ
- ಸರ್ಕಾರದಿಂದ ಏರ್ ಇಂಡಿಯಾವನ್ನು ಖರೀದಿಸಿರುವ ಟಾಟಾ ಕಂಪನಿ
- ಕಂಪನಿಯನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಲು ಟಾಟಾದಿಂದ ಸಿದ್ಧತೆ
- 400 ಸಣ್ಣ ವಿಮಾನ, 100 ಬೃಹತ್ ವಿಮಾನ ಖರೀದಿಗೆ ಒಪ್ಪಂದ ಸಾಧ್ಯತೆ
- ಈಗ ಒಪ್ಪಂದ ಮಾಡಿಕೊಂಡರೂ ಹಂತ ಹಂತವಾಗಿ ವಿಮಾನ ಆಗಮನ
- ಅಮೆರಿಕನ್ ಏರ್‌ಲೈನ್ಸ್ 460 ವಿಮಾನ ಖರೀದಿಸಿದ್ದೇ ಈವರೆಗಿನ ದಾಖಲೆ
ಇದನ್ನೂ ಓದಿ: ಏರ್ ಇಂಡಿಯಾದ ಎಲ್ಲ ಏರ್ ಲೈನ್ಸ್ ಗಳಿಗೂ ಇನ್ಮುಂದೆ ಗುರುಗ್ರಾಮ ಕೇಂದ್ರ ಕಚೇರಿ!