ಹುಬ್ಬಳ್ಳಿಯಲ್ಲಿ ಉದ್ಯಮಿಯೊಬ್ಬರು ಅಮೆಜಾನ್‌ನಲ್ಲಿ ₹60,990 ಮೌಲ್ಯದ ಕ್ಯಾಮರಾ ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ಕ್ಯಾಮರಾ ಬದಲು ವಾಷಿಂಗ್ ಪೌಡರ್ ಬಂದಿದ್ದು, ಈ ಬಗ್ಗೆ ಅಮೆಜಾನ್ ಗ್ರಾಹಕ ಸೇವೆಯಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ಅವರು ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದೇ ಒಂದು, ಬರೋದೇ ಇನ್ನೊಂದು. ಇವೇನೂ ಹೊಸ ವಿಷಯವಲ್ಲ. ಅದರಲ್ಲಿಯೂ ಅತಿ ದೊಡ್ಡ ಇ-ಕಾಮರ್ಸ್​ ಮಾರ್ಕೆಟ್​ ಅಮೆಜಾನ್​ನಲ್ಲಿ ಆಗ್ತಿರೋ ಅವಾಂತರಗಳು ಒಂದೆರಡಲ್ಲ. ಆದರೆ ಈ ರೀತಿ ಮೋಸ ಹೋದ ಮೇಲೆ ಆ ಕಂಪೆನಿಯ ಕಸ್ಟಮರ್​ ಕೇರ್​ಗೆ ಕಾಲ್ ಮಾಡಿದ್ರೆ ಅಲ್ಲಿ ಪಿಕ್​ ಮಾಡೋರೂ ಇರಲ್ಲ. ಹಲವು ಸಾವಿರ ರೂಪಾಯಿ ಮೊದಲೇ ಪಾವತಿ ಮಾಡಿದವರ ಗೋಳು ಮಾತ್ರ ದೇವರಿಗೇ ಪ್ರೀತಿ ಎನ್ನುವಂತಾಗುತ್ತದೆ. ಇದೀಗ ಹುಬ್ಬಳ್ಳಿಯ ನಿವಾಸಿ ಒಬ್ಬರಿಗೆ ಇದೇ ರೀತಿ ಆಗಿದ್ದು, ಅವರು ಅಮೆಜಾನ್​ಗೆ ಕರೆ ಮಾಡಿ ಮಾಡಿ ಸಾಕಾಗಿ ಕೊನೆಗೆ ಮಾಧ್ಯಮದವರ ಮೊರೆ ಹೋಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉದ್ಯಮಿಗೆ ಮೋಸ

ಅಷ್ಟಕ್ಕೂ ಆಗಿದ್ದೇನೆಂದರೆ, ಹುಬ್ಬಳ್ಳಿಗೆ ಬಂದಿದ್ದ ಶಾರ್ಜಾದ ಅಲ್ಫ್ರೆಡ್ ಎನ್ನುವ ಉದ್ಯಮಿಯೊಬ್ಬರು ಅಮೆಜಾನ್‌ನಲ್ಲಿ 60,990 ರೂಪಾಯಿ ಬೆಲೆಯ ಕ್ಯಾಂಡ್​ ಕ್ಯಾಮರಾ ಆರ್ಡರ್ ಮಾಡಿದ್ದರಂತೆ. ಡೆಬಿಟ್​ ಕಾರ್ಡ್​ ಮೂಲಕ ಹಣವನ್ನೂ ಪಾವತಿಸಿಯಾಗಿದೆ. ಆದರೆ ಆರ್ಡರ್​ ಬಂದು ತೆರೆದಾಗ ಶಾಕ್​ ಆಗಿದ್ದಾರೆ. ಏಕೆಂದರೆ ಅಲ್ಲಿ ಇದ್ದುದು ವಾಷಿಂಗ್​ ಪೌಡರ್​. ವಿದೇಶದಿಂದ ಬರುವ ಸ್ನೇಹಿತನಿಗೆ ಗಿಫ್ಟ್​ ನೀಡಲು ಕ್ಯಾಮೆರಾ ಆರ್ಡರ್​ ಮಾಡಿದ್ರೆ, ವಾಷಿಂಗ್ ಪೌಡರ್ ಪ್ಯಾಕೇಟ್‌ಗಳನ್ನು ನೋಡಿ ಸುಸ್ತಾಗಿದ್ದಾರೆ.

ಕಸ್ಟಮರ್​ ಕೇರ್​ ಸೈಲೆಂಟ್​

ಕೂಡಲೇ ಅಮೆಜಾನ್​ನ ಕಸ್ಟಮರ್​ ಕೇರ್​ಗೆ ಕರೆ ಮಾಡಿದ್ದಾರೆ. ಆದರೆ ಬಹುತೇಕ ಎಲ್ಲಾ ಕಸ್ಟಮರ್​ ಕೇರ್​ ಹಣೆಬರಹದ ರೀತಿಯಲ್ಲಿಯೇ ಇಲ್ಲಿಯೂ ಆಗಿದೆ. ರಿಂಗ್​ ಆಗುತ್ತದೆಯೇ ವಿನಾ ಎತ್ತುವವರು ಯಾರೂ ಇರಲ್ಲ. ರಿಂಗ್ ಆಗದಿದ್ದರೆ ಬಿಜಿ ಬರುತ್ತದೆ. ಆದರೆ ಮತ್ತೊಮ್ಮೆ ರಿಂಗ್​ ಆದರೆ ಅಲ್ಲಿ ನೋ ರೆಸ್​ಪಾನ್ಸ್​. ಇವರಿಗೆ ಹಾಗೆಯೇ ಆಗಿದ್ದರಿಂದ ರೇಗಿ ಹೋಗಿದ್ದಾರೆ. ಕೊನೆಗೆ ಹರಸಾಹಸ ಪಟ್ಟು ಅಮೆಜಾನ್​ಗೆ ದೂರು ನೀಡಿದ್ದಾರೆ.

ಮಾಧ್ಯಮದವರ ಮುಂದೆ ದೂರು

ಕೊನೆಗೆ ತುಂಬಾ ಪ್ರಯತ್ನದ ಬಳಿಕ ಇನ್ನೊಂದು ವಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಉತ್ತರ ಸಿಕ್ಕಿತಂತೆ. ಅದರಿಂದ ಕೋಪಗೊಂಡ ಅವರು ಮಾಧ್ಯಮಗಳನ್ನು ಕರೆಸಿ ತಮಗಾಗಿರುವ ವಂಚನೆಯ ಬಗ್ಗೆ ಮಾತನಾಡಿದ್ದಾರೆ. ತಾವು ತಂಗಿರುವ ಹೋಟೆಲ್​ ವಿಳಾಸಕ್ಕೆ ಆರ್ಡರ್​ ಮಾಡಿದ್ದರು. ಎರಡು ದಿನಗಳ ಬಳಿಕ ಪಾರ್ಸೆಲ್​ ಬಂದಿದೆ. ತೆರೆದುನೋಡಿದಾಗ, ಕ್ಯಾಮರಾ ಬದಲು, 2 ಪಾಕೆಟ್ ವಾಷಿಂಗ್ ಪೌಡರ್ ಇರೋದು ಕಂಡಿದೆ. ಈ ಬಗ್ಗೆ ಅಮೆಜಾನ್​ಗೆ ದೂರು ನೀಡಿದ್ರೂ ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಅವರು ನೋವಿನಿಂದ ನುಡಿದಿದ್ದಾರೆ. ದುಬೈನಲ್ಲಿ ಇದ್ದಾಗ ಸಾಕಷ್ಟು ವಸ್ತು ಅಮೆಜಾನ್​ನಿಂದ ಖರೀದಿ ಮಾಡಿದ್ದೇನೆ. ಆದ್ರೆ ಅಲ್ಲಿ ಸಮಸ್ಯೆ ಆಗ್ಲಿಲ್ಲ. ಇಲ್ಲಿ ಮಾತ್ರ ಮೋಸ ಆಯ್ತು ಎಂದಿದ್ದಾರೆ.