ಷೇರು ಮಾರುಕಟ್ಟೆ ಬಗ್ಗೆ ಜ್ಞಾನ ಇಲ್ಲದೆ ಹೂಡಿಕೆ ಮಾಡೋದು ತಪ್ಪು. ಅಲ್ಪಸ್ವಲ್ಪ ಜ್ಞಾನದ ಜೊತೆ ಅಲ್ಪಸ್ವಲ್ಪ ಹಣ ಕೂಡ ಪ್ರಯೋಜನಕ್ಕೆ ಬರೋದಿಲ್ಲ. ಎಷ್ಟು ಹೂಡಿಕೆ ಮಾಡ್ಬೇಕು ಗೊತ್ತಾ?

ಷೇರು ಮಾರುಕಟ್ಟೆ (Stock market ) ಯಲ್ಲಿ ಹಣ ಹೂಡಿಕೆ (investment) ಮಾಡೋರ ಸಂಖ್ಯೆ ಹೆಚ್ಚಾಗಿದೆ. ಇದು ಒಳ್ಳೆ ವಿಚಾರ. ಆದ್ರೆ ಆರಂಭದಲ್ಲಿ ಎಷ್ಟು ಹೂಡಿಕೆ ಮಾಡ್ತಿದ್ದೀರಿ? ನಮ್ಮ ದೇಶದಲ್ಲಿ 10 – 20 ಸಾವಿರ ರೂಪಾಯಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಹೆಚ್ಚಿನ ಆದಾಯ ನಿರೀಕ್ಷೆ ಮಾಡೋರ ಸಂಖ್ಯೆ ಹೆಚ್ಚಿದೆ. ಆದ್ರೆ ಹತ್ತರಿಂದ 20 ಸಾವಿರ ರೂಪಾಯಿ ಹೂಡಿಕೆ ಮಾಡಿ ದೊಡ್ಡ ಮಟ್ಟದ ಫೈನಾನ್ಸಿಯಲ್ ಗುರಿ ಮುಟ್ಟಲು ಸಾಧ್ಯವಿಲ್ಲ.

ವಾಸ್ತವವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದಾಗ, ಆ ವ್ಯಕ್ತಿ ಷೇರು ಮಾರುಕಟ್ಟೆ ಸಂಪರ್ಕಕ್ಕೆ ಬರ್ತಾನೆ. ಮಾರುಕಟ್ಟೆಯಲ್ಲಿ 10 -20 ಲಕ್ಷ ಹೂಡಿಕೆ ಮಾಡ್ಲಿ ಇಲ್ಲ ಒಂದರಿಂದ ಎರಡು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಹೂಡಿಕೆ ಮಾಡ್ಲಿ, ಪ್ರತಿ ದಿನ ಅನೇಕ ಗಂಟೆ ಷೇರು ಮಾರುಕಟ್ಟೆ ಬಗ್ಗೆ ಗಮನ ಹರಿಸ್ತೇವೆ. ನಾವು ಮಾಡಿದ ಹೂಡಿಕೆಯಲ್ಲಿ ಎಷ್ಟು ನಷ್ಟವಾಯ್ತು, ಎಷ್ಟು ಲಾಭವಾಯ್ತು ಎನ್ನುವುದನ್ನು ಗಮನಿಸ್ತೇವೆ. ನಾವು ಸಣ್ಣ ಮಟ್ಟದಲ್ಲಿ ಹೂಡಿಕೆ ಮಾಡಿದಾಗ ಆದಾಯ (income) ಕಮ್ಮಿ, ಸಮಯ ಹಾಳು.

ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡ್ಬೇಕು? : ನೀವು ಷೇರು ಮಾರುಕಟ್ಟೆಯಲ್ಲಿ 20 ಸಾವಿರ ಹೂಡಿಕೆ ಮಾಡಿದ್ದೀರಿ ಅಂತಿಟ್ಕೊಳ್ಳಿ. ಅದು ಮಲ್ಟಿಬ್ಯಾಗರ್ ಆಗಿದೆ. ಅಂದ್ರೆ ಎರಡು ವರ್ಷದ ನಂತ್ರ ಡಬಲ್ ಆಗಿದೆ. 20 ಸಾವಿರ 40 ಸಾವಿರವಾಯ್ತು. ನೀವೇ ಯೋಚನೆ ಮಾಡಿ, ಬರೀ 40 ಸಾವಿರಕ್ಕೆ ನೀವು ಎಷ್ಟು ಸಮಯ ಹಾಳು ಮಾಡಿದ್ರಿ. ಪೋರ್ಟ್ಫೋಲಿಯೊ ನೋಡಿದ್ರಿ, ಲಾಭ ಮತ್ತು ನಷ್ಟವನ್ನು ಲೆಕ್ಕಹಾಕಿದ್ರಿ, ಪ್ರತಿ ದಿನ ಷೇರು ಮಾರುಕಟ್ಟೆ ಬಗ್ಗೆ ಆಲೋಚನೆ ಮಾಡಿದ್ರಿ, ಆದ್ರೆ ಸಿಕ್ಕಿದ್ದು 40 ಸಾವಿರ. ಅದೂ ಗ್ಯಾರಂಟಿ ಇಲ್ಲದ ಹಣ.

ಬರೀ 10 – 20 ಸಾವಿರ ಹೂಡಿಕೆ ಮಾಡಿ, ಎರಡು ವರ್ಷ ಹಾಳು ಮಾಡಿ 40 ಸಾವಿರ ಬಂದ್ರೆ ಈಗಿನ ಪರಿಸ್ಥಿತಿಯಲ್ಲಿ ಈ ಹಣಕ್ಕೆ ಮಹತ್ವವೇ ಇಲ್ಲ ಎನ್ನುವಂತಾಗುತ್ತದೆ. ಪ್ರತಿ ದಿನ ನೀವು ಷೇರು ಮಾರುಕಟ್ಟೆ ಬಗ್ಗೆ ಗಮನ ಹರಿಸ್ತೀರಿ, ಅದ್ರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಇದೆ ಎಂದಾದ್ರೆ ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಕಾಣಿಸಿಕೊಳ್ಳುವಷ್ಟು ಮೊತ್ತವನ್ನು ಹೂಡಿಕೆ ಮಾಡಿ. ನೀವು ಒಂದು ಲಕ್ಷ ಅಥವಾ ಎರಡು ಲಕ್ಷ ಹೂಡಿಕೆ ಮಾಡಿ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಫಾರ್ಮುಲಾ : ಒಂದು ಲಕ್ಷದ ಪೋರ್ಟ್ಫೋಲಿಯೋ ಮಾಡ್ತಿದ್ದೀರಿ ಎಂದಾದ್ರೆ 50 : 30: 20ರ ಫಾರ್ಮುಲಾ ಅನುಸರಿಸಿ. 50 ಸಾವಿರವನ್ನು ಲಾರ್ಜ್ ಕ್ಯಾಪ್ ನಲ್ಲಿ, 30 ಸಾವಿರವನ್ನು ಮಿಡಲ್ ಕ್ಯಾಪ್ ನಲ್ಲಿ ಹಾಗೂ 20 ಸಾವಿರವನ್ನು ಸ್ಮಾಲ್ ಕ್ಯಾಪ್ ನಲ್ಲಿ ಹೂಡಿಕೆ ಮಾಡಿ. ಪೋರ್ಟ್ಫೋಲಿಯೋ ವೈವಿದ್ಯಮಯವಾಗಿರಬೇಕು. ಒಂದು ಲಕ್ಷ ಹೂಡಿಕೆಯನ್ನು ನೀವು 10 ಕಂಪನಿಗಳ ಷೇರು ಖರೀದಿಗೆ ಬಳಸಬೇಕು. ಪ್ರತಿ ತಿಂಗಳು ಒಂದು ಬಾರಿ ಇದ್ರ ಬಗ್ಗೆ ಅವಲೋಕನ ಮಾಡಿ. ಆದಾಗ್ಯೂ, ಹೂಡಿಕೆ ದೃಷ್ಟಿಕೋನವು ದೀರ್ಘಾವಧಿಯದ್ದಾಗಿರಬೇಕು, ಕನಿಷ್ಠ 5 ವರ್ಷಗಳ ಕಾಲ ಮಾರುಕಟ್ಟೆಯಲ್ಲಿ ಉಳಿಯಬೇಕು. ಹಾಗೆಯೇ ಒಂದೇ ಬಾರಿ ಎಲ್ಲ ಹಣವನ್ನು ಹೂಡಿಕೆ ಮಾಡ್ಬೇಡಿ. ನಿಧಾನವಾಗಿ, ಹಂತ ಹಂತವಾಗಿ ಹೂಡಿಕೆ ಮಾಡಿ. ಬೇರೆ ಬೇರೆ ಕಂಪನಿ ಷೇರುಗಳನ್ನು ನೀವು ಖರೀದಿ ಮಾಡೋದ್ರಿಂದ ಹತ್ತು ವರ್ಷದಲ್ಲಿ ನಿಮ್ಮ ಷೇರಿನ ಬೆಲೆ ಹೆಚ್ಚಾಗ್ಬಹುದು. ಆದ್ರೆ ಷೇರು ಮಾರುಕಟ್ಟೆಯಲ್ಲಿ ಯಾವುದನ್ನೂ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ.

ಷೇರು ಮಾರುಕಟ್ಟೆ ಭಯ ಎನ್ನುವವರು 100 ರೂಪಾಯಿಯಿಂದಲೂ ಹೂಡಿಕೆ ಶುರು ಮಾಡ್ಬಹುದು. ಇದ್ರಲ್ಲಿ ತಪ್ಪೇನಿಲ್ಲ. 10 -20 ಸಾವಿರ ಹೂಡಿಕೆ ಮಾಡುವವರು ಮ್ಯೂಚುವಲ್ ಫಂಡ್ ನಲ್ಲಿ ಮೊದಲು ಹೂಡಿಕೆ ಮಾಡಿದ್ರೆ ಉತ್ತಮ.