ಕೇರಳದಲ್ಲಿ ಹಲಸು ಕ್ರಾಂತಿ ಸೃಷ್ಟಿಸಿದ ವಾಟ್ಸಾಪ್ ಗ್ರೂಪ್; ಗ್ರಾಮೀಣ ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ'ಚಕ್ಕಾಕೂಟಂ'
ಕೇರಳದಲ್ಲಿ ಪ್ರತಿವರ್ಷ ಹಲಸಿನ ಹಣ್ಣು ದೊಡ್ಡ ಪ್ರಮಾಣದಲ್ಲಿ ವ್ಯರ್ಥವಾಗುವುದನ್ನು ಗಮನಿಸಿದ ತಂಡವೊಂದು ವಾಟ್ಸಾಪ್ ಗ್ರೂಪ್ ಪ್ರಾರಂಭಿಸಿ ಅನೇಕ ಜನರಿಗೆ ಬದುಕು ಕಟ್ಟಿಕೊಟ್ಟಿದೆ. ಅಷ್ಟೇ ಅಲ್ಲ, ಈ ವಾಟ್ಸಾಪ್ ಗ್ರೂಪ್ ಕಂಪನಿಯಾಗಿ ಬೆಳೆದು ನಿಂತಿದ್ದು, ಹಲಸಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

Business Desk: ಹಲಸಿನ ಹಣ್ಣಿನಲ್ಲಿ ಅನೇಕ ಔಷಧೀಯ ಗುಣಗಳಿವೆ. ಹಾಗೆಯೇ ಹಲಸು ಪೌಷ್ಟಿಕಾಂಶಗಳ ಆಗರ ಕೂಡ ಹೌದು. ಆದರೆ, ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ಹಲಸಿನ ಹಣ್ಣುಗಳು ಹಾಳಾಗಿ ಹೋಗುತ್ತವೆ. ಈ ರೀತಿ ಪ್ರತಿವರ್ಷ ಟನ್ ಗಟ್ಟಲೆ ಹಲಸು ಹಾಳಾಗಿ ಹೋಗುವುದನ್ನು ತಡೆಯೋದು ಹೇಗೆ ಎಂಬ ಆಲೋಚನೆಯೇ ಇಂದು ಕೇರಳ ರಾಜ್ಯದಲ್ಲಿ 'ಹಲಸಿನ ಕ್ರಾಂತಿ'ಯನ್ನೇ ಸೃಷ್ಟಿಸಿದೆ. ಹಲಸಿಗೆ ಸಂಬಂಧಿಸಿ ಸೃಷ್ಟಿಯಾದ ವಾಟ್ಸಾಪ್ ಗ್ರೂಪ್ ಮೂಲಕ ಇಂದು ಅನೇಕ ಗ್ರಾಮೀಣ ಮಹಿಳೆಯರು ಬದುಕು ಕಟ್ಟಿಕೊಂಡಿದ್ದಾರೆ. ಹಾಗೆಯೇ ಹಲಸು ಪ್ರಿಯರು ಅದರಿಂದ ತಯಾರಿಸಲ್ಪಟ್ಟ ಬಗೆ ಬಗೆಯ ಖಾದ್ಯಗಳನ್ನು ಸವಿಯುತ್ತಿದ್ದಾರೆ. 2018ರಲ್ಲಿ ಹಲಸಿನ ಹಣ್ಣನ್ನು ಕೇರಳದ ಅಧಿಕೃತ ಹಣ್ಣೆಂದು ಘೋಷಿಸಲಾಗಿತ್ತು. ಅದಾದ ಬಳಿಕ ಅಂದರೆ 2019ರಲ್ಲಿ 'ಚಕ್ಕಾಕೂಟಂ' ಎಂಬ ವಾಟ್ಸಾಪ್ ಗ್ರೂಪ್ ಪ್ರಾರಂಭವಾಯಿತು. ಈ ವಾಟ್ಸಾಪ್ ಗ್ರೂಪ್ 'ಚಕ್ಕಾ ಕೂಟಂ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ 2021ರಲ್ಲಿ ನೋಂದಣಿಯಾಗಿದೆ. ಈ ಕಂಪನಿ ಎರ್ನಾಕುಲಂ ಜಿಲ್ಲೆಯ ಪಟ್ಟಿಮಟ್ಟಂ ಎಂಬ ಸ್ಥಳದಲ್ಲಿದೆ. ಹಲಸಿನ ಹಣ್ಣಿನಿಂದ ಸಿದ್ಧಪಡಿಸಿದ ವಿವಿಧ ಉತ್ಪನ್ನಗಳನ್ನು ಸೂಪರ್ ಮಾರ್ಕೆಟ್ ಹಾಗೂ ಇ-ಕಾಮರ್ಸ್ ಪ್ಲಾಟ್ ಫಾರ್ಮ್ಸ್ ಮೂಲಕ ಈ ಕಂಪನಿ ಮಾರಾಟ ಮಾಡುತ್ತಿದೆ.
ಇನ್ನು ಈ ವಾಟ್ಸಾಪ್ ಗುಂಪಿನ ಹಿಂದಿನ ಮುಖ್ಯ ರೂವಾರಿ ಅನಿಲ್ ಜೋಸ್. ಈ ಗುಂಪು ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುತ್ತದೆ ಹಾಗೂ ಒಂದು ಕಂಪನಿಯಾಗಿ ರೂಪುಗೊಳ್ಳುತ್ತದೆ ಎಂಬ ಯೋಚನೆ ಅನಿಲ್ ಜೋಸ್ ಅವರಿಗಿರಲಿಲ್ಲ. ಈ ಗುಂಪು ಹಲಸು ಪ್ರಿಯರ ನಡುವೆ ಜನಪ್ರಿಯತೆ ಗಳಿಸುವ ಮೂಲಕ ಇಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದೆ.
ಈ ಆನ್ ಲೈನ್ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಕೆಜಿಗೆ ಬರೀ 70ರೂ.; ಆರ್ಡರ್ ಮಾಡೋದು ಹೇಗೆ?
'ಒಟ್ಟು ಏಳು ಸಾಮಾನ್ಯ ಗುಂಪುಗಳಿದ್ದು, 21 ಗುಂಪುಗಳು 14 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಕೆಲವು ಜಿಲ್ಲೆಗಳು ಒಂದಕ್ಕಿಂತ ಹೆಚ್ಚಿನ ವಾಟ್ಸಾಪ್ ಗುಂಪುಗಳನ್ನು ಹೊಂದಿವೆ. ಇದರ ಜೊತೆಗೆ 941 ಪಂಚಾಯತ್ ಗಳು, 87 ನಗರಸಭೆಗಳು ಹಾಗೂ ಆರು ನಗರಪಾಲಿಕೆಗಳಲ್ಲಿ ವಾಟ್ಸಾಪ್ ಗುಂಪುಗಳಿವೆ' ಎಂದು 'ಚಕ್ಕಾಕೂಟಂ' ಅನಿಲ್ ಜೋಸ್ ತಿಳಿಸಿದ್ದಾರೆ.
ಇನ್ನು ಚಕ್ಕಾ ಕೂಟಂ ತರಬೇತುದಾರರ ಸಮಿತಿಯನ್ನು ಹೊಂದಿದೆ. ಇವರು ವಿವಿಧ ಗ್ರಾಮಗಳಲ್ಲಿ ಹಲಸಿನ ಹಣ್ಣಿನಿಂದ ಸಿದ್ಧಪಡಿಸಬಹುದಾದ ಉತ್ಪನ್ನಗಳ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ. 'ನಾವು ತರಬೇತಿ ನೀಡಲು 25 ಪಂಚಾಯತ್ ಗಳನ್ನು ಆಯ್ಕೆ ಮಾಡಿದ್ದೇವೆ. ಅದರಲ್ಲಿ 16 ಪಂಚಾಯತ್ ಗಳಲ್ಲಿ ತರಬೇತಿ ನೀಡಿದ್ದೇವೆ. ಇವುಗಳಲ್ಲಿ 5 ಪಂಚಾಯತ್ ಗಳು ವಿವಿಧ ಉತ್ಪನ್ನಗಳನ್ನು ಸಕ್ರಿಯವಾಗಿ ಉತ್ಪಾದಿಸುತ್ತಿವೆ' ಎಂದು ಅನಿಲ್ ಜೋಸ್ ತಿಳಿಸಿದ್ದಾರೆ. ಈ ತರಬೇತಿಯಲ್ಲಿ ಉಪ್ಪಿನಕಾಯಿ, ತಿಂಡಿಗಳು, ಸ್ಕ್ವಾಷ್ ಹಾಗೂ ಕೇಕ್ ಗಳನ್ನು ಸಿದ್ಧಪಡಿಸುವ ತರಬೇತಿ ನೀಡಲಾಗುತ್ತದೆ.
ಇನ್ನು ಈ ಗುಂಪು ಹಲಸಿನ ಗಿಡವನ್ನು ಆಯ್ಕೆ ಮಾಡೋದು ಹೇಗೆ ಹಾಗೂ ಅದನ್ನು ಬೆಳೆಸುವ ಬಗ್ಗೆ ಕೂಡ ಮಾರ್ಗದರ್ಶನ ನೀಡುತ್ತದೆ. ಅಲ್ಲದೆ, ಹಲಸಿನ ಹಣ್ಣನ್ನು ಕೀಳುವ ಯಂತ್ರಗಳ ನಿರ್ವಹಣೆ ಇತ್ಯಾದಿ ಕುರಿತು ಕೂಡ ತರಬೇತಿ ಅವಧಿಯಲ್ಲಿ ಮಾಹಿತಿ ನೀಡಲಾಗುತ್ತದೆ' ಎಂದು ಅನಿಲ್ ತಿಳಿಸಿದ್ದಾರೆ.
Online Business : ಒಂದು ದಿನದಲ್ಲಿ ಒಂದು ಲಕ್ಷ ರೂಪಾಯಿ ಗಳಿಸೋದು ಹೇಗೆ?
ಹಲಸಿನ ಹಣ್ಣಿನ ಉತ್ಪಾದನೆಯಲ್ಲಿ ಕೇರಳ ಕರ್ನಾಟಕ ಅಸ್ಸಾಂ ಹಾಗೂ ಒಡಿಶಾದ ನಂತರದ ಸ್ಥಾನದಲ್ಲಿದೆ. ಪ್ರತಿವರ್ಷ ಇಲ್ಲಿ 60 ಕೋಟಿ ಹಲಸಿನ ಹಣ್ಣುಗಳನ್ನು ಉತ್ಪಾದಿಸಲಾಗುತ್ತದೆ. ಅದರಲ್ಲಿ 20 ಕೋಟಿಗಿಂತಲೂ ಕಡಿಮೆ ಹಲಸಿನ ಹಣ್ಣನ್ನು ಬಳಸಲಾಗುತ್ತಿದೆ. ಹಲಸಿನ ಹಣ್ಣಿನಿಂದ 100ಕ್ಕೂ ಅಧಿಕ ಉತ್ಪನ್ನಗಳನ್ನು ಸಿದ್ಧಪಡಿಸಬಹುದು. ಒಂದು ವೆಳೆ ನಾವು ಹಲಸಿನಿಂದ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲು ಸಾಧ್ಯವಾದರೆ ರಾಜ್ಯದಲ್ಲಿ 1ಲಕ್ಷ ಕೋಟಿ ಊ. ವಹಿವಾಟು ನಡೆಸಬಹುದು' ಎನ್ನುತ್ತಾರೆ 'ಚಕ್ಕಾ ಕೂಟಂ'ಎಂಡಿ ಮನು ಚಂದ್ರನ್.