ಟೊಮ್ಯಾಟೋ ಬೆಲೆ ಹೆಚ್ಚಳದಿಂದ ಕಂಗೆಟ್ಟಿರೋರಿಗೆ ತುಸು ನೆಮ್ಮದಿಯ ಸುದ್ದಿ ಇದು. ಈಗ ನೀವು ಆನ್ ಲೈನ್ ನಲ್ಲಿ ಕೆಜಿಗೆ 70ರೂ.ನಂತೆ ಟೊಮ್ಯಾಟೋ ಖರೀದಿಸಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ.
ನವದೆಹಲಿ (ಜು.27): ಟೊಮ್ಯಾಟೋ ಬೆಲೆ ಗಗನಕ್ಕೇರಿರೋದು ಮಹಿಳೆಯರ ಚಿಂತೆ ಹೆಚ್ಚಿಸಿದೆ. ಈ ನಡುವೆ ಕೊಂಚ ನೆಮ್ಮದಿ ನೀಡುವ ಕ್ರಮವೊಂದನ್ನು ಸರ್ಕಾರ ಕೈಗೊಂಡಿದೆ. ಅದೇನೆಂದರೆ ಈಗ ನೀವು ಆನ್ ಲೈನ್ ನಲ್ಲಿ ಕೆಜಿಗೆ 70ರೂ.ನಂತೆ ಟೊಮ್ಯಾಟೋ ಖರೀದಿಸಬಹುದು. ಕೆಲವು ನಗರದ ಮಾರುಕಟ್ಟೆಗಳಲ್ಲಿ ಟೊಮ್ಯಾಟೋ ದರ ಕೆಜಿಗೆ 200ರೂ. ತಲುಪಿದೆ. ಸರ್ಕಾರದ ಕೃಷಿ ಮಾರುಕಟ್ಟೆ ಕಂಪನಿ ಭಾರತದ ರಾಷ್ಟ್ರೀಯ ಸಹಕಾರ ಸೌಹಾರ್ದ ಗ್ರಾಹಕರ ಒಕ್ಕೂಟ ಇ. (ಎನ್ ಸಿಸಿಎಫ್) ಜು.24ರಿಂದ ಟೊಮ್ಯಾಟೋಗಳನ್ನು ಡಿಜಿಟಲ್ ಕಾಮರ್ಸ್ ಮುಕ್ತ ನೆಟ್ ವರ್ಕ್ (ಒಎನ್ ಡಿಸಿ) ಮೂಲಕ ಕೆಜಿಗೆ 70ರೂ.ನಂತೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ. ಸರ್ಕಾರ ಟೊಮ್ಯಾಟೋ ದರ ನಿಯಂತ್ರಣಕ್ಕೆ ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಂಡಿದೆ ಕೂಡ. ಬೆಲೆ ಹೆಚ್ಚಿರುವ ನಗರಗಳಲ್ಲಿ ಟೊಮ್ಯಾಟೋವನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡಲು ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಈ ಕಾರಣದಿಂದ ಕೆಲವು ನಗರಗಳ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಕೆಜಿಗೆ 70ರೂ.ಗೆ ಲಭಿಸುತ್ತಿದೆ ಕೂಡ.
'ದೆಹಲಿಯಲ್ಲಿ ಟೊಮ್ಯಾಟೋ ಮಾರಾಟಕ್ಕೆ ನಾವು ಒಎನ್ ಡಿಸಿ ಜೊತೆಗೆ ಸಹಭಾಗಿತ್ವ ಹೊಂದಿದ್ದೇವೆ' ಎಂದು ಎನ್ ಸಿಸಿಎಫ್ ಕಾರ್ಯನಿರ್ವಾಹಕ ನಿರ್ದೇಶಕ ಅನೈಸ್ ಜೋಸೆಫ್ ಚಂದ್ರ ತಿಳಿಸಿದ್ದಾರೆ. ಒಎನ್ ಡಿಸಿಯನ್ನು 2021ರ ಡಿಸೆಂಬರ್ 31ರಂದು ಪ್ರಾರಂಭಿಸಲಾಗಿದೆ. ಇದರಲ್ಲಿ ವ್ಯಾಪಾರ-ವಹಿವಾಟು ನಡೆಸಲು ಖರೀದಿದಾರರು ಹಾಗೂ ಮಾರಾಟಗಾರರು ಒಂದೇ ಪ್ಲಾಟ್ ಫಾರ್ಮ್ ಅಥವಾ ಅಪ್ಲಿಕೇಷನ್ ಬಳಸೋದು ಅಗತ್ಯ.
ಟೊಮ್ಯಾಟೊ ರಕ್ಷಣೆಗೆ ವಿದ್ಯುತ್ ದೀಪ ಅಳವಡಿಸಿ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿರುವ ರೈತ
ಆರ್ಡರ್ ಮಾಡೋದು ಹೇಗೆ?
ಪ್ರತಿದಿನ ಜನರು ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರ ತನಕ ಟೊಮ್ಯಾಟೋಗೆ ಆರ್ಡರ್ ಮಾಡಬಹುದು. ಮರುದಿನ ಟೊಮ್ಯಾಟೋವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಈ ಡೋರ್ ಸ್ಟೆಪ್ ಡೆಲಿವರಿ ಉಚಿತವಾಗಿದ್ದು, ಯಾವುದೇ ಶುಲ್ಕವಿಲ್ಲ. ಇನ್ನು ಒಎನ್ ಡಿಸಿಯಲ್ಲಿ ಲಿಸ್ಟ್ ಆಗಿರುವ ಪೇಟಿಎಂ, ಮ್ಯಾಜಿಕ್ ಪಿನ್, ಮೈಸ್ಟೋರ್ ಹಾಗೂ ಪಿನ್ ಕೋಡ್ ಖರೀದಿ ಅಪ್ಲಿಕೇಷನ್ ಗಳ ಮೂಲಕ ಟೊಮ್ಯಾಟೋವನ್ನು ವಿತರಿಸಲಾಗುತ್ತದೆ. ಗ್ರಾಹಕರು ಈ ಅಪ್ಲಿಕೇಷನ್ ಗಳಿಗೆ ಭೇಟಿ ನೀಡಿ ಟೊಮ್ಯಾಟೋಗಳನ್ನು ಕೆಜಗೆ 70ರೂ.ನಂತೆ ಆರ್ಡರ್ ಮಾಡಬಹುದು.
ಇನ್ನು ಪ್ರತಿ ಆರ್ಡರ್ ಅನ್ನು 2ಕೆಜಿಗೆ ಸೀಮಿತಗೊಳಿಸಲಾಗಿದೆ. ಪ್ರಸ್ತುತ ಇ-ಕಾಮರ್ಸ್ ಕಂಪನಿಗಳು ಟೊಮ್ಯಾಟೋವನ್ನು ಪ್ರತಿ ಕೆಜಿಗೆ 170-180ರೂ.ನಂತೆ ಮನೆಬಾಗಿಲಿಗೆ ಸರಬರಾಜು ಮಾಡುತ್ತಿವೆ. ಇನ್ನು ಪ್ರಮುಖ ನಗರಗಳಲ್ಲಿ ಟೊಮ್ಯಾಟೋ ದರ ಕೆಜಿಗೆ 150ರೂ.ನಿಂದ 200 ರೂ.ಗೆ ಏರಿಕೆಯಾಗಿದೆ.
ಕಳೆದ ವಾರ ಕೇಂದ್ರ ಸರ್ಕಾರ ಎನ್ ಎಎಫ್ ಇಡಿ ಹಾಗೂ ಎನ್ ಸಿಸಿಎಫ್ ಗಳಿಗೆ ಟೊಮ್ಯಾಟೋವನ್ನು ಕೆಜಿಗೆ 80ರೂ. ಬದಲು 70ರೂ.ಗೆ ಮಾರಾಟ ಮಾಡಲು ನಿರ್ದೇಶನ ನೀಡಿತ್ತು. ಎನ್ ಸಿಸಿಎಫ್ ಹಾಗೂ ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಸೌಹಾರ್ದ ಮಾರುಕಟ್ಟೆ ಒಕ್ಕೂಟ (NAFED) ಸಂಗ್ರಹದಲ್ಲಿರುವ ಟೊಮ್ಯಾಟೋಗಳನ್ನು ಪ್ರಾರಂಭದಲ್ಲಿ ಕೆಜಿಗೆ 90ರೂ. ನಂತೆ ಸಗಟು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿತ್ತು. ಆ ಬಳಿಕ ಈ ದರವನ್ನು ಜುಲೈ 16ರಿಂದ ಪ್ರತಿ ಕೆಜಿಗೆ 80ರೂ.ಗೆ ಇಳಿಕೆ ಮಾಡಲಾಗಿತ್ತು. ಈಗ ಪ್ರತಿ ಕೆಜಿಗೆ 70ರೂ.ನಂತೆ ಮಾರಾಟ ಮಾಡಲಾಗುತ್ತಿದೆ.
Tomato ಬೆಲೆ ಇಳಿಕೆಗೆ ಯುಪಿ ಸಚಿವರು ಕೊಟ್ರು ಬೆಸ್ಟ್ ಐಡಿಯಾ!
ಜೂನ್ ತಿಂಗಳ ಶುರುವಿನಲ್ಲಿ ಕೇಜಿಗೆ 40 ರೂ. ಇದ್ದ ಟೊಮೆಟೋ ಬೆಲೆ ಜುಲೈ ಮೊದಲನೇ ವಾರದಲ್ಲಿ 100 ರೂ. ದಾಟಿ ಕೆಲವು ಭಾಗದಲ್ಲಿ 200ರೂ.ವರೆಗೆ ತಲುಪಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ದೇಶದ ಉತ್ತರ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ. ಹೀಗಾಗಿ ಬೆಳೆ ಹಾನಿ ಭಾರಿ ಪ್ರಮಾಣದಲ್ಲಿ ಆಗಿದ್ದು ನಷ್ಟವಾಗುತ್ತಿದೆ ಎಂದು ಹೇಳಲಾಗಿದೆ.
