ಕೊರೋನಾ ಬರೋದಕ್ಕೂ ಮುನ್ನ ಬೆಂಗಳೂರಿನ ವೀಕೆಂಡ್‌ಗಳನ್ನುಸ್ವಲ್ಪನೆನಪಿಸಿಕೊಳ್ಳಿ. ಮಾಲ್‌, ಹೋಟೆಲ್‌, ಮಲ್ಟಿಫ್ಲೆಕ್ಸ್‌ ಎಲ್ಲ ಕಡೆಯೂ ಜನಜಂಗುಳಿ. ಶುಕ್ರವಾರ ಸಾಯಂಕಾಲದಿಂದಲೇ  ಶುರೋವಾಗೋ ಈ ಹಬ್ಬದ ವಾತಾವರಣ ಭಾನುವಾರ ರಾತ್ರಿಯ ತನಕ ಮುಂದುವರಿಯುತ್ತಿತ್ತು.ದುಡ್ಡಿರೋದೆ ಖರ್ಚು ಮಾಡೋಕೆ ಎಂಬಂತೆ ಪೈಪೋಟಿಗೆ ಬಿದ್ದವರಂತೆ ಶಾಪಿಂಗ್‌ ಮಾಡೋರೇನು,ಪಾರ್ಟಿ ಮಾಡೋರೇನು! ವಾರವಿಡೀ ದುಡಿದ ದುಡ್ಡನ್ನು ವಾರಾಂತ್ಯದಲ್ಲಿ ಖರ್ಚು ಮಾಡಿದರಷ್ಟೇ ಕೆಲವರಿಗೆ ನೆಮ್ಮದಿ. ಉಳಿತಾಯ ಎಂಬ ಪದದ ಅರ್ಥವೇ ತಿಳಿದಿರಲಿಲ್ಲ.ನಂಗೇನು ಲಕ್ಷಗಟ್ಟಲೆ ಸಂಬಳ ಬರುತ್ತೆ. ಉಳಿತಾಯದ ಯೋಚನೆ ಈಗೇಕೆ. ಮುಂದೆ ಮಾಡಿದರಾಯ್ತು.ಈಗೇನಿದ್ರೂ ಮೋಜು ಮಸ್ತಿ ಎಂದು ಭಾವಿಸಿದವರಿಗೆ ದೊಡ್ಡ ಶಾಕ್‌ ಕೊಟ್ಟಿದ್ದು ಕೊರೋನಾ. ಐಟಿ ಕಂಪನಿಯಲ್ಲಿ ಕೆಲ್ಸ ದುಡ್ಡಿಗೇನೂ ಕೊರತೆಯಿಲ್ಲ ಎಂದು ಉಳಿತಾಯ ಮಾಡದೆ ಕಿಸೆ ಖಾಲಿ ಮಾಡಿಕೊಂಡವರಿಗೆ ಕೊರೋನಾ ಸಮಯದಲ್ಲಿ ಕಂಪನಿ ಕೊಕ್‌ ಕೊಟ್ಟಾಗ ಆಕಾಶವೇ ತಲೆಮೇಲೆ ಕಳಚಿ ಬಿದ್ದ ಅನುಭವ. ಮೊದಲೇ ತಿಂಗಳ ಸಂಬಳದಲ್ಲಿ ಒಂದಿಷ್ಟು ಉಳಿಸಿಕೊಂಡಿದ್ದರೆ, ಇವತ್ತು ಪರದಾಡಬೇಕಾಗಿರಲಿಲ್ಲ ಎಂದು ಬಹುತೇಕರು ಪಶ್ಚತ್ತಾಪ ಪಟ್ಟಿದ್ದಾರೆ ಕೂಡ. ಇನ್ನು ಮೊದಲೇ ಒಂದಿಷ್ಟು ಉಳಿತಾಯ ಮಾಡಿಟ್ಟುಕೊಂಡವರು ಲಾಕ್‌ಡೌನ್‌, ಕೊರೋನಾ ಸಮಯದ ಸಂಕಷ್ಟವನ್ನು ಧೈರ್ಯದಿಂದ ಪಾರು ಮಾಡಿದ್ದಾರೆ. ಒಟ್ಟಾರೆ ಕೊರೋನಾ ಹಲವರಿಗೆ ಉಳಿತಾಯದ ಮಹತ್ವವನ್ನು ಮನದಟ್ಟು ಮಾಡಿಸಿರೋದಂತೂ ಸತ್ಯ.ಇಷ್ಟಾದ ಮೇಲೂ ಇನ್ನೂ ಕೆಲವರ ತಲೆಯಲ್ಲಿ ಉಳಿತಾಯ ಏಕೆ ಮಾಡ್ಬೇಕು,ಅದ್ರಿಂದ ಏನ್‌ ಪ್ರಯೋಜನವಿದೆ ಎಂಬ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿದ್ರೆ,ಇಲ್ಲಿದೆ ಉತ್ತರ.

ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಕಾದಿದೆ ಶಾಕ್; ಹೆಚ್ಚುವರಿ ತೆರಿಗೆ ಹೊರೆ!

ಕಷ್ಟಕಾಲದ ಅಪತ್ಬಾಂಧವ
ಒಬ್ಬ ವ್ಯಕ್ತಿ ಎಷ್ಟು ದುಡಿಯುತ್ತಾನೆ ಅನ್ನೋದಕ್ಕಿಂತ ಆತ ಎಷ್ಟು ಉಳಿಸುತ್ತಾನೆ ಅನ್ನೋದು ಮುಖ್ಯ.ಅದ್ರಲ್ಲೂಕಷ್ಟ ಕಾಲದಲ್ಲಿ ಅಪತ್ಬಾಂಧವನಂತೆ  ಕೈಹಿಡಿದು ಮೇಲೆತ್ತೋದು ಇದೇ ಉಳಿಕೆ ಹಣ. ಹನಿ ಹನಿ ಕೂಡಿ ಹಳ್ಳವೆಂಬಂತೆ ಪ್ರತಿ ತಿಂಗಳು ಒಂದಿಷ್ಟು ಹಣ ಉಳಿಸುತ್ತ ಬಂದ್ರೆ ಕೊನೆಗೊಂದು ದಿನ ನಿಮ್ಮ ಉಳಿತಾಯ ಖಾತೆಯಲ್ಲಿ ದೊಡ್ಡ ಮೊತ್ತವೊಂದು ಸಂಗ್ರಹವಾಗಿರುತ್ತೆ. ತುರ್ತು ಸಂದರ್ಭಗಳಲ್ಲಿ ಇದು ನಿಮ್ಮ ಹಾಗೂ ಕುಟುಂಬದವರ ಪ್ರಾಣ ಹಾಗೂ ಮಾನ ಎರಡನ್ನೂ ಕಾಪಾಡಬಲ್ಲದು. 

ಕೈಯಲ್ಲಿ ಒಂದಿಷ್ಟು‌ ಕಾಸಿದ್ರೆ ಮನಸ್ಸಿಗೆ ನೆಮ್ಮದಿ
ಪರ್ಸ್‌ನಲ್ಲಿ ಈಗ ಮೊದಲಿನಂತೆ ಹಣ ಇಟ್ಟುಕೊಳ್ಳೋರು ಇಲ್ಲ. ಈಗೇನಿದ್ರೂ ಕ್ಯಾಶ್‌ಲೆಸ್‌ ವ್ಯವಹಾರ. ಆದ್ರೆ, ಈ ಕ್ಯಾಶ್‌ಲೆಸ್‌ ವ್ಯವಹಾರಕ್ಕಾದ್ರೂ ನಿಮ್ಮ ಖಾತೆಯಲ್ಲಿ ಒಂದಿಷ್ಟು ಹಣ ಇರಲೇಬೇಕು ಅಲ್ವಾ? ಹಾಗೇನಿಲ್ಲ, ಕ್ರೆಡಿಟ್‌ ಕಾರ್ಡ್‌ ಇದೆಯಲ್ಲ ಎಂದು ಕೆಲವರು ಹೇಳ್ಬಹುದು. ನಿಜ, ಅಕೌಂಟ್‌ನಲ್ಲಿ ದುಡ್ಡಿಲ್ಲದಿದ್ರೂ ಕ್ರೆಡಿಟ್‌ ಕಾರ್ಡ್‌ ನೆರವು ನೀಡುತ್ತೆ. ಆದ್ರೆ ತಿಂಗಳು ಕಳೆದ ಬಳಿಕ ಅದಕ್ಕೆ ಹಣ ತುಂಬಲೇಬೇಕಲ್ಲ! ಸ್ವಲ್ಪ ಮುಂದೂಡಿದ್ರೂ ಅಸಲಿನ ಜೊತೆ ಬಡ್ಡಿ ಹೊರೆಯೂ ಹೆಚ್ಚುತ್ತೆ. ಹೀಗಾಗಿ ಕ್ರೆಡಿಟ್‌ ಕಾರ್ಡ್‌ ಇದೆಯಲ್ಲ ಎಂಬುದು ನೆಮ್ಮದಿಯ ಸಂಗತಿಯೇನಲ್ಲ. ಕಾಸಿಲ್ಲದಿದ್ರೆ ಮನಸ್ಸಿಗೆ ಅದೆಷ್ಟು ಹಿಂಸೆಯಾಗುತ್ತೆ ಅನ್ನೋದು ಅನುಭವಿಸಿದವರಿಗಷ್ಟೇ ಗೊತ್ತು. ಅದೇ ತಿಂಗಳು ತಿಂಗಳು ಒಂದಿಷ್ಟು ಹಣವನ್ನು ಪೋಸ್ಟ್‌ ಆಫೀಸ್‌ ಅಥವಾ ಬ್ಯಾಂಕ್‌ನಲ್ಲಿ ಉಳಿತಾಯ ಮಾಡಿದ್ರೆ ಮನಸ್ಸಿನಲ್ಲಿ ಧೈರ್ಯ ಹಾಗೂ ಸಮಾಧಾನ ಎರಡೂ ಮನೆ ಮಾಡುತ್ತೆ. ಮನೆ ಖರೀದಿಸಲು, ಕಾರು ಕೊಳ್ಳಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಎದುರಾಗೋದಿಲ್ಲ ಎಂಬ ವಿಶ್ವಾಸವನ್ನು ಉಳಿತಾಯ ನೀಡುತ್ತದೆ.

ಭಾರತವಿಲ್ಲದೆ ಆರ್‌ಸಿಇಪಿ ಒಪ್ಪಂದಕ್ಕೆ 15 ದೇಶಗಳ ಸಹಿ!

ಆರ್ಥಿಕ ಸ್ವಾತಂತ್ರ್ಯ
ಕೈಯಲ್ಲಿ ಒಂದಿಷ್ಟು ಹಣವಿದ್ರೆ ಆರ್ಥಿಕ ಸ್ವಾತಂತ್ರ್ಯವೂ ಸಿಕ್ಕಂತೆ. ನಮಗಿಷ್ಟ ಬಂದಿದ್ದನ್ನು ಖರೀದಿಸಬಹುದು, ತಿನ್ನಬಹುದು,, ಟೂರ್‌ಗೆ ಹೋಗಬಹುದು ಹೀಗೆ ಮನಸ್ಸಿನಲ್ಲಿರೋ ಆಸೆಗಳನ್ನು ಪೂರೈಸಿಕೊಳ್ಳಬಹುದು. ಅದೇ ಕಾಸಿಲ್ಲವೆಂದ್ರೆ ಸಾಲ ಮಾಡ್ಬೇಕಾಗುತ್ತೆ. ಸಾಲದ ಹಣವನ್ನು ಖರ್ಚು ಮಾಡೋವಾಗ ಮನಸ್ಸಿನಲ್ಲಿ ಸಣ್ಣ ಭಯವಂತೂ ಇದ್ದೇಇರುತ್ತೆ. ಹೀಗಾಗಿ ಇಷ್ಟಬಂದಂತೆ ಖರ್ಚು ಮಾಡಲು ಸಾಧ್ಯವಾಗೋದಿಲ್ಲ. ಸಾಲ ಹೆಚ್ಚಿದಷ್ಟೂ ಆರ್ಥಿಕ ಸ್ವಾತಂತ್ರ್ಯ ಕಡಿಮೆಯಾಗುತ್ತೆ.

ದೀರ್ಘಕಾಲದ ಭದ್ರತೆ
ಉಳಿತಾಯವೆಂದ್ರೆ ಭವಿಷ್ಯಕ್ಕೆ ಆರ್ಥಿಕ ಭದ್ರತೆ. ಉಳಿತಾಯವಿದೆ ಅಂದ್ರೆ ಭವಿಷ್ಯದ ಯೋಜನೆಗಳು, ವೆಚ್ಚಗಳ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. 

ನೆಮ್ಮದಿಯ ನಿವೃತ್ತಿ ಜೀವನ
ನಿವೃತ್ತಿ ಬದುಕಿಗಾಗಿ ಒಂದಿಷ್ಟು ಹಣವನ್ನು ಉಳಿತಾಯ ಮಾಡೋ ಬಗ್ಗೆ ಯೌವನದಲ್ಲೇ ಯೋಚಿಸೋದು ಒಳ್ಳೆಯದು. ಅಷ್ಟೇ ಅಲ್ಲ, ಕೆಲವು ವರ್ಷಗಳ ಬಳಿಕ ಉದ್ಯೋಗದಿಂದ ನಿವೃತ್ತಿ ಪಡೆದು ಸ್ವಂತ ಉದ್ಯಮ ಪ್ರಾರಂಭಿಸಬೇಕು, ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಕನಸಿಗೆ ರೆಕ್ಕೆಪುಕ್ಕ ಕಟ್ಟುವ ಕೆಲಸವನ್ನು ಉಳಿತಾಯದ ಹಣ ಮಾಡುತ್ತೆ. ಕೂಡಿಟ್ಟಿರೋ ಒಂದಿಷ್ಟು ಹಣವಿದ್ರೆ ಧೈರ್ಯದಿಂದಲೇ ಉದ್ಯೋಗಕ್ಕೆ ಗುಡ್‌ ಬೈ ಹೇಳಬಹುದು. ಅಲ್ಲದೆ, ನಿವೃತ್ತಿ ಬದುಕನ್ನು ಒತ್ತಡರಹಿತವಾಗಿ ನೆಮ್ಮದಿಯಿಂದ ಸಾಗಿಸಬಹುದು. 

ನೆರವಿನ ಹಸ್ತ ಚಾಚಲು
ಕಷ್ಟದಲ್ಲಿರೋ ಸ್ನೇಹಿತರು, ಬಂಧುಗಳು ಅಥವಾ ಬಡವರಿಗೆ ನೆರವು ನೀಡೋ ಮನಸ್ಸಿದ್ದರೂ ತಿಂಗಳ ಸಂಬಳದಲ್ಲಿ ಅದನ್ನು ನಿಭಾಯಿಸೋದು ಕಷ್ಟವಾಗಬಹುದು. ಅದೇ ನಿಮ್ಮ ಬಳಿ ಒಂದಿಷ್ಟು ಉಳಿತಾಯದ ಹಣವಿದ್ರೆ ಅದ್ರಲ್ಲಿ ಸ್ವಲ್ಪ ಭಾಗವನ್ನಾದರೂ ಅವರಿಗೆ ನೀಡಬಹುದು. ಇದ್ರಿಂದ ನಿಮ್ಮ ಮನಸ್ಸಿಗೂ ಹಿತವೆನಿಸೋ ಜೊತೆ ಸಂಬಂಧವೂ ಬೆಳೆಯುತ್ತೆ. ಇನ್ನು ಅನಾಥಾಶ್ರಮ, ವೃದ್ಧಾಶ್ರಮ,ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಕೂಡ ನಿಮ್ಮ ಉಳಿತಾಯದ ಒಂದು ಭಾಗವನ್ನು ಬಳಸಿಕೊಳ್ಳಬಹುದು. 

ಭಾರತದ ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸುತ್ತಿದೆ; ಆಕ್ಸಫರ್ಡ್ ಎಕನಾಮಿಕ್ಸ್!

ಎಂಜಾಯ್‌ಮೆಂಟ್‌ಗೆ ಅಡ್ಡಿಯಿಲ್ಲ
ದುಡಿಯೋದೇ ಮಜಾ ಮಾಡೋಕೆ ಎಂಬ ಮನಸ್ಥಿತಿ ಖಂಡಿತಾ ಒಳ್ಳೆಯದ್ದಲ್ಲ. ಆದ್ರೆ ದುಡಿಮೆಯ ಒಂದು ಭಾಗವನ್ನು ಎಂಜಾಯ್‌ಮೆಂಟ್‌ಗೆ ಬಳಸಿಕೊಳ್ಳೋದ್ರಲ್ಲಿ ಯಾವುದೇ ತಪ್ಪಿಲ್ಲ. ಕುಟುಂಬದ ಜೊತೆ ಪ್ರವಾಸಕ್ಕೆ ಹೋಗೋದು ಸೇರಿದಂತೆ ಮನಸ್ಸಿಗೆ ರಿಲ್ಯಾಕ್ಸ್‌ ನೀಡೋ ಕೆಲಸಗಳನ್ನು ಆಗಾಗ ಮಾಡೋದು ಒಳ್ಳೆಯದೇ. ಆದ್ರೆ ಅದು ನಿಮ್ಮ ಬಜೆಟ್‌ನೊಳಗೇ ಇದ್ರೆ ಚೆನ್ನ. ಹೀಗಾಗಿ ಎಂಜಾಯ್‌ಮೆಂಟ್‌ಗೆ ಎಂದೇ ಒಂದಿಷ್ಟು ಹಣ ಉಳಿತಾಯ ಮಾಡೋದು ಒಳ್ಳೆಯ ಯೋಚನೆ. ಇದ್ರಿಂದ ಆರಾಮವಾಗಿ ನೀವು ಅಂದ್ಕೊಂಡ ಸ್ಥಳಗಳಿಗೆ ಹೋಗಿ ಬರಬಹುದು.

ಕನಸು ನನಸು ಮಾಡಲು 
ಸ್ವಂತ ಸೂರು ಕಟ್ಟಿಕೊಳ್ಳಬೇಕು, ಕಾರು ಖರೀದಿಸಬೇಕು ಎಂಬ ಕನಸು ಎಲ್ಲರಿಗೂ ಇರುತ್ತೆ.ಇಂಥ ದೊಡ್ಡ ದೊಡ್ಡ ಕನಸುಗಳನ್ನು ನನಸು ಮಾಡೋದು ಉಳಿತಾಯದ ಹಣವೇ.ಆದಕಾರಣ ಉಳಿತಾಯ ಏಕೆ ಅನ್ನೋ ಪ್ರಶ್ನೆ ನಿಮ್ಮ ತಲೆಯಲ್ಲಿದ್ರೆ ಅದಕ್ಕೊಂದಿಷ್ಟು ಉತ್ತರಗಳು ಇಲ್ಲೇ ಇವೆ. ಹೀಗಾಗಿ ಉಳಿತಾಯದ ಬಗ್ಗೆ ಯೋಚಿಸಿ, ಯೋಜನೆ ರೂಪಿಸಿ.