ನವದೆಹಲಿ(ನ.16): ಜಗತ್ತಿನ ಅತಿದೊಡ್ಡ ವಾಣಿಜ್ಯ ಒಪ್ಪಂದವೆಂದು ಹೆಸರಾದ ಸಮಗ್ರ ಆರ್ಥಿಕ ಪಾಲುದಾರಿಕೆಯ ಪ್ರಾದೇಶಿಕ ಒಪ್ಪಂದ (ಆರ್‌ಸಿಇಪಿ)ಕ್ಕೆ ಚೀನಾ, ಜಪಾನ್‌, ಆಸ್ಪ್ರೇಲಿಯಾ ಸೇರಿದಂತೆ ಏಷ್ಯಾ ಪೆಸಿಫಿಕ್‌ನ 15 ದೇಶಗಳು ಭಾನುವಾರ ಸಹಿ ಹಾಕಿವೆ. ಕಳೆದ ವರ್ಷವೇ ಈ ಒಪ್ಪಂದದಿಂದ ಹೊರಬಂದಿದ್ದ ಭಾರತ ನಿರೀಕ್ಷೆಯಂತೆ ಇದಕ್ಕೆ ಸಹಿ ಹಾಕಿಲ್ಲ. ಆದರೆ, ಭಾರತ ಇನ್ನುಮುಂದೆಯೂ ಒಪ್ಪಂದದ ಭಾಗವಾಗಲು ಬಯಸಿ ಲಿಖಿತ ಮನವಿ ಸಲ್ಲಿಸಿದರೆ ಮಾತುಕತೆ ನಡೆಸಲು ಸಿದ್ಧ ಎಂದು ಸದಸ್ಯ ರಾಷ್ಟ್ರಗಳು ಘೋಷಿಸಿವೆ.

ಆರ್‌ಸಿಇಪಿಗೆ ಸಹಿ ಹಾಕಿರುವ 15 ದೇಶಗಳಲ್ಲಿ ಜಗತ್ತಿನ ಮೂರನೇ ಒಂದರಷ್ಟುಜನಸಂಖ್ಯೆ ಮತ್ತು ಶೇ.29ರಷ್ಟುಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಇದೆ. ಹೀಗಾಗಿ ಇದು ಜಗತ್ತಿನ ಅತ್ಯಂತ ದೊಡ್ಡ ವಾಣಿಜ್ಯ ಪಾಲುದಾರಿಕೆಯ ಒಪ್ಪಂದವೆಂಬ ಹೆಸರು ಪಡೆದಿದೆ. ಈ ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳ ನಡುವೆ ಆಮದು-ರಫ್ತು ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳು ಮುಕ್ತವಾಗಿ ನಡೆಯುತ್ತವೆ. ಸದಸ್ಯ ರಾಷ್ಟ್ರಗಳ ನಡುವೆ ವಿನಿಮಯವಾಗುವ ಸರಕುಗಳಿಗೆ ತೆರಿಗೆ ವಿನಾಯ್ತಿ ಅಥವಾ ರಿಯಾಯ್ತಿ ಇರುತ್ತದೆ.

ಏನಿದು ಒಪ್ಪಂದ?

ಏಷ್ಯಾ ಪೆಸಿಫಿಕ್‌ನ 15 ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ನಡೆಸಲು ಮಾಡಿಕೊಂಡಿರುವ ಒಪ್ಪಂದ. ಇದು ಜಗತ್ತಿನ ಅತಿದೊಡ್ಡ ವ್ಯಾಪಾರಿ ಒಪ್ಪಂದವೆಂಬ ಖ್ಯಾತಿ ಪಡೆದಿದೆ. 2012ರಲ್ಲಿ ಮೊದಲ ಬಾರಿ ಈ ಒಪ್ಪಂದದ ರೂಪರೇಷೆ ಜನ್ಮ ತಳೆದಿತ್ತು. ನಂತರದ 8 ವರ್ಷಗಳಲ್ಲಿ 46 ಸಭೆಗಳು ಹಾಗೂ 19 ಸಚಿವರ ಮಟ್ಟದ ಮಾತುಕತೆಗಳು ನಡೆದು ಇದೀಗ ಸಹಿ ಬಿದ್ದಿದೆ. ಇನ್ನೆರಡು ವರ್ಷಗಳಲ್ಲಿ ಇದು ಜಾರಿಗೆ ಬರಲಿದೆ.

ಭಾರತ ಏಕೆ ಸಹಿ ಹಾಕಿಲ್ಲ?

ಆರ್‌ಸಿಇಪಿ ಒಪ್ಪಂದದ ಕುರಿತ ಮಾತುಕತೆಗಳಲ್ಲಿ ಸತತ ಏಳು ವರ್ಷಗಳ ಕಾಲ ಭಾರತ ಭಾಗಿಯಾಗಿತ್ತು. ಆದರೆ, ಇದು ಜಾರಿಗೆ ಬಂದರೆ ಬೇರೆ ದೇಶದ ಸೋವಿ ಸರಕುಗಳು ಭಾರತಕ್ಕೆ ಪ್ರವೇಶಿಸಿ ಇಲ್ಲಿನ ಉತ್ಪಾದಕರಿಗೆ ನಷ್ಟವಾಗುತ್ತದೆ, ಅದರಿಂದ ದೇಶದಲ್ಲಿ ಲಕ್ಷಾಂತರ ಉದ್ಯೋಗಗಳು ನಷ್ಟವಾಗುತ್ತವೆ ಎಂದು ಕಳೆದ ವರ್ಷ ತೀವ್ರ ಆಕ್ಷೇಪ ಕೇಳಿಬಂದಿತ್ತು. ಹೀಗಾಗಿ 2019ರ ನವೆಂಬರ್‌ 4ರಂದು ಭಾರತ ಈ ಒಪ್ಪಂದದಿಂದ ಹೊರಬಂದಿತ್ತು.

ಇದು ಚೀನಾ-ಪ್ರೇರಿತ ಒಪ್ಪಂದವಾಗಿದ್ದು, ಇದಕ್ಕೆ ಸಹಿ ಹಾಕುವ ದೇಶಗಳಿಗೆ ಚೀನಾದ ಅಗ್ಗದ ಸರಕುಗಳು ದಾಂಗುಡಿಯಿಡುವುದರಿಂದ ಆಯಾ ದೇಶಗಳ ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗುತ್ತದೆ. ಇದರಿಂದ ಅಗಾಧ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುತ್ತದೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಭಾರತ ಈ ಒಪ್ಪಂದದಿಂದ ಹೊರಗುಳಿದಿದೆ.

ಆದರೂ, ಇನ್ನುಮುಂದೆ ಭಾರತ ಆರ್‌ಸಿಇಪಿ ಸದಸ್ಯ ರಾಷ್ಟ್ರಗಳ ಜೊತೆಗೆ ಮಾತುಕತೆ ನಡೆಸುವ ಮೂಲಕ ಒಪ್ಪಂದದ ಭಾಗವಾಗಲಿದೆ. ಏಕೆಂದರೆ ಕೋವಿಡ್‌-19 ನಂತರ ವ್ಯಾಪಾರ ಕ್ಷೇತ್ರಕ್ಕೆ ಉಂಟಾಗಿರುವ ನಷ್ಟಸರಿಪಡಿಸಿಕೊಳ್ಳುವಲ್ಲಿ ಈ ಒಪ್ಪಂದ ಮಹತ್ವದ ಪಾತ್ರ ವಹಿಸಲಿದೆ ಎಂದು ಸಿಂಗಾಪುರ, ಮಲೇಷ್ಯಾ, ವಿಯೆಟ್ನಾಂ ಮುಂತಾದ ದೇಶಗಳು ಆಶಾಭಾವನೆ ವ್ಯಕ್ತಪಡಿಸಿವೆ.

ಸಹಿ ಹಾಕಿರುವ ದೇಶಗಳು

ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್‌, ಸಿಂಗಾಪುರ, ಥಾಯ್ಲೆಂಡ್‌, ಬ್ರೂನಿ, ವಿಯೆಟ್ನಾಂ, ಲಾವೋಸ್‌, ಮ್ಯಾನ್ಮಾರ್‌, ಕಾಂಬೋಡಿಯಾ, ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌.

ಆರ್‌ಸಿಇಪಿ ಯಶಸ್ವಿಯಾಗುತ್ತದೆಯೇ?

ಆಗ್ನೇಯ ಏಷ್ಯಾದ ಎರಡನೇ ಅತಿದೊಡ್ಡ ಆರ್ಥಿಕತೆ ಭಾರತ. ಆದರೆ ಈ ದೇಶವೇ ಆರ್‌ಸಿಇಪಿಯಿಂದ ಹೊರಗುಳಿದಿದೆ. ಜೊತೆಗೆ, ಆರ್‌ಸಿಇಪಿಯಲ್ಲಿರುವ 15 ದೇಶಗಳಲ್ಲಿ ಅನೇಕ ದೇಶಗಳು ಚೀನಾದ ಜೊತೆಗೆ ಗಡಿ ಅಥವಾ ಇತರ ರೀತಿಯ ಸಂಘರ್ಷ ಹೊಂದಿವೆ. ಸದ್ಯ ಆರ್‌ಸಿಇಪಿ ರಾಷ್ಟ್ರಗಳಲ್ಲಿ ಚೀನಾವೇ ದೊಡ್ಡ ಪಾಲುದಾರ ಆಗಿರುವುದರಿಂದ ಆ ದೇಶ ತಮ್ಮ ಮೇಲೆ ಸವಾರಿ ಮಾಡಬಹುದು ಎಂಬ ಭೀತಿಯನ್ನು ಇತರ ದೇಶಗಳು ಹೊಂದಿವೆ. ಹೀಗಾಗಿ ಈ ಒಪ್ಪಂದ ಯಶಸ್ವಿಯಾಗುವ ಬಗ್ಗೆ ಯಾರಿಗೂ ಸಂಪೂರ್ಣ ವಿಶ್ವಾಸವಿಲ್ಲ ಎಂದು ಹೇಳಲಾಗಿದೆ.

ಕಳೆದ ಗುರುವಾರದಿಂದ ಸಿಂಗಾಪುರದಲ್ಲಿ ನಡೆಯುತ್ತಿದ್ದ ವರ್ಚುವಲ್‌ ಆಸಿಯಾನ್‌ ಶೃಂಗ ಭಾನುವಾರ ಅಂತ್ಯಗೊಂಡಿತು. ಶೃಂಗದ ಕೊನೆಯ ದಿನ ಆರ್‌ಸಿಇಪಿ ಒಪ್ಪಂದಕ್ಕೆ ಭಾರತವನ್ನು ಹೊರತುಪಡಿಸಿ ಆಗ್ನೇಯ ಏಷ್ಯಾ ರಾಷ್ಟ್ರಗಳು ಸಹಿ ಹಾಕಿದವು. ಇನ್ನೆರಡು ವರ್ಷಗಳ ಒಳಗೆ ಈ ದೇಶಗಳು ತಮ್ಮ ದೇಶದಲ್ಲಿ ಅಗತ್ಯವಿರುವ ವ್ಯಾಪಾರಿ ನಿಯಮಗಳನ್ನು ಬದಲಾವಣೆ ಮಾಡಿಕೊಂಡು ಆರ್‌ಸಿಇಪಿ ಒಪ್ಪಂದದ ಷರತ್ತುಗಳನ್ನು ಜಾರಿಗೊಳಿಸಬೇಕಿದೆ.