ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್‌ಟಿ 2.0 ಸುಧಾರಣೆ ದಸರಾ ಹಬ್ಬದ ಆರಂಭದ ದಿನವಾದ ಸೋಮವಾರ ದೇಶಾದ್ಯಂತ ಜಾರಿಗೆ ಬಂದಿದೆ. ದಿನಬಳಕೆ ವಸ್ತುಗಳು, ಕಾರು, ಸ್ಕೂಟರ್‌, ವಾಷಿಂಗ್‌ಮೆಷಿನ್ ಸೇರಿ 375 ವಸ್ತುಗಳ ತೆರಿಗೆ ಇಳಿಕೆಯಾಗಿದ್ದು, ಮೊದಲ ದಿನವೇ ಖರೀದಿ ಭರಾಟೆ ದೇಶಾದ್ಯಂತ ಕಂಡುಬಂದಿದೆ.

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್‌ಟಿ 2.0 ಸುಧಾರಣೆ ದಸರಾ ಹಬ್ಬದ ಆರಂಭದ ದಿನವಾದ ಸೋಮವಾರ ದೇಶಾದ್ಯಂತ ಜಾರಿಗೆ ಬಂದಿದೆ. ದಿನಬಳಕೆ ವಸ್ತುಗಳು, ಕಾರು, ಸ್ಕೂಟರ್‌, ವಾಷಿಂಗ್‌ಮೆಷಿನ್ ಸೇರಿ 375 ವಸ್ತುಗಳ ತೆರಿಗೆ ಇಳಿಕೆಯಾಗಿದ್ದು, ಮೊದಲ ದಿನವೇ ಖರೀದಿ ಭರಾಟೆ ದೇಶಾದ್ಯಂತ ಕಂಡುಬಂದಿದೆ. ಈ ಮೂಲಕ ಈ ಸಲದ ನವರಾತ್ರಿ ಉಳಿತಾಯದ ಹಬ್ಬವಾಗಿ ಪರಿಣಮಿಸಿದೆ.

ಜಿಎಸ್‌ಟಿ ಇಳಿಕೆಗಾಗಿ ಕೆಲ ದಿನಗಳಿಂದ ಕಾಯುತ್ತಿದ್ದ ಗ್ರಾಹಕರು ಎಲೆಕ್ಚ್ರಾನಿಕ್ ಸ್ಟೋರ್‌ಗಳು, ಸೂಪರ್‌ ಮಾರ್ಕೆಟ್‌ಗಳು, ಕಾರು, ಬೈಕ್‌ ಶೋಂಗಳಿಗೆ ಸೋಮುವಾರವೇ ತೆರಳಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದರು.

ಹಾಗೆ ನೋಡಿದರೆ ದೇಶಾದ್ಯಂತ ಸಣ್ಣಪುಟ್ಟ ಅಂಗಡಿಗಳಲ್ಲಿ ಕೆಲವು ಹಳೆಯ ದರದಲ್ಲೇ ವಸ್ತುಗಳನ್ನು ಮಾರಾಟ ಮಾಡಿದರೆ, ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು ಮಾತ್ರ ಜಿಎಸ್ಟಿ ಕಡಿತಗೊಳಿಸಿ ವಸ್ತುಗಳನ್ನು ಮಾರಾಟ ಮಾಡಲು ಆರಂಭಿಸಿದ್ದು ಕಂಡುಬಂತು.

ಈ ಖದೀದಿ ಭರಾಟೆ ಇಷ್ಟಕ್ಕೇ ನಿಲ್ಲದು. ದಸರೆ ಮುಗಿವವರೆಗೆ ಹಾಗೂ ನಂತರದ ದಿನಗಳಲ್ಲೂ ಮುಂದುವರಿಯಲಿದೆ ಎಂದು ವ್ಯಾಪಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶೇ.13ರಷ್ಟು ಮನೆ ಖರ್ಚು ಉಳಿತಾಯ:

ಈ ನಡುವೆ, ಕೇಂದ್ರ ಸರ್ಕಾರವು ಜಿಎಸ್‌ಟಿ ಕಡಿತದಿಂದಾಗಿ ಪ್ರತಿ ಕುಟುಂಬಕ್ಕೆ ದಿನನಿತ್ಯದ ವಸ್ತುಗಳ ಮೇಲೆ ಶೇ.13ರಷ್ಟು ಉಳಿತಾಯ ಆಗಲಿದೆ. ಸಣ್ಣ ಕಾರು ಖರೀದಿದಾರರಿಗೆ 70 ಸಾವಿರ ರು. ವರೆಗೆ ಉಳಿತಾಯ ಆಗಲಿದೆ ಎಂದು ಹೇಳಿದೆ.

ಕಾಂಗ್ರೆಸ್‌-ಬಿಜೆಪಿ ವಾಕ್ಸಮರ:

ಆದರೆ ಜಿಎಸ್ಟಿ ಇಳಿಕೆ ಶ್ರೇಯಸ್ಸಿನ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡವೆ ವಾಕ್ಸಮರ ಆರಂಭವಾಗಿದೆ.

‘ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಅಧಿಕಾರಾವಧಿಯಲ್ಲೇ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿತ್ತು. ಯುಪಿಎ ಅವಧಿಯಲ್ಲಿ ಗಬ್ಬರ್‌ ಸಿಂಗ್‌ನ ಅಜ್ಜನ ರೀತಿಯಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈಗ ಜಿಎಸ್ಟಿ ಕಡಿತವು ದೇಶಾದ್ಯಂತ ಜನರಲ್ಲಿ ಸಂತೋಷದ ಅಲೆ ಸೃಷ್ಟಿಸಿದೆ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್ ಇದಕ್ಕೆ ತಿರುಗೇಟು ನೀಡಿ, ‘4 ಸ್ತರದ ಜಿಎಸ್‌ಟಿ ಸರಿಯಲ್ಲ ಎಂದಿದ್ದೇ ಕಾಂಗ್ರೆಸ್. ಈಗ 4 ಸ್ತರದ ಜಿಎಸ್ಟಿಯನ್ನು ಕಾಂಗ್ರೆಸ್ ಆಗ್ರಹದಂತೆ 2 ಸ್ತರಕ್ಕೆ ಇಳಿಸಿರುವ ಮೋದಿ, ಅದರ ಶ್ರೇಯವನ್ನು ತಾವು ಪಡೆದಿದ್ದು ಸರಿಯೇ?’ ಎಂದಿದ್ದಾರೆ.

ಅಲ್ಲದೆ, ‘ಮೊದಲು ಕಾಂಗ್ರೆಸ್ ಸಲಹೆಯನ್ನು ಮೋದಿ ನಿರ್ಲಕ್ಷಿಸಿದರು. ಆದರೆ, ಇದೀಗ ಅಮೆರಿಕವು ಭಾರತದ ವಸ್ತುಗಳ ಮೇಲೆ ಸುಂಕ ವಿಧಿಸುತ್ತಿದ್ದಂತೆ ಈ ಸರ್ಕಾರಕ್ಕೆ ತೆರಿಗೆ ಸ್ತರದಲ್ಲಿನ ಸುಧಾರಣೆಯ ಅಗತ್ಯ ಮನವರಿಕೆಯಾಗಿದೆ. ಮೋದಿ ಸರ್ಕಾರದ ಜಿಎಸ್ಟಿ ಕಡಿತದ ಲಾಭ ಜನರಿಗೆ ತಲುಪುತ್ತಿದೆಯೇ, ಇಲ್ಲವೇ ಎಂಬುದನ್ನು ನೋಡಬೇಕಿದೆ’ ಎಂದಿದ್ದಾರೆ.