ಬುಧವಾರ ಏರಿಕೆಯಾಗಿದ್ದ ಚಿನ್ನದ ಬೆಲೆ ಗುರುವಾರ ಕೊಂಚ ಇಳಿಕೆಯಾಗಿದ್ದು, ಖರೀದಿದಾರರಿಗೆ ನೆಮ್ಮದಿ ತಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 280 ರೂ. ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮಧ್ಯ ಪ್ರಾಚ್ಯ ದೇಶಗಳ ಉದ್ವಿಗ್ನ ಪರಿಸ್ಥಿತಿಯ ನಡುವೆ 2026ರ ಆರಂಭದಲ್ಲಿ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದವು. ಆದರೆ ಕ್ರಮೇಣ ಚಿನ್ನದ ದರ ಕಡಿಮೆಯಾಗುತ್ತಲೇ ಬಂದಿದ್ದರೂ, ಇದು ಸದಾ ಕಣ್ಣುಮುಚ್ಚಾಲೆ ಆಡುತ್ತಲೇ ಇರುತ್ತದೆ. ಒಮ್ಮೊಮ್ಮೆ ದರ ಏರಿದರೆ, ಮತ್ತೆ ಕೆಲವು ದಿನ ದರ ಕುಸಿಯುತ್ತದೆ. ಅದೇ ಇನ್ನೊಂದೆಡೆ, ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದ ಏರಿಳಿತವು ಕೂಡ ಚಿನ್ನದ ದರವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೂಡಿಕೆದಾರರು ಸರಿಯಾದ ಸಮಯದಲ್ಲಿ ಚಿನ್ನ ಖರೀದಿಸಲು ರೂಪಾಯಿ ಮೌಲ್ಯದ ಮೇಲೆ ಕಣ್ಣಿಟ್ಟಿರುತ್ತಾರೆ. ಮಧ್ಯಪ್ರಾಚ್ಯದ ಬೆಳವಣಿಗೆಯನ್ನು ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತೈಲ ಬೆಲೆ ಹೆಚ್ಚಾಗುತ್ತಿದ್ದಂತೆ, ಲೋಹಗಳತ್ತ ಹೂಡಿಕೆದಾರರ ಆಕರ್ಷಣೆ ಕಡಿಮೆಯಾಗುತ್ತಿದೆ. ಅಂಥವರಿಗೆ ಇಂದು ಒಂದು ಗುಡ್ನ್ಯೂಸ್ ಸಿಕ್ಕಿದೆ.
ಚಿನ್ನದ ಬೆಲೆ ತುಸು ಕಡಿಮೆ
ಅದೇನೆಂದರೆ, ನಿನ್ನೆ ಬುಧವಾರ (ಜುಲೈ 15) ಚಿನ್ನದ ಬೆಲೆ 770 ರೂ ಏರಿಕೆಯಾಗಿತ್ತು, ಇಂದು ಗುರುವಾರ (ಜುಲೈ 16) ಕೊಂಚ ಕಡಿಮೆಯಾಗಿದ್ದು, 280 ರೂ ಇಳಿಕೆಯಾಗಿದೆ. ಬೆಳ್ಳಿ ಬೆಲೆ ತಟಸ್ಥವಾಗಿದೆ. ಬೆಲೆ ಇಳಿಕೆಯಾಗಿರುವುದರಿಂದ ಖರೀದಿದಾರರಲ್ಲಿ ಇದು ನೆಮ್ಮದಿ ತರಿಸಿದೆ. ಜುಲೈ 16ರಂದು 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 28 ರೂ ಇಳಿಕೆ ಆಗಿದ್ದು, ಗ್ರಾಂ ಬೆಲೆ ಈಗ 14,329 ರೂ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 280 ರೂ ಇಳಿಕೆಯಾಗಿದ್ದು 1,43,290 ರೂಪಾಯಿಗೆ ಇಳಿದಿದೆ. ಅದೇ ರೀತಿ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 25 ರೂ ಕಡಿಮೆಯಾಗಿದೆ. 1 ಗ್ರಾಂ ಬೆಲೆ ಈಗ 13,135 ರೂ ಆಗಿದ್ದು 10 ಗ್ರಾಂ ಬೆಲೆ 250 ರೂ ಇಳಿಕೆಯಾಗಿ, ಈಗ ಬೆಲೆ 1ಲಕ್ಷದ 31 ಸಾವಿರದ 350 ರೂಪಾಯಿ ದಾಖಲಾಗಿದೆ.
ಬೆಂಗಳೂರಲ್ಲಿ ಶುದ್ಧ ಚಿನ್ನದ ಗ್ರಾಂ ಬೆಲೆ 14,329 ರೂ ಇದ್ದು, ಬೆಳ್ಳಿ ಬೆಲೆ ಗ್ರಾಂ ಗೆ 235 ರೂ ಇದೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಇಂದಿನ ಚಿಲ್ಲರೆ ಮಾರಾಟ ದರಗಳು ಬಹುತೇಕ ಒಂದೇ ಆಗಿವೆ. ಈ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನಕ್ಕಿಂತ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಹೆಚ್ಚಿರುತ್ತದೆ. ಗ್ರಾಹಕರು ಚಿನ್ನ ಖರೀದಿಸುವಾಗ ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ಗಮನಿಸಬೇಕು. ಬಿಲ್ಲಿಂಗ್ ಸಮಯದಲ್ಲಿ ಇವುಗಳಿಂದಾಗಿ ಒಟ್ಟು ಬೆಲೆ ಸುಮಾರು ಶೇ. 12ರಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬೆಳ್ಳಿ ಬೆಲೆ ತಟಸ್ಥ
ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಏರಿಕೆಯಾಗಿಲ್ಲ. ಬೆಲೆ ತಟಸ್ಥವಾಗಿದ್ದು ಗ್ರಾಂ ಬೆಲೆ 235 ರೂ ಆಗಿದ್ದು,, 2,35,000 ರೂ ದಾಖಲಾಗಿದೆ. ಜುಲೈ 1 ರಂದು 14,078 ರೂ ಇದ್ದ ಚಿನ್ನದ ಬೆಲೆ ಜುಲೈ 14ಕ್ಕೆ 14329 ಕ್ಕೆ ಏರಿಕೆಯಾಗಿದೆ. ಈ ತಿಂಗಳ ಗರಿಷ್ಠ ಬೆಲೆ 14700 ಕ್ಕೆ ಏರಿಕೆಯಾಗಿತ್ತು. ಹಣದುಬ್ಬರ ಮತ್ತು ಜಾಗತಿಕ ಆರ್ಥಿಕ ನೀತಿಗಳ ಬದಲಾವಣೆಗೆ ಮಾರುಕಟ್ಟೆ ತಕ್ಷಣ ಸ್ಪಂದಿಸುತ್ತಿದೆ. ಹಳೆಯ ಚಿನ್ನವನ್ನು ನೀಡಿ ಹೊಸ ಆಭರಣ ಖರೀದಿಸುವಾಗ ಶೋರೂಮ್‌ಗಳ ಬೈಬ್ಯಾಕ್ ಪಾಲಿಸಿಗಳ ಬಗ್ಗೆ ಸ್ಪಷ್ಟತೆ ಇರಲಿ. ಇದರಿಂದ ನಿಮ್ಮ ಹಳೆಯ ಚಿನ್ನಕ್ಕೆ ಉತ್ತಮ ಮೌಲ್ಯ ಪಡೆಯಲು ಸಾಧ್ಯವಾಗುತ್ತದೆ.

