ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಾರಿದ ಗೌತಮ್ ಅದಾನಿ; ಟಾಪ್ 10 ಪಟ್ಟಿಯಿಂದ ಮುಖೇಶ್ ಅಂಬಾನಿ ಔಟ್
*ಕೆಲವು ದಿನಗಳ ಹಿಂದಷ್ಟೇ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದ ಗೌತಮ್ ಅದಾನಿ
*ಎರಡನೇ ಸ್ಥಾನವನ್ನು ಮರಳಿ ಪಡೆದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್
*ಸೋಮವಾರ ಈಕ್ವಿಟಿ ಮಾರುಕಟ್ಟೆಯಲ್ಲಿನ ಕುಸಿತವೇ ಈ ಬೆಳವಣಿಗೆಗೆ ಕಾರಣ
ನವದೆಹಲಿ (ಸೆ.27): ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್ ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮತ್ತೊಮ್ಮೆ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಕೆಲವೇ ದಿನಗಳ ಹಿಂದೆ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದ ಅದಾನಿ ಈಗ ಒಂದು ಸ್ಥಾನ ಕೆಳಕ್ಕೆ ಜಾರಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮರಳಿ ಎರಡನೇ ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದಾರೆ. ಟೆಸ್ ಸಿಇಒ ಎಲಾನ್ ಮಸ್ಕ್ ಈ ಹಿಂದಿನಂತೆ ಮೊದಲನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಸೋಮವಾರ ಈಕ್ವಿಟಿ ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿದ್ದು, ಅದಾನಿ ಗ್ರೂಪ್ ಷೇರುಗಳ ಬೆಲೆಗಳಲ್ಲಿ ಕೂಡ ಇಳಿಕೆಯಾಗಿತ್ತು. ಈ ಕಾರಣದಿಂದಾಗಿ ಗೌತಮ್ ಅದಾನಿ ನಿವ್ವಳ ಆದಾಯದಲ್ಲಿ 6.91ಬಿಲಿಯನ್ ಡಾಲರ್ ನಷ್ಟವಾಗಿದ್ದು, ಅವರ ಸಂಪತ್ತು 135 ಬಿಲಿಯನ್ ಡಾಲರ್ ಗೆ ಕುಸಿತ ಕಂಡಿತ್ತು. ಇನ್ನು ಸೋಮವಾರ ಭಾರತದ ಷೇರು ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ದೇಶದ ಇನ್ನೊಬ್ಬ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರಿಗೂ ನಷ್ಟ ಉಂಟು ಮಾಡಿದ್ದು, ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರ ಬೀಳುವಂತೆ ಮಾಡಿದೆ. ಮುಖೇಶ್ ಅಂಬಾನಿ ಅವರ ನಿವ್ವಳ ಸಂಪತ್ತು 82.4 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಜಾರಿದ್ದಾರೆ.
ಈ ತಿಂಗಳ ಪ್ರಾರಂಭದಲ್ಲಿ ಗೌತಮ್ ಅದಾನಿ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತದ ಹಾಗೂ ಏಷ್ಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಕೂಡ ಅದಾನಿ ಗಳಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಎಂದು ಗುರುತಿಸಿಕೊಂಡಿದ್ದರು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದ ಅದಾನಿ, 2022ರ ಏಪ್ರಿಲ್ ನಲ್ಲಿ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಇನ್ನು ಆಗಸ್ಟ್ ಅಂತ್ಯದಲ್ಲಷ್ಟೇ ಅದಾನಿ ವಿಶ್ವದ ಮೂರನೇ ಶ್ರೀಮಂತ ಉದ್ಯಮಿ ಸ್ಥಾನಕ್ಕೇರಿದ್ದರು.
ಬರೀ 2022ರಲ್ಲೇ ಅದಾನಿ ಸಂಪತ್ತಿಗೆ 60.9 ಬಿಲಿಯನ್ ಅಮೆರಿಕನ್ ಡಾಲರ್ ಸೇರ್ಪಡೆಗೊಂಡಿದೆ. ಇದು ಇತರ ಉದ್ಯಮಿಗಳಿಗಿಂತ ಐದು ಪಟ್ಟು ಹೆಚ್ಚಿನ ಏರಿಕೆಯಾಗಿದೆ.
ಜಗತ್ತಿನಲ್ಲಿ ಮತ್ತೆ Economic Recession ಪರ್ವ ಆರಂಭ..?
ಕೋವಿಡ್ ಪ್ರಾರಂಭಕ್ಕೂ ಮುನ್ನ ಅಂದ್ರೆ 2020ರ ಜನವರಿ 1ರಂದು ಗೌತಮ್ ಅದಾನಿ ಸಂಪತ್ತು 10 ಬಿಲಿಯನ್ ಡಾಲರ್ ಆಗಿತ್ತು. ವಿಶ್ವದ ಟಾಪ್ 14 ಶ್ರೀಮಂತರಲ್ಲಿ ಕೇವಲ ಗೌತಮ್ ಅದಾನಿ ಸಂಪತ್ತಿನಲ್ಲಿ ಮಾತ್ರ ಈ ವರ್ಷ ಏರಿಕೆ ಕಂಡಿದೆ. ಉಳಿದವರ ಸಂಪತ್ತಿನಲ್ಲಿ ಇಳಿಕೆಯಾಗಿದೆ. ಎಲಾನ್ ಮಸ್ಕ್ ಅವರ ಸಂಪತ್ತಿನಲ್ಲಿ 25.1 ಬಿಲಿಯನ್ ಡಾಲರ್ ಹಾಗೂ ಜೆಫ್ ಬೆಜೋಸ್ ಸಂಪತ್ತಿನಲ್ಲಿ 54.3 ಬಿಲಿಯನ್ ಡಾಲರ್ ಇಳಿಕೆಯಾಗಿದೆ.
ಇನ್ನು 2020ರ ಜನವರಿ 1ರಂದು ಗೌತಮ್ ಅದಾನಿ ಸಂಪತ್ತು 10 ಬಿಲಿಯನ್ ಡಾಲರ್ ಆಗಿತ್ತು. ಅದೇ ಸಮಯದಲ್ಲಿ ಮುಖೇಶ್ ಅಂಬಾನಿ ಸಂಪತ್ತು 59 ಬಿಲಿಯನ್ ಅಮೆರಿಕನ್ ಡಾಲರ್. ಆದ್ರೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅದಾನಿ ಸಂಪತ್ತು ಆರು ಪಟ್ಟು ಹೆಚ್ಚಳವಾಗಿದೆ. ಇಂದು ಅದಾನಿ ಬಳಿಯಿರುವ ಸಂಪತ್ತು 155.7 ಬಿಲಿಯನ್ ಡಾಲರ್. ಅದೇ ಮುಖೇಶ್ ಅಂಬಾನಿ ಅವರ ಸಂಪತ್ತು 92.3 ಬಿಲಿಯನ್ ಡಾಲರ್.
ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದ್ರೆ 10 ವರ್ಷಗಳಲ್ಲಿ ಡಬಲ್ ಆಗುತ್ತೆ ನಿಮ್ಮ ಹಣ!
ಅದಾನಿ ಕಳೆದ ಐದು ವರ್ಷಗಳಲ್ಲಿ ತನ್ನ ಉದ್ಯಮ ಸಾಮ್ರಾಜ್ಯವನ್ನು ಸಾಕಷ್ಟು ವಿಸ್ತರಿಸಿಕೊಂಡಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆಯಿಂದ ಹಿಡಿದು ಬಂದರು ತನಕ, ಸಿಮೆಂಟ್, ಮಾಧ್ಯಮ, ಸಿಟಿ ಗ್ಯಾಸ್ ವಿತರಣೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ.