ಜಗತ್ತಿನಲ್ಲಿ ಮತ್ತೆ Economic Recession ಪರ್ವ ಆರಂಭ..?
2008ರ ನಂತರ ಜಗತ್ತಿನಲ್ಲಿ ಮತ್ತೊಂದು ಆರ್ಥಿಕ ಕುಸಿತ ಭೀತಿ ಎದುರಾಗಿದೆ. ಷೇರುಪೇಟೆಗಳು ಕುಸಿತ ಕಂಡಿದ್ದು, ಕರೆನ್ಸಿ ಮಾರುಕಟ್ಟೆಗಳಿಗೆ ಹೊಡೆತ ಬಿದ್ದಿದೆ. ಅಲ್ಲದೆ, ಅಮೆರಿಕ, ಜಪಾನ್, ಆಸ್ಪ್ರೇಲಿಯಾ, ಚೀನಾ, ಕೊರಿಯಾ ಕೂಡ ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದೆ.
ಮುಂಬೈ / ಲಂಡನ್ / ಟೋಕಿಯೋ: ಏರುತ್ತಿರುವ ಹಣದುಬ್ಬರಕ್ಕೆ (Inflation) ಕಡಿವಾಣ ಹಾಕಲು ವಿಶ್ವದ ಹಲವು ಕೇಂದ್ರೀಯ ಬ್ಯಾಂಕುಗಳು ಬಡ್ಡಿ ದರ ಏರಿಕೆ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಜಾಗತಿಕ ಷೇರುಪೇಟೆ ಹಾಗೂ ಕರೆನ್ಸಿ ಮಾರುಕಟ್ಟೆಗಳಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. 2008ರ ಆರ್ಥಿಕ ಹಿಂಜರಿತ ಬಗ್ಗೆ ಮುನ್ಸೂಚನೆ ನೀಡಿ ಗಮನಸೆಳೆದಿದ್ದ ಅರ್ಥಶಾಸ್ತ್ರಜ್ಞ ನೌರಿಯಲ್ ರೌಬಿನಿ ಅವರು 2022ರ ಅಂತ್ಯಕ್ಕೆ ವಿಶ್ವ ಮತ್ತೊಮ್ಮೆ ಆರ್ಥಿಕ ಹಿಂಜರಿತ ಅನುಭವಿಸಲಿದೆ ಎಂದು ಭವಿಷ್ಯ ನುಡಿದ ಬೆನ್ನಿಗೆ ಈ ಬೆಳವಣಿಗೆಗಳು ಆಗುತ್ತಿರುವುದರಿಂದ ಜಗತ್ತಿಗೆ ‘ರಿಸೆಷನ್’ (Global Recession) ಆತಂಕ ಕಾಣಿಸಿಕೊಂಡಿದೆ. ಒಂದೆಡೆ, ಭಾರತದ ರೂಪಾಯಿ (Rupee) ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರೆ, ಮತ್ತೊಂದೆಡೆ ಬ್ರಿಟನ್‌ನ ಕರೆನ್ಸಿಯಾಗಿರುವ ಪೌಂಡ್ (Pound) 4 ದಶಕಗಳ ಕನಿಷ್ಠಕ್ಕೆ ಜಾರಿದೆ. ಜಪಾನ್‌ನ ಕರೆನ್ಸಿಯಾಗಿರುವ ಯೆನ್ (Yen), ಯುರೋಪ್‌ನ ಯುರೋ (Euro) ಕೂಡ ಕುಸಿತ ಕಾಣುತ್ತಿದೆ. ಇದೇ ವೇಳೆ, ಅಮೆರಿಕ, ಜಪಾನ್, ಆಸ್ಪ್ರೇಲಿಯಾ, ದಕ್ಷಿಣ ಕೊರಿಯಾ, ಹಾಂಕಾಂಗ್, ಶಾಂಘೈನ ಷೇರುಪೇಟೆಗಳು ಕುಸಿಯುತ್ತಲೇ ಇವೆ.
ಬ್ರಿಟನ್‌ನಲ್ಲಿ ಆರ್ಥಿಕ ಕುಸಿತ ತಡೆಯಲು ತೆರಿಗೆ ದರಗಳನ್ನು ಕಡಿತಗೊಳಿಸಿ, ಜನರು ಹೆಚ್ಚು ವೆಚ್ಚ ಮಾಡುವುದಕ್ಕೆ ಹುರಿದುಂಬಿಸುವ ಪ್ರಯತ್ನ ಮಾಡಲಾಗಿದೆ. ಆದರೆ, ಈ ಕ್ರಮದಿಂದ ಸರ್ಕಾರ ತನ್ನ ಯೋಜನೆಗಳಿಗಾಗಿ ಸಾರ್ವಜನಿಕವಾಗಿ ಸಾಲ ಸಂಗ್ರಹಿಸಬೇಕಾಗುತ್ತದೆ. ಇದರಿಂದ ಜೀವನ ನಿರ್ವಹಣೆ ಬಿಕ್ಕಟ್ಟು ಮತ್ತಷ್ಟು ವಿಷಮಗೊಳ್ಳಲಿದೆ ಎಂಬ ಭೀತಿ ಪೌಂಡ್ ಮೇಲಾಗಿ ಅದು ಕುಸಿಯಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನು ಓದಿ: US Recession ಭೀತಿ: 80 ಡಾಲರ್‌ಗಿಂತ ಕಡಿಮೆಗೆ ಕುಸಿದ Crude Oil; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಯಾವಾಗ..?
ಎಲ್ಲಿ ಎಷ್ಟು ಕುಸಿತ?:
ಡಾಲರ್ ವಿರುದ್ಧ ಬ್ರಿಟನ್ ಪೌಂಡ್ ಸೋಮವಾರ ಶೇ.2.3 ರಷ್ಟು ಕುಸಿದು 1.0671ಕ್ಕೆ ತಲುಪಿದೆ. ಶುಕ್ರವಾರ ಕೂಡ ಶೇ.3 ರಷ್ಟು ಕುಸಿತ ಅನುಭವಿಸಿತ್ತು. ಡಾಲರ್ ವಿರುದ್ಧ ಜಪಾನ್‌ನ ಯೆನ್ ಕಳೆದ ವಾರ 146ಕ್ಕೆ ಕುಸಿದಿತ್ತು. ಜಪಾನ್ ಬ್ಯಾಂಕುಗಳು ಮಧ್ಯಪ್ರವೇಶಿಸಿ ಬಲ ತುಂಬಿದ್ದರಿಂದ 143 ಯೆನ್‌ಗೆ ಏರಿಕೆಯಾಗಿದೆ. ಡಾಲರ್ ವಿರುದ್ಧ ಯುರೋ 96.88ರಿಂದ 96.32 ಸೆಂಟ್‌ಗೆ ಇಳಿದಿದೆ.
ಭಾರತದ ರೂಪಾಯಿ ಸಾರ್ವಕಾಲಿಕ ಕುಸಿತ
ಅಮೆರಿಕನ್ ಡಾಲರ್ ವಿರುದ್ಧ ಭಾರತದ ರೂಪಾಯಿ ಸೋಮವಾರ ಒಂದೇ ದಿನ 58 ಪೈಸೆಯಷ್ಟು ಕುಸಿತ ಅನುಭವಿಸಿದೆ. ಇದರಿಂದಾಗಿ ರೂಪಾಯಿ ಮೌಲ್ಯ 81.67 ರೂ.ಗೆ ಇಳಿಕೆ ಕಂಡಿದ್ದು, ಇದು ಸಾರ್ವಕಾಲಿಕ ಕನಿಷ್ಠ ಎನಿಸಿಕೊಂಡಿದೆ. ಸತತ 4 ದಿನಗಳಿಂದ ಡಾಲರ್ ಎದುರು ರುಪಾಯಿ ಕುಸಿತ ಕಾಣುತ್ತಿದ್ದು, ಒಟ್ಟು 193 ಪೈಸೆಯಷ್ಟು ಕುಸಿದಿದೆ.
ಇದನ್ನೂ ಓದಿ: 2023ರಲ್ಲಿ 1970ಕ್ಕಿಂತಲೂ ತೀವ್ರವಾದ ಜಾಗತಿಕ ಆರ್ಥಿಕ ಹಿಂಜರಿತ ಭೀತಿ: ವಿಶ್ವಸಂಸ್ಥೆ
ಬಾಂಬೆ ಷೇರುಪೇಟೆ 953.7 ಅಂಕ ಪತನ
ಸತತ ನಾಲ್ಕನೇ ದಿನವೂ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಭರ್ಜರಿ ಇಳಿಕೆ ದಾಖಲಿಸಿದೆ. ಸೂಚ್ಯಂಕ ಸೋಮವಾರ 953.70 ಅಂಕಗಳಷ್ಟು ಕುಸಿತ ಕಂಡು 57,145.22ಕ್ಕೆ ಇಳಿದಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 1060 ಅಂಕ ಕುಸಿದಿತ್ತು. ನಂತರ ಚೇತರಿಸಿಕೊಂಡಿತು. 4 ದಿನಗಳ ಕುಸಿತದಿಂದ ಹೂಡಿಕೆದಾರರ ಸಂಪತ್ತು 13.30 ಲಕ್ಷ ಕೋಟಿ ರೂ.ನಷ್ಟು ಕರಗಿದೆ.