ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮರಳಿ ಮೂರನೇ ಸ್ಥಾನಕ್ಕೆ ಜಿಗಿದ ಗೌತಮ್ ಅದಾನಿ
*ಕೆಲವು ದಿನಗಳ ಹಿಂದೆ ನಾಲ್ಕನೇ ಸ್ಥಾನಕ್ಕೆ ಜಾರಿದ್ದ ಗೌತಮ್ ಅದಾನಿ
*ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿದ ಅದಾನಿ
*ಮೊದಲ ಸ್ಥಾನದಲ್ಲಿ ಎಲಾನ್ ಮಸ್ಕ್, ದ್ವಿತೀಯ ಸ್ಥಾನದಲ್ಲಿ ಬರ್ನಾರ್ಡ್ ಅರ್ನಾಲ್ಟ್
ನವದೆಹಲಿ (ಅ.31): ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ಮರಳಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಸತತವಾಗಿ ಏರಿಕೆಯ ಹಾದಿಯಲ್ಲಿದ್ದ ಪರಿಣಾಮ ಗೌತಮ್ ಅದಾನಿ ಸಂಪತ್ತಿನಲ್ಲಿ ಕೂಡ ಹೆಚ್ಚಳವಾಗಿದೆ. ಹೀಗಾಗಿ ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಗೌತಮ್ ಅದಾನಿ ಮೂರನೇ ಸ್ಥಾನಕ್ಕೇರಿದ್ದಾರೆ. ಸೋಮವಾರ ಅದಾನಿ ಸಂಪತ್ತು 314 ಮಿಲಿಯನ್ ಡಾಲರ್ ಏರಿಕೆಯಾಗಿದ್ದು, ಅವರ ಒಟ್ಟು ಸಂಪತ್ತು 131.9 ಬಿಲಿಯನ್ ಡಾಲರ್ ತಲುಪಿದೆ. ಫ್ರಾನ್ಸ್ ನ ಬರ್ನಾರ್ಡ್ ಅರ್ನಾಲ್ಟ್ 156.5 ಬಿಲಿಯನ್ ಡಾಲರ್ ನಿವ್ವಳ ಸಂಪತ್ತಿನೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಜೆಫ್ ಬೆಜೋಸ್ 126.9 ಬಿಲಿಯನ್ ಡಾಲರ್ ನಿವ್ವಳ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೆಲವು ಸಮಯದ ಹಿಂದೆ ಗೌತಮ್ ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಆದರೆ, ಷೇರು ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಕಾರಣದಿಂದ ನಾಲ್ಕನೇ ಸ್ಥಾನಕ್ಕೆ ಜಾರಿದ್ದರು. ಜೆಫ್ ಬೆಜೋಸ್ ಮೂರನೇ ಸ್ಥಾನಕ್ಕೇರಿದ್ದರು. ಸೆಪ್ಟೆಂಬರ್ ನಲ್ಲಿ ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕೂಡ ಏರಿದ್ದರು.
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ, ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕೆ ಗೌತಮ್ ಅದಾನಿ, ಜೆಫ್ ಬೆಜೋಸ್ ಹಾಗೂ ಬರ್ನಾರ್ಡ್ ಅರ್ನಾಲ್ಟ್ ನಡುವೆ ತೀವ್ರ ಪೈಪೋಟಿ ನಡೆಯುತ್ತಲೇ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ಆಧರಿಸಿ ಜೆಫ್ ಬೆಜೋಸ್ ಹಾಗೂ ಬರ್ನಾರ್ಡ್ ಅರ್ನಾಲ್ಟ್ ಸಂಪತ್ತಿನಲ್ಲಿ ಬದಲಾವಣೆಯಾದಂತೆ ಅದು ಗೌತಮ್ ಅದಾನಿ ಅವರ ಸ್ಥಾನದ ಮೇಲೂ ಪ್ರಭಾವ ಬೀರುತ್ತದೆ. ಈ ಮೂವರು ಶ್ರೀಮಂತರ ಸಂಪತ್ತಿನಲ್ಲಿ ಸುಮಾರು 30 ಬಿಲಿಯನ್ ಡಾಲರ್ ವ್ಯತ್ಯಾಸವಿದೆ. ಹೀಗಾಗಿ ಈ ಮೂವರ ನಡುವೆ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನಕ್ಕೆ ಸಂಗೀತ ಕುರ್ಚಿ ಮಾದರಿಯಲ್ಲಿ ಪೈಪೋಟಿ ನಡೆಯುತ್ತಲೇ ಇರುತ್ತದೆ. ಆದರೆ, ನಂ.1 ಪಟ್ಟ ಮಾತ್ರ ಅಲುಗಾಡದೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರದ್ದೇ ಆಗಿದೆ. 223.8 ಬಿಲಿಯನ್ ಡಾಲರ್ ನಿವ್ವಳ ಸಂಪತ್ತಿನೊಂದಿಗೆ ಎಲಾನ್ ಮಸ್ಕ್ ಈ ಮೂವರಿಗಿಂತ ರೇಸ್ ನಲ್ಲಿ ಸಾಕಷ್ಟು ಮುಂದಿರುವ ಮೂಲಕ ನಂ.1 ಪಟ್ಟವನ್ನು ಕಾಯ್ದುಕೊಂಡಿದ್ದಾರೆ.
ನೆಮ್ಮದಿಯ ನಿವೃತ್ತಿ ಜೀವನಕ್ಕೆ ಏನ್ ಮಾಡ್ಬೇಕು? ನಿತಿನ್ ಕಾಮತ್ ನೀಡಿರುವ 5 ಟಿಪ್ಸ್ ಹೀಗಿದೆ..
ಅದಾನಿ ಗ್ರೂಪ್ ನಿಂದ 150 ಬಿಲಿಯನ್ ಡಾಲರ್ ಹೂಡಿಕೆ
ವರದಿಯೊಂದರ ಪ್ರಕಾರ ಅದಾನಿ ಗ್ರೂಪ್ ಹಸಿರು ಇಂಧನ, ಡೇಟಾ ಕೇಂದ್ರಗಳು, ವಿಮಾನ ನಿಲ್ದಾಣಗಳು ಹಾಗೂ ಆರೋಗ್ಯ ಸೇವಾ ಕ್ಷೇತ್ರಗಳಿಗೆ ಸಂಬಂಧಿಸಿದ ಕೈಗಾರಿಕೆಗಳಲ್ಲಿ 150 ಬಿಲಿಯನ್ ಡಾಲರ್ ಗಿಂತಲೂ ಅಧಿಕ ಹಣ ಹೂಡಿಕೆ ಮಾಡುವ ಸಾಧ್ಯತೆಯಿದೆ. ಈ ಮೂಲಕ 1 ಟ್ರಿಲಿಯನ್ ಡಾಲರ್ ಮೌಲ್ಯದ ಜಾಗತಿಕ ಕಂಪನಿಗಳ ಕ್ಲಬ್ ಸೇರುವ ಕನಸನ್ನು ಬೆನ್ನಟ್ಟಲಿದೆ ಎಂದು ಹೇಳಲಾಗಿದೆ.
2022ರಲ್ಲೇ ಅದಾನಿ ಸಂಪತ್ತಿಗೆ 60.9 ಬಿಲಿಯನ್ ಅಮೆರಿಕನ್ ಡಾಲರ್ ಸೇರ್ಪಡೆಗೊಂಡಿದೆ. ಇದು ಇತರ ಉದ್ಯಮಿಗಳಿಗಿಂತ ಐದು ಪಟ್ಟು ಹೆಚ್ಚಿನ ಏರಿಕೆಯಾಗಿದೆ. ಕೋವಿಡ್ ಪ್ರಾರಂಭಕ್ಕೂ ಮುನ್ನ ಅಂದ್ರೆ 2020ರ ಜನವರಿ 1ರಂದು ಗೌತಮ್ ಅದಾನಿ ಸಂಪತ್ತು 10 ಬಿಲಿಯನ್ ಡಾಲರ್ ಆಗಿತ್ತು.
ನ.1ರಿಂದ ಬದಲಾಗಲಿವೆ ಈ 4 ನಿಯಮಗಳು; ಗ್ರಾಹಕರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ!
60 ವರ್ಷದ ಅದಾನಿ ಕಳೆದ ಐದು ವರ್ಷಗಳಲ್ಲಿ ತನ್ನ ಉದ್ಯಮ ಸಾಮ್ರಾಜ್ಯವನ್ನು ಸಾಕಷ್ಟು ವಿಸ್ತರಿಸಿಕೊಂಡಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆಯಿಂದ ಹಿಡಿದು ಬಂದರು ತನಕ, ಸಿಮೆಂಟ್, ಮಾಧ್ಯಮ, ಸಿಟಿ ಗ್ಯಾಸ್ ವಿತರಣೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅದಾನಿ ಗ್ರೂಪ್ ಪ್ರಸ್ತುತ ಭಾರತದ ಅತೀದೊಡ್ಡ ಖಾಸಗಿ ವಲಯದ ಬಂದರು ಹಾಗೂ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಯಾಗಿದೆ.