ನೆಮ್ಮದಿಯ ನಿವೃತ್ತಿ ಜೀವನಕ್ಕೆ ಏನ್ ಮಾಡ್ಬೇಕು? ನಿತಿನ್ ಕಾಮತ್ ನೀಡಿರುವ 5 ಟಿಪ್ಸ್ ಹೀಗಿದೆ..
ಭವಿಷ್ಯದ ಯೋಚನೆ ಇಂದು ಇದ್ದರೆ ಮಾತ್ರ ನಾಳೆ ನೆಮ್ಮದಿ. ಹಾಗಾಗಿ ನಿವೃತ್ತಿ ಬದುಕಿಗಾಗಿ ಜೀವನದಲ್ಲಿ ಬೇಗನೆ ಹೂಡಿಕೆ ಪ್ರಾರಂಭಿಸೋದು ಅಗತ್ಯ ಕೂಡ. ನಿವೃತ್ತಿ ಬದುಕಿನ ಹಣಕಾಸು ಯೋಜನೆಗಳು ಹೇಗಿರಬೇಕು ಎಂಬ ಬಗ್ಗೆ ಜೆರೋಧಾ ಸಹಸಂಸ್ಥಾಪಕ ನಿತಿನ್ ಕಾಮತ್ ಯುವ ಹೂಡಿಕೆದಾರರಿಗೆ ಕೆಲವು ಅತ್ಯಮೂಲ್ಯ ಟಿಪ್ಸ್ ನೀಡಿದ್ದಾರೆ. ಹಾಗಾದ್ರೆ ಕಾಮತ್ ನೀಡಿರುವ ಟಿಪ್ಸ್ ಏನು? ಇಲ್ಲಿದೆ ಮಾಹಿತಿ.
ಬೆಂಗಳೂರು (ಅ.31): ದೇಶದ ಅತೀದೊಡ್ಡ ಆನ್ ಲೈನ್ ಬ್ರೋಕರೇಜ್ ಸಂಸ್ಥೆಗಳಲ್ಲೊಂದಾದ ಜೆರೋಧಾ ಸಹಸಂಸ್ಥಾಪಕ ನಿತಿನ್ ಕಾಮತ್, ಉದ್ಯೋಗಿಗಳಿಗೆ ನಿವೃತ್ತಿ ಹಾಗೂ ಭವಿಷ್ಯದ ಆರ್ಥಿಕ ಯೋಜನೆಗಳ ಬಗ್ಗೆ ಕೆಲವು ಟಿಪ್ಸ್ ಹಂಚಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕಾಮತ್ ಯುವ ಉದ್ಯೋಗಿಗಳಿಗೆ ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಇಂದು ತಂತ್ರಜ್ಞಾನದ ಅಭಿವೃದ್ಧಿ ನಿವೃತ್ತಿ ವಯಸ್ಸನ್ನು 50 ಕ್ಕೆ ಇಳಿಕೆ ಮಾಡಿದೆ. ಹಾಗೆಯೇ ವೈದ್ಯಕೀಯ ಪ್ರಗತಿಯಿಂದ ಜೀವಿತಾವಧಿ 80ಕ್ಕೆ ಏರಿಕೆಯಾಗಿದೆ. ಹೀಗಾಗಿ 50 ಹಾಗೂ 80ರ ನಡುವಿನ ವಯಸ್ಸಿನಲ್ಲಿ ಜೀವನ ಸುಗಮವಾಗಿ ಸಾಗಲು ಹಣಕಾಸು ಯೋಜನೆಯ ಅಗತ್ಯವನ್ನು ಕಾಮತ್ ಒತ್ತಿ ಹೇಳಿದ್ದಾರೆ. ನಿವೃತ್ತಿ ಸಮಸ್ಯೆಗಳು ಈಗಿನಿಂದ ಮುಂದಿನ 25 ವರ್ಷಗಳಲ್ಲಿ ಬಹುತೇಕ ರಾಷ್ಟ್ರಗಳಲ್ಲಿ ಅತೀದೊಡ್ಡ ತೊದರೆಯಾಗಿ ಕಾಡಲಿದೆ ಎಂದು ಕಾಮತ್ ಭವಿಷ್ಯ ನುಡಿದಿದ್ದಾರೆ. ಇದನ್ನು ಉದಾಹರಣೆಸಹಿತ ವಿವರಿಸಿರುವ ಕಾಮತ್, ಈ ಹಿಂದಿನ ತಲೆಮಾರಿನವರಿಗೆ ನಿವೃತ್ತಿ ನಂತರದ ಬದುಕನ್ನು ನೆಮ್ಮದಿಯಾಗಿ ಸಾಗಿಸಲು ಸುದೀರ್ಘಾವಧಿಯ ರಿಯಲ್ ಎಸ್ಟೇಟ್ ಹಾಗೂ ಈಕ್ವಿಟಿ ಮಾರುಕಟ್ಟೆಗಳಿದ್ದವು. ಇವು ನಿವೃತ್ತಿ ನಿಧಿ ಸ್ಥಾಪಿಸಲು ನೆರವು ನೀಡುತ್ತಿದ್ದವು. ಆದರೆ, ಭವಿಷ್ಯದಲ್ಲಿ ಈ ಪರಿಸ್ಥಿತಿ ಇರೋದಿಲ್ಲ ಎಂದು ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ನಿತಿನ್ ಕಾಮತ್ ಸಹೋದರ ನಿಖಿಲ್ ಕಾಮತ್ ಜೊತೆ ಸೇರಿ ಸುಮಾರು 10 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜೆರೋಧಾ ಎಂಬ ರಿಟೇಲ್ ಸ್ಟಾಕ್ ಬ್ರೋಕರ್ ಸಂಸ್ಥೆಯನ್ನು ಸ್ಥಾಪಿಸಿದ್ದರು. 2021-22ನೇ ಸಾಲಿನಲ್ಲಿ ಈ ಸಂಸ್ಥೆ 1,800 ಕೋಟಿ ರೂ. ಲಾಭ ಗಳಿಸಿದ್ದು, 4,300 ಕೋಟಿ ರೂ. ಆದಾಯ ಗಳಿಸಿದೆ. ಇದು ದೇಶದ ಅತೀದೊಡ್ಡ ಆನ್ ಲೈನ್ ಷೇರು ಬ್ರೋಕರೇಜ್ ಕಂಪನಿ ಎಂದು ಗುರುತಿಸಿಕೊಂಡಿದೆ. ಗ್ರೋವ್ ಮತ್ತು ಅಪ್‌ಸ್ಟಾಕ್ಸ್ ಸೇರಿದಂತೆ ಇತರ ಆನ್‌ಲೈನ್ ಬ್ರೋಕರೇಜ್ ಸಂಸ್ಥೆಗಳೊಂದಿಗೆ ಜೆರೋಧಾ ತೀವ್ರ ಪೈಪೋಟಿ ನಡೆಸುತ್ತಿದೆ.
ನ.1ರಿಂದ ಬದಲಾಗಲಿವೆ ಈ 4 ನಿಯಮಗಳು; ಗ್ರಾಹಕರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ!
ಕಾಮತ್ ಟಿಪ್ಸ್ ಹೀಗಿದೆ
ಉದ್ಯೋಗ ಸಿಕ್ಕ ತಕ್ಷಣವೇ ನಿವೃತ್ತಿ ಬದುಕಿಗೆ ಉಳಿತಾಯ ಮಾಡಲು ಪ್ರಾರಂಭಿಸಬೇಕು ಎಂಬುದು ಬಹುತೇಕ ಹೂಡಿಕೆ ಸಲಹೆಗಾರರ ಅಭಿಪ್ರಾಯ. ನಿತಿನ್ ಕಾಮತ್ ಕೂಡ ಇದಕ್ಕೆ ಹೊರತಾಗಿಲ್ಲ. ಹಾಗಿದ್ರೆ ಯುವ ಜನರಿಗೆ ನಿತಿನ್ ಕಾಮತ್ ನೀಡಿರುವ ಟಿಪ್ಸ್ ಏನು? ಇಲ್ಲಿದೆ ಮಾಹಿತಿ.
1.ಪ್ರತಿಯೊಬ್ಬರು ಸಾಲ ತೆಗೆದುಕೊಳ್ಳೋದನ್ನು ನೋಡಿ ಪ್ರೇರಿತರಾಗಿ ಸಾಲ ಮಾಡಲು ಹೋಗಬೇಡಿ. ಹಾಗೆಯೇ ವಸ್ತುಗಳನ್ನು ಖರೀದಿಸೋದಕ್ಕಾಗಿ ಸಾಲ ಮಾಡಬೇಡಿ. ಅದರಲ್ಲೂ ಅನಗತ್ಯವಾದ ಹಾಗೂ ಮೌಲ್ಯ ಕಳೆದುಕೊಳ್ಳುವ ವಸ್ತುಗಳನ್ನು ಯಾವುದೇ ಕಾರಣಕ್ಕೂ ಸಾಲ ಮಾಡಿ ಖರೀದಿಸಬೇಡಿ.
2.ಜೀವನದಲ್ಲಿ ದುಡಿಯಲು ಪ್ರಾರಂಭಿಸಿದ ತಕ್ಷಣವೇ ಉಳಿತಾಯ ಮಾಡಲು ಮುಂದಾಗಿ ಎಂಬ ಸಲಹೆಯನ್ನು ಕಾಮತ್ ಯುವ ಹೂಡಿಕೆದಾರರಿಗೆ ನೀಡಿದ್ದಾರೆ. ಎಫ್ ಡಿಗಳು, ಜಿ-ಸೆಕ್ಸ್ ಹಾಗೂ ಎಸ್ ಐಪಿ ಅಥವಾ ಇಂಡೆಕ್ಸ್ ಫಂಡ್ಸ್ ಅಥವಾ ಎಕ್ಸ್ ಚೇಂಜ್ ಟ್ರೇಡ್ ಫಂಡ್ಸ್ (ETF) ಮುಂತಾದ ಕೆಲವು ಆಯ್ಕೆಗಳಲ್ಲಿ ಹೂಡಿಕೆ ಮಾಡಬಹುದು. ಕಾಮತ್ ಪ್ರಕಾರ ದೀರ್ಘಾವಧಿಯಲ್ಲಿ ಹಣದುಬ್ಬರ ಹಿಮ್ಮೆಟ್ಟಿಸಲು ಷೇರುಗಳು ಇನ್ನೂ ಕೂಡ ಅತ್ಯುತ್ತಮ ಆಯ್ಕೆಗಳಾಗಿವೆ.
Personal Finance: ಪತ್ನಿ ಭವಿಷ್ಯ ಭದ್ರವಾಗ್ಬೇಕೆಂದ್ರೆ ಮಾಡಿ ಇಲ್ಲಿ ಹೂಡಿಕೆ
3.ನಿಮಗೆ ಹಾಗೂ ನಿಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಮಾಡಿಸಿರಿ ಎಂಬ ಸಲಹೆಯನ್ನು ಕಾಮತ್ ನೀಡಿದ್ದಾರೆ. ಒಂದೇ ಒಂದು ಆರೋಗ್ಯ ಸಂಬಂಧಿಸಿ ಸಮಸ್ಯೆ ಬಹುತೇಕ ಜನರನ್ನು ಆರ್ಥಿಕ ದುಸ್ಥಿತಿಗೆ ತಳ್ಳಲು ಅಥವಾ ಅನೇಕ ವರ್ಷಗಳ ಕಾಲ ಅವರನ್ನು ಆರ್ಥಿಕವಾಗಿ ಹಿಂದೆ ಉಳಿಯುವಂತೆ ಮಾಡಲು ಸಾಕು. ಹೀಗಾಗಿ ಉದ್ಯೋಗದಾತ ಕಂಪನಿಯಿಂದ ಸಿಗುವ ಪಾಲಿಸಿ ಹೊರತಾಗಿ ಹೊರಗಡೆ ಇನ್ನೊಂದು ಆರೋಗ್ಯ ವಿಮೆ ಮಾಡಿಸಿ. ಏಕೆಂದ್ರೆ ಉದ್ಯೋಗ ದೀರ್ಘಕಾಲ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
4.ಹೂಡಿಕೆದಾರನಿಗೆ ಏನಾದ್ರೂ ಸಂಭವಿಸಿದ್ರೆ ಆತನ ಮೇಲೆ ಅವಲಂಬಿತರಾಗಿರೋರಿಗೆ ಅದರಿಂದ ಪ್ರಯೋಜನ ಸಿಗಬೇಕು. ಸಾಕಷ್ಟು ಕವರೇಜ್ ಹೊಂದಿರುವ ಟರ್ಮ್ ಪಾಲಿಸಿ ಖರೀದಿಸಿ. ಅತ್ಯಂತ ಸಂಕಷ್ಟದ ಸಮಯದಲ್ಲಿ ನಿಮ್ಮನ್ನು ನಂಬಿಕೊಂಡವರು ಈ ಹಣವನ್ನು ಎಫ್ ಡಿಯಲ್ಲಿಟ್ಟು ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಾಮತ್ ಸಲಹೆ ನೀಡಿದ್ದಾರೆ.
5.ಕೊನೆಯದಾಗಿ ಕಾಮತ್, ಸಾಲ ತೆಗೆದುಕೊಳ್ಳೋದನ್ನು ನಿಲ್ಲಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.