ವಾಷಿಂಗ್ಟನ್‌(ಮೇ.11): ಅತ್ಯಾಚಾರ ಪ್ರಕರಣ ದೋಷಿ, ಹೂಡಿಕೆದಾರ ಜೆಫ್ರಿ ಎಪಿಸ್ಟನ್‌ ಜೊತೆ ಬಿಲ್‌ಗೇಟ್ಸ್‌ ನಂಟು ಹೊಂದಿದ್ದೇ, ಅವರ ವಿವಾಹ ವಿಚ್ಛೇಧನಕ್ಕೆ ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ.

2013ರಿಂದಲೂ ಜೆಫ್ರಿ ಜೊತೆ ಬಿಲ್‌ ನಂಟು ಹೊಂದಿದ್ದರು. ಇದಕ್ಕೆ ಹಲವು ಬಾರಿ ಮೆಲಿಂಡಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ ಜೆಫ್ರಿ ಜೊತೆಗಿನ ಸಂಬಂಧವನ್ನು ಬಿಲ್‌ ಕಡಿದುಕೊಂಡಿರಲಿಲ್ಲ. ಜೊತೆಗೆ 2019ರಲ್ಲಿ ಹಲವು ಬಾರಿ ಬಿಲ್‌-ಜೆಫ್ರಿ ಭೇಟಿ ನಡೆದಿತ್ತು. ಒಮ್ಮೆ ಹೋಟೆಲ್‌ನಲ್ಲಿ ಇಬ್ಬರು ಒಟ್ಟಿಗೆ ಉಳಿದುಕೊಂಡಿದ್ದರು. ಇದರಿಂದ ಬೇಸತ್ತ ಮೆಲಿಂಡಾ 2019ರಲ್ಲೇ ಡೈವೋರ್ಸ್‌ಗೆ ನಿರ್ಧರಿಸಿದ್ದರು.

27 ವರ್ಷದ ದಾಂಪತ್ಯ ಅಂತ್ಯ: ವಿಚ್ಛೇದನಕ್ಕೆ ಮುಂದಾದ ಬಿಲ್‌ ಗೇಟ್ಸ್ ದಂಪತಿ!

ನಂತರ ಸುದೀರ್ಘ ಮಾತುಕತೆ, ಕಾನೂನು ಸಮಾಲೋಚನೆ ಬಳಿಕ ಇದೀಗ ಇಬ್ಬರೂ ಈ ವಿಷಯವನ್ನು ಬಹಿರಂಗಪಡಿಸಿದರು ಎಂದು ಮೂಲಗಳು ತಿಳಿಸಿದೆ.

ಆಸ್ತಿ ಹಂಚಿಕೆ ಹೇಗೆ?:

ಬಿಲ್‌ ಗೇಟ್ಸ್‌ ಅವರು ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಅವರ ಆಸ್ತಿ 124 ಶತಕೋಟಿ ಡಾಲರ್‌ ಆಗಿದೆ. ಇನ್ನು ಗೇಟ್ಸ್‌ ಫೌಂಡೇಶನ್‌ ಸುಮಾರು 50 ಶತಕೋಟಿ ಡಾಲರ್‌ ಮೌಲ್ಯದ್ದಾಗಿದೆ. ಇವರ ವಿಚ್ಛೇದನವು ಗೇಟ್ಸ್‌ ಆಸ್ತಿ ಹಾಗೂ ಪ್ರತಿಷ್ಠಾನದ ಆಸ್ತಿಪಾಸ್ತಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಕರನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

ಕೋವಿಡ್‌ ಆಯ್ತು, ಜಗತ್ತಿಗೆ ಕಾದಿದೆ ಇನ್ನೂ 2 ವಿಪತ್ತು: ಬಿಲ್‌ ಗೇಟ್ಸ್‌ ಭವಿಷ್ಯ!

‘ಜಂಟಿ ಆಸ್ತಿಯನ್ನು ಸಮನಾಗಿ ಹಂಚಿಕೆ ಮಾಡಬೇಕು’ ಎಂದು ಕೋರಿ ದಂಪತಿಯು ಕಿಂಗ್‌ ಕೌಂಟಿ ಸುಪೀರಿಯರ್‌ ಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.

ಅಮೆರಿಕದ ಕಾನೂನು ಪ್ರಕಾರ ಮದುವೆಗಿಂತ ಮೊದಲು ಸಂಪಾದಿಸಿದ್ದ ಆಸ್ತಿ ವೈಯಕ್ತಿಕವಾಗಿ ಅವರವರ ಪಾಲಾಗುತ್ತದೆ. ವೈವಾಹಿಕ ಜೀವನದ ಸಂದರ್ಭದಲ್ಲಿ ಸಂಪಾದಿಸಿದ ಆಸ್ತಿ ಪರಸ್ಪರ ಹಂಚಿಕೆ ಆಗಬೇಕು.