ಕೋವಿಡ್ ಆಯ್ತು, ಜಗತ್ತಿಗೆ ಕಾದಿದೆ ಇನ್ನೂ 2 ವಿಪತ್ತು: ಬಿಲ್ ಗೇಟ್ಸ್ ಭವಿಷ್ಯ!
ಕೋವಿಡ್ ಆಯ್ತು, ಜಗತ್ತಿಗೆ ಕಾದಿದೆ ಇನ್ನೂ 2 ವಿಪತ್ತು| ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಭವಿಷ್ಯ| ಕೊರೋನಾ ಬಗ್ಗೆ 5 ವರ್ಷ ಮೊದಲೇ ಹೇಳಿದ್ದ ಉದ್ಯಮಿ
ನ್ಯೂಯಾರ್ಕ್(ಫೆ.07): ಜಗತ್ತಿಗೆ ಕೊರೋನಾ ರೀತಿಯ ವೈರಾಣು ಅಪ್ಪಳಿಸಲಿದೆ ಎಂದು ಐದು ವರ್ಷ ಮುಂಚೆಯೇ ಹೇಳಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಇದೀಗ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಕೊರೋನಾ ಬಳಿಕ ಇನ್ನೂ ಎರಡು ವಿನಾಶಕಾರಿ ವಿಪತ್ತುಗಳು ವಿಶ್ವವನ್ನು ಕಾಡಲಿವೆ ಎಂದು ಹೇಳಿದ್ದಾರೆ.
ಹವಾಮಾನ ಬದಲಾವಣೆ ಹಾಗೂ ಜೈವಿಕ ಭಯೋತ್ಪಾದನೆ ಎಂಬ ಎರಡು ಮಹಾವಿಪತ್ತುಗಳನ್ನು ಎದುರಿಸಲು ಜಗತ್ತು ಇನ್ನೂ ಸಿದ್ಧವಾಗಿಲ್ಲ ಎಂದು ಯುಟ್ಯೂಬ್ ಚಾನಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಅಪಾಯಕಾರಿ ವೈರಸ್ಸನ್ನು ಸೃಷ್ಟಿಸಿ ಕೆಲವೇ ವ್ಯಕ್ತಿಗಳು ಜೈವಿಕ ಭಯೋತ್ಪಾದನೆ ಉಂಟು ಮಾಡಬಹುದು. ಕೋವಿಡ್‌ನಂತಹ ಸ್ವಾಭಾವಿಕ ವೈರಸ್‌ಗಳಿಗಿಂತ ಕೃತಕ ವೈರಸ್‌ಗಳ ಅಪಾಯದ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅಂತಹ ವಿಪತ್ತು ಎದುರಾದರೆ, ಈಗ ಎಷ್ಟುಸಾವು ಸಂಭವಿಸಿದೆಯೋ ಅದಕ್ಕಿಂತ ಹೆಚ್ಚಿನ ಮರಣ ಉಂಟಾಗಲಿದೆ. ಮಾನವನಿರ್ಮಿತ ವೈರಸ್‌ಗಳಾಗಿರುವುದರಿಂದ ಪ್ರತಿ ವರ್ಷ ಜಗತ್ತನ್ನು ಕಾಡುವ ಸಂಭವ ಇರುತ್ತದೆ ಎಂದು ಹೇಳಿದ್ದಾರೆ.
2014ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಎಬೋಲಾ ರೋಗ ಕಾಣಿಸಿಕೊಂಡಿತ್ತು. ಆ ವೇಳೆ ಮಾತನಾಡಿದ್ದ ಬಿಲ್ ಗೇಟ್ಸ್, ಸದ್ಯೋಭವಿಷ್ಯದಲ್ಲಿ ಅತ್ಯಂತ ಸಾಂಕ್ರಾಮಿಕ ವೈರಸ್ ಜಗತ್ತನ್ನು ಕಾಡಲಿದೆ. ಅದನ್ನು ಎದುರಿಸಲು ಜಗತ್ತು ಸಿದ್ಧವಿಲ್ಲ. ಅತ್ಯಂತ ವೇಗವಾಗಿ ವೈರಾಣು ಹಬ್ಬುತ್ತದೆ ಎಂದು ಹೇಳಿದ್ದರು. ಶ್ವಾಸಕೋಶ ಸಂಬಂಧಿ ಸೋಂಕು ಅತ್ಯಂತ ಅಪಾಯಕಾರಿ. ಏಕೆಂದರೆ, ಸೋಂಕಿತರು ಸುಲಭವಾಗಿ ವಿಮಾನ, ಬಸ್ ಸುತ್ತಮುತ್ತ ಓಡಾಡುತ್ತಿರುತ್ತಾರೆ. ಆದರೆ ಎಬೋಲಾದಲ್ಲಿ ಆಸ್ಪತ್ರೆಗೆ ದಾಖಲಾದ ಬಳಿಕವೇ ವ್ಯಕ್ತಿಗಳು ಸೋಂಕು ಹರಡುತ್ತಾರೆ ಎಂದೂ ತಿಳಿಸಿದ್ದರು.