ಅಂದು ಮರದ ನೆರಳಲ್ಲಿಓದಿ ಶಿಕ್ಷಣ ಪಡೆದ ಹುಡುಗ ಇಂದು 50 ಸಾವಿರ ಕೋಟಿ ರೂ.ಒಡೆಯ!
ಸಮರ್ಪಕ ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆಯಿಲ್ಲದ ಭಾರತದ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ ಅಮೆರಿಕದಲ್ಲಿ ಯಶಸ್ವಿ ಉದ್ಯಮಿಯಾಗೋದು ಸಾಮಾನ್ಯದ ಸಂಗತಿಯೇನಲ್ಲ. ಝಿ ಸ್ಕೇಲರ್ ಎಂಬ ಸೈಬರ್ ಸೆಕ್ಯುರಿಟಿ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಜೈ ಚೌಧರಿ ಇಂಥದೊಂದು ಸಾಧನೆ ಮಾಡಿದ್ದಾರೆ. ಬಡತನದಿಂದ ಕೂಡಿದ ಬಾಲ್ಯ ಜೈ ಸಾಧನೆಗೆ ಅಡ್ಡಿಯಾಗಲಿಲ್ಲ. ಇಂದು 50 ಸಾವಿರ ಕೋಟಿ ರೂ. ಒಡೆಯರಾಗಿರುವ ಜೈ ಚೌಧರಿ ಯಶೋಗಾಥೆ ಹಲವರಿಗೆ ಸ್ಫೂರ್ತಿ.
Business Desk:ಕನಸಿಗೆ ಬಡವ, ಶ್ರೀಮಂತ ಎಂಬ ಭೇದವಿಲ್ಲ. ಯಾರು ಬೇಕಾದರೂ ಕನಸು ಕಾಣಬಹುದು. ಆದರೆ, ಹೀಗೆ ಕಂಡ ಕನಸನ್ನು ನನಸು ಮಾಡಿಕೊಳ್ಳಲು ಮಾತ್ರ ದೃಢಸಂಕಲ್ಪ ಹಾಗೂ ಕಠಿಣ ಪರಿಶ್ರಮ ಅಗತ್ಯ. ಗುರಿ, ಸಾಧಿಸುವ ಛಲ ವ್ಯಕ್ತಿಯನ್ನು ಶೂನ್ಯದಿಂದ ಮೇಲೆತ್ತಿ ಮುಗಿಲೆತ್ತರಕ್ಕೆ ಏರಿಸಬಲ್ಲದು ಎಂಬುದಕ್ಕೆ ಹಿಮಾಚಲ ಪ್ರದೇಶದ ಕುಗ್ರಾಮವೊಂದರಲ್ಲಿ ಹುಟ್ಟಿ ಇಂದು ಅಮೆರಿಕದಲ್ಲಿರುವ ಭಾರತೀಯ ಅಗರ್ಭ ಶ್ರೀಮಂತರಲ್ಲಿ ಒಬ್ಬರಾಗಿರುವ ಜೈ ಚೌಧರಿ ಅತ್ಯುತ್ತಮ ನಿದರ್ಶನ. ಝಿಸ್ಕೇಲರ್ ಎಂಬ ಸೈಬರ್ ಸೆಕ್ಯುರಿಟಿ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಒ ಆಗಿರುವ ಜೈ ಚೌಧರಿ ಅವರ ಈಗಿನ ಸಂಪತ್ತು50 ಸಾವಿರ ಕೋಟಿ ರೂ . ಬಾಲ್ಯದಲ್ಲಿ ಕಡುಬಡತನದಲ್ಲಿ ಬೆಳೆದು ಮರದ ನೆರಳಿನಲ್ಲಿ ಓದಿ ಶಿಕ್ಷಣ ಪಡೆದ ಜೈ, ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಅಷ್ಟೇ ಅಲ್ಲ, ಸಾಧಿಸುವ ಛಲ ಹೊಂದಿರುವ ಭಾರತದ ಅನೇಕ ಯುವಕರಿಗೆ ಪ್ರೇರಣೆ ಕೂಡ ಆಗಿದ್ದಾರೆ. ಸೂಕ್ತ ಮೂಲಸೌಕರ್ಯವೂ ಇಲ್ಲದ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬ ಇಂದು ಅಮೆರಿಕದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿರೋದು ನಿಜಕ್ಕೂ ಅಸಾಮಾನ್ಯ ಸಾಧನೆಯೇ ಸರಿ.
ಹಿಮಾಚಲ ಪ್ರದೇಶದ ಊನಾ ಜಿಲ್ಲೆಯ ಪನೋಹ್ ಎಂಬ ಹಳ್ಳಿಯಲ್ಲಿ ಹುಟ್ಟಿದ ಜೈ ಚೌಧರಿ ಬಾಲ್ಯ ಬಡತನದಿಂದ ಕೂಡಿತ್ತು. ಈ ಹಳ್ಳಿಗೆ ಸಮರ್ಪಕವಾದ ವಿದ್ಯುತ್ ಸಂಪರ್ಕವಿರಲಿಲ್ಲ. ಕುಡಿಯುವ ನೀರಿನ ಕೊರತೆ ಕೂಡ ಇತ್ತು. ಚೌಧರಿ ಅವರ ತಂದೆ ಕೃಷಿಕರಾಗಿದ್ದರು. ಮನೆಯಲ್ಲಿ ಅಷ್ಟೊಂದು ಅನುಕೂಲವೇನೂ ಇರಲಿಲ್ಲ. ಈ ಕಾರಣದಿಂದ ಶಾಲಾ ದಿನಗಳಲ್ಲಿ ಚೌಧರಿ ಮರದ ನೆರಳಿನಲ್ಲಿ ಕುಳಿತು ಓದುತ್ತಿದ್ದರು. ಪ್ರೌಢ ಶಿಕ್ಷಣವನ್ನು ಪಡೆಯಲು ಜೈ 4ಕಿ.ಮೀ. ದೂರದಲ್ಲಿರುವ ಧುಸ್ಸರ ಎಂಬ ಹಳ್ಳಿಗೆ ನಡೆದುಕೊಂಡು ಹೋಗಿ ಬರುತ್ತಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಜೈ ಮಾಹಿತಿ ಹಂಚಿಕೊಂಡಿದ್ದರು ಕೂಡ.
ಸಿಂಗಲ್ ಬಿಎಚ್ ಕೆಯಿಂದ ಸಾವಿರ ಕೋಟಿ ಐಷಾರಾಮಿ ಬಂಗಲೆ;ಡಿಮಾರ್ಟ್ ಸ್ಥಾಪಕನ ಬದುಕು ಬದಲಾಗಿದ್ದು ಹೇಗೆ?
ಜೈ ಚೌಧರಿ ಚುರುಕಿನ ವಿದ್ಯಾರ್ಥಿಯಾಗಿದ್ದರು. ಅವರು ವಾರಣಾಸಿ ಬನಾರಸ ಹಿಂದುವಿಶ್ವವಿದ್ಯಾಲಯದ ಐಐಟಿಯಿಂದ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು. ಆ ಬಳಿಕ ಮ್ಯಾನೇಜ್ ಮೆಂಟ್ ನಲ್ಲಿ ಮಾಸ್ಟರ್ ಮಾಡಲು ಅಮೆರಿಕಕ್ಕೆ ತೆರಳಿದರು. ಅಲ್ಲಿನ ಸಿನ್ ಸಿನಾತಿ ವಿಶ್ವ ವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಐಬಿಎಂ, ಉನಿಸ್ ಹಾಗೂ ಐಕ್ಯು ಸಾಫ್ಟ್ ವೇರ್ ಮುಂತಾದ ದೊಡ್ಡ ಕಂಪನಿಗಳಲ್ಲಿ ಎರಡು ದಶಕಗಳಿಗೂ ಅಧಿಕ ಕಾಲ ಕಾರ್ಯನಿರ್ವಹಿಸಿದ್ದರು. ಆ ಬಳಿಕ 1996ರಲ್ಲಿ ಸೆಕ್ಯೂರ್ ಐಟಿ ಎಂಬ ಸೈಬರ್ ಸೆಕ್ಯುರಿಟಿ ಸಂಸ್ಥೆಯನ್ನು ಪ್ರಾರಂಭಿಸಿದರು.
ಮತ್ತೊಂದು ಬಹುರಾಷ್ಟ್ರೀಯ ಸಂಸ್ಥೆಗೆ ಭಾರತೀಯನ ಸಾರಥ್ಯ; ರಾಹುಲ್ ರಾಯ್ ಚೌಧರಿ ಗ್ರಾಮರ್ಲಿ ನೂತನ ಸಿಇಒ
ಇನ್ನು ಝಿ ಸ್ಕೇಲರ್ ಸಂಸ್ಥೆ ಪ್ರಾರಂಭಿಸುವ ಮುನ್ನ ಜೈ ಚೌಧರಿ ಕೋರ್ ಹಾರ್ಬರ್, ಸೆಕ್ಯುರ್ ಐಟಿ, ಸಿಫರ್ ಟ್ರಸ್ಟ್ ಹಾಗೂ ಏರ್ ಡಿಫೆನ್ಸ್ ಮುಂತಾದ ಅನೇಕ ಕಂಪನಿಗಳನ್ನು ಸ್ಥಾಪಿಸಿದ್ದರು. 2008ರಲ್ಲಿ ಜೈ ಚೌಧರಿ ಝಿ ಸ್ಕೇಲರ್ (Zscaler) ಎಂಬ ಸಂಸ್ಥೆ ಸ್ಥಾಪಿಸಿದ್ದು, ಇದು 5,000 ಕ್ಲೈಂಟ್ಸ್ ಹಾಗೂ 2,600ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಮೈಕ್ರೋಸಾಫ್ಟ್, ಸೀಮೆನ್ಸ್, ಕ್ರೌಡ್‌ಸ್ಟ್ರೈಕ್, ಎಡಬ್ಲ್ಯೂಎಸ್, ವಿಎಂಡಬ್ಲ್ಯು ಮುಂತಾದ ವಿಶ್ವದ ಪ್ರಮುಖ ಟೆಕ್ ಕಂಪನಿಗಳಿಗೆ ಝಿ ಸ್ಕೇಲರ್ ಸೈಬರ್ ಸುರಕ್ಷತೆಯನ್ನು ಒದಗಿಸುತ್ತದೆ. ಝಿ ಸ್ಕೇಲರ್ ಸಂಸ್ಥೆ ಸಂಪತ್ತು ಸುಮಾರು 15 ಬಿಲಿಯನ್ ಅಮೆರಿಕನ್ ಡಾಲರ್. ಜೈ ಚೌಧರಿ ಹಾಗೂ ಅವರ ಕುಟುಂಬ ಈ ಸಂಸ್ಥೆಯಲ್ಲಿ ಶೇ.45ರಷ್ಟು ಷೇರುಗಳನ್ನು ಹೊಂದಿವೆ. ಒಟ್ಟಾರೆ ಜೈ ಚೌಧರಿ ಅಮೆರಿಕದ ಉದ್ಯಮ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.