ಮತ್ತೊಂದು ಬಹುರಾಷ್ಟ್ರೀಯ ಸಂಸ್ಥೆಗೆ ಭಾರತೀಯನ ಸಾರಥ್ಯ; ರಾಹುಲ್ ರಾಯ್ ಚೌಧರಿ ಗ್ರಾಮರ್ಲಿ ನೂತನ ಸಿಇಒ
ಭಾರತೀಯ ಮೂಲದ ರಾಹುಲ್ ರಾಯ್ ಚೌಧರಿ ಅವರು ಇಂಗ್ಲಿಷ್ ಬರವಣಿಗೆಗೆ ನೆರವು ನೀಡುವ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಗ್ರಾಮರ್ಲಿ ಎಂಬ ಕಂಪನಿಯ ಸಿಇಒ ಆಗಿ ನೇಮಕಗೊಂಡಿದ್ದಾರೆ. 2023ರ ಮೇ1ರಿಂದ ಅವರು ಈ ಹೊಸ ಹುದ್ದೆಯನ್ನು ಅಲಂಕರಿಸಲಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ (ಮಾ.23): ವ್ಯಾಕರಣ, ಸ್ಪೆಲಿಂಗ್ ಸೇರಿದಂತೆ ಇಂಗ್ಲಿಷ್ ಬರವಣಿಗೆಗೆ ನೆರವು ನೀಡುವ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಗ್ರಾಮರ್ಲಿ ಎಂಬ ಕಂಪನಿಗೆ ಭಾರತೀಯ ಮೂಲದ ರಾಹುಲ್ ರಾಯ್ ಚೌಧರಿ ಹೊಸ ಸಿಇಒ ಆಗಿ ನೇಮಕಗೊಂಡಿದ್ದಾರೆ. 2023ರ ಮೇ 1ರಿಂದ ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ಈ ಕಂಪನಿಯ ಜಾಗತಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಸಂವಹನ ಕೌಶಲ್ಯವನ್ನು ಅಭಿವೃದ್ಧಿಗೊಳಿಸುವ ಗುರಿಯೊಂದಿಗೆ ಎರಡು ವರ್ಷಗಳ ಹಿಂದೆ ಗ್ರಾರ್ಮಲಿಗೆ ನೇಮಕಗೊಂಡಿರೋದಾಗಿ ರಾಹುಲ್ ರಾಯ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭಾರತೀಯ ಮೂಲದವರೇ ಸಿಇಒ ಪಟ್ಟ ಅಲಂಕರಿಸಿದ್ದು, ಈಗ ಆ ಸಾಲಿಗೆ ರಾಹುಲ್ ರಾಯ್ ಕೂಡ ಸೇರ್ಪಡೆಗೊಂಡಿದ್ದಾರೆ. ಗ್ರಾಮರ್ಲಿಯ ಪ್ರಸಕ್ತ ಸಿಇಒ ಬ್ರ್ಯಾಡ್ ಹೂವರ್ ಕೂಡ ರಾಹುಲ್ ರಾಯ್ ನೇಮಕದ ಬಗ್ಗೆ ಕಂಪನಿಯ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದ್ದಾರೆ. ರಾಹುಲ್ ಅವರನ್ನು ಗುರಿ ಕೇಂದ್ರೀಕೃತ ಹಾಗೂ ಬಳಕೆದಾರರ ಕೇಂದ್ರೀಕೃತ ವ್ಯಕ್ತಿ ಎಂದು ಹೂವರ್ ಬಣ್ಣಿಸಿದ್ದಾರೆ ಕೂಡ.
'ಸಂವಹನವನ್ನು ಸುಧಾರಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯವಿದೆ ಎಂಬ ನಮ್ಮ ಗುರಿಯ ಮೇಲೆ ಭಾರೀ ನಂಬಿಕೆಯಿಟ್ಟು ನಾನು ಎರಡು ವರ್ಷಗಳ ಹಿಂದೆ ಗ್ರಾಮರ್ಲಿಗೆ ಸೇರ್ಪಡೆಗೊಂಡಿದ್ದೆ. ಮೇ 1ರಿಂದ ಗ್ರಾಮರ್ಲಿ ಸಿಇಒ ಆಗಿ ಆ ಗುರಿಯನ್ನು ಹೊಸ ಸಾಮರ್ಥ್ಯದೊಂದಿಗೆ ನಿಭಾಯಿಸಲು ನನಗೆ ಅವಕಾಶ ಸಿಕ್ಕಿದೆ. ನಾವು ಈಗಷ್ಟೇ ಆರಂಭಿಸುತ್ತಿದ್ದೇವೆ' ಎಂದು ಟ್ವೀಟ್ ನಲ್ಲಿ ಅವರು ಹೇಳಿದ್ದಾರೆ.
'ರಾಹುಲ್ ಅವರು ಅತ್ಯದ್ಭುತ ಉತ್ಪನ್ನ ಹಾಗೂ ತಂತ್ರಜ್ಞಾನ ಹಿನ್ನೆಲೆ ಹೊಂದಿದ್ದಾರೆ. ನಮ್ಮ ಮುಂದಿನ ಹಾದಿಗೆ ಸೂಕ್ತ ದಿಕ್ಕನ್ನುಒದಗಿಸಲು ಅವರು ಸಮರ್ಥರಾಗಿದ್ದಾರೆ. ಅವರ ಜ್ಞಾನ ನಮಗೆ ವೇಗವಾಗಿ ಅಭಿವೃದ್ಧಿ ಸಾಧಿಸಲು ನೆರವು ನೀಡಲಿದೆ' ಎಂದು ಬ್ರ್ಯಾಡ್ ಹೂವರ್ ತಿಳಿಸಿದ್ದಾರೆ.
ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ
ರಾಹುಲ್ ರಾಯ್ ಅವರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ, ಕೊಲಂಬಿಯಾ ಯೂನಿವರ್ಸಿಟಿ ಹಾಗೂ ಹ್ಯಾಮಿಲ್ಟನ್ ಕಾಲೇಜ್ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿರುವ ರಾಯ್, 2021ರ ಮಾರ್ಚ್ ನಿಂದ ಗ್ರಾಮರ್ಲಿಯಲ್ಲಿ ವೃತ್ತಿ ಪ್ರಾರಂಭಿಸಿದ್ದರು. ಗ್ರಾಮರ್ಲಿಗೆ ಸೇರ್ಪಡೆಗೊಳ್ಳುವ ಮುನ್ನ ರಾಯ್ ಗೂಗಲ್ ಹಾಗೂ ಅಮೆಜಾನ್ ಅಂತಹ ದೈತ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅತೀಹೆಚ್ಚಿನ ಸಮಯವನ್ನು ಅವರು ಗೂಗಲ್ ನಲ್ಲಿ ಕಳೆದಿದ್ದರು.
ಗೂಗಲ್ ನಲ್ಲಿ 14 ವರ್ಷ ಸೇವೆ
ಗ್ರಾಮರ್ಲಿಗೆ ಸೇರ್ಪಡೆಗೊಳ್ಳುವ ಮುನ್ನ ರಾಹುಲ್ ರಾಯ್ ಗೂಗಲ್ ನಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2021ರಲ್ಲಿ ರಾಹುಲ್ ಗೂಗಲ್ ತ್ಯಜಿಸುವಾಗ ಅವರು ಉತ್ಪನ್ನ ನಿರ್ವಹಣೆಯ ಉಪಾಧ್ಯಕ್ಷರಾಗಿದ್ದರು.
Starbucks ಸಾರಥ್ಯ ವಹಿಸಿದ ಭಾರತೀಯ;ಅಧಿಕೃತವಾಗಿ ಸಿಇಒ ಪಟ್ಟ ಅಲಂಕರಿಸಿದ ಲಕ್ಷ್ಮಣ್ ನರಸಿಂಹನ್
ಗ್ರಾಮರ್ಲಿಯಲ್ಲಿ ಎರಡು ವರ್ಷಗಳ ಸೇವಾ ಅವಧಿಯಲ್ಲಿ ರಾಹುಲ್ ರಾಯ್ ಅತ್ಯುತ್ತಮ ಸಾಧನೆ ಮಾಡಲು ಗಮನ ಕೇಂದ್ರೀಕರಿಸಿದ್ದರು ಹಾಗೂ ಕಂಪನಿಯನ್ನು ಉನ್ನತ ಮಟ್ಟಕ್ಕೇರಿಸಲು ನಮಗೆ ನೆರವು ನೀಡಿದ್ದರು. ನಮ್ಮ ಆಲೋಚನೆಗಳನ್ನು ಇನ್ನಷ್ಟು ಮೇಲಕ್ಕೇರಿಸುವ ಜೊತೆಗೆ ಸಂಸ್ಥೆಯನ್ನು ಸ್ಪಷ್ಟತೆ, ಸೂಕ್ತ ತೀರ್ಮಾನ ಹಾಗೂ ಪ್ರಬಲ ನಿರ್ಧಾರಗಳೊಂದಿಗೆ ಮುನ್ನಡೆಸಲು ನೆರವು ನೀಡಿದ್ದರು ಎಂದು ಕಂಪನಿಯ ಪ್ರಸ್ತುತ ಸಿಇಒ ಬ್ರ್ಯಾಡ್ ಹೂವರ್ ತಿಳಿಸಿದ್ದಾರೆ. ರಾಹುಲ್ ಅವರ ನಾಯಕತ್ವದಲ್ಲಿ ನಮ್ಮ ಉತ್ಪನ್ನಕ್ಕೆ ಸಂಬಂಧಿಸಿ ನಾವು ದೊಡ್ಡ ಹೆಜ್ಜೆಯಿಟ್ಟಿದ್ದೇವೆ. ಗುಣಮಟ್ಟದ ಹೆಚ್ಚಳ ಹಾಗೂ ಪರಿಹಾರಗಳನ್ನು ಒದಗಿಸುವ ಮೂಲಕ ಸಂವಹನದ ವಿವಿಧ ಹಂತಗಳನ್ನು ತಲುಪಲು ಸಾಧ್ಯವಾಗಿದೆ ಎಂದು ಕೂಡ ಹೂವರ್ ಅಭಿಪ್ರಾಯಪಟ್ಟಿದ್ದಾರೆ.