ಛತ್ತೀಸ್‌ಗಡದ ಬಡ ಮಹಿಳೆ ದಿಲ್ಮತಿ, ಸ್ವ-ಸಹಾಯ ಗುಂಪಿನಿಂದ ಸಾಲ ಪಡೆದು ಹಂದಿ ಸಾಕಾಣಿಕೆ ಆರಂಭಿಸಿದರು. ಕೇವಲ 10 ಹಂದಿಗಳಿಂದ ಪ್ರಾರಂಭವಾದ ಈ ಉದ್ಯಮವು ಇಂದು ಅವರನ್ನು ವಾರ್ಷಿಕ 7-9 ಲಕ್ಷ ಗಳಿಸುವ ಯಶಸ್ವಿ ಉದ್ಯಮಿಯನ್ನಾಗಿ ಮಾಡಿದೆ, ಹಾಗೂ ತಮ್ಮ ಗ್ರಾಮದ ಇತರ ಮಹಿಳೆಯರಿಗೂ ಸ್ಫೂರ್ತಿಯಾಗಿದೆ.
ಸ್ವಂತ ಉದ್ಯೋಗ ಮಾಡೋಣ ಎಂದರೆ ಬಂಡವಾಳ ಇಲ್ಲ ಎಂದು ಬಹಳಷ್ಟು ಜನ ಹೇಳಿ, ಕಾಲಹರಣ ಮಾಡುತ್ತಾರೆ. ಆದರೆ ಯಾವುದೇ ಒಂದು ವ್ಯಾಪಾರ ಶುರು ಮಾಡಲು ಬಂಡವಾಳಕ್ಕಿಂತ ಹೆಚ್ಚಾಗಿ ಆ ವ್ಯವಹಾರದ ಬಗ್ಗೆ ತಿಳಿದುಕೊಳ್ಳುವುದ ಮತ್ತು ಪರಿಶ್ರಮ ಇವೆರಡು ಮುಖ್ಯ. ದೊಡ್ಡ ದೊಡ್ಡ ಉದ್ಯಮಪತಿಗಳು ಪ್ರಾರಂಭದಲ್ಲಿ ಕೋಟ್ಯಧೀಶರೇನು ಆಗಿಲಿರಲಿಲ್ಲ. ಹೊತ್ತಿನ ಊಟಕ್ಕೂ ಪರದಾಡಿದವರೇ. ಇಂಥದ್ದೇ ಒಂದು ಘಟನೆ ಛತ್ತಿಸ್‌ಗಡದ ಬಲರಾಮಪುರ ಜಿಲ್ಲೆಯ ಲಾಡುವಾ ಗ್ರಾಮದ ಮಹಿಳೆ ಪರಿಶ್ರಮದ ಮೂಲಕ ಉದ್ಯಮಿಯಾಗಿ ತನ್ನ ಇಡೀ ಜೀವನ ಪರಿವರ್ತಿಸಿಕೊಂಡಿದ್ದಾಳೆ. ಆಕೆಯ ಯಶಸ್ಸಿನ ಕತೆ ಕೇಳಿದ್ರೆ ನಿಮಗ್ಯಾಕೆ ಈ ರೀತಿ ಸಕ್ಸೆಸ್ ಆಗಲು ಸಾಧ್ಯವಿಲ್ಲ ಅಂತಾ ಮನಸಲ್ಲಿ ಪ್ರಶ್ನೆ ಮೂಡಿದರೆ ಅದೇ ಈ ಲೇಖನದ ಸಾರ್ಥಕತೆ.
ಲಾಡುವಾ ಎಂಬ ಕುಗ್ರಾಮದ ನಿವಾಸಿಯಾಗಿರುವ ದಿಲ್ಮತಿ. ತೀವ್ರ ಬಡತನ, ದಿನಗೂಲಿಯಂತ ಕಷ್ಟದ ದಿನಗಳಲ್ಲೇ ಬೆಳೆದವರು. ಒಂದು ಕಾಲದಲ್ಲಿ ಸಾಂಪ್ರದಾಯಿ ಕೃಷಿಯನ್ನೇ ಅವಲಂಬಿಸಿ ಅದರಲ್ಲೇ ಕುಟುಂಬ ನಿರ್ವಹಿಸುತ್ತಿದ್ದ ಮಹಿಳೆ. ಕೃಷಿಯ ಆದಾಯ ಹೊಟ್ಟೆಗೆ ಬಟ್ಟೆಗೆ ಎಂಬಂತಿತ್ತು. ಆದರೆ ಮಹಿಳೆ ಕೃಷಿ ಜೊತೆಗೆ ಬೇರೆ ಏನಾದ್ರೂ ಹೊಸ ಉದ್ಯಮ ಶುರು ಮಾಡಬೇಕು ಅಂತಾ ನಿರ್ಧರಿಸ್ತಾಳೆ. ಆಗ ಶುರು ಮಾಡಿದ್ದೆ ಹಂದಿ ಸಾಕಾಣಿಕೆ. ಈ ವ್ಯವಹಾರ ಹೇಗೆ ಕೈಹಿಡಿದಿದೆ ಎಂದರೆ ಈ ವ್ಯವಹಾರದಿಂದಲೇ ದಿಲ್ಮತಿ ವಾರ್ಷಿಕವಾಗಿ ಏಳರಿಂದ ಒಂಭತ್ತು ಲಕ್ಷ ರೂಪಾಯಿ ದುಡಿಯುವ ಯಶಸ್ವಿ ಉದ್ಯಮಿ ಎನಿಸಿದ್ದಾಳೆ. ಅಷ್ಟೇ ಅಲ್ಲ. ಆಕೆಯ ವ್ಯವಹಾರದಿಂದ ಕುಟುಂಬದ ಜೊತೆಗೆ ತನ್ನ ಹಳ್ಳಿಯ ಇತರೆ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.
ವ್ಯವಹಾರ ಹೇಗೆ ಪ್ರಾರಂಭಿಸಿದಳು?
ದಿಲ್ಮತಿ ಒಂದು ಉದ್ಯಮ ಕಟ್ಟುವಷ್ಟು ಶ್ರೀಮಂತಳೇನು ಆಗಿರಲಿಲ್ಲ. ಆಕೆಯ ಉದ್ಯಮ ಬಂಡವಾಳ ಹೂಡುವವರು ಇರಲಿಲ್ಲ. ಆದರೆ ದಿಲ್ಮತಿ ಮಾಡಿದ ಮೊದಲ ಕೆಲಸವೆಂದರೆ ಮಾ ದುರ್ಗಾ ಮಹಿಳಾ ಸ್ವ-ಸಹಾಯ ಗುಂಪು (SHG) ಸದಸ್ಯರಾಗಿದ್ದಾರೆ. ಈ ಹಿಂದೆ ಅವರ ಕುಟುಂಬವು ಕೃಷಿಯ ಮೇಲೆ ಮಾತ್ರ ಅವಲಂಬಿತವಾಗಿತ್ತು, ಇದರಿಂದಾಗಿ ಕುಟುಂಬ ನಿರ್ವಹಣೆ ದೊಡ್ಡ ಕಷ್ಟವಾಗಿತ್ತು. ಸ್ವ-ಸಹಾಯ ಗುಂಪು (SHG) ಸೇರಿದ ನಂತರ, ದಿಲ್ಮತಿ ಮಹಿಳಾ ಸಂಘದಿಂದ ₹1 ಲಕ್ಷ ಸಾಲವನ್ನು ತೆಗೆದುಕೊಂಡು ಜಾರ್ಖಂಡ್‌ನಿಂದ 10 ಹಂದಿಗಳನ್ನು ಖರೀದಿಸುವ ಮೂಲಕ ಸಣ್ಣ ವ್ಯವಹಾರವನ್ನು ಪ್ರಾರಂಭಿಸಿದರು.
10 ಹಂದಿಗಳಿಂದ ಶುರುವಾದ ವ್ಯವಹಾರ
ಆರಂಭದಲ್ಲಿ ದಿಲ್ಮತಿ ಅವರ ವ್ಯವಹಾರವು ತುಂಬಾ ಸಣ್ಣದಾಗಿತ್ತು. ಇದರಿಂದ ಏನು ಲಾಭ ಸಿಗುವುದೋ ಎಂದು ಚಿಂತಿಸಲಿಲ್ಲ. ಪರಿಶ್ರಮ ಪಟ್ಟಳು.ಕ್ರಮೇಣ ಅದು ಹೆಚ್ಚಿನ ಲಾಭ ತಂದುಕೊಡಲಾರಂಭಿಸಿತು. ಹತ್ತು ತಂದಿದ್ದ ಹಂದಿಗಳು ಸಂಖ್ಯೆ ವ್ಯವಹಾರ ಬೆಳೆದಂತೆ ಹೆಚ್ಚುತ್ತಾ ಹೋಯಿತು. ಹಣಗಳಿಕೆಯೂ ಡಬಲ್ ಆಯ್ತು. ಇಂದು ದಿಲ್ಮತಿ ಅವರು ಹಲವಾರು ಹೆಣ್ಣು ಹಂದಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಅಂದರೆ ಪ್ರತಿಯೊಂದು ಹೆಣ್ಣು ಹಂದಿ 9 ರಿಂದ 10 ಮರಿಗಳಿಗೆ ಜನ್ಮ ನೀಡುತ್ತದೆ ಮತ್ತು ಪ್ರತಿ ಹಂದಿಮರಿ ಸುಮಾರು 5,000 ರೂ.ಗಳಷ್ಟು ಬೆಲೆ ಬಾಳುತ್ತದೆ. ನೋಡಿ ಇದು ಹೇಗೆ ಡಬಲ್ ತ್ರಿಬಲ್ ಆಗಿ ಬೆಳೆಯುತ್ತ ಹೋಗುತ್ತದೆ.
ಬಂದ ಲಾಭ ಬ್ಯಾಂಕ್‌ನಲ್ಲಿಟ್ಟು ಸುಮ್ಮನೆ ಕೂಡಲಿಲ್ಲ
ದಿಲ್ಮತಿ ಹಂದಿ ಸಾಕಾಣಿಕೆಯಿಂದ ಬಂದ ಆದಾಯವನ್ನು ಬ್ಯಾಂಕ್‌ನಲ್ಲಿಟ್ಟು ಸುಮ್ಮನೆ ಕೂಡಲಿಲ್ಲ. ಅದರ ಬದಲಾಗಿ ಲಾಭದ ಹಣದಲ್ಲಿ ತಮ್ಮ ಹಂದಿ ಸಾಕಾಣಿಕ ವ್ಯವಹಾರದಲ್ಲಿ ಹೂಡಿಕೆ ಮಾಡಿದರು. ಇನ್ನಷ್ಟು ಕೃಷಿಗೆ ಬಳಸಿದರು. ಲಾಭದ ಹಣದಿಂದ ಜಾನುವಾರು ಸಾಕಾಣಿಕೆಗೆ ಶೆಡ್ ನಿರ್ಮಿಸಿದರು. ಕೃಷಿ ಉಪಕರಣಗಳನ್ನು ಖರೀದಿಸಿದರು, ಹನಿ ನೀರಾವರಿ ಅಳವಡಿಸಿಕೊಂಡರು. ಅದರಲ್ಲಿ ಸಾವಯವ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದರು, ಇದು ಬಹು ಆದಾಯದ ಮೂಲಗಳನ್ನು ಸೃಷ್ಟಿಸಿತು... ಹೀಗೆ ಒಂದು ವ್ಯವಹಾರದ ಲಾಭದಿಂದ ಹಲವು ವ್ಯವಹಾರಗಳನ್ನ ಸೃಷ್ಟಿಕೊಂಡ ದಿಲ್ಮತಿ ಇಂದು ವಾರ್ಷಿಕವಾಗಿ ಸುಮಾರು 7-9 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಈ ಗಳಿಕೆ ಮುಂದಿನ ವರ್ಷದ ವೇಳೆ ಡಬಲ್ ಆಗಬಹುದು.ಲಕ್ಷಾಧಿಪತಿಯಾದ ಮಹಿಳೆ ಮುಂದೊಂದು ದಿನ ಕೋಟ್ಯಧಿಪತಿಯಾದರೂ ಅಚ್ಚರಿ ಪಡಬೇಕಿಲ್ಲ.
ತನ್ನೂರಿನ ಮಹಿಳೆಯರಿಗೆ ಸ್ಫೂರ್ತಿ
ಮೊದಲಿಗೆ ಒಂದು ಲಕ್ಷ ಸಾಲ ಪಡೆದು ಉದ್ಯಮ ಶುರು ಮಾಡಿದಾಗ 'ಅಯ್ಯೋ ಈ ವ್ಯವಹಾರದಿಂದ ಏನು ಲಾಭ? ಎಂದು ಹಾಡಿಕೊಂಡವರ ಬಾಯಿಗೆ ಬೆಲೆ ಕೊಡದೆ ಉದ್ಯಮ ಆರಂಭಿಸಿ ಮುನ್ನಡೆಸಿದ ಪರಿಣಾಮವಾಗಿ ಇಂದು ದಿಲ್ಮತಿ ಇತರೆ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ದಿಲ್ಮತಿಯ ಯಶಸ್ಸನ್ನು ನೋಡಿ, ಅವರ ಹಳ್ಳಿಯಲ್ಲಿ ಸುಮಾರು 10 ರಿಂದ 15 ಕುಟುಂಬಗಳು ಹಂದಿ ಸಾಕಣೆಯನ್ನು ಪ್ರಾರಂಭಿಸಿವೆ. ಅವರು ಈಗ ಇತರ ಮಹಿಳೆಯರಿಗೆ ಸ್ವಸಹಾಯ ಗುಂಪುಗಳಿಗೆ ಸೇರಲು, ನಿಯಮಿತವಾಗಿ ಉಳಿತಾಯ ಮಾಡಲು ಮತ್ತು ಸ್ವ-ಉದ್ಯೋಗಕ್ಕಾಗಿ ಸಾಲಗಳನ್ನು ಬುದ್ಧಿವಂತಿಕೆಯಿಂದ ಬಳಸಲು ಸಲಹೆ ನೀಡುತ್ತಿದ್ದಾರೆ. ಆ ಉದ್ಯಮಿಗೊಂದು ಥ್ಯಾಂಕ್ಸ್ ಹೇಳೋಣ.


