ಈ ವರ್ಷ ಫೋರ್ಬ್ಸ್ ಬಿಲಿಯನೇರ್ ಪಟ್ಟಿಗೆ ಸೇರ್ಪಡೆಗೊಂಡ ಈ ಭಾರತೀಯ ಮಹಿಳಾ ಉದ್ಯಮಿ ಸಂಪತ್ತು 4.8 ಬಿಲಿಯನ್ ಡಾಲರ್!
ಇತ್ತೀಚೆಗೆ ಬಿಡುಗಡೆಗೊಂಡಿರುವ ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ಭಾರತೀಯ ಮೂಲದ ಉದ್ಯಮಿ ರೇಣುಕಾ ಜಗ್ತಿಯಾನಿ ಸ್ಥಾನ ಪಡೆದಿದ್ದಾರೆ. ದುಬೈನಲ್ಲಿ ಉದ್ಯಮ ಹೊಂದಿರುವ ಈಕೆ ಸಂಪತ್ತು 4.8 ಬಿಲಿಯನ್ ಡಾಲರ್.
Business Desk: ಫೋರ್ಬ್ಸ್ ಇತ್ತೀಚಿಗೆ ಈ ಸಾಲಿನ ವಿಶ್ವದ ಬಿಲಿಯನೇರ್ ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ 25 ಹೊಸ ಶತಕೋಟಿ ಒಡೆಯರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ರೇಣುಕಾ ಜಗ್ತಿಯಾನಿ ಕೂಡ ಒಬ್ಬರು. 4.8 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿರುವ ಈಕೆ ಲ್ಯಾಂಡ್ ಮಾರ್ಕ್ ಗ್ರೂಪ್ ಮುಖ್ಯಸ್ಥೆ ಹಾಗೂ ಸಿಇಒ. ಕಳೆದ ವರ್ಷ ಅಂದರೆ 2023ರಲ್ಲಿ ಫೋರ್ಬ್ಸ್ ಪ್ರಕಟಿಸಿದ್ದ ಭಾರತದ ಸಿರಿವಂತರ ಪಟ್ಟಿಯಲ್ಲಿ ಜಗ್ತಿಯಾನಿ 44ನೇ ಸ್ಥಾನದಲ್ಲಿದ್ದರು. ಈ ವರ್ಷ ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ ಸಿರಿವಂತರ ಪಟ್ಟಿಯಲ್ಲಿ 644ನೇ ಸ್ಥಾನ ಗಳಿಸಿದ್ದಾರೆ. ಲ್ಯಾಂಡ್ ಮಾರ್ಕ್ ಗ್ರೂಪ್ 5 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ದುಬೈ ಮೂಲದ ಈ ಬಹುರಾಷ್‌ಟರೀಯ ಕಂಪನಿಯನ್ನು ರೇಣುಕಾ ಅವರ ಪತಿ ಮಿಕ್ಕಿ ಜಗ್ತಿಯಾನಿ ಸ್ಥಾಪಿಸಿದ್ದರು.
ಲ್ಯಾಂಡ್ ಮಾರ್ಕ್ ಕಂಪನಿಯನ್ನು ರೇಣುಕಾ ಜಗ್ತಿಯಾನಿ ಅವರ ಪತಿ ಮಿಕ್ಕಿ ಜಗ್ತಿಯಾನಿ 1973ರಲ್ಲಿ ಪ್ರಾರಂಭಿಸಿದ್ದರು. ರೇಣುಕಾ ಜಗ್ತಿಯಾನಿ 1993ರಲ್ಲಿ ಈ ಕಂಪನಿಗೆ ಸೇರ್ಪಡೆಗೊಂಡರು. ಪತಿಯ ನಿಧನದ ಬಳಿಕ ಕಂಪನಿಯ ಜವಾಬ್ದಾರಿಯನ್ನು ರೇಣುಕಾ ವಹಿಸಿಕೊಂಡಿದ್ದಾರೆ. ಲ್ಯಾಂಡ್ ಮಾರ್ಕ್ ಸಿದ್ಧ ಉಡುಪುಗಳು, ಪಾದರಕ್ಷೆ, ಎಲೆಕ್ಟ್ರಾನಿಕ್ ಉಪಕರಣ, ಸೌಂದರ್ಯವರ್ಧಕ, ನವಜಾತ ಶಿಶುಗಳ ಆರೈಕೆಗೆ ಅಗತ್ಯವಾದ ಪರಿಕರಗಳು ಹಾಗೂ ಮನೆಯ ಒಳಾಂಗಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಿದ್ಧಪಡಿಸುತ್ತದೆ. ಅಲ್ಲದೆ, ಬ್ಯುಸಿನೆಸ್ ಕ್ಲಬ್ ಗಳು, ರೆಸ್ಟೋರೆಂಟದ, ಆರೋಗ್ಯ ಸೇವೆಗಳು ಹಾಗೂ ಮಾಲ್ ಗಳನ್ನು ಕೂಡ ಹೊಂದಿದೆ.
ಇವರೇ ನೋಡಿ ಈ ಬಾರಿ 2024ರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಟಾಪ್ 10 ಶ್ರೀಮಂತರು!
ಮುಂಬೈ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದಿರುವ ಜಗ್ತಿಯಾನಿ, ಈ ಸಂಸ್ಥೆಯ ಕಾರ್ಪೋರೇಟ್ ಯೋಜನೆಗಳು ಹಾಗೂ ಹೊಸ ಮಾರುಕಟ್ಟೆಗೆ ವಿಸ್ತರಣೆ ಜವಾಬ್ದಾರಿಯನ್ನು 20ಕ್ಕೂ ಅಧಿಕ ವರ್ಷಗಳ ಕಾಲ ನಿರ್ವಹಿಸಿದ್ದಾರೆ. ಇನ್ನು ಈ ಗ್ರೂಪ್ ಕಾರ್ಪೋರೇಟ್ ಯೋಜನೆಗಳನ್ನು ಕೂಡ ಆಕೆ ನಿರ್ವಹಿಸುತ್ತಿದ್ದಾರೆ. ಆ ಮೂಲಕ ಅದನ್ನು ಮಧ್ಯಪ್ರಾಚ್ಯ, ಆಫ್ರಿಕಾ, ಭಾರತ ಹಾಗೂ ಏಷ್ಯಾದ ಕೆಲವು ರಾಷ್ಟ್ರಗಳ ಅತೀದೊಡ್ಡ ರಿಟೇಲರ್ ಚಾನೆಲ್ ಆಗಿ ಅಭಿವೃದ್ಧಿಪಡಿಸಿದ್ದಾರೆ.
ಪತಿಯ ನಿಧನದ ನಂತರ ರೇಣುಕಾ ಅವರು ಕಂಪನಿಯ ಉಸ್ತುವಾರಿಯನ್ನು ವಹಿಸಿಕೊಂಡರು. ಈಗ ಅವರ ಪುತ್ರರಿಬ್ಬರು ಕಂಪನಿಯ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದಾರೆ. ರೇಣುಕಾ ಜಗ್ತಿಯಾನಿ ಅವರಿಗೆ ಅನೇಕ ಪ್ರಶಸ್ತಿಗಳು ದೊರಕಿವೆ. 2007ರ ಜನವರಿಯಲ್ಲಿ ಅವರಿಗೆ ಔಟ್ ಸ್ಟ್ಯಾಂಡಿಂಗ್ ಏಷಿಯನ್ ಬ್ಯುಸಿನೆಸ್ ವಿಮನ್ ಪ್ರಶಸ್ತಿ ಸಿಕ್ಕಿದೆ. ಇನ್ನು 2012ರ ಜನವರಿಯಲ್ಲಿ ಗಲ್ಫ್ ಬ್ಯುಸಿನೆಸ್ ಇಂಡಸ್ಟ್ರೀಸ್ ಅವಾರ್ಡ್ಸ್ ನಲ್ಲಿ ಔಟ್ ಸ್ಟ್ಯಾಂಡಿಂಗ್ ಬ್ಯುಸಿನೆಸ್ ವಿಮೆನ್ ಪ್ರಶಸ್ತಿ ಸಿಕ್ಕಿದೆ. 2014ರಲ್ಲಿ ಅವರಿಗೆ ವರ್ಷದ ವಿಶ್ವದ ಉದ್ಯಮಿ ಪ್ರಶಸ್ತಿ ಕೂಡ ಸಿಕ್ಕಿದೆ. ರೇಣುಕಾ ಅವರಿಗೆ ಮೂವರು ಮಕ್ಕಳು. ಇಬ್ಬರು ಪುತ್ರರು ಹಾಗೂ ಒಬ್ಬಳು ಪುತ್ರಿ.
ಪೋರ್ಬ್ಸ್ ಬಿಲಿಯನೇರ್ ಲಿಸ್ಟ್: ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಇವರು!
ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ 25 ಹೊಸ ಬಿಲಿಯನೇರ್ ಗಳು
2024ನೇ ಸಾಲಿನ ಫೋರ್ಬ್ಸ್ ವಿಶ್ವದ ಬಿಲಿಯನೇರ್ ಗಳ ಟಾಪ್ 200ರ ಪಟ್ಟಿಯಲ್ಲಿ 25 ಮಂದಿ ಭಾರತೀಯರು ಸ್ಥಾನ ಪಡೆದಿದ್ದಾರೆ. ಇದರಿಂದ ಭಾರತದಲ್ಲಿನ ಒಟ್ಟು ಬಿಲಿಯನೇರ್ ಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಇವರ ಸಂಖ್ಯೆ 169 ಆಗಿತ್ತು. ಪಟ್ಟಿಯ ಪ್ರಕಾರ, 2,781 ಕೋಟ್ಯಾಧಿಪತಿಗಳೊಂದಿಗೆ ಈ ಬಾರಿ 141 ಹೆಚ್ಚು ಜನ ಈ ಪೋರ್ಬ್ಸ್ ಕೋಟ್ಯಾಧಿಪತಿಗಳ ಪಟ್ಟಿ ಸೇರಿದ್ದಾರೆ. ಇವರೆಲ್ಲರ ಒಟ್ಟು ಮೌಲ್ಯವು 14.2 ಟ್ರಿಲಿಯನ್ ಡಾಲರ್ ಆಗಿದೆ. 2023ಕ್ಕೆ ಹೋಲಿಸಿದರೆ ಈ ಕೋಟ್ಯಾಧಿಪತಿಗಳ ನಿವ್ವಳ ಮೌಲ್ಯ 2 ಟ್ರಿಲಿಯನ್ ಡಾಲರ್ ಹೆಚ್ಚಳವಾಗಿದೆ.