ಭಾರತೀಯ ಮಾರುಕಟ್ಟೆಗೆ ಮುಂದಿನ 14 ದಿನಗಳಲ್ಲಿ ಮೂರು ಬಹುನಿರೀಕ್ಷಿತ ಕಾರುಗಳು ಲಗ್ಗೆ ಇಡಲಿವೆ. ಮಾರುತಿ ಬ್ರೆಝಾ ಫೇಸ್‌ಲಿಫ್ಟ್, ಟೊಯೋಟಾ ಹಿಲಕ್ಸ್, ಮತ್ತು ಹೊಂಡಾ ಝಡ್‌ಆರ್-ವಿ ಹೈಬ್ರಿಡ್ ಕಾರುಗಳು ತಮ್ಮ ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ.

ಬೆಂಗಳೂರು (ಜು.19): ನೀವು ಹೊಸ ಕಾರು ಖರೀದಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದಲ್ಲಿ ಆತುರ ಬೇಡ, ಇನ್ನೆರಡು ವಾರ ಕಾಯುವುದು ಸೂಕ್ತ. ಏಕೆಂದರೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಮುಂದಿನ 14 ದಿನಗಳಲ್ಲಿ ಮೂರು ಪ್ರಮುಖ ಮತ್ತು ಅತ್ಯಂತ ಜನಪ್ರಿಯ ಕಾರುಗಳು ಲಗ್ಗೆ ಇಡಲಿವೆ. ಜುಲೈ ಅಂತ್ಯದ ಈ ಎರಡು ವಾರಗಳು ವಾಹನ ಮಾರುಕಟ್ಟೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಗ್ರಾಹಕರ ನೆಚ್ಚಿನ ಮಾರುತಿ ಬ್ರೆಝಾ ಫೇಸ್‌ಲಿಫ್ಟ್, ಟೊಯೋಟಾ ಹಿಲಕ್ಸ್ ಹಾಗೂ ಹೊಂಡಾ ಝಡ್‌ಆರ್-ವಿ ಹೈಬ್ರಿಡ್ ಕಾರುಗಳು ಬಿಡುಗಡೆಗೆ ಸಜ್ಜಾಗಿವೆ. ಈ ಕಾರುಗಳ ಅತ್ಯಾಧುನಿಕ ಫೀಚರ್ಸ್‌ಗಳನ್ನು ನೋಡಿದ ಬಳಿಕವೇ ನಿಮ್ಮ ಖರೀದಿಯ ತೀರ್ಮಾನ ಕೈಗೊಳ್ಳುವುದು ಉತ್ತರಮ.

ಜುಲೈ ತಿಂಗಳ ಆರಂಭದಲ್ಲಿ ಈಗಾಗಲೇ ಹಲವು ಎಲೆಕ್ಟ್ರಿಕ್ ಮತ್ತು ಎಸ್‌ಯುವಿ (SUV) ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಸದ್ಯ ಇನ್ನುಳಿದ ದಿನಗಳಲ್ಲಿ ಈ ಮೂರು ದೊಡ್ಡ ಬ್ರ್ಯಾಂಡ್‌ಗಳ ಕಾರುಗಳು ಹೊಸ ರೂಪದಲ್ಲಿ ಬರಲು ರೆಡಿಯಾಗಿದೆ.

2026 ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ (Maruti Suzuki Brezza Facelift)

ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಮಾರುತಿ ಬ್ರೆಝಾ, ಜುಲೈ 23 ರಂದು ತನ್ನ ‘ಫೇಸ್‌ಲಿಫ್ಟ್’ ಆವೃತ್ತಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ಕಿಯಾ ಸೋನೆಟ್‌ನಂತಹ ಪ್ರತಿಸ್ಪರ್ಧಿ ಕಾರುಗಳಿಗೆ ತೀವ್ರ ಪೈಪೋಟಿ ನೀಡಲು ಕಂಪನಿಯು ಈ ಹೊಸ ಆವೃತ್ತಿಯನ್ನು ಮತ್ತಷ್ಟು ಬಲಿಷ್ಠವಾಗಿ ವಿನ್ಯಾಸಗೊಳಿಸಿದೆ.

ಬಾಹ್ಯ ವಿನ್ಯಾಸ: ನೂತನ ಬ್ರೆಝಾ ಆಕರ್ಷಕ ಫ್ರಂಟ್ ಗ್ರಿಲ್, ಹೊಸ ಬಂಪರ್, ಸಿಲ್ವರ್ ಸ್ಕಿಡ್ ಪ್ಲೇಟ್‌ಗಳು ಮತ್ತು ಹೊಸ ಶೈಲಿಯ ಅಲಾಯ್ ವೀಲ್‌ಗಳನ್ನು ಹೊಂದಿರಲಿದೆ. ಕಾರಿನ ಹಿಂಭಾಗದಲ್ಲಿ ಕನೆಕ್ಟೆಡ್ ಎಲ್‌ಇಡಿ ಟೇಲ್‌ಲ್ಯಾಂಪ್ಸ್ ಹಾಗೂ ಹೊಸ ಬಂಪರ್ ಇರಲಿದೆ.

ಅತ್ಯಾಧುನಿಕ ಫೀಚರ್ಸ್‌: ಕಾರಿನ ಒಳಾಂಗಣದಲ್ಲಿ (Interior) ಭಾರಿ ಬದಲಾವಣೆಗಳ ನಿರೀಕ್ಷೆಯಿದೆ. ಆಟೋಮ್ಯಾಟಿಕ್ ವೇರಿಯೆಂಟ್‌ನಲ್ಲಿ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಸೀಟುಗಳು ಮತ್ತು ಪ್ಯಾಡಲ್ ಶಿಫ್ಟರ್ಸ್ ಇರಲಿವೆ.

ಎಂಜಿನ್ ಮತ್ತು ಬೆಲೆ: ಪ್ರಸ್ತುತ ಚಾಲ್ತಿಯಲ್ಲಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಗಳ ಜೊತೆಗೆ, ಈ ಹೊಸ ಕಾರಿನಲ್ಲಿ 1.0-ಲೀಟರ್ ಬೂಸ್ಟರ್‌ಜೆಟ್ ಟರ್ಬೊ ಪೆಟ್ರೋಲ್ ಎಂಜಿನ್ ನೀಡುವ ಸಾಧ್ಯತೆಯಿದೆ. ಇದರ ಆರಂಭಿಕ ಬೆಲೆ ಸುಮಾರು 8.8 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ನೂತನ ಟೊಯೊಟಾ ಹಿಲಕ್ಸ್ (Toyota Hilux)

ಟೊಯೋಟಾ ಕಂಪನಿಯು ಜುಲೈ 28 ರಂದು ತನ್ನ ಹೊಸ ಪೀಳಿಗೆಯ ‘ಹಿಲಕ್ಸ್ ಪಿಕಪ್’ ವಾಹನವನ್ನು ಬಿಡುಗಡೆ ಮಾಡಲಿದೆ. ಚಾಲ್ತಿಯಲ್ಲಿರುವ IMV ಪ್ಲಾಟ್‌ಫಾರ್ಮ್ ಆಧಾರದ ಮೇಲೆಯೇ ಇದನ್ನು ಸಿದ್ಧಪಡಿಸಲಾಗಿದ್ದರೂ, ಇದು ಹೊಸ ವಿನ್ಯಾಸ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ವೈಶಿಷ್ಟ್ಯಗಳು: ಹೊಸ ಹಿಲಕ್ಸ್‌ನಲ್ಲಿ ಸ್ಲಿಮ್ ಎಲ್‌ಇಡಿ ಹೆಡ್‌ಲ್ಯಾಂಪ್ಸ್, ದೊಡ್ಡ ಹನಿಕಾಂಬ್ ಗ್ರಿಲ್, ನೂತನ ಅಲಾಯ್ ವೀಲ್ಸ್ ಇರಲಿವೆ. ಇನ್ನು ಕ್ಯಾಬಿನ್ ಒಳಗಡೆ ಡ್ಯುಯಲ್ 12.3-ಇಂಚಿನ ಸ್ಕ್ರೀನ್ ಸೆಟಪ್, ವೈರ್‌ಲೆಸ್ ಕನೆಕ್ಟಿವಿಟಿ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಆಫ್-ರೋಡ್ ಡ್ರೈವಿಂಗ್‌ಗೆ ಪೂರಕವಾದ ಫೀಚರ್ಸ್‌ಗಳು ಇರಲಿವೆ.

ಹೊಂಡಾ ಜೆಡ್‌ಆರ್-ವಿ ಹೈಬ್ರಿಡ್ (Honda ZR-V Hybrid)

ಹೊಂಡಾ ಕಂಪನಿಯು ಜುಲೈ ಮೂರನೇ ವಾರದಲ್ಲಿ ತನ್ನ ಹೊಸ ಫ್ಲ್ಯಾಗ್‌ಶಿಪ್ ಎಸ್‌ಯುವಿ ಆದ ‘ಜೆಡ್‌ಆರ್-ವಿ ಹೈಬ್ರಿಡ್’ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಯಿದೆ. ಇದನ್ನು CBU (ಕಂಪ್ಲೀಟ್ಲಿ ಬಿಲ್ಟ್ ಯುನಿಟ್) ಮಾರ್ಗದ ಮೂಲಕ ವಿದೇಶದಿಂದ ಭಾರತಕ್ಕೆ ಸೀಮಿತ ಸಂಖ್ಯೆಯಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ.

ಸಾಮರ್ಥ್ಯ ಮತ್ತು ಮೈಲೇಜ್: ಈ ಕಾರಿನಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಬಲಿಷ್ಠ ಹೈಬ್ರಿಡ್ ಸಿಸ್ಟಮ್ ಇರಲಿದ್ದು, ಇದು 184 bhp ಪವರ್ ಮತ್ತು 315 Nm ಟಾರ್ಕ್ ಉತ್ಪಾದಿಸಲಿದೆ. ಕಂಪನಿಯ ಅಧಿಕೃತ ಮಾಹಿತಿ ಪ್ರಕಾರ, ಈ ಕಾರು ಪ್ರತಿ ಲೀಟರ್‌ಗೆ ಬರೋಬ್ಬರಿ 22.8 ಕಿಲೋಮೀಟರ್ ಅತ್ಯುತ್ತಮ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಪ್ರೀಮಿಯಂ ಫೀಚರ್ಸ್‌: ಈ ಕಾರಿನಲ್ಲಿ 9 ಇಂಚಿನ ಟಚ್‌ಸ್ಕ್ರೀನ್, 10.25 ಇಂಚಿನ ಡಿಜಿಟಲ್ ಡಿಸ್ಪ್ಲೇ, ಬೋಸ್ (Bose) ಆಡಿಯೋ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ಅಡಾಸ್ (ADAS) ತಂತ್ರಜ್ಞಾನ ಮತ್ತು ಅತ್ಯಂತ ಪ್ರೀಮಿಯಂ ಇಂಟೀರಿಯರ್ ಲಭ್ಯವಿರಲಿದೆ.

ಒಟ್ಟಾರೆಯಾಗಿ, ಬಜೆಟ್ ಕಾರಿನಿಂದ ಹಿಡಿದು ಪ್ರೀಮಿಯಂ ಹಾಗೂ ಆಫ್-ರೋಡ್ ವಾಹನಗಳವರೆಗೆ ದೊಡ್ಡ ಆಯ್ಕೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದರಿಂದ, ಕಾರು ಪ್ರಿಯರು ಈ 14 ದಿನಗಳ ಕಾಲ ಕಾಯುವುದು ಸೂಕ್ತ.