ನೋಕಿಯಾ,ಕೋಲ್ಗೇಟ್ ಕಂಪನಿಗಳ ಮೊದಲ ಪ್ರಾಡಕ್ಟ್ ಯಾವುದು? ಆನಂದ್ ಮಹೀಂದ್ರಾ ಹಂಚಿಕೊಂಡ ಲಿಸ್ಟ್ ವೈರಲ್
ಕೋಲ್ಗೇಟ್ ಅಂದ ತಕ್ಷಣ ಟೂಥ್ ಪೇಸ್ಟ್ ಅಂದು ಬಿಡುತ್ತೇವೆ. ಹಾಗೆಯೇ ನೋಕಿಯಾ ಅಂದ್ರೆ ಮೊಬೈಲ್. ಆದ್ರೆ ಇಂದು ಈ ಉತ್ಪನ್ನಗಳೊಂದಿಗೆ ಬೆರೆತಿರುವ ಈ ಕಂಪನಿಗಳ ಮೊದಲ ಉತ್ಪನ್ನ ಇವಲ್ಲ ಅಂದ್ರೆ ನಂಬುತ್ತೀರಾ? ಅದೆಲ್ಲ ಹೋಗಲಿ, ಐಕಿಯಾದ ಮೊದಲ ಉತ್ಪನ್ನ ಪೆನ್, ಕೋಲ್ಗೇಟಿನದ್ದು ಕ್ಯಾಂಡಲ್ಸ್, ನೋಕಿಯಾದ್ದು ಟಾಯ್ಲೆಟ್ ಪೇಪರ್ ಅಂದ್ರೆ ಆಶ್ಚರ್ಯವಾಗದೆ ಇರತ್ತಾ? ಇಂಥ ಜನಪ್ರಿಯ ಕಂಪನಿಗಳು ಹಾಗೂ ಅವುಗಳ ಮೊದಲ ಉತ್ಪನ್ನದ ಪಟ್ಟಿಯನ್ನು ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದು,ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನವದೆಹಲಿ (ಸೆ.19): ಮಹೀಂದ್ರಾ ಕುಟುಂಬದ ಉದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಆನಂದ್ ಮಹೀಂದ್ರಾ ಅವರಿಗೆ ಸಲ್ಲುತ್ತದೆ. ಇವರ ಅವಧಿಯಲ್ಲಿ ಸಂಸ್ಥೆಯ ಉದ್ಯಮ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಣೆಗೊಂಡಿತು. ವಾಹನಾ ಉತ್ಪಾದನೆ ಹಾಗೂ ಕೃಷಿಯಿಂದ ಐಟಿ ಹಾಗೂ ವಿಮಾನಯಾನ ಕ್ಷೇತ್ರದ ತನಕ ಇಂದು ಮಹೀಂದ್ರಾ ಸಂಸ್ಥೆಯ ಕಾರ್ಯಕ್ಷೇತ್ರ ವಿಸ್ತರಿಸಿದೆ. ಹಾರ್ಡ್ ವರ್ಡ್ ಬ್ಯುಸಿನೆಸ್ ಸ್ಕೂಲ್ ಹಳೆಯ ವಿದ್ಯಾರ್ಥಿಯಾಗಿರುವ ಆನಂದ್ ಮಹೀಂದ್ರಾ ಅವರು ತನ್ನ ಮಾನವೀಯ ಹಾಗೂ ಸರಳ ವ್ಯಕ್ತಿತ್ವದಿಂದಲೇ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಸಮಾಜದ ಆಗುಹೋಗುಗಳಿಗೆ ಅವರು ಸ್ಪಂದಿಸುವ ರೀತಿ ಈಗಾಗಲೇ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದು, ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಕೂಡ ಹುಟ್ಟುಹಾಕಿದೆ. ಟ್ವಿಟರ್ ನಲ್ಲಿ ಇವರಿಗೆ 9.7 ಮಿಲಿಯನ್ ಫ್ಯಾನ್ ಫಾಲೋವರ್ಸ್ ಇದ್ದಾರೆ. ಇವರೊಂದಿಗೆ ಆಗಾಗ ಮಹೀಂದ್ರಾ ಸಂವಹನ ನಡೆಸುತ್ತಾರೆ ಕೂಡ. ಹೀಗೆ ಇತ್ತೀಚೆಗೆ ಮಹೀಂದ್ರಾ ಅವರು ತಮ್ಮ ಟ್ವಿಟರ್ ಪೋಸ್ಟ್ ನಲ್ಲಿ ಅಭಿಮಾನಿಗಳಿಗೆ ಉದ್ಯಮಶೀಲತ್ವದ ಕೆಲವು ಪಾಠಗಳನ್ನು ಮಾಡಿದ್ದಾರೆ. ಜನಪ್ರಿಯ ಜಾಗತಿಕ ಕಂಪನಿಗಳು ಹಾಗೂ ಅವರ ಮೊದಲ ಉತ್ಪನ್ನಗಳ ಬಗ್ಗೆ ಅವರು ಒಂದು ಪಟ್ಟಿಯನ್ನೇ ಹಾಕಿದ್ದಾರೆ. ಅದರಲ್ಲಿ ಕೆಲವು ಕಂಪನಿಗಳು 50 ವರ್ಷಕ್ಕಿಂತಲೂ ಹಿಂದಿನವು. ಆಸಕ್ತಿಕಾರವಾದ ವಿಷಯ ಏನಂದ್ರೆ ಈ ಕಂಪನಿಗಳು ಇಂದು ಬೇರೆಯೇ ವರ್ಗಗಳ ಉತ್ಪನ್ನಗಳಿಂದ ಜನಪ್ರಿಯವಾಗಿವೆ.
ನೋಕಿಯಾ ಅಂದ ತಕ್ಷಣ ಮೊಬೈಲ್ ಫೋನ್ ನೆನಪಿಗೆ ಬರುತ್ತದೆ. ಇಂದು ಜಗತ್ತಿನ ಅತೀದೊಡ್ಡ ಮೊಬೈಲ್ ಉತ್ಪಾದನ ಕಂಪನಿಗಳಲ್ಲಿ ಒಂದಾಗಿರುವ ನೋಕಿಯಾದ ಮೊದಲ ಉತ್ಪನ್ನ ಯಾವುದು ಗೊತ್ತಾ? ಟಾಯ್ಲೆಟ್ ಪೇಪರ್. ಇದೇ ರೀತಿ ಆನಂದ ಮಹೀಂದ್ರಾ ಅವರು ಇನ್ನೂ ಒಂದಿಷ್ಟು ಕಂಪನಿಗಳು ಹಾಗೂ ಅವುಗಳ ಹಿಂದಿನ ಉತ್ಪನ್ನಗಳನ್ನು ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಆ ಪಟ್ಟಿ ನೋಡಿದ್ರೆ ನಿಜಕ್ಕೂ ಅಚ್ಚರಿ ಮೂಡುತ್ತದೆ. ಇದರೊಂದಿಗೆ ಮಹೀಂದ್ರಾ ಹೀಗೆ ಹೇಳಿದ್ದಾರೆ-'ಈ ಪಟ್ಟಿ ಅವಕಾಶ ಸಿಕ್ಕಾಗ ಉದ್ಯಮಿಗಳು ಹೇಗೆ ಹೊಸತನಕ್ಕೆ ಹೊಂದಿಕೊಳ್ಳಬೇಕು ಹಾಗೂ ಬದಲಾವಣೆಯನ್ನು ಸ್ವೀಕರಿಸಬೇಕು ಎಂಬುದನ್ನು ತೋರಿಸುತ್ತದೆ.'
ತೆರಿಗೆ ವಂಚನೆಯಿಂದ ಬಿಗಿಯಾಯ್ತು ಕುಣಿಕೆ, ಭಾರತ ತೊರೆಯಲು ಸಜ್ಜಾದ ಚೀನಾ ಮೊಬೈಲ್ ಕಂಪನಿ!
ಪಟ್ಟಿಯಲ್ಲಿರುವ ಕಂಪನಿಗಳು ಮತ್ತು ಉತ್ಪನ್ನಗಳು
ಸೋನಿ: ಎಲೆಕ್ಟ್ರಿಕ್ ರೈಸ್ ಕುಕರ್ಸ್
ಸ್ಯಾಮ್ ಸಂಗ್ : ಹಣ್ಣು ಮತ್ತು ಮೀನು
ಲಿಗೋ: ಮರದ ಬಾತಕೋಳಿ ಆಟಿಕೆ
ಕೋಲ್ಗೇಟ್ : ಕ್ಯಾಂಡಲ್ಸ್
ಟೊಯೋಟಾ: ಮಗ್ಗ
ನಿನ್ಟೆಂಡೋ: ಪ್ಲೇಯಿಂಗ್ ಕಾರ್ಡ್ಸ್
ಟಿಫ್ಫನೆ ಆಂಡ್ ಕೋ: ಸ್ಟೇಷನರಿ
ಹಸ್ಬ್ರೋ : ಜವಳಿಗಳು
ಐಕ್ಯ: ಪೆನ್ ಗಳು
ವ್ರಿಗ್ಲೈ: ಸಾಬೂನು
ಅವೋನ್: ಪುಸ್ತಕಗಳು
ಡುಪಾಂಟ್: ಗನ್ ಪೌಡರ್
ಈ ಬಗ್ಗೆ ಇನ್ನಷ್ಟು ಬರೆದಿರುವ ಮಹೀಂದ್ರಾ ಅವರು 'ಬದಲಾವಣೆಗೆ ಅಂಜಬೇಡಿ. ನೀವು ಮೂಲತ: ಏನು ಉತ್ಪಾದಿಸಲು ಪ್ರಾರಂಭಿಸಿದ್ದೀರೋ ಅದಕ್ಕೆ ಅಂಟಿಕೊಂಡು ಇರಬೇಕಾದ ಅಗತ್ಯವಿಲ್ಲ. ವಿಕಾಸ ವೇ ಜೀವನ!' ಎಂದಿದ್ದಾರೆ. ಈ ಟ್ವೀಟ್ ಮಾಡಿದ ಕೆಲವೇ ಹೊತ್ತಿನಲ್ಲಿ1200 ಜನರು ಲೈಕ್ಸ್ ನೀಡಿದ್ದರೆ, 100 ಕಮೆಂಟ್ಸ್ ಗಳು ಬಂದಿವೆ. ನೋಕಿಯಾದ ಯಶಸ್ಸನ್ನು ಹೊಗಳಿರುವ ಟ್ವಿಟರ್ ಬಳಕೆದಾರರೊಬ್ಬರು 'ಇದು ನಂಬಲು ಅಸಾಧ್ಯ. ಟಾಯ್ಲೆಟ್ ಪೇಪರ್ ಉತ್ಪಾದಿಸುತ್ತಿದ್ದ ಕಂಪನಿ ಆ ಬಳಿಕ ವಿಶ್ವದ ಅತ್ಯಧಿಕ ಸ್ಮಾರ್ಟ್ ಫೋನ್ ಮಾರಾಟ ಮಾಡುವ ಬ್ಯಾಂಡ್ ಗಳಲ್ಲಿ ಒಂದಾಗಿದೆ!'ಇದು ನಿಜಕ್ಕೂ ವಿಸ್ಮಯಕಾರಿ ಬದಲಾವಣೆ!'
ಇದೇ ತಿಂಗಳ 21ರಿಂದ ಟ್ವಿಟರ್‌ನಲ್ಲಿ ಎಡಿಟ್ ಬಟನ್ ಫೀಚರ್ ಲಭ್ಯ!
ಇನ್ನೊಬ್ಬ ಟ್ವಿಟರ್ ಬಳಕೆದಾರರು ಆನಂದ್ ಮಹೀಂದ್ರಾ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದು, 'ಉದ್ಯಮಿ ಅವಕಾಶವಾದಿಯಾಗಿರಬೇಕು, ಆದರೆ ಗುಣಮಟ್ಟದ ಮಾನದಂಡಗಳ ಮೇಲೂ ಗಮನ ಕೇಂದ್ರೀಕರಿಸಿರಬೇಕು' ಎಂದಿದ್ದಾರೆ. ಆಸಕ್ತಿಕರವಾದ ವಿಚಾರವೆಂದ್ರೆ ಮತ್ತೊಬ್ಬ ವ್ಯಕ್ತಿ ಮಹೀಂದ್ರಾ ಕಂಪನಿಯ ಮೊದಲ ಉತ್ಪನ್ನದ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಮಹೀಂದ್ರಾ 'ಉಕ್ಕಿನ ವ್ಯಾಪಾರ. ಈಗಲೂ ಕೂಡ ನಾವು ಮಹೀಂದ್ರಾ ಎಕ್ಸೆಲೋ ಮೂಲಕ ಅದನ್ನು ಮುಂದುವರಿಸಿದ್ದೇವೆ' ಎಂದಿದ್ದಾರೆ.