ನವದೆಹಲಿ(ಮಾ.23): ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಾಮ್ರಾಜ್ಯ ವಿಸ್ತರಣೆಯಾಗುತ್ತಲೇ ಇದೆ. ಕಳೆದ ಜನವರಿ ತಿಂಗಳಲ್ಲಿ ರಿಲಯನ್ಸ್ ಜಿಯೋ ಬರೋಬ್ಬರಿ 93 ಲಕ್ಷ ಮೊಬೈಲ್ ಗ್ರಾಹಕರನ್ನು ಸಂಪಾದಿಸಿದೆ.

ಈ ಮೂಲಕ ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿದರೆ ಲಯನ್ಸ್ ಜಿಯೋ ಉಳಿದ ಟೆಲಿಕಾಂ ಸೇವಾ ಪೂರೈಕೆದಾರರಿಗಿಂತ ದೇಶದಲ್ಲಿ ಮುಂದಿದೆ. ಜಿಯೋದ ಸಮೀಪದ ಪ್ರತಿಸ್ಪರ್ಧಿಯಾಗಿ ಭಾರ್ತಿ ಏರ್‌ಟೆಲ್ ಇದ್ದು, ಕೇವಲ ಒಂದು ಲಕ್ಷ ಗ್ರಾಹಕರನ್ನು ಸಂಪಾದಿಸಿದೆ.

ಈ ಕುರಿತು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಅಂಕಿ ಅಂಶ ಬಹಿರಂಗಗೊಳಿಸಿದ್ದು, ಜನವರಿಯಲ್ಲಿ ಇತರ ಟೆಲಿಕಾಂ ಸೇವೆಗಳಾದ ಬಿಎಸ್ಎನ್ ಎಲ್ 9.82 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ತಿಳಿಸಿದೆ.

ಇದಕ್ಕೆ ಪ್ರತಿಯಾಗಿ ದೇಶದ ಅತಿದೊಡ್ಡ ಟೆಲಿಕಾಂ ಪೂರೈಕೆ ಸಂಸ್ಥೆಯಾದ ವೊಡಫೋನ್ ಐಡಿಯಾ 35.8 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ. ದೇಶದಲ್ಲಿ ಸದ್ಯ ಒಟ್ಟು 29 ಕೋಟಿ ಜಿಯೋ ಗ್ರಾಹಕರಿದ್ದು, ಜನವರಿ ಕೊನೆ ವೇಳೆಗೆ ಶೇ. 25ರಷ್ಟು ಮಾರುಕಟ್ಟೆ ಷೇರುಗಳನ್ನು ಹೊಂದಿತ್ತು.

ಬ್ರಾಂಡ್ ಬಾಂಡ್ ಸೇವೆಯಲ್ಲಿಯೂ ಸಹ ರಿಲಯನ್ಸ್ ಜಿಯೋ ಮುಂಚೂಣಿಯಲ್ಲಿದೆ. ಕಳೆದ ಡಿಸೆಂಬರ್‌ನಿಂದ ಜನವರಿ ವೇಳೆಗೆ ದೇಶದಲ್ಲಿ ಬ್ರಾಡ್ ಬಾಂಡ್ ಗಳ ಸೇವೆ 51.8 ಕೋಟಿಯಿಂದ 54 ಕೋಟಿಗೆ ಏರಿಕೆಯಾಗಿದೆ.

ಇದೇ ವೇಳೆ ಮೊಬೈಲ್ ಸಾಧನ ಆಧಾರಿತ ಬ್ರಾಡ್ ಬಾಂಡ್ ಗಳ ಸಂಪರ್ಕ 52.1 ಕೋಟಿ ಗ್ರಾಹಕರೊಂದಿಗೆ ಶೇ.96ರಷ್ಟು ಹೆಚ್ಚಾಗಿದ್ದು, ವೈರ್‌ಲೆಸ್ ಸಂಪರ್ಕ 1.82 ಕೋಟಿ ಗ್ರಾಹಕರನ್ನು ತಲುಪಿದೆ.