ಬೆಂಗಳೂರು(ಮಾ.24): ಮಹತ್ವದ ಬೆಳವಣಿಗೆಯೊಂದರಲ್ಲಿ ಓಲಾ ಕ್ಯಾಬ್ ಸೇವೆಗೆ ನಿಷೇಧ ಹೇರಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಲು ನಿರ್ಧರಿಸಿದೆ.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ‘ಇಂದಿನಿಂದ ಓಲಾ ಕ್ಯಾಬ್ ಸೇವೆ ಮತ್ತೆ ಶುರುವಾಗಲಿದೆ, ಅದಾಗ್ಯೂ ನೀತಿಗಳನ್ನು ಹೊಸ ತಂತ್ರಜ್ಞಾನದೊಂದಿಗೆ ತುರ್ತಾಗಿ ಬದಲಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಜೊತೆಗೆ ಸರ್ಕಾರಗಳು ಹೊಸ ನೀತಿಗಳನ್ನು ಜಾರಿಗೊಳಿಸಲು ಕೈಗಾರಿಕೆಗಳು ಸರ್ಕಾರದೊಟ್ಟಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ..’ ಎಂದು ಮನವಿ ಮಾಡಿದ್ದಾರೆ.

ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 6 ತಿಂಗಳುಗಳ ಕಾಲ ಓಲಾ ಸೇವೆಯನ್ನು ನಿಷೇಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಇದೀಗ ಆದೇಶ ಹಿಂಪಡೆದಿದ್ದರಿಂದ ಮತ್ತೆ ನಗರದಲ್ಲಿ ಓಲಾ ಸೇವೆ ಆರಂಭವಾಗಿದೆ.

ಈ ಕುರಿತು ಓಲಾ ಸಂಸ್ಥೆಯೊಂದಿಗೆ ಮಾತುಕತೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ನಿಷೇಧದಿಂದ ಪ್ರತಿಸ್ಪರ್ಧಿ ಕ್ಯಾಬ್ ಸೇವಾ ಸಂಸ್ಥೆಗೆ ಉಬರ್‌ಗೆ ಲಾಭವಾಗುವುದನ್ನು ತಡೆಯಲು ಓಲಾ ಕೂಡ ಮಾತುಕತೆಗೆ ಉತ್ಸುಕತೆ ತೋರಿದೆ ಎನ್ನಲಾಗಿದೆ.