ಭಾರತೀಯ ಹೂಡಿಕೆದಾರರ ನಂ.1 ಆಯ್ಕೆ ಎಫ್ ಡಿ ಅಲ್ಲ, ಮ್ಯೂಚ್ಯುವಲ್ ಫಂಡ್ಸ್: ಸಮೀಕ್ಷೆ
*ಸ್ಕ್ರಿಪ್ ಬಾಕ್ಸ್ ನಡೆಸಿದ ಅಖಿಲ ಭಾರತ ಸಮೀಕ್ಷೆ
*620 ವಯಸ್ಕರ ಸಮೀಕ್ಷೆ ನಡೆಸಿದ ಸ್ಕ್ರಿಪ್ ಬಾಕ್ಸ್
*ಈ ವರ್ಷ ನಿವೃತ್ತಿ ಯೋಜನೆಗಳ ಮೇಲಿನ ಹೂಡಿಕೆಗೆ ಹೆಚ್ಚಿನ ಗಮನ ಹರಿಸಿರುವ ಪುರುಷರು
Business Desk: ಹೂಡಿಕೆ ಹಾಗೂ ಉಳಿತಾಯಕ್ಕೆ ಸದ್ಯ ಭಾರತೀಯರ ನಂ.1 ಆಯ್ಕೆ ಸ್ಥಿರ ಠೇವಣಿಯಲ್ಲ, ಬದಲಿಗೆ ಮ್ಯೂಚ್ಯುವಲ್ ಫಂಡ್ ಆಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. 'ಈ ವರ್ಷ ಮ್ಯೂಚ್ಯುವಲ್ ಫಂಡ್ಸ್ ದೇಶದ ನಂ.1 ಆರ್ಥಿಕ ಹೂಡಿಕೆ ಸಾಧನವಾಗಿ ಗುರುತಿಸಿಕೊಂಡಿದೆ. ಉಳಿತಾಯ ಖಾತೆಗಳು ಅಥವಾ ಸ್ಥಿರ ಠೇವಣಿಗಳಲ್ಲಿ ಅಧಿಕ ಹಣವಿಡುವ ಬದಲು ಮ್ಯೂಚ್ಯುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಿರೋದು ಇದೇ ಮೊದಲ ಬಾರಿಗೆ ಕಂಡುಬಂದಿದೆ' ಎಂದು ಸ್ಕ್ರಿಪ್ ಬಾಕ್ಸ್ ನಡೆಸಿದ ಅಖಿಲ ಭಾರತ ಸಮೀಕ್ಷೆ ತಿಳಿಸಿದೆ. ಸ್ಕ್ರಿಪ್ ಬಾಕ್ಸ್ ದೇಶಾದ್ಯಂತ 620 ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಇಂದು ಉಳಿತಾಯಕ್ಕಿಂತ ಹೂಡಿಕೆ ಮಾಡೋದು ಹೆಚ್ಚು ಲಾಭದಾಯಕ ಎಂದು ಜನರು ಭಾವಿಸುತ್ತಿದ್ದಾರೆ. ಇದು ಹಣಕಾಸಿನ ಆಯಾಮದಲ್ಲಿ ಮಾತ್ರವಲ್ಲ, ಬದಲಿಗೆ ಸಮಗ್ರ ಸ್ವಯಂ ಮೌಲ್ಯದ ಆಧಾರದಲ್ಲಿ ಕೂಡ ಎಂದು ಸಮೀಕ್ಷೆ ಹೇಳಿದೆ. ಹೂಡಿಕೆ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಒಬ್ಬರ ಹಣಕಾಸಿನ ಸ್ಥಿತಿಗತಿಗಳ ಮೇಲೆ ನಿಯಂತ್ರಣ ಸಾಧಿಸಲು ಕೂಡ ಇದು ನೆರವು ನೀಡುತ್ತದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ತಿಳಿಸಿದ್ದಾರೆ.
ಯುವ ಪೀಳಿಗೆಗೆ ಏನು ಸಲಹೆ ನೀಡುತ್ತೀರಿ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರನ್ನು ಪ್ರಶ್ನಿಸಿದಾಗ ಬಹುತೇಕರು ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಮಾಡಲು ಪ್ರಾರಂಭಿಸೋದು ಉತ್ತಮ ಎಂಬ ಸಲಹೆ ನೀಡಿದ್ದಾರೆ. 'ಉಳಿತಾಯ ಹಾಗೂ ಹೂಡಿಕೆಯನ್ನು ಪರ್ಯಾಯವಾಗಿ ಬಳಸಲಾಗುತ್ತದೆ. ಆದರೆ, ಇವೆರಡೂ ಭಿನ್ನ. ಉಳಿತಾಯ ಅನ್ನೋದು ಮೊದಲ ಪ್ರಮುಖ ಹೆಜ್ಜೆಯಾದ್ರೆ, ಹೂಡಿಕೆಯೊಂದಿಗೆ ಇದನ್ನು ಬಳಸಿದಾಗ ಸಂಪತ್ತಿನ ಶಕ್ತಿ ತಿಳಿಯುತ್ತದೆ. ಸರಳವಾಗಿ ಹೇಳೋದಾದ್ರೆ ಹಣವನ್ನು ಹೂಡಿಕೆ ಮಾಡದೆ ಸುಮ್ಮನೆ ಉಳಿತಾಯ ಮಾಡಿದ್ರೆ ಹಣದುಬ್ಬರ ತಡೆಯಲು ಅದಕ್ಕೆ ಸಾಧ್ಯವಾಗೋದಿಲ್ಲ. ಹಾಗೆಯೇ ದೀರ್ಘಕಾಲದ ಗುರಿಗಳನ್ನು ಸಾಧಿಸಲು ಕೂಡ ಅದು ನೆರವು ನೀಡೋದಿಲ್ಲ' ಎಂದು ಸ್ಕ್ರಿಪ್ ಬಾಕ್ಸ್ ಸಂಸ್ಥಾಪಕ ಹಾಗೂ ಸಿಇಒ ಅತುಲ್ ಶಿಂಘಲ್ ತಿಳಿಸಿದ್ದಾರೆ.
Elon Musk: ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್: ಪರಾಗ್ ಅಗರವಾಲ್ ಸೇರಿ ಹಲವು ಉನ್ನತ ಅಧಿಕಾರಿಗಳು ವಜಾ?
ಸಮೀಕ್ಷೆಯ ಪ್ರಮುಖಾಂಶಗಳು ಹೀಗಿವೆ:
*ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.57ರಷ್ಟು ಮಂದಿ ತಮ್ಮನ್ನು ಉಳಿತಾಯ ಮಾಡೋರು ಎಂದು ಪರಿಗಣಿಸಿದ್ದಾರೆ. ಇನ್ನು ಶೇ.43ಷ್ಟು ಜನರು ತಾವು ಹೆಚ್ಚು ಸಕ್ರಿಯ ಹೂಡಿಕೆದಾರರಾಗಿದ್ದೇವೆ ಎಂದು ತಿಳಿಸಿದ್ದಾರೆ.
*ಶೇ.60ರಷ್ಟು ಜನರು ಹಣದುಬ್ಬರ. ಆರ್ಥಿಕ ಹಿಂಜರಿತ, ಸಾಂಕ್ರಾಮಿಕ ಹಾಗೂ ಸ್ಥೂಲ ಆರ್ಥಿಕ ಟ್ರೆಂಡ್ ಗಳ ಕಾರಣಗಳಿಂದ ಉಳಿತಾಯದಿಂದ ಹೂಡಿಕೆಯತ್ತ ಗಮನ ಹರಿಸಿರೋದಾಗಿ ತಿಳಿಸಿದ್ದಾರೆ.
*ಶೇ.27ರಷ್ಟು ಜನರು ಕಳೆದ ವರ್ಷ ವೆಚ್ಚದಲ್ಲಿ ಕಡಿತ ಮಾಡಿರೋದಾಗಿ ತಿಳಿಸಿದ್ದಾರೆ. ಶೇ.50ರಷ್ಟು ಮಂದಿ ತಮ್ಮ ಆದಾಯದ ಶೇ.10ರಿಂದ ಶೇ.30ರಷ್ಟನ್ನು ಉಳಿತಾಯ ಮಾಡುತ್ತಿರೋದಾಗಿ ಹೇಳಿದ್ದಾರೆ. ಹೂಡಿಕೆ ಆಧಾರದಲ್ಲಿ ಗಮನಿಸಿದ್ರೆ, ಶೇ.23ರಷ್ಟು ಮಂದಿ ಕಳೆದ ವರ್ಷ ಸಕ್ರಿಯವಾಗಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಇನ್ನು ಶೇ.20ರಷ್ಟು ಮಂದಿ ಈಗಾಗಲೇ ಇರುವ ಹೂಡಿಕೆದಾರರು ಹೂಡಿಕೆಯಲ್ಲಿ ಹೆಚ್ಚಳ ಮಾಡಿದ್ದಾರೆ.
ಎಸ್ ಬಿಐಯ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು, ಪ್ರತಿ ತಿಂಗಳು ಸಿಗುತ್ತೆ ಪಿಂಚಣಿ!
*ಶೇ.30ರಷ್ಟು ಮಂದಿ 2021ರಂತೆ ಈ ವರ್ಷ ಕೂಡ ಉನ್ನತವಾದ 2 ಆರ್ಥಿಕ ಗುರಿಗಳೊಂದಿಗೆ ತುರ್ತು ನಿಧಿ ನಿರ್ಮಾಣ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ನಿವೃತ್ತಿ ಯೋಜನೆಗಳು ಹಾಗೂ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಹೂಡಿಕೆ ಕೂಡ ಮಾಡಲು ಬಯಸಿದ್ದಾರೆ.
*ಸಮೀಕ್ಷೆ ಮಹಿಳೆ ಹಾಗೂ ಪುರುಷರ ಆರ್ಥಿಕ ಗುರಿಗಳಲ್ಲಿನ ವ್ಯತ್ಯಾಸವನ್ನು ಕೂಡ ಗುರುತಿಸಿದೆ. ಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯ ಮಾಡೋದು ಶೇ.36ರಷ್ಟು ಮಹಿಳೆಯರ ಟಾಪ್ ಎರಡು ಆದ್ಯತೆಗಳಲ್ಲಿ ಒಂದಾಗಿದೆ. ಈ ಟ್ರೆಂಡ್ 2021ರಲ್ಲಿ ಕೂಡ ಇತ್ತು. ಪುರುಷರು ಮಹಿಳೆಯರಿಗಿಂತ ಹೆಚ್ಚು ಹೂಡಿಕೆ ಮಾಡೋದನ್ನು ಮುಂದುವರಿಸಿದ್ದಾರೆ. ಸಮೀಕ್ಷೆ ಪ್ರಕಾರ ಕಳೆದ 4 ವರ್ಷಗಳಲ್ಲಿ ಮಹಿಳೆಯರ ಹೂಡಿಕೆ ಪ್ರಮಾಣ ದ್ವಿಗುಣಗೊಂಡಿದೆ.
*ಇನ್ನು ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಪುರುಷರು ಮಕ್ಕಳ ಶಿಕ್ಷಣಕ್ಕಿಂತ ನಿವೃತ್ತಿ ಯೋಜನೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಪ್ರಾರಂಭಿಸಿದ್ದಾರೆ.