ಬೆಂಗಳೂರು (ಫೆ. 01): ಕೊರೋನಾ ಎಂಬ ವ್ಯಾದಿಯಿಂದಾಗಿ ಇಡೀ ಜಗತ್ತು ಕಂಡುಕೇಳರಿಯದ ಸಮಸ್ಯೆಗೊಳಗಾಗಿದೆ. ಮುಖ್ಯವಾಗಿ ಆರ್ಥಿಕವಾಗಿ ಮುಂದುವರೆದ, ಅತಿ ಶ್ರೀಮಂತ ದೇಶಗಳೂ ಮಂಡಿಯೂರಿವೆ. ಯುರೋಪ್‌, ಅಮೆರಿಕ ದೇಶಗಳಿಗೆ ಹೋಲಿಸಿದರೆ ನಾವು ಚೇತರಿಸಿಕೊಂಡಿದ್ದೇವೆ.

ಕಳೆದ ಒಂದು ವರ್ಷದಲ್ಲಿ ಕಾಲಕಾಲಕ್ಕೆ ಸರ್ಕಾರ ಆರ್ಥಿಕತೆಯ ಪುನಃಶ್ಚೇತನಕ್ಕೆ ಕ್ರಮಗಳನ್ನು ಕೈಗೊಂಡಿದೆ, ಪೋಷಣೆ ಮಾಡಿದೆ. ಅದಕ್ಕೆ ಪೂರಕವಾಗಿಯೇ ಈ ಬಾರಿ ಬಜೆಟ್‌ ಘೋಷಣೆಯಾಗಲಿದೆ. ಇದನ್ನು ಮಾನ್ಯ ಪ್ರಧಾನಮಂತ್ರಿಗಳೇ ದೃಢೀಕರಿಸಿದ್ದಾರೆ. ಜಿಎಸ್‌ಟಿ ಜಾರಿ ನಂತರ ಮತ್ತು ನೇರ ತೆರಿಗೆಗಳಲ್ಲಿ ಸಾಕಷ್ಟುಸುಧಾರಣೆಗಳ ನಂತರ ಬಜೆಟ್‌ ತನ್ನ ಹೊಳಪನ್ನು, ಕೌತುಕವನ್ನು ಕಳೆದುಕೊಂಡಿತ್ತು. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಮತ್ತೆ ಕೌತುಕವನ್ನು ಸೃಷ್ಟಿಸಿದೆ.

ಹೊಸ ತೆರಿಗೆ ಇರಲ್ಲ

ಬಜೆಟ್‌ ಎಂದರೆ ಒಂದು ಹಣಕಾಸಿನ ವರ್ಷದಲ್ಲಿ ದೇಶಕ್ಕೆ ಬರುವ ಅಂದಾಜು ಆದಾಯ ಮತ್ತು ಅಭಿವೃದ್ಧಿಗಾಗಿ ಖರ್ಚು ಮಾಡುವ ಉದ್ದೇಶದ ಅಂದಾಜು ಪಟ್ಟಿ. ಈ ಬಾರಿ ಹೊಸ ತೆರಿಗೆಗಳನ್ನು ಹೇರುವುದರ ಮೂಲಕ ಸಂಪನ್ಮೂಲ ಕ್ರೋಢೀಕರಣದ ಸಾಧ್ಯತೆ ಕಡಿಮೆ. ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿ ಇರುವಾಗ ತೆರಿಗೆ ಭಾರ ವಿಧಿಸುವುದು ಆಯ್ಕೆಯಲ್ಲ. ಹಾಗಾಗಿ ಸರ್ಕಾರ ಸಾಲ ಮಾಡಬೇಕು, ದೇಶದ ಒಳಗೆ ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾಂಡ್‌ಗಳ ಮೂಲಕ ಸಂಪನ್ಮೂಲ ಕ್ರೋಢೀಕರಣ ಒಂದು ಆಯ್ಕೆ.

ಇನ್ನು ಸರ್ಕಾರ ಮಾಡುವ ಖರ್ಚುಗಳೂ ಆರ್ಥಿಕತೆಯನ್ನು ಹುರಿದುಂಬಿಸುತ್ತವೆ. ಸದ್ಯ ರಾಷ್ಟ್ರೀಯ ಹೆದ್ದಾರಿ ಇಲಾಖೆ ಬಿಟ್ಟರೆ ಇತರೆ ಇಲಾಖೆಗಳು ಖರ್ಚು ಮಾಡುತ್ತಿಲ್ಲ. ಹಾಗಾಗಿ ಈ ಬಜೆಟ್‌ನಲ್ಲಿ ಹಣ ತಂದ ಮೇಲೆ ಹೇಗೆ ಖರ್ಚು ಮಾಡುತ್ತಾರೆ ಎಂದು ನೋಡಬೇಕು. ತೆರಿಗೆ ವಿನಾಯಿತಿ ಹಾಗೂ ರಿಯಾಯಿತಿಗಳು ಈ ಬಾರಿಯ ನಿರೀಕ್ಷೆಗಳಲ್ಲ. ಆಡಳಿತಾತ್ಮಕ ಸುಧಾರಣೆಗಳನ್ನು ನಿರೀಕ್ಷಿಸಬಹುದು. ಆದರೆ ಇದಕ್ಕೆ ಅಧಿಕಾರಿಗಳ ಮನೋಭಾವದ ಬದಲಾವಣೆ ಅವಶ್ಯಕ. ಅವರಿನ್ನು ‘ಲೈಸನ್ಸ್‌ ರಾಜ್‌’ ಗುಂಗಿನಲ್ಲಿದ್ದಾರೆ.

Budget 2021 : ನಿರೀಕ್ಷೆಗಳ ಮಹಾಪೂರ, ಯಾವ ಕ್ಷೇತ್ರಕ್ಕೇನು ಸಿಗಬಹುದು?

ಬಜೆಟ್‌ನಲ್ಲಿ ರೈತರಿಗೆ ಅನುಕೂಲ

ಲಾಕ್ಡೌನ್‌ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ಅದ್ಭುತ ನಿರ್ಣಯಗಳೆಂದರೆ ಧಾನ್ಯ ವಿತರಣೆ ಹಗೂ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದ್ದು. ಬಹಳಷ್ಟುವರ್ಷಗಳಿಂದ ಸಂಗ್ರಹಿಸಿದ್ದ ದವಸ-ಧಾನ್ಯಗಳನ್ನು ತುಂಬ ಚೆನ್ನಾಗಿ ಎಲ್ಲರಿಗೂ ಅವಶ್ಯಕ್ಕಿಂತ ಸ್ವಲ್ಪ ಹೆಚ್ಚೇ ವಿತರಿಸುವ ಮೂಲಕ ಹಸಿವಿನಿಂದ ಪಾರು ಮಾಡಿದ್ದಾರೆ. ಇನ್ನೊಂದು ಅದ್ಭುತವಾದ ಕೆಲಸ ಕೊರೋನಾ ವಿರುದ್ಧ ಹೋರಟದಲ್ಲಿ ತೊಡಗಿಸಿಕೊಂಡವರಿಗೆ ಊಟ, ತಿಂಡಿ, ಸೌಲಭ್ಯಗಳನ್ನು ಕೂಡ ಅಚ್ಚುಕಟ್ಟಾಗಿ ಒದಗಿಸಿದ್ದು. ಇದರಿಂದಾಗಿ ಫುಡ್‌ ಕಾರ್ಪೋರೇಶನ್‌ ಆಫ್‌ ಇಂಡಿಯಾದ ಎಲ್ಲ ಗೋದಾಮುಗಳೂ ಖಾಲಿಯಾಗಿವೆ. ಕೃಷಿಗೆ ನಿರ್ಬಂಧ ಹೇರದೆ ಪ್ರೋತ್ಸಾಹ ನೀಡಿದ್ದರಿಂದ ಈ ಬಾರಿ ಉತ್ಪಾದನೆ ಹೆಚ್ಚುತ್ತದೆ, ಗೋದಾಮುಗಳು ಖಾಲಿಯಾಗಿರುವುದರಿಂದ ಸರ್ಕಾರ ಹೆಚ್ಚು ಖರೀದಿಸುತ್ತದೆ. ಇದರಿಂದ ರೈತರಿಗೆ ಅನುಕೂಲ.

ಕೈಗಾರಿಕೆಗಳ ಪುನಃಶ್ಚೇತನ

ಕೊರೋನಾದಿಂದಾಗಿ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದ ಕೈಗಾರಿಕೆಗಳು ಇನ್ನು ಚೇತರಿಕೆ ಕಾಣಬೇಕಾಗಿದೆ. ಪ್ಯಾಕೇಜ್‌ ಘೋಷಣೆ ನಂತರವೂ ಕಚ್ಚಾ ಸಾಮಗ್ರಿಗಳ ಕೊರತೆ, ಕಾರ್ಮಿಕರ ಕೊರತೆ, ಬಂಡವಾಳ ಮುಂತಾದ ಸಮಸ್ಯೆಗಳನ್ನು ಕೈಗಾರಿಕಾ ಕ್ಷೇತ್ರ ಎದುರಿಸುತ್ತಿದೆ. ಬ್ಯಾಂಕುಗಳಲ್ಲಿ ಹಣದ ಲಭ್ಯತೆ ಇದೆ. ಇದನ್ನು ಅವಶ್ಯಕತೆ ಇರುವವರ ಕೈಗೆ ಸೇರಿಸುವುದರ ಜೊತೆ ಸಾಲ ಮರುಪಾವತಿ ಬಗ್ಗೆ ಕಾಳಜಿ ವಹಿಸಬೇಕು. ಸರ್ಕಾರ ಈಗಾಗಲೇ ವಸೂಲಾಗದ ಸಾಲದ ವರ್ಗೀಕರಣ ಸಡಿಲಗೊಳಿಸಿದೆ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ಈ ವರ್ಗಕ್ಕೆ ಹೆಚ್ಚಿನ ನಿರೀಕ್ಷೆ ಇದೆ. ಕೊರೋನಾದಿಂದಾಗಿ ಚೀನಾಕ್ಕೆ ಹಿನ್ನಡೆಯಾಗಿದೆ. ಇದು ಕೈಗಾರಿಕೆಗಳಿಗೆ ಅವಕಾಶವನ್ನು ಸೃಷ್ಟಿಸಿದೆ. ಇದಕ್ಕಾಗಿ ಬಜೆಟ್‌ನಲ್ಲಿ ನಿರೀಕ್ಷೆ ಇದೆ.

ಮೊದಲ ಬಜೆಟ್ ಮಂಡನೆಯಾಗಿದ್ದು ಯಾವಾಗ? ಸಮಯ ಬದಲಾಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ!

ಸವಾಲೇ ಇಲ್ಲಿ ಅವಕಾಶ

ಹಲವು ಆರ್ಥಿಕ ತಜ್ಞರ ಅಭಿಪ್ರಾಯದಂತೆ 1991ರ ನಂತರ ಸರ್ಕಾರಕ್ಕೆ ಒಳ್ಳೆಯ ಅವಕಾಶ 2021ನೇ ಇಸವಿ. ಏಕೆಂದರೆ ಅಂದು ಚಿನ್ನ ಅಡವಿಟ್ಟು ಸರ್ಕಾರ ನಡೆಸುವ ಸಂಕಷ್ಟದಲ್ಲಿ ಮಾರುಕಟ್ಟೆ ಮುಕ್ತಗೊಳಿಸಲಾಯಿತು. ಎಲ್ಲರ ವಿರೋಧವಿದ್ದರೂ ಸಂಕಷ್ಟಕ್ಕೆ ಪರಿಹಾರ ಇರಲಿಲ್ಲ. ಅದರ ಲಾಭ ನಾವು ಚೆನ್ನಾಗಿ ಪಡೆದುಕೊಂಡಿದ್ದೇವೆ. ಅದೇ ರೀತಿ ಅಮೆರಿಕ, ಜರ್ಮನಿ, ಬ್ರಿಟನ್‌, ಫ್ರಾನ್ಸ್‌ನಂತಹ ಮುಂದುವರೆದ ದೇಶಗಳೂ ಕೊರತೆಯನ್ನು ಹೊಂದಿವೆ ಮತ್ತು ಸಾಲಗಳನ್ನು ಹಲವಾರು ವರ್ಷಗಳ ನಂತರ ಮಾಡುತ್ತಿವೆ. ಜನರಿಗೆ ಭಾರವಾಗದಂತಹ, ಹೊಸ ಗಟ್ಟಿನಿರ್ಣಯಗಳನ್ನು ಕೈಗೊಳ್ಳಲು ಇದು ಸಕಾಲ ಹಾಗೂ ನಮಗೆ ಸಕಾರಣ ಇದೆ. ದೇಶದ ಭವಿಷ್ಯವನ್ನು ರಾಜೀ ಮಾಡಿಕೊಳ್ಳದೆ ನಿರ್ಣಯ ಕೈಗೊಳ್ಳಬೆಕಾಗಿದೆ. ಒಟ್ಟಾರೆ ಈ ಬಾರಿಯ ಬಜೆಟ್‌ ಒಂದು ಓಪನ್‌ ಸೀಕ್ರೆಟ್‌ ಆದರೂ ಕೂಡ ತುಂಬ ನಿರೀಕ್ಷೆ ಪಡುವ ಬಜೆಟ್‌ ಆಗಿದೆ. ಸರ್ಕಾರ ತನ್ನ ಮುಂದಿರುವ ಸವಾಲುಗಳನ್ನು ಅವಕಾಶಗಳಾಗಿ ಬದಲಾಯಿಸುವಂತಹ ದಿಟ್ಟನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.

- ವಿಜಯ್‌ ರಾಜೇಶ್‌

ವಕೀಲರು ಹಾಗೂ ತೆರಿಗೆ ಸಲಹಾಗಾರರು