ಪ್ರಜ್ವಲ್ ರೇವಣ್ಣ ಪೊಲೀಸರ ಮುಂದೆ ಬಂದರೂ ಅರೆಸ್ಟ್ ಮಾಡುವಂತಿಲ್ಲ; ಗಂಭೀರ ಕೇಸ್ ದಾಖಲಾಗಿಲ್ಲ
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಕುರಿತಾಗಿ ಪೊಲೀಸರ ಮುಂದೆ ಬಂದರೂ ಬಂಧಿಸಲು ಅವಕಾಶವಿಲ್ಲ ಎಂದು ಕಾನೂನು ತಜ್ಞರಾದ ವಕೀಲ ಸುಧನ್ವ ಹೇಳಿದರು.
ಬೆಂಗಳೂರು (ಮೇ 01): ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಕುರಿತಾಗಿ ದಾಖಲಾದ ಎಫ್‌ಐಆರ್ ನೋಡಿದರೆ, ಅದರಲ್ಲಿ ಯಾವುದೇ ಗಂಭೀರ ಆರೋಪಗಳಿಲ್ಲ. ಅವರು ಪೊಲೀಸರ ಮುಂದೆ ಬಂದರೂ ಬಂಧಿಸಲು ಅವಕಾಶವಿಲ್ಲ ಎಂದು ಕಾನೂನು ತಜ್ಞರಾದ ವಕೀಲ ಸುಧನ್ವ ಹೇಳಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತಾಗಿ ಮಾತನಾಡಿದ ಅವರು, ನಾನು ಎಫ್‌ಐಆರ್ ನೋಡಿದೆ. ಅದರಲ್ಲಿ 354ಎ ಮತ್ತು 354ಡಿ ಸೆಕ್ಷನ್ ಅನ್ವಯ ಕೇಸ್ ದಾಖಲಿಸಲಾಗಿದೆ. ಕೇಸ್ ರಿಜಿಸ್ಟರ್ ಮಾಡಿದ ಎಲ್ಲ ಸೆಕ್ಷನ್‌ಗಳೂ ಕೂಡ ಸುಲಭವಾಗಿ ಜಾಮೀನು ಪಡೆದುಕೊಳ್ಳಬಹುದು. ಈ ಕೇಸ್‌ನಲ್ಲಿ ಅತಿಹೆಚ್ಚು ಅಂದರೆ ಕೇವಲ 3 ವರ್ಷಗಳ ಶಿಕ್ಷೆ ಪ್ರಕಟವಾಗುವ ಸಾಧ್ಯತೆಯಿದೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣರನ್ನು ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಬಂಧಿಸಲು ಸಾಧ್ಯವಿಲ್ಲ; ವಕೀಲ ಸುಧನ್ವ ಮಾಹಿತಿ
ಪೊಲೀಸರು ನೋಟಿಸ್ ಜಾರಿಗೊಳಿಸಿದ ನಂತರ ಆರೋಪಿ ಪ್ರಜ್ವಲ್ ರೇವಣ್ಣ ನೇರವಾಗಿ ವಿಚಾರಣೆಗೆ ಹಾಜರಾದರೂ ಅವರನ್ನು ಪೊಲೀಸರು ಬಂಧಿಸುವಂತಿಲ್ಲ. ಜೊತೆಗೆ, ಪ್ರಜ್ವಲ್ ಅವರು ವಿಚಾರಣಾ ಅಧಿಕಾರಿಗಳ ಮುಂದೆಯೇ ಜಾಮೀನು ಪಡೆದುಕೊಳ್ಳಬಹುದು. ಇಲ್ಲವೆಂದರೆ ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡ ನಂತರ ವಿಚಾರಣೆಗೆ ಹಾಜರಾಗುವುದಕ್ಕೆ ಅವಕಾಶವಿದೆ ಎಂದು ತಿಳಿಸಿದರು.