ಏಪ್ರಿಲ್ ತಿಂಗಳಲ್ಲಿ ದಾಖಲೆಯ ಜಿಎಸ್ ಟಿ ಸಂಗ್ರಹ; ತೆರಿಗೆ ಸಂಗ್ರಹದಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ
ದೇಶದಲ್ಲಿ ಇದೇ ಮೊದಲ ಬಾರಿಗೆ ಜಿಎಸ್ ಟಿ ಸಂಗ್ರಹ ದಾಖಲೆಯ ಮಟ್ಟ ತಲುಪಿದ್ದು, ಏಪ್ರಿಲ್ ತಿಂಗಳಲ್ಲಿ 2.10 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.
ನವದೆಹಲಿ (ಮೇ 1): ಭಾರತದ ನಿವ್ವಳ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹಣೆ ಏಪ್ರಿಲ್ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಏಪ್ರಿಲ್ ತಿಂಗಳಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಇಂದು (ಮೇ 1) ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಿದೆ. ಇದೇ ಮೊದಲ ಬಾರಿಗೆ ಜಿಎಸ್ ಟಿ ಸಂಗ್ರಹ 2 ಲಕ್ಷ ಕೋಟಿ ರೂ. ಮೈಲಿಗಲ್ಲು ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಜಿಎಸ್ ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಕರ್ನಾಟಕವಿದೆ. ಇಲ್ಲಿನ ತೆರಿಗೆ ಸಂಗ್ರಹ 15,000 ಕೋಟಿ ರೂ. ಗಡಿ ದಾಟಿದೆ. ಜಿಎಸ್ ಟಿ ಸಂಗ್ರಹಣೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿರೋದಕ್ಕೆ ಆರ್ಥಿಕ ಬೆಳವಣಿಗೆ ಹಾಗೂ ಆಡಳಿತ ಕ್ಷಮತೆ ಹೆಚ್ಚಿರೋದೇ ಕಾರಣ. ಹರ್ಯಾಣ ಹಾಗೂ ಉತ್ತರಪ್ರದೇಶ ರಾಜ್ಯಗಳು ಮೊದಲ ಬಾರಿಗೆ ಒಂದು ತಿಂಗಳ ತೆರಿಗೆ ಸಂಗ್ರಹ 12,000 ಕೋಟಿ ರೂ ಮೈಲಿಗಲ್ಲು ತಲುಪಿವೆ. ಇನ್ನು ಆರು ರಾಜ್ಯಗಳು ಇದೇ ಮೊದಲ ಬಾರಿಗೆ ತಲಾ 12,000 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿವೆ.
ಜಿಎಸ್ ಟಿ ಸಂಗ್ರಹಣೆಯಲ್ಲಿ ಏರಿಕೆಯಾಗಲು ದೇಶೀಯ ವಹಿವಾಟಿನಲ್ಲಿ ಹೆಚ್ಚಳವಾಗಿರೋದೇ ಮುಖ್ಯಕಾರಣ. ಜಿಎಸ್ ಟಿ ಸಂಗ್ರಹಣೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ.13.4ರಷ್ಟು ಏರಿಕೆಯಾಗಿದೆ. ಏಪ್ರಿಲ್ ನಲ್ಲಿ ನಿವ್ವಳ ಜಿಎಸ್ ಟಿ ಸಂಗ್ರಹಣೆ ಶೇ. 12.4ರಷ್ಟು ಹೆಚ್ಚಳವಾಗಿದೆ. ಇದು 2017ರ ಜುಲೈ ನಂತರದ ದಾಖಲೆಯ ತೆರಿಗೆ ಸಂಗ್ರಹವಾಗಿದೆ. ಈ ಹಿಂದೆ ಅತ್ಯಧಿಕ ಅಂದ್ರೆ 1.87 ಲಕ್ಷ ಕೋಟಿ ಜಿಎಸ್ ಟಿ 2023ರ ಏಪ್ರಿಲ್ ನಲ್ಲಿ ಸಂಗ್ರಹವಾಗಿತ್ತು.
ತೆರಿಗೆ ಸಂಗ್ರಹಣೆ ವಿವರ ಹೀಗಿದೆ:
ಸಿಜಿಎಸ್ಟಿ: 43,846 ಕೋಟಿ ರೂ.
ಎಸ್ಜಿಎಸ್ಟಿ: 53,538 ಕೋಟಿ ರೂ.
ಐಜಿಎಸ್ಟಿ: 99,623 ಕೋಟಿ ರೂ.
ಸೆಸ್: 13,260 ಕೋಟಿ ರೂ.
ಇಲ್ಲಿ ಸಿಜಿಎಸ್ಟಿ ಅಂದ್ರೆ ಕೇಂದ್ರಕ್ಕೆ ಸಂದಾಯವಾಗುವ ತೆರಿಗೆ ಪಾಲು. ಎಸ್ಜಿಎಸ್ಟಿ ರಾಜ್ಯ ಸರ್ಕಾರಗಳಿಗೆ ಹೋಗುವ ತೆರಿಗೆ ಪಾಲು. ಐಜಿಎಸ್ಟಿ ಎಂಬುದು ಒಂದು ರಾಜ್ಯದಲ್ಲಿರುವ ಸಂಸ್ಥೆ ಬೇರೆ ರಾಜ್ಯದ ಇನ್ನೊಂದು ಸಂಸ್ಥೆ ಜೊತೆ ವ್ಯವಹರಿಸುವಾಗ ನೀಡುವ ತೆರಿಗೆ. ಇನ್ನು ಐಜಿಎಸ್ಟಿಯ ಹಣದಲ್ಲಿ ಕೇಂದ್ರ ಮತ್ತು ಸಂಬಂಧಿತ ರಾಜ್ಯ ಸರ್ಕಾರಗಳು ಪಾಲು ಪಡೆಯುತ್ತವೆ.
ಏಪ್ರಿಲ್ ತಿಂಗಳಲ್ಲಿ ಐಜಿಎಸ್ಟಿ ಸಂಗ್ರಹವಾಗಿರುವುದು 99,623 ಕೋಟಿ ರೂ. ಇದರಲ್ಲಿ ಸಿಜಿಎಸ್ಟಿ ಖಾತೆಗೆ 50,307 ಕೋಟಿ ರೂ. ಹಂಚಿಕೆ ಆಗಿದೆ. ಎಸ್ಜಿಎಸ್ಟಿ ಖಾತೆಗೆ 41,600 ಕೋಟಿ ರೂ. ಕೊಡಲಾಗಿದೆ. ಅಂತಿಮವಾಗಿ ಸಿಜಿಎಸ್ಟಿ ಮೊತ್ತ 94,153 ಕೋಟಿ ರೂ. ಅದರೆ, ಎಸ್ಜಿಎಸ್ಟಿ ಮೊತ್ತ 95,138 ಕೋಟಿ ರೂ. ಆಗಿದೆ.
ಜಿಎಸ್‌ಟಿ ಸಂಗ್ರಹ ಏರಿಕೆಯಲ್ಲಿ ಕರ್ನಾಟಕ ದೇಶಕ್ಕೆ ನಂ.1.
ಜಿಎಸ್ ಟಿ ಸಂಗ್ರಹಣೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ
ಜಿಎಸ್ ಟಿ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 37,671 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದೆ. ನಂತರದ ಸ್ಥಾನದಲ್ಲಿ ಕರ್ನಾಟಕವಿದ್ದು, 15,978 ಕೋಟಿ ರೂ. ಸಂಗ್ರಹವಾಗಿದೆ.ಇನ್ನು ಆ ನಂತರದ ಅಂದ್ರೆ ಮೂರನೇ ಸ್ಥಾನದಲ್ಲಿ ಗುಜರಾತ್ ಇದ್ದು,13,301 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಉತ್ತರ ಪ್ರದೇಶದಲ್ಲಿ ಜಿಎಸ್ ಟಿ ಸಂಗ್ರಹಣೆಯಲ್ಲಿ ಶೇ.19ರಷ್ಟು ಪ್ರಗತಿ ಕಂಡುಬಂದಿದೆ. 12,290 ಕೋಟಿ ರೂ. ಸಂಗ್ರಹಣೆಯಾಗಿದೆ. ತಮಿಳುನಾಡಿನಲ್ಲಿ ಜಿಎಸ್ ಟಿ ಸಂಗ್ರಹಣೆಯಲ್ಲಿ ಶೇ.6ರಷ್ಟು ಪ್ರಗತಿ ಕಂಡುಬಂದಿದೆ. 12,210 ಕೋಟಿ ರೂ. ಸಂಗ್ರಹಣೆಯಾಗಿದೆ. ಇನ್ನು ಹರ್ಯಾಣದಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಶೇ.21ರಷ್ಟು ಪ್ರಗತಿಯಾಗಿದ್ದು, 12,168 ಕೋಟಿ ರೂ. ಸಂಗ್ರಹವಾಗಿದೆ.