ನವದೆಹಲಿ(ಜ.31): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿದ್ದಾರೆ. ವ್ಯಕ್ತಿಯೊಬ್ಬ ತಮ್ಮ ಮನೆ ಖರ್ಚು ವೆಚ್ಚಕ್ಕಾಗಿ ಯಾವ ರೀತಿ ಲೆಕ್ಕಾಚಾರ ಮಾಡುತ್ತಾರೋ, ಹಾಗೆಯೇ ಸರ್ಕಾರ ಕೂಡಾ ಒಂದಿಡೀ ವರ್ಷದ ಬಜೆಟ್ ರೂಪಿಸುತ್ತದೆ. ಈ ಬಜೆಟ್‌ನಲ್ಲಿ ಸರ್ಕಾರದ ಆದಾಯ ಹಾಗೂ ಖರ್ಚಿನ ವಿವರವಿರುತ್ತದೆ. ಅಲ್ಲದೇ ಯೋಜನೆಗಳಿಗೆ ವ್ಯಯಿಸುವ ಮೊತ್ತದ ಮಾಹಿತಿಯೂ ಇರುತ್ತದೆ. ಇಲ್ಲಿದೆ ನೊಡಿ ಭಾರತದ ಬಜೆಟ್ ಇತಿಹಾಸದ ಕೆಲ ಇಂಟರೆಸ್ಟಿಂಗ್ ಮಾಹಿತಿ.

* ಬಜೆಟ್ ಶಬ್ಧ ಬಂದಿದ್ದು ಹೇಗೆ?

ಬಜೆಟ್ ಎಂಬ ಶಬ್ಧ ಲ್ಯಾಟಿನ್‌ನ ಬುಲ್‌ಗಾ ಎಂಬ ಮೂಲ ಪದದಿಂದ ಬಂದಿದೆ. ಅಂದರೆ ಚರ್ಮದ ಚೀಲ ಎಂದರ್ಥ. ಇದಾದ ಬಳಿಕ ಇದು ಫ್ರಾನ್ಸ್‌ ಭಾಷೆಯಲ್ಲಿ ಬೋವವ್ಗೆಟ್ ಎಂದು ಬದಲಾಯ್ತು. ಬಳಿಕ ಆಂಗ್ಲ ಭಾಷೆಯಲ್ಲಿ ಬೋಗೆಟ್ ಅಥವಾ ಬೋಜೆಟ್ ಎಂದಾಯ್ತು. ಇವೆಲ್ಲದರ ಬಳಿಕ ಬಜೆಟ್ ಎಂದು ಕರೆಯಲ್ಪಟ್ಟಿತು.

* ಭಾರತದ ಮೊದಲ ಬಜೆಟ್ ಮಂಡನೆಯಾಗಿದ್ದು ಯಾವಾಗ?

ಭಾರತದಲ್ಲಿ ಮೊದಲ ಬಜೆಟ್‌ನ್ನು ಈಸ್ಟ್‌ ಇಂಡಿಯಾ ಕಂಪನಿಯ ಜೇಮ್ಸ್ ವಿಲ್ಸನ್ 1860ರ ಫೆಬ್ರವರಿ 18ರಂದು ಮೊದಲ ಬಾರಿ ಮಂಡಿಸಿದರು. ಜೇಮ್ಸ್ ವಿಲ್ಸನ್‌ರನ್ನು ಭಾರತೀಯ ಬಜೆಟ್‌ ವ್ಯವಸ್ಥೆಯ ಜನಕ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ 1867ರಿಂದ,  ಏಪ್ರಿಲ್ 1 ರಿಂದ ಮಾರ್ಚ್ 31ರವರೆಗೆ ಅಸ್ತಿತ್ವದಲ್ಲಿರುವ ಹಣಕಾಸು ವರ್ಷ ಜಾರಿಗೆ ಬಂತು. ಅದಕ್ಕೂ ಮುನ್ನ 1 ಮೇ ನಿಂದ 30 ಏಪ್ರಿಲ್‌ವರೆಗೆ ಹಣಕಾಸು ವರ್ಷವಾಗಿರುತ್ತಿತ್ತು. 

* ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆಯಾಗಿದ್ದು ಯಾವಾಗ?

ಸ್ವತಂತ್ರ ಭಾರತದ ಮೊದಲ ಬಜೆಟ್ 1947ರ ನವೆಂಬರ್ 26ರಂದು ಮಂಡಿಸಲಾಯ್ತು. ಇದನ್ನು ವಿತ್ತ ಸಚಿವ ಆರ್‌. ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದ್ದರು. ಇನ್ನು ಗಣರಾಜ್ಯ ಭಾರತದ ಮೊದಲ ಬಜೆಟ್‌ನ್ನು 28 ಫೆಬ್ರವರಿ 1950 ರಂದು ಮಂಡಿಸಿದ್ದರು. 

* ಬಜೆಟ್ ಪ್ರತಿ ಪ್ರಿಂಟ್ ಆಗೋದೆಲ್ಲಿ?

ಮೊದಲ ಬಜೆಟ್ ಪ್ರತಿಯನ್ನು ರಾಷ್ಟ್ರಪತಿ ಭವನದಲ್ಲಿ ಮುದ್ರಿಸಲಾಗಿತ್ತು. ಆದರೆ 1950ರಲ್ಲಿ ಈ ದಾಖಲೆಗಳು ಸೋರಿಕೆಯಾದ ಹಿನ್ನೆಲೆ, ದೆಹಲಿಯ ಮಿಂಟೋ ರಸ್ತೆಯಲ್ಲಿರುವ ಸೆಕ್ಯೂರಿಟಿ ಪ್ರೆಸ್‌ನಲ್ಲಿ ಮುದ್ರಿಸಲಾರಂಭಿಸಿದರು. 1980 ರಿಂದ ಬಜೆಟ್ ಪ್ರತಿಗಳನ್ನು ನಾರ್ಥ್ ಬ್ಲಾಕ್‌ನಲ್ಲಿ ಮುದ್ರಣಗೊಳಿಸಲಾರಂಭಿಸಿದರು. ಆರಂಭದಲ್ಲಿ ಕೇವಲ ಆಂಗ್ಲ ಭಾಷೆಯಲ್ಲಷ್ಟೇ ಮುದ್ರಣವಾಗುತ್ತಿತ್ತು. ಆದರೆ 1955-56ರಿಂದ ಹಿಂದಿಯಲ್ಲೂ ಮುದ್ರಿಸಲಾರಂಭಿಸಿದರು.

* ಬಜೆಟ್ ಗೌಪ್ಯತೆ ಹೇಗೆ ಕಾಪಾಡುತ್ತಾರೆ?

ಬಜೆಟ್ ಮುದ್ರಣ ಪ್ರಕ್ರಿಯೆ ಹಲ್ವಾ ತಯಾರಿಸುವ ಸಂಪ್ರದಾಯದಿಂದ ಆರಂಭವಾಗುತ್ತದೆ. ಇದಕ್ಕಾಗಿ ಹಣಕಾಸು ಇಲಾಖೆಯ ಸುಮಾರು ನೂರು ಮಂದಿ ಅಧಿಕಾರಿಗಳು ಒಂದರಿಂದ ಎರಡು ವಾರ ಮನೆಯಿಂದ ದೂರ ಕಚೇರಿಯಲ್ಲೇ ಇರುತ್ತಾರೆ. ಅಲ್ಲದೇ ಈ ಸಂದರ್ಭದಲ್ಲಿ ನಾರ್ಥ್ ಬ್ಲಾಕ್‌ನಲ್ಲಿ ನೆಟ್ವರ್ಕ್ ಜಾಮರ್ ಕೂಡಾ ಅಳವಡಿಸಲಾಗುತ್ತದೆ. ಈ ಮೂಲಕ ಗೌಪ್ಯತೆ ಕಾಪಾಡುತ್ತಾರೆ.

* ಭಾರತದಲ್ಲಿ ಬಜೆಟ್ ಮಂಡಿಸಿದ್ದ ಪ್ರಧಾನಿಗಳು

ಭಾರತದಲ್ಲಿ ವಿತ್ತ ಸಚಿವರೇ ಬಜೆಟ್ ಮಂಡಿಸುವ ಸಂಪ್ರದಾಯವಿದೆ. ಆದರೆ ಭಾರತದ ಇತಿಹಾಸದಲ್ಲಿ ಮೂರು ಬಾರಿ ಪ್ರಧಾನ ಮಂತ್ರಿಗಳು ಬಜೆಟ್ ಮಂಡಿಸಿದ್ದಾರೆ. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಈ ಪ್ರಧಾನಿಗಳಾಗಿದ್ದಾರೆ. ಹಣಕಾಸು ಸಚಿವರ ಗೈರು ಹಾಜರಿಯಲ್ಲಿ ಇವರು ಬಜೆಟ್ ಮಂಡಿಸಿದ್ದರು.

* ಬಜೆಟ್ ಮಂಡಿಸಿದ ಮೊದಲ ಮಹಿಳಾ ವಿತ್ತ ಸಚಿವೆ ಯಾರು?

ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1970 ರಲ್ಲಿ ಬಜೆಟ್ ಮಂಡಿಸಿದ್ದರು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ವಿತ್ತ ಖಾತೆಯನ್ನೂ ಹೊಂದಿದ್ದರು. ಆದರೆ ಪೂರ್ಣಾವಧಿ ಹಣಕಾಸು ಸಚಿವೆಯಾಗಿ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಖ್ಯಾತಿ ನಿರ್ಮಲಾ ಸೀತಾರಾಮನ್‌ರವರಿಗೆ ಸಲ್ಲುತ್ತದೆ.

* ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದು ಯಾರು?

ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಹೆಸರಿನಲ್ಲಿದೆ. ಅವರು ಬರೋಬ್ಬರಿ ಹತ್ತು ಬಾರಿ ಬಜೆಟ್ ಮಂಡಿಸಿದ್ದಾರೆ. ಇವುಗಳಲ್ಲಿ 8  ಸಾಮಾನ್ಯ ಹಾಗೂ ಎರಡು ಮಧ್ಯಂತರ ಬಜೆಟ್ ಆಗಿದೆ. 

* ಬಜೆಟ್ ಮಂಡನೆ ಸಮಯ ಬದಲಾಗಿದ್ದು ಯಾವಾಗ?

ಆಂಗ್ಲರ ಪರಂಪರೆ ಅನ್ವಯ ಬಜೆಟ್ ಸಂಜೆ ಐದು ಗಂಟೆಗೆ ಮಂಡಿಸಲಾಗುತ್ತಿತ್ತು. ಆದರೆ 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಈ ಸಂಪ್ರದಾಯವನ್ನು ಮುರಿದರು. ಅಂದಿನಿಂದ ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸುವ ಕ್ರಮ ಆರಂಭವಾಯ್ತು.

* ಫೆಬ್ರವರಿ 1ರಂದು ಬಜೆಟ್ ಮಂಡಿಸುವ ಕ್ರಮ

2017 ರವರೆಗೆ ಫೆಬ್ರವರಿ ಅಂತ್ಯದಲ್ಲಿ ವರ್ಕಿಂಗ್ ಡೇಯಂದು ಬಜೆಟ್ ಮಂಡಿಸಲಾಗುತ್ತಿತ್ತು. ಆದರೆ 2017ರಿಂದ ಸರ್ಕಾರ ಫೆಬ್ರವರಿ 1 ಅಥವಾ ಈ ತಿಂಗಳ ಮೊದಲ ವರ್ಕಿಂಗ್ ಡೇಯಂದು ಬಜೆಟ್ ಮಂಡಿಸುವ ಕ್ರಮ ಜಾರಿಗೊಳಿಸಿತು. ಜೊತೆಗೆ ರೈಲ್ವೇ ಬಜೆಟ್ ಹಾಗೂ ಸಾಮಾನ್ಯ ಬಜೆಟ್‌ ಇವೆರಡನ್ನೂ ಒಟ್ಟಾಗಿ ಮಂಡಿಸಲಾರಂಭಿಸಿದರು.