ಕಳೆದ ವರ್ಷ ಟ್ವಿಟರ್‌ ಕಂಪನಿಯನ್ನು ಖರೀದಿ ಮಾಡುವ ಮೂಲಕ ಸುದ್ದಿಯಾಗಿದ್ದ ವಿಶ್ವದ ಅಗ್ರ ಶ್ರೀಮಂತ ಎಲಾನ್‌ ಮಸ್ಕ್‌, 2022ರ ವರ್ಷವೊಂದರಲ್ಲೇ ಬರೋಬ್ಬರಿ 15 ಲಕ್ಷ ಕೋಟಿ ರೂಪಾಯಿ ನಷ್ಟ ಕಂಡಿದ್ದಾರೆ. ಇದು ಕತಾರ್‌ನಂಥ ದೇಶದ ಒಟ್ಟಾರೆ ಆದಾಯದಷ್ಟು ಎಂದು ಹೇಳಲಾಗಿದೆ.

ನವದೆಹಲಿ (ಜ.12): ಟ್ವಿಟರ್‌ ಮಾಲೀಕ ಎಲಾನ್‌ ಮಸ್ಕ್‌, ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಅನಗತ್ಯ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಅತೀ ಹೆಚ್ಚು ಆಸ್ತಿ ಕಳೆದುಕೊಂಡ ವ್ಯಕ್ತಿ ಎನಿಸಿಕೊಂಡಿದ್ದಾರೆ. ನವೆಂಬರ್‌ 2021 ರಿಂದ ಡಿಸೆಂಬರ್‌ 2022ರ ನಡುವೆ ಎಲಾನ್‌ ಮಸ್ಕ್‌ ಬರೋಬ್ಬರಿ 182 ಶತಕೋಟಿ ಡಾಲರ್‌ ಅಂದರೆ, ಅಂದಾಜು 15 ಲಕ್ಷ ಕೋಟಿ ರೂಪಾಯಿಗಳನ್ನು ಮಸ್ಕ್‌ ಕಳೆದುಕೊಂಡಿದ್ದಾರೆ. ಈ ಮೊತ್ತವು ಕತಾರ್‌ನಂತಹ ಶ್ರೀಮಂತ ರಾಷ್ಟ್ರದ ಒಟ್ಟು ದೇಶೀಯ ಆದಾಯಕ್ಕಿಂತ (ಜಿಎನ್‌ಐ) ಹೆಚ್ಚಾಗಿದೆ. 2021 ರಲ್ಲಿ ಕತಾರ್‌ನ ಜಿಎನ್‌ಐ $176 ಬಿಲಿಯನ್ ಆಗಿತ್ತು. 2021ರ ನವೆಂಬರ್‌ನಲ್ಲಿ ಮಸ್ಕ್‌ ಅವರ ಒಟ್ಟು ಆಸ್ತಿ ಅಂದಾಜು 26 ಲಕ್ಷ ಕೋಟಿ ರೂಪಾಯಿ ಆಗಿತ್ತು. ಇನ್ನು ಇದು ಮಸ್ಕ್‌ ಅವರ ಆದಾಯದ ಉತ್ತುಂಗದ ಅವಧಿ ಎಂದೇ ಹೇಳಲಾಗಿದೆ. 320 ಬಿಲಿಯನ್‌ ಅಮೇರಿಕನ್‌ ಡಾಲರ್‌ ಸಂಪತ್ತಿಗೆ ಮಸ್ಕ್‌ ಒಡೆಯರಾಗಿದ್ದರು. 2022ರ ಡಿಸೆಂಬರ್‌ನಲ್ಲಿಇವರ ಆದಾಯದಲ್ಲಿ 138 ಬಿಲಿಯನ್‌ ಡಾಲರ್‌ ಇಳಿಕೆಯಾಗಿದೆ.

ಇದರರ್ಥ 15 ಲಕ್ಷ ಕೋಟಿ ರೂಪಾಯಿಯನ್ನು ಅವರು ಒಂದೇ ವರ್ಷದಲ್ಲಿ ಕಳೆದುಕೊಂಡಂತಾಗಿದೆ. ಈ ಸಮಯದಲ್ಲಿ, ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಸ್ಥಾನವನ್ನು ಸಹ ಕಳೆದುಕೊಳ್ಳಬೇಕಾಯಿತು. ಐಷಾರಾಮಿ ಬ್ರಾಂಡ್ ಎಲ್‌ವಿಎಚ್‌ಎಂನ ಅಧ್ಯಕ್ಷ ಮತ್ತು ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರು ಈಗ ಮಸ್ಕ್ ಅವರನ್ನು ಹಿಂದಿಕ್ಕುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಮಸ್ಕ್‌ ಅವರ 15 ಲಕ್ಷ ಕೋಟಿ ರೂಪಾಯಿ ಹೋಗಿದ್ದೆಲ್ಲಿಗೆ: ಫೋರ್ಬ್ಸ್ ಪ್ರಕಾರ, ಟ್ವಿಟರ್ ಸ್ವಾಧೀನ ವಿಧಾನ ಮತ್ತು ಟೆಸ್ಲಾ ಷೇರುಗಳ ಕುಸಿತದಿಂದಾಗಿ ಮಸ್ಕ್ ದೊಡ್ಡ ನಷ್ಟವನ್ನು ಅನುಭವಿಸಿದ್ದಾರೆ. ಮಸ್ಕ್‌ನ ಗಳಿಕೆಯ ಬಹುಪಾಲು ಟೆಸ್ಲಾ ಕಂಪನಿಯಿಂದ ಬರುತ್ತದೆ. ಕಳೆದ ವರ್ಷ 2022 ರಲ್ಲಿ, ಕಂಪನಿಯ ಷೇರುಗಳು ಸುಮಾರು 70% ರಷ್ಟು ಕುಸಿದವು. ಇದಕ್ಕೆ ಮೂರು ಪ್ರಮುಖ ಕಾರಣಗಳಿದ್ದವು. ಚೀನಾದಲ್ಲಿ ಕೊರೊನಾ ನಿರ್ಬಂಧದಿಂದಾಗಿ ಉತ್ಪಾದನೆಯಲ್ಲಿ ದೊಡ್ಡ ಮಟ್ಟದ ವಿಳಂಬ, ತಾಂತ್ರಿಕ ಕಾರಣಗಳಿಂದಾಗಿ ಅನೇಕ ಟೆಸ್ಲಾ ಮಾದರಿಗಳ ಹಿಂತೆಗೆದುಕೊಳ್ಳುವಿಕೆ ಅದರೊಂದಿಗೆ ಟ್ವಿಟರ್‌ ವ್ಯವಹಾರಗಳ ಕಾರಣದಿಂದಾಗಿ ಟೆಸ್ಲಾ ಮೇಲೆ ಮಸ್ಕ್‌ಗೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಸಾಧ್ಯವಾಗೋದಿಲ್ಲ ಎನ್ನುವ ಭಾವನೆಗಳ ಕಾರಣದಿಂದಾಗಿ ಮಸ್ಕ್‌ ದೊಡ್ಡ ನಷ್ಟ ಕಂಡಿದ್ದಾರೆ.

2022ರ ಏಪ್ರಿಲ್ ನಲ್ಲಿ ಮಸ್ಕ್ ಟ್ವಿಟರ್ ಖರೀದಿಸಲು ಟೆಸ್ಲಾ ಷೇರುಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು. ಮಸ್ಕ್ 2022 ರ ಕೊನೆಯ 9 ತಿಂಗಳುಗಳಲ್ಲಿ $ 22.9 ಬಿಲಿಯನ್ ಅಥವಾ ಸುಮಾರು 1.8 ಲಕ್ಷ ಕೋಟಿ ಮೌಲ್ಯದ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದರು.

ಟ್ವಿಟ್ಟರ್‌ ಕಚೇರಿಗೆ ಸ್ವಂತ ಟಾಯ್ಲೆಟ್ ಪೇಪರ್ ತರುತ್ತಿರುವ ಉದ್ಯೋಗಿಗಳು: ಕಾರಣ ಹೀಗಿದೆ..

2022ರ ಅಕ್ಟೋಬರ್‌ 28 ರಂದು ರಂದು ಟ್ವಿಟರ್ ಅನ್ನು ಸ್ವಾಧೀನ ಪಡಿಸಿಕೊಂಡಿದ್ದರು. ಅಂದಿನಿಂದ ಅವರು ನಿಯಮಿತವಾಗಿ ಆಕ್ಷೇಪಾರ್ಹ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕವಾಗಿ ಅವರ ಇಮೇಜ್‌ಗೆ ಧಕ್ಕೆಯಾಗಿದೆ. ಇದು ಟೆಸ್ಲಾ ಬ್ರ್ಯಾಂಡ್‌ಗೂ ಹಾನಿ ಮಾಡಿದೆ. ಅನೇಕ ಟೆಸ್ಲಾ ಹೂಡಿಕೆದಾರರು ಕಂಪನಿಗೆ ಮಸ್ಕ್ ಅವರ ಬದ್ಧತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಟೆಸ್ಲಾ ಕಂಪನಿಯ ಮೂರನೇ ಅತಿ ದೊಡ್ಡ ಷೇರುದಾರ ಲಿಯೊ ಕೊಗುವಾನ್ ಅವರು, 'ಮಸ್ಕ್ ಟೆಸ್ಲಾವನ್ನು ತೊರೆದಿದ್ದಾರೆ ಮತ್ತು ಈಗ ಟೆಸ್ಲಾಗೆ ಸಿಇಒ ಇಲ್ಲ.' ಎಂದು ಟ್ವೀಟ್‌ ಮಾಡಿದ್ದರು.

ಸಾವಿರಾರು ಬಳಕೆದಾರರಿಗೆ ಟ್ವಿಟ್ಟರ್‌ ಡೌನ್: ನೆಟ್ಟಿಗರ ಆಕ್ರೋಶ..!

ಬರೋಬ್ಬರಿ 3.6 ಲಕ್ಷ ಕೋಟಿ ರೂಪಾಯಿಗೆ ಮಸ್ಕ್‌ ಟ್ವಿಟರ್‌ಅನ್ನು ಖರೀದಿ ಮಾಡಿದ್ದರೂ, ಈವರೆಗೂ ಅದರಿಂದ ಯಾವುದೇ ಲಾಭವಾಗಲಿಲ್ಲ. ಮಸ್ಕ್‌ ಮಾಲೀಕರಾದ ಬಳಿಕ, ಕಂಪನಿಗೆ ಜಾಹೀರಾತುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ಫೇಕ್‌ ನ್ಯೂಸ್‌ ಹಾಗೂ ದ್ವೇಷ ಭಾಷಣ ಟ್ವಿಟರ್‌ನಲ್ಲಿ ಹೆಚ್ಚಾಗಬಹುದು ಎನ್ನುವ ಆತಂಕ ಅವರಲ್ಲಿ ಮನೆ ಮಾಡಿದೆ.