*ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಯಲ್ಲಿ ಇಳಿಕೆ*ತಾಳೆ ಎಣ್ಣೆ ಬೆಲೆ ಇಳಿಕೆಯಿಂದ ತಗ್ಗಲಿದೆ ಸೋಪು, ಶಾಂಪು, ಬಿಸ್ಕೆಟ್ಸ್ ಉತ್ಪಾದನಾ ವೆಚ್ಚ*ರಷ್ಯಾ, ಅರ್ಜೆಂಟೈನಾದಿಂದ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ಹೆಚ್ಚಳ*ದೇಶದಲ್ಲಿ ಆಹಾರ ಹಣದುಬ್ಬರ ಇಳಿಕೆಯಾಗುವ ನಿರೀಕ್ಷೆ
ನವದೆಹಲಿ ( ಮೇ 27): ಇಂಡೋನೇಷ್ಯಾದಿಂದ (Indonesia) ಭಾರತಕ್ಕೆ (India) 2 ಲಕ್ಷ ಟನ್ ಕಚ್ಚಾ (Crude) ತಾಳೆ ಎಣ್ಣೆ (palm oil) ರವಾನೆಯಾಗಲಿದೆ. ಇದರಿಂದ ಮುಂದಿನ ವಾರಗಳಲ್ಲಿ ದೇಶದಲ್ಲಿ ಖಾದ್ಯ ತೈಲಗಳ (Edible oil) ಲಭ್ಯತೆ ಹೆಚ್ಚಲಿದ್ದು, ಬೆಲೆಯಲ್ಲಿ (Price) ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ತೈಲ ವ್ಯಾಪಾರಿಗಳು ತಿಳಿಸಿದ್ದಾರೆ.
ತಾಳೆ ಎಣ್ಣೆ (palm oil) ರಫ್ತಿನ (Export) ಮೇಲೆ ವಿಧಿಸಿದ್ದ ನಿರ್ಬಂಧವನ್ನು ಇಂಡೋನೇಷ್ಯಾ (Indonesia) ಹಿಂಪಡೆದ ಹಿನ್ನೆಲೆಯಲ್ಲಿ ಮೇ 23ರಂದು ಭಾರತಕ್ಕೆ ತಾಳೆ ಎಣ್ಣೆ ಹೊತ್ತ ಹಡಗು ಈಗಾಗಲೇ ಪ್ರಯಾಣ ಬೆಳೆಸಿದೆ. ಈ ವಾರಾಂತ್ಯದಲ್ಲಿ ಅದು ಭಾರತ (India) ತಲುಪಲಿದೆ ಹಾಗೂ ಚಿಲ್ಲರೆ (Retail) ವ್ಯಾಪಾರಿಗಳಿಗೆ ಜೂನ್ 15ಕ್ಕೆ ಲಭ್ಯವಾಗುತ್ತದೆ ಎಂದು ಖಾದ್ಯ ತೈಲಗಳ ಆಮದು ಸಂಸ್ಥೆ ಸನ್ ವಿನ್ ಗ್ರೂಪ್ (Sunvin Group) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಬಜೊರಿಯ ( Sandeep Bajoria) ತಿಳಿಸಿದ್ದಾರೆ.
ಇದು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರೋದು ಖಂಡಿತ, ಜೂನ್ 1 ರಿಂದ ಬದಲಾಗಲಿದೆ ಈ 5 ನಿಯಮ!
ತಾಳೆ ಎಣ್ಣೆ ಬೆಲೆ ತಗ್ಗಿದರೆ ಸೋಪು (Soap) , ಶಾಂಪು (Shampoo), ಬಿಸ್ಕೆಟ್ಸ್ (Biscuits) ಹಾಗೂ ಚಾಕೋಲೇಟ್ಸ್ (Chocolates) ಮುಂತಾದ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲ್ಪಡುವ ಕಚ್ಚಾ ವಸ್ತುಗಳ ಬೆಲೆ ಕೂಡ ತಗ್ಗುತ್ತದೆ ಎನ್ನುತ್ತಾರೆ ತಜ್ಞರು. ಈ ಉತ್ಪನ್ನಗಳ ತಯಾರಿಕೆಯಲ್ಲಿ ತಾಳೆ ಎಣ್ಣೆ (Palm Oil) ಹಾಗೂ ಅದರ ಉಪ ಉತ್ಪನ್ನಗಳನ್ನು ಬಳಸಲಾಗುತ್ತದೆ. ಖಾದ್ಯ ತೈಲಗಳ ಬೆಲೆಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಇಂಡೋನೇಷ್ಯಾ (Indonesia), ಏಪ್ರಿಲ್ 28ರಂದು ತಾಳೆ ಎಣ್ಣೆ ರಫ್ತಿನ (Export) ಮೇಲೆ ನಿಷೇಧ ಹೇರಿತ್ತು. ಆದರೆ, ಆ ಬಳಿಕ ಮೇ 23ಕ್ಕೆ ಈ ನಿಷೇಧ ಕೊನೆಗೊಳ್ಳುತ್ತದೆ ಎಂದು ತಿಳಿಸಿತ್ತು.
ಪ್ರಸ್ತುತ ಭಾರತ ಅಂದಾಜು 13-13.5 ಮಿಲಿಯ್ ಟನ್ ಖಾದ್ಯ ತೈಲವನ್ನು ಆಮದು (Import) ಮಾಡಿಕೊಳ್ಳುತ್ತಿದೆ. ಅದರಲ್ಲಿ 8-8.5 ಮಿಲಿಯನ್ ಟನ್ಸ್ ಅಥವಾ ಶೇ. 63ರಷ್ಟು ತಾಳೆ ಎಣ್ಣೆಯಿದೆ. ಇನ್ನು ಇದರಲ್ಲಿ ಶೇ.45ರಷ್ಟು ತಾಳೆ ಎಣ್ಣೆ ಇಂಡೋನೇಷ್ಯಾದಿಂದ (Indonesia) ಪೂರೈಕೆಯಾಗುತ್ತದೆ. ಇನ್ನುಳಿದದ್ದು ಇಂಡೋನೇಷ್ಯಾದ ನೆರೆಯ ರಾಷ್ಟ್ರ ಮಲೇಷ್ಯಾದಿಂದ (Malaysia) ಸರಬರಾಜು ಆಗುತ್ತದೆ.
ಕಳೆದ ಕೆಲವು ವಾರಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಲ ವಿಧದ ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಆದರೆ, ಡಾಲರ್ ಎದುರು ಭಾರತೀಯ ರೂಪಾಯಿ (Rupee) ಮೌಲ್ಯ ಕುಸಿದ ಹಿನ್ನೆಲೆಯಲ್ಲಿ ಗ್ರಾಹಕರಿಗೆ (Customers) ಬೆಲೆ ಇಳಿಕೆಯ ಲಾಭ ಸಿಕ್ಕಿಲ್ಲ ಎನ್ನುತ್ತಾರೆ ಜೆಮಿನಿ ಖಾದ್ಯ ತೈಲಗಳ ಸಂಸ್ಥೆ (Gemini Edible oil) ಎಂಡಿ (MD) ಪ್ರದೀಪ್ ಚೌಧರಿ.
ಇನ್ಮುಂದೆ ವೈಯಕ್ತಿಕ ಸಾಲ ಪಡೆಯಲು SBI ಶಾಖೆಗೆ ಭೇಟಿ ನೀಡಬೇಕಾಗಿಲ್ಲ,YONO App ಇದ್ರೆ ಸಾಕು
ಇತ್ತೀಚಿನ ದಿನಗಳಲ್ಲಿ ಖಾದ್ಯ ತೈಲಗಳ ಬೆಲೆ ಸ್ಥಿರವಾಗಿದೆ. ರಷ್ಯಾ (Russia) ಹಾಗೂ ಅರ್ಜೆಂಟೈನಾದಿಂದ (Argentina) ಸೂರ್ಯಕಾಂತಿ ಎಣ್ಣೆ (Sunflower oil) ಪೂರೈಕೆ ಕೂಡ ಹೆಚ್ಚಿದೆ. ಇನ್ನು ಇಂಡೋನೇಷ್ಯಾ ಕೂಡ ತಾಳೆ ಎಣ್ಣೆ ರಫ್ತಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಖಾದ್ಯ ತೈಲದ ಜಾಗತಿಕ ಬೆಲೆಯಲ್ಲಿ ಈಗಾಗಲೇ ಶೇ.5 ಇಳಿಕೆಯಾಗಿದೆ. ಇನ್ನೂ ಶೇ.5-7ರಷ್ಟು ಇಳಿಕೆಯಾಗಿ ಮುಂದಿನ ಕೆಲವು ವಾರಗಳಲ್ಲಿ ಪ್ರತಿ ಟನ್ ಗೆ 1,550 ಡಾಲರ್ ಗೆ ತಲುಪಲಿದೆ. ಇನ್ನು ಖಾದ್ಯ ತೈಲಗಳ ಬೆಲೆ ಇಳಿಕೆಯಿಂದ ಬಿಸ್ಕೆಟ್ಸ್, ಚಾಕೋಲೇಟ್ ಉತ್ಪಾದಕರು ಕೂಡ ಮುಂದಿನ 2-3 ತಿಂಗಳಲ್ಲಿ ಪ್ರಯೋಜನ ಪಡೆಯಲಿದ್ದಾರೆ.
ದೇಶದಲ್ಲಿ ಆಹಾರ ಪದಾರ್ಥಗಳು ಹಾಗೂ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯಿಂದ ಹಣದುಬ್ಬರ ದಾಖಲೆಯ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ. ಹೀಗಿರುವಾಗ ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆಯಾದ್ರೆ ಹಣದುಬ್ಬರದ ಮಟ್ಟ ಸ್ವಲ್ಪ ತಗ್ಗಿ ಸರ್ಕಾರಕ್ಕೆ ಕೊಂಚ ನಿರಾಳತೆ ಸಿಗಲಿದೆ. ಏಪ್ರಿಲ್ ನಲ್ಲಿ ಭಾರತದಲ್ಲಿ ಆಹಾರ ಹಣದುಬ್ಬರ ಶೇ.8.38ರಷ್ಟಿತ್ತು. ಮಾರ್ಚ್ ನಲ್ಲಿ ಆಹಾರ ಹಣದುಬ್ಬರ ಶೇ.7.68ರಷ್ಟಿತ್ತು.
