Jiko Bukken: ಗಗನಕ್ಕೇರುತ್ತಿರುವ ಹಣದುಬ್ಬರದಿಂದಾಗಿ, ಜಪಾನ್‌ನಲ್ಲಿ ಜನರ ಮನಸ್ಥಿತಿ ಬದಲಾಗುತ್ತಿದೆ. ಒಂದು ಕಾಲದಲ್ಲಿ ಈ "ಹಾಂಟೆಡ್ ಮನೆಗಳ” ಹೆಸರು ಕೇಳುತ್ತಿದ್ದರೆ ಭಯಪಡುತ್ತಿದ್ದ ಜನರು ಈಗ ಖರೀದಿಗೆ ಪೈಪೋಟಿ ನಡೆಸುತ್ತಿದ್ದಾರೆ. ಅವುಗಳಿಗೆ ಹೆದರುವ ಬದಲು, ಜನರು ಈಗ ಇದನ್ನು ತಮ್ಮ ಬಜೆಟ್‌ನಲ್ಲಿ ಮನೆ ಖರೀದಿಸಲು ಒಂದು ಸುವರ್ಣಾವಕಾಶ ಎಂದುಕೊಳ್ಳುತ್ತಿದ್ದಾರೆ..
ಜಪಾನಿನಲ್ಲಿ ಹೆಚ್ಚುತ್ತಿದೆ ಹಾಂಟೆಡ್ ಮನೆಗಳ ಖರೀದಿಗೆ ಬೇಡಿಕೆ
ಜಪಾನಿನಲ್ಲಿ ಹಾಂಟೆಡ್ ಮನೆಗಳ ಖರೀದಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಿಂದೊಮ್ಮೆ ಯಾರೂ ಕೂಡ ಹತ್ತಿರ ಹೋಗಲು ಇಷ್ಟಪಡದಿದ್ದ, ಭಯಪಡುತ್ತಿದ್ದ ಭೂತ ಬಂಗಲೆಗಳು, ಒಂಟಿ ಮನೆಗಳು ಅಥವಾ ಹಾಂಟೆಡ್ ಮನೆಗಳು ಈಗ ಜಪಾನ್‌ನಲ್ಲಿ ಬಹು ಬೇಡಿಕೆಯ ಆಸ್ತಿಗಳಾಗಿವೆ. ಆತ್ಮಹತ್ಯೆ, ಹತ್ಯೆ ಅಥವಾ ಒಂಟಿ ಸಾವಿನಂತಹ ಘಟನೆಗಳು ನಡೆದ ಮನೆಗಳನ್ನು ಜಪಾನಿನಲ್ಲಿ ‘ಜಿಕೋ ಬುಕ್ಕೇನ್’ (Jiko Bukken) ಎಂದು ಕರೆಯಲಾಗುತ್ತದೆ. ಇಂತಹ ಮನೆಗಳನ್ನು ಅಶುಭ ಎಂದು ಭಾವಿಸಿ ವರ್ಷಗಳ ಕಾಲ ಖಾಲಿ ಬಿಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ಅಂತಹ ಮನೆಗಳನ್ನು ಖರೀದಿಸಲು ಜನರು ಪೈಪೋಟಿ ನಡೆಸುತ್ತಿದ್ದಾರೆ. ಅದಕ್ಕೆ ಕಾರಣ ಡೇರಿಂಗ್ ಅಲ್ಲ, ಕಾರಣ ತಿಳಿದ್ರೆ ನೀವು ಅಚ್ಚರಿ ಪಡುತ್ತೀರಿ.
ಜಪಾನಿನಲ್ಲಿ ಹೆಚ್ಚುತ್ತಿರುವ ಹಣದುಬ್ಬರ
ಜಪಾನ್‌ನ ಪ್ರಮುಖ ನಗರಗಳಲ್ಲಿ ಮನೆಗಳ ಬೆಲೆ ವೇಗವಾಗಿ ಹೆಚ್ಚುತ್ತಿರುವ ಕಾರಣ ಸಾಮಾನ್ಯ ಜನರಿಗೆ ಹೊಸ ಮನೆ ಖರೀದಿಸುವುದು ಕಷ್ಟವಾಗುತ್ತಿದೆ. ಹೆಚ್ಚುತ್ತಿರುವ ಹಣದುಬ್ಬರ ಪರಿಸ್ಥಿತಿಯನ್ನು ಎಷ್ಟರ ಮಟ್ಟಿಗೆ ಬದಲಾಯಿಸಿದೆ ಎಂದರೆ, ಹಿಂದೆ ಒಂಟಿ ಮನೆ ಹೊರಗೆ ಹೋಗಲು ಭಯಪಡುತ್ತಿದ್ದ ಜನ, ಈಗ ಮನೆಗಳನ್ನು ಖರೀದಿಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಜಪಾನಿನ ಜನರು ಈಗ ಮೂಢನಂಬಿಕೆಯನ್ನು ಬದಿಗಿಟ್ಟು ತಮ್ಮ ಸ್ವಂತ ಹಣಕಾಸು ಮತ್ತು ಅನುಕೂಲತೆಯತ್ತ ಗಮನ ಹರಿಸುತ್ತಿದ್ದಾರೆ. ಈ ಮನೆಗಳನ್ನು ಖರೀದಿಸಲು ದೊಡ್ಡ ಕಾರಣವೆಂದರೆ ಅವುಗಳ ಬೆಲೆ ಮತ್ತು ರಿಯಾಯಿತಿಗಳು. ಜಿಕೊ ಬುಕೆನ್‌ನಂತಹ ಆಸ್ತಿಗಳು ಮಾರುಕಟ್ಟೆ ಬೆಲೆಗಿಂತ 20 ರಿಂದ 50 ಪ್ರತಿಶತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ, ಇದು ಬಜೆಟ್ ಫ್ರೆಂಡ್ಲಿ ಕೂಡ ಹೌದು, ಜೊತೆಗೆ ಮುಂದೊಂದು ದಿನ ಚಿನ್ನದ ಮೊಟ್ಟೆ ಇಡುವ ಕೋಳಿಯೂ ಆಗಬಹುದು. ಹಾಗಾಗಿ ಜಿಕೋ ಬುಕ್ಕೇನ್ ಮನೆಗಳತ್ತ ಜನ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ . ವಿಶೇಷವಾಗಿ ಯುವಕರು, ಹೂಡಿಕೆದಾರರು ಹಾಗೂ ವಿದೇಶಿ ಖರೀದಿದಾರರು ಈ ಮನೆಗಳತ್ತ ಗಮನ ಹರಿಸುತ್ತಿದ್ದಾರೆ.
ಜಪಾನಿನ ಸ್ಮಾರ್ಟ್ ಆರ್ಥಿಕ ನಿರ್ಧಾರ
ಜಪಾನ್‌ನಲ್ಲಿ ಸುಮಾರು 9 ಮಿಲಿಯನ್‌ಗಿಂತ ಹೆಚ್ಚು ಮನೆಗಳು ಖಾಲಿ ಇವೆ ಎಂದು ವರದಿಗಳು ಹೇಳುತ್ತವೆ. ಇದಕ್ಕೆ ಮುಖ್ಯ ಕಾರಣ ಹೆಚ್ಚುತ್ತಿರುವ ವೃದ್ಧರ ಸಂಖ್ಯೆ ಮತ್ತು ಒಂಟಿತನ. ಒಂಟಿಯಾಗಿರುವ ವೃದ್ಧರು ಸಾವನ್ನಪ್ಪಿದ ಎಷ್ಟೋ ದಿನಗಳ ಬಳಿಕ ಹೊರ ಜಗತ್ತಿಗೆ ವಿಷಯ ತಿಳಿಯುತ್ತದೆ. ಈ ರೀತಿ ಸಾವು ಸಂಭವಿಸಿದ ಮನೆಯಲ್ಲಿ ಉಳಿದುಕೊಳ್ಳಲು ಜನ ಭಯಪಡುತ್ತಾರೆ. ಹಾಗಾಗಿ ಒಂಟಿ ಮನೆಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನೆ ಬಂಡಬಾಳ ಮಾಡಿಕೊಂಡ ಕೆಲವು ರಿಯಲ್ ಎಸ್ಟೇಟ್ ಕಂಪನಿಗಳು ಜನರ ಭಯ ಕಡಿಮೆ ಮಾಡಲು ವಿಶೇಷ ಸೇವೆಗಳನ್ನೂ ಆರಂಭಿಸಿವೆ.
ತಜ್ಞರು ಆ ಮನೆಗಳಲ್ಲಿ ರಾತ್ರಿ ತಂಗಿ ಪರಿಶೀಲನೆ ನಡೆಸಿ, “ಅಲ್ಲಿ ಹಾಂಟೆಡ್ ಏನೂ ಇಲ್ಲ” ಎಂಬ ಪ್ರಮಾಣಪತ್ರ ನೀಡುತ್ತಿದ್ದಾರೆ. ಜೊತೆಗೆ ಜಿಕೊ ಬುಕೆನ್ ಮನೆಗಳನ್ನು ಅಪ್ ಡೇಟ್ ಮಾಡಿ, ಮನೆ ವಾಸಯೋಗ್ಯವಾಗಿದೆ ಎಂದು ಖಚಿತಪಡಿಸಿ, ಬೌದ್ಧ ಸನ್ಯಾಸಿಗಳಳಿಂದ ಮನೆಯ ಶುದ್ಧೀಕರಣವನ್ನು ಸಹ ಮಾಡಿಸುತ್ತಾರೆ. ಇದರಿಂದ ಖರೀದಿದಾರರ ಭಯ ಕೂಡ ದೂರ ಆಗುತ್ತಿದೆ. ಇದೀಗ ಭೂತ ಬಂಗಲೆಗಳ ಬೇಡಿಕೆಯ ಟ್ರೆಂಡ್ ಹೆಚ್ಚುತ್ತಿರುವುದರಿಂದ ರಿಯಲ್ ಎಸ್ಟೇಟ್ ಕಂಪನಿಗಳು ಸಹ ಇದನ್ನು ವ್ಯವಹಾರವಾಗಿ ನೋಡುತ್ತಿವೆ. ಆ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ರಿಯಲ್ ಎಸ್ಟೇಟ್ ಉದ್ಯಮಿಗಳು. ಇದರಿಂದ ಮನೆ ಖರೀದಿ ಮಾಡುವವರಿಗೂ, ಮಾರುವವರಿಗೂ ಇಬ್ಬರಿಗೂ ಲಾಭ ಆಗುತ್ತಿದೆ.


